ಸ್ಫೂರ್ತಿಯ ಮಾತುಗಳು : ಸಂಚಿಕೆ - 101
Monday, February 5, 2024
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 101
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಪ್ರತಿಯೊಬ್ಬರಿಗೂ ಸ್ಮರಣ ಶಕ್ತಿಯಿರುತ್ತದೆ. ಸ್ಮರಣ ಶಕ್ತಿಯ ಪ್ರಮಾಣದಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನತೆ ಸಹಜ. ಕೆಲವರ ಸ್ಮರಣ ಶಕ್ತಿ ಅಗಾಧ. ಆಹಾರ, ವಿಹಾರ ಮತ್ತು ವಿಚಾರಗಳೊಂದಿಗೆ ವಂಶವಾಹಿಯೂ ಸ್ಮರಣ ಶಕ್ತಿಯ ಮೇಲೆ ಬೃಹತ್ ಪ್ರಮಾಣದ ಪ್ರಭಾವವನ್ನು ಬೀರುತ್ತದೆ. ದೇಶೀಯ ಆಕಳಿನ ಹಾಲಿನಿಂದ ತಯಾರಾದ ತುಪ್ಪ ತಿಂದವರಿಗೆ ಸ್ಮರಣಶಕ್ತಿ ಬಲವಾಗುತ್ತದೆ ಎಂದು ಹೇಳುವಲ್ಲಿ ಸ್ಮರಣೆ ಮತ್ತು ಆಹಾರದ ಬಲವಾದ ನಂಟು ಗೋಚರಿಸುತ್ತದೆ. ವಯಸ್ಸಾದಂತೆ ಮರೆವು ಏರುತ್ತದೆ ಎನ್ನುವುದು ಮಿದುಳಿನ ನರಗಳ ಬಲಿಷ್ಠತೆಯ ಅಗತ್ಯವನ್ನು ದೃಢಗೊಳಿಸುತ್ತದೆ. ಕಾಯಿಲೆಯಿಂದಾಗಿ ನರಗಳು ಬಹುಬೇಗನೆ ನಿಶ್ಶಕ್ತವಾಗುತ್ತವೆ. ಅಂತಹವರಿಗೆ ವಿಸ್ಮರಣೆಯು ಬಹಳ ಬೇಗನೆ ಆರಂಭ ವಾಗುತ್ತದೆ.
ನಾನು ಮುಳಿಗದ್ದೆಯ ಶಾಲೆಯಲ್ಲಿ ನಿವೃತ್ತರಾದ ಮುಖ್ಯ ಅಧ್ಯಾಪಕ ದಿವಂಗತ ಸುಬ್ಬಣ್ಣ ಭಟ್ಟರನ್ನು ಅವರ ತೊಂಭತ್ತರ ಆಸುಪಾಸಿನ ಹರೆಯದಲ್ಲಿ ಮಾತನಾಡಿಸಲು ಅವರು ವಾಸವಾಗಿದ್ದ ಮನೆಗೆ ಹೋಗಿದ್ದೆ. ವರ್ತಮಾನ ಪತ್ರಿಕೆಗಳ ಮೂಲಕ ನನ್ನ ಮುಖಪರಿಚಯವಾಗಿದ್ದ ಅವರಿಗೆ ನನ್ನನ್ನು ಮುಖತಃ ಮಾತನಾಡಿಸುವ ಉದ್ದೇಶವಿತ್ತು. ತನ್ನ ಬಯಕೆಯನ್ನು ಅವರು ನನ್ನ ತಮ್ಮನ ಮೂಲಕ ಹೇಳಿ ಕಳುಹಿಸಿದ್ದ ಕಾರಣಕ್ಕೆ ನಾನು ಅವರ ಮನೆಗೆ ಹೋಗಲೇ ಬೇಕಾಯಿತು. ಅವರ ಭೇಟಿಯು ಒಂದು ವಿಶಿಷ್ಟ ಘಟನೆ. ಹರೆಯದಲ್ಲೂ ಅವರ ಸ್ಮರಣ ಶಕ್ತಿಯನ್ನು ಗಮನಿಸಿ ನನಗೆ ಅಚ್ಚರಿಯಾಯಿತು. ನಿವೃತ್ತರಾಗಿ ನಾಲ್ಕು ದಶಕಗಳೇ ಮುಗಿದಿದ್ದರೂ ತನ್ನ ಶಿಷ್ಯವರ್ಗವನ್ನು ಅವರು ವಿವರಿಸಲು ಶಕ್ತರಾಗಿದ್ದರು. ವಯಸ್ಸಾದಂತೆ ಹೆಸರೇ ಮರೆತು ಹೋಗುವ ಸಂದರ್ಭಗಳಿರುವಾಗ ಅವರ ಸ್ಮರಣ ಸಾಮರ್ಥ್ಯ ಅಚ್ಚರಿಯದಾಗಿತ್ತು ಎನ್ನುವುದರಲ್ಲಿ ಅತಿಶಯವಿಲ್ಲ. ಬ್ರಿಟಿಷರ ಕಾಲದಿಂದ ನಡೆದ ಚಳುವಳಿಗಳು, ಸ್ವಾತಂತ್ರ್ಯ ವೀರರು, ವಿವಿಧ ಘಟನೆಗಳು, ತನ್ನ ಸಹಾಯಕರಾಗಿದ್ದವರು, ತನ್ನ ಮತ್ತು ಸಂಬಂಧಿಗಳ ಕುಟುಂಬ ಪರಂಪರೆ, ತುರ್ತು ಪರಿಸ್ಥಿತಿಯ ಘೋರ ಘಟನೆಗಳು... ಹೀಗೆ ನೆನಪಿನ ದೀರ್ಘ ಬಳ್ಳಿಯನ್ನು ಪುಂಖಾನು ಪುಂಖವಾಗಿ ಬಿಚ್ಚಿಟ್ಟಿದ್ದರು. ಅವರ ಸ್ಮರಣ ಶಕ್ತಿಯ ರಹಸ್ಯವೇನೆಂದು ಕೆಲವರನ್ನು ಮಾತನಾಡಿಸಿ ತಿಳಿಯಲು ಪ್ರಯತ್ನಿಸಿದೆ. ಅವರಿಗೆ ಯಾವುದೇ ಚಟಗಳಿರಲಿಲ್ಲ. ಮನೆಯಡುಗೆಯೇ ಅವರ ಪ್ರಮುಖ ಆಹಾರವಾಗಿತ್ತು. ಮಿತಾಹಾರಿಯಾಗಿದ್ದರು. ಕಂಡು ಕಂಡಲ್ಲಿ ಆಹಾರ ಸೇವಿಸುತ್ತಿರಲಿಲ್ಲ. ಒತ್ತಾಯಿಸಿದರೆಂದು ಮಿತಿಗಿಂತ ಅಧಿಕ ತಿನ್ನುತ್ತಿರಲಿಲ್ಲ. ಸಮಯಕ್ಕೆ ಸರಿಯಾಗಿ ನಿದ್ದೆ, ವೇಳಾಪಟ್ಟಿಯಂತೆ ದೈನಂದಿನ ಕೆಲಸ, ಅವರ ಜೀವನದ ಶಿಸ್ತಾಗಿತ್ತು. ಶುಚಿತ್ವಕ್ಕೆ ಆದ್ಯತೆ ಕೊಡುತ್ತಿದ್ದರು. ನಿರಂತರ ವಾಚನ ಮಾಡುತ್ತಿದ್ದರು. ಸಾರ್ವಜನಿಕ ಉಪನ್ಯಾಸಗಳನ್ನು ಮಾಡುತ್ತಾ ಯೋಚನೆಯನ್ನು ಸದಾ ಹಸಿರಾಗಿರಿಸಿದ್ದರು. ಯಾವುದೇ ಸಂದರ್ಭಗಳಲ್ಲೂ ಒತ್ತಡಕ್ಕೆ ಒಳಗಾಗದೆ ನಿರಾಳ ಮನಸ್ಥಿತಿಯನ್ನು ಹೊಂದಿದ್ದರು. ಎಲ್ಲರನ್ನೂ ಪ್ರೀತಿಸುತ್ತಿದ್ದರು. ಮೋಸ, ವಂಚನೆ, ಮಿಥ್ಯೆ, ಅವರ ಪದಕೋಶದಲ್ಲಿರಲಿಲ್ಲ. ಪಂಚೇಂದ್ರಿಯಗಳ ಹಿಡಿತ ಅವರಲ್ಲಿ ಕರಾರುವಾಕ್ಕಾಗಿತ್ತು. ಅರಿಷಡ್ವರ್ಗಗಳು ಅವರಿಗೆ ಕಾಟಕೊಡುತ್ತಿರಲಿಲ್ಲ. ದೂರವಾಣಿ, ಚರವಾಣಿ, ದೂರದರ್ಶನಗಳಿಂದ ಬಹಳ ಅಂತರವನ್ನಿರಿಸಿದ್ದರು. ಹೀಗೇ.......... ಇನ್ನೂ ಅನೇಕ ಸಕಾರಾತ್ಮಕ ಅಂಶಗಳು ಅವರ ಆರೋಗ್ಯ ಮತ್ತು ಸ್ಮರಣ ಶಕ್ತಿಯನ್ನು ಗಟ್ಟಿಯಾಗಿಯೇ ರಕ್ಷಿಸಿದ್ದುವು.
ಸುಬ್ಬಣ ಭಟ್ಟರ ಆದರ್ಶ ಗುಣಗಳಿಗೆ ವಿರುದ್ದ ಗುಣಧರ್ಮದವರನ್ನೂ ನಾವು ಗಮನಿಸುತ್ತೇವೆ. ಇಂತಹ ಎಲ್ಲ ದೋಷಗಳ ಮೂಟೆಯಾದವರು ಬಹಳ ಬೇಗನೆ ವಿಸ್ಮರಣೆಗೆ ಬಲಿಯಾಗುತ್ತಾರೆ. ನೆನಪು ಶಕ್ತಿಯು ಭಗವಂತನ ವರವೆಂದು ಹೇಳುತ್ತಾರೆ. ಇದು ಸತ್ಯವಾದರೂ ನಮ್ಮ ನೆನಪು ಶಕ್ತಿಯು ನಮ್ಮ ಸಾಧನೆಯ ಮತ್ತು ಸಂಯಮದ ಫಲವೂ ಹೌದಲ್ಲವೇ?
ನಮಸ್ಕಾರ
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
********************************************