-->
ಜೀವನ ಸಂಭ್ರಮ : ಸಂಚಿಕೆ - 125

ಜೀವನ ಸಂಭ್ರಮ : ಸಂಚಿಕೆ - 125

ಜೀವನ ಸಂಭ್ರಮ : ಸಂಚಿಕೆ - 125
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 

          
    ಮಕ್ಕಳೇ, ಇಂದು ಉಪರಾಗ ಎಂದರೇನು? ಇದರಿಂದ ಆಗುವ ಲಾಭ ಏನು...? ತಿಳಿದುಕೊಳ್ಳೋಣ. ಮನಸ್ಸಿನ ಕಾರ್ಯ ಮೂರು.
1. ಜ್ಞಾನ : ಅಂದರೆ ತಿಳಿದುಕೊಳ್ಳುವುದು.
2. ಇಚ್ಚಿಸುವುದು : ಅಂದರೆ ಬಯಕೆ. ಯಾವ ಕೆಲಸ ಮಾಡಬೇಕು?. ಯಾವ ಕೆಲಸ ಮಾಡಬಾರದು?. ಅನ್ನುವುದೂ ಇಚ್ಛೆಯನ್ನು ಅವಲಂಭಿಸಿದೆ.
3. ಅನುಭವಿಸುವುದು : ಇದು ಮಧುರ ಭಾವನೆ.
ಮನಸ್ಸಿನ ಕ್ರಿಯೆ ಬದುಕಿಗೆ ಆಧಾರ. ಜೀವನ ಈ ಮೂರು ಕ್ರಿಯೆಗಳನ್ನು ಅವಲಂಬಿಸಿದೆ. ಮೌಲ್ಯ ಕಟ್ಟುವುದು ಮನಸ್ಸು. ಇದರಲ್ಲಿ ಒಂದು ಕಡಿಮೆಯಾದರೂ ಬದುಕು ಪೂರ್ತಿ ಆಗುವುದಿಲ್ಲ. ಇವು ಮೂರು ಇಲ್ಲದಿದ್ದರೆ ಬದುಕೇ ಇಲ್ಲ. ಬದುಕು ಶ್ರೀಮಂತ, ಸೌಂದರ್ಯ, ಸುಖಮಯ ಮತ್ತು ಶಾಂತಿಯಿಂದ ಇರಬೇಕಾದರೆ, ಜ್ಞಾನ ಎಷ್ಟು ಸತ್ವ ಪೂರ್ಣವಾಗಿರುತ್ತದೆಯೋ? ಅಷ್ಟು. ಭಾವ ಎಷ್ಟು ಮಧುರವಾಗಿರುತ್ತದೆಯೋ? ಅಷ್ಟು. ಬಯಕೆ ಎಷ್ಟು ಸಮೃದ್ಧವಾಗಿರುತ್ತದೆಯೋ? ಅಷ್ಟು. ಬದುಕು ಸಮೃದ್ಧ, ಸುಂದರ ಸುಶಾಂತವಾಗಿರುತ್ತದೆ. ಅದಕ್ಕಾಗಿ ಮನಸ್ಸನ್ನು ಅಧ್ಯಯನ ಮಾಡಬೇಕು. ಮನಸ್ಸು ಹೇಗೆ ಕೆಲಸ ಮಾಡುತ್ತದೆ?. ಅದರ ಸಾಮರ್ಥ್ಯ ಏನು? ಅದರ ಕಾರ್ಯವಿಧಾನ ತಿಳಿದುಕೊಂಡರೆ, ಮನಸ್ಸನ್ನು ಬಳಸುವ ವಿಧಾನ ತಿಳಿಯುತ್ತದೆ. ಉದಾಹರಣೆಗೆ ಮೊಬೈಲ್ ಹೇಗೆ ಕೆಲಸ ಮಾಡುತ್ತದೆ..? ಏನೇನು ಕೆಲಸ ಮಾಡುತ್ತದೆ...? ಗೊತ್ತಿದ್ದರೆ, ಅದನ್ನು ಚೆನ್ನಾಗಿ ಬಳಸಬಹುದು. ಅದು ಕ್ಷಣ ಮಾತ್ರದಲ್ಲಿ ಜಗತ್ತಿನ ಜ್ಞಾನ ಒದಗಿಸುತ್ತದೆ. ಸಂಪರ್ಕ ಕಲ್ಪಿಸುತ್ತದೆ. ನಿಸರ್ಗ ಮಾಡಿದ ಅತ್ಯದ್ಭುತ ಸಾಧನ ಅಂದರೆ ಮನಸ್ಸು. ಈ ಮನಸ್ಸು ನಮ್ಮನ್ನು ವಸ್ತುಗಳಿಂದ ಬೇರ್ಪಡಿಸುತ್ತದೆ. ನಮ್ಮ ಸುತ್ತಮುತ್ತ ವಸ್ತುಗಳಿವೆ. ಕಾಣಿಸುತ್ತದೆ, ನೋಡುತ್ತೇವೆ. ಅದನ್ನು ತಿಳಿಯದಿದ್ದರೆ ಅನುಭವಿಸುವುದು ಹೇಗೆ...? ಉದಾಹರಣೆಗೆ... ಆಮ್ಲ ನೋಡಲು ನೀರಿನಂತೆ ಕಾಣುತ್ತದೆ. ಅದನ್ನು ತಿಳಿಯದೆ ಬೆರಳಿಟ್ಟರೆ, ಬೆರಳೆ ಸುಟ್ಟು ಹೋಗುತ್ತದೆ. ದೇವರು ಜಗತ್ತನ್ನು ನಿರ್ಮಿಸಿ, ಈ ಮನಸ್ಸು ಇಡದಿದ್ದರೆ, ಈ ಜಗತ್ತಿನ ವೈಭವಕ್ಕೆ ಬೆಲೆ ಇಲ್ಲ. ಆ ವೈಭವ ಅನುಭವಿಸುವವ ಇದ್ದಾಗ ಅದಕ್ಕೆ ಬೆಲೆ. ಉದಾಹರಣೆಗೆ.... ರವಿವರ್ಮನ ಸುಂದರ ಕಲಾಕೃತಿಯನ್ನು, ಹಸುವಿನ ಮುಂದಿಟ್ಟರೆ, ಅದು ಹರಿದು ತಿನ್ನುತ್ತದೆಯೇ ವಿನಹ, ಅನುಭವಿಸುವುದಿಲ್ಲ. ಹಸುವಿನ ಮನಸ್ಸು ಅಷ್ಟು ವಿಕಾಸವಾಗಿಲ್ಲ. ಚಿತ್ರ ಇರುವುದು ಹರಿದು ಹಾಕಲು ಅಲ್ಲ. ತುಳಿಯಲು ಅಲ್ಲ. ತಿನ್ನಲು ಅಲ್ಲ. ಅನುಭವಿಸಲು. ಮನುಷ್ಯ ಚಿತ್ರ ನೋಡಿ ಆನಂದಿಸುತ್ತಾನೆ. ಈ ಜಗತ್ತು ದೇವ ಬರೆದ ಅದ್ಭುತ ಚಿತ್ರ. ನಾವು ಬರೆಯುವ ಚಿತ್ರಕ್ಕೆ ಎರಡು ಮುಖ. ಉದ್ದ ಅಗಲ‌ ದೇವ ಬರೆಯುವ ಚಿತ್ರ ತ್ರಿಮುಖ. ಅದು ಜೀವಂತ ಚಿತ್ರ. ಪ್ರತ್ಯಕ್ಷ ವಸ್ತುಗಳ ಚಿತ್ರ. ‌ನಮ್ಮ ಚಿತ್ರ ಮಕರಂದದಿಂದ ಸೂಸುವುದಿಲ್ಲ, ಹಾಡುವುದಿಲ್ಲ, ನಲಿಯುವುದಿಲ್ಲ, ಕುಣಿಯುವುದಿಲ್ಲ, ಬೆಳೆಯುವುದಿಲ್ಲ. ಆದರೆ ನಿಸರ್ಗದ ಚಿತ್ರ ಹೇಗಿದೆ ಎಂದರೆ, ಹೂವು ತನ್ನ ಸುತ್ತ ಪರಿಮಳ ಚೆಲ್ಲುತ್ತದೆ. ಆಕರ್ಷಣೆ ಮಾಡುತ್ತದೆ. ಹಕ್ಕಿಗಳು ಹಾಡುತ್ತವೆ. ನಡೆಯುತ್ತವೆ. ಹಾರುತ್ತವೆ. ನದಿ ಹರಿಯುತ್ತದೆ. ಆ ನೀರನ್ನು ಕುಡಿಯಬಹುದು. ಚಿತ್ರದ ನೀರನ್ನು ಕುಡಿಯಲು ಬರುವುದಿಲ್ಲ. ಚಿತ್ರದಲ್ಲಿರುವ ಗಿಡ ಬೆಳೆಯುವುದಿಲ್ಲ. ಹಣ್ಣು ಕೊಡುವುದಿಲ್ಲ. ಚಿತ್ರದಲ್ಲಿರುವ ಹಣ್ಣು ತಿನ್ನಲು ಬರುವುದಿಲ್ಲ. ಇಂತಹ ಅದ್ಭುತ ನೈಸರ್ಗಿಕ, ಪ್ರತ್ಯಕ್ಷ ಚಿತ್ರ ಅನುಭವಿಸದೆ ಹೋದರೆ ಜೀವನ ವ್ಯರ್ಥ. ಏಕೆಂದರೆ ನಿಸರ್ಗ ಪ್ರತಿ ಕ್ಷಣ ಕ್ಷಣ ಹೊಸ ಹೊಸ ಚಿತ್ರ ಮೂಡಿಸುತ್ತದೆ, ಪ್ರತಿ ಕ್ಷಣ ಹೊಸದೇ ಈ ಪ್ರಕೃತಿ. ಇದನ್ನೆಲ್ಲ ಅನುಭವಿಸಲು ಬೇಕಾದ ಅವಯವವನ್ನು ನಿಸರ್ಗ ನಮ್ಮಲ್ಲಿ ಅಳವಡಿಸಿದೆ. ಇವುಗಳನ್ನು ಬಳಸಿಕೊಂಡು ಅನುಭವ ಮಾಡಿಕೊಳ್ಳಬೇಕು. ಇಂತಹ ಅನುಭವಿಸುವ ಅವಯವ ಪಡೆದ ನಾವೇ ಧನ್ಯರು. ಶ್ರೀಮಂತ ಜಗತ್ತಿನ ದಿವ್ಯ ಸೌಂದರ್ಯವನ್ನು ನಾವು ಪ್ರತಿ ಕ್ಷಣ ಕ್ಷಣ ಇವುಗಳನ್ನು ಬಳಸಿಕೊಂಡು ಅನುಭವಿಸಬೇಕು. ಆದರೆ ನಾವು ಈ ದಿವ್ಯ ಸೌಂದರ್ಯದ ಕಡೆ ಗಮನವಿಲ್ಲ. ಮಾನವ ನಿರ್ಮಿತ ವಸ್ತುಗಳತ್ತಲೆ ನಮ್ಮ ಮನಸ್ಸು. ಆದರೆ ಅದು ಬೇಡ ಅಂತ ಅಲ್ಲ. ಪ್ರತೀ ಕ್ಷಣ ಹೊಸತು ಹೊಸತು ನೀಡುವ ದೇವನ ಜಗತ್ತನ್ನು ಅನುಭವಿಸಬೇಕಲ್ಲವೇ...?
     ಅನುಭವ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಪಾತಂಜಲ ಮಹರ್ಷಿ 17ನೇ ಸೂತ್ರದಲ್ಲಿ, "ಉಪರಾಗ ಅಪೇಕ್ಷಿತತ್ವ" ಎಂದಿದ್ದಾರೆ. ಅಂದರೆ ಯಾವುದೇ ಜ್ಞಾನ ನೆನಪಿನಲ್ಲಿ ಶಾಶ್ವತವಾಗಿ ಉಳಿಯಬೇಕಾದರೆ, ಉಪರಾಗ ಆಗಬೇಕು. ಉಪರಾಗ ಆಗಲಿಲ್ಲ ಅಂದರೆ ಆ ಜ್ಞಾನ ತಿಳಿದಿಲ್ಲ ಎಂದು ಭಾವಿಸಿಕೊಳ್ಳಬೇಕು ಎಂದಿದ್ದಾರೆ. ವಸ್ತುವಿನ ಜ್ಞಾನ ಪೂರ್ಣ ಆಗಬೇಕಿತ್ತು ಎಂದರೆ, ಉಪರಾಗ ಆಗಬೇಕು. ಉಪರಾಗ ಎಂದರೇನು?. ಉಪರಾಗ ಎಂದರೆ ಮನಸ್ಸು ಆ ವಸ್ತುವಿನಲ್ಲಿ ಬೆರೆಯಬೇಕು. ಉಪರಾಗ ಆಗಬೇಕು. ಆ ವಸ್ತುವಿನ ಬಣ್ಣ ಮನಸ್ಸಿಗೆ ಹತ್ತಬೇಕು. ಉದಾಹರಣೆಗೆ, ಹೂವು ನೋಡಿದಾಗ ಆ ಹೂವಿನ ಬಣ್ಣ ನಮ್ಮ ಮನಸ್ಸು ಆಗಬೇಕು. ನಮ್ಮ ಮನಸ್ಸು ಹೂವಿನ ಆಕಾರ ತಾಳಬೇಕು. ಹೂವಿನ ಬಣ್ಣ ತನ್ನ ಬಣ್ಣವಾಗಬೇಕು. ಹೂವಿನ ಸುವಾಸನೆ ಮನಸ್ಸನ್ನು ತುಂಬಬೇಕು. ಹಾಗೆ ಆಳವಾಗಿ ನೋಡಿದರೆ ಆ ಹೂವಿನ ಜ್ಞಾನ ಆದಂತೆ. ಇಲ್ಲದಿದ್ದರೆ ಇಲ್ಲ. ಸುಮ್ಮನೆ ಕಣ್ಣಾಡಿಸಿದರೆ ನೋಡಿದಂತೆ ಅಲ್ಲ. ವಸ್ತು ಜ್ಞಾನ ಆಗಲ್ಲ. ವಸ್ತು ತಿಳಿದಂತೆಯೂ ಆಗುವುದಿಲ್ಲ. ಗ್ಲಾನ್ಸಿಂಗ್ ಅಲ್ಲ, ಒಳಹೊಕ್ಕು ನೋಡುವುದು. ಕಣ್ತುಂಬಿಕೋಬೇಕು. ಅದರ ಹಾಗೆ ಮನಸ್ಸು ಆಗಬೇಕು. ಯಾವುದನ್ನು ನೋಡುತ್ತೇವೆ?. ಕೇಳುತ್ತೇವೆ?. ಅದರ ಹಾಗೆ ಮನಸ್ಸು ಆಗಬೇಕು. ಸುಮ್ಮನೆ ಸ್ಪರ್ಶ ಮಾಡುವುದಲ್ಲ. ಮುಳುಗುವುದು ಕಣ್ಮುಚ್ಚಿದರೆ ಆ ಚಿತ್ರ ಮನಸ್ಸಿನಲ್ಲಿ ಸ್ಪಷ್ಟವಾಗಿ ಮೂಡಬೇಕು. ಆಗ ನಮಗೆ ವಸ್ತು ಜ್ಞಾನ ಆಯಿತು ಎಂದು ಭಾವಿಸಬೇಕು. ಮನಸ್ಸನ್ನು ಇಡೀ ಜೀವನ ತುಂಬಾ ಬಳಸಿದರೆ ಮುಗಿಯಲ್ಲ. ಇದಕ್ಕೆ ಉಪರಾಗ ಎನ್ನುವರು.
      ನೋಡೋದು ಅಂದರೆ ಕಣ್ಣು ತುಂಬಿಸಿಕೊಳ್ಳುವುದು. ಮನಸ್ಸು ತುಂಬಾ ನೋಡೋದು ನಮ್ಮ ಹಳ್ಳಿಗಳಲ್ಲಿ ಹೇಳುತ್ತಿದ್ದರು. "ಕಣ್ತುಂಬ ನೋಡು ಮನಸ್ಸು ತುಂಬಾ ಅನುಭವಿಸು". ವಸ್ತು ಅನುಭವಕ್ಕೆ ಬರಬೇಕು. ಆಗ ಅದು ತಿಳಿದ ಹಾಗೆ. ಅದಕ್ಕೆ ಜ್ಞಾನ ಎನ್ನುವರು. ಆ ಜ್ಞಾನ ಶಾಶ್ವತವಾಗಿ ಉಳಿಯುತ್ತದೆ .ಮನಸ್ಸು ಯಾವುದರಲ್ಲಿ ಬೆರೆಯುತ್ತದೆಯೋ, ಅದು ಮನಸ್ಸಿನಲ್ಲಿ ಉಳಿಯುತ್ತದೆ. ಒಳ್ಳೆಯದರಲ್ಲಿ ಮನಸ್ಸು ಬೆರೆತರೆ, ಒಳ್ಳೆಯದು ಉಳಿಯುತ್ತದೆ. ಕೆಟ್ಟದ್ದರಲ್ಲಿ ಮನಸ್ಸು ಬೆರೆತರೆ, ಕೆಟ್ಟದ್ದು ಉಳಿಯುತ್ತದೆ. ಮನಸ್ಸಿನಲ್ಲಿ ಏನು ಉಳಿಯುತ್ತದೆಯೋ?. ಅದು ಜೀವನಕ್ಕೆ ರೂಪ ಕೊಡುತ್ತದೆ. ಏನು ಮನಸ್ಸಿನಲ್ಲಿ ತುಂಬಿಸಿಕೊಳ್ಳಬೇಕೋ? ಅದನ್ನೇ ತುಂಬಿಸಿಕೊಳ್ಳಬೇಕು. ಮನಸ್ಸಿನಲ್ಲಿ ಏನು ತುಂಬಿಕೊಂಡೆ?. ಉಪರಾಗ ಯಾವುದರಲ್ಲಿ ಆಯಿತು?. ಅದೇ ನಮ್ಮ ಜೀವನದ ವೈಭವ. ಒಳ್ಳೆಯದನ್ನು ತುಂಬಿಕೊಂಡರೆ, ಜೀವನ ಒಳ್ಳೆಯದು. ಕೆಟ್ಟದ್ದನ್ನು ತುಂಬಿಕೊಂಡರೆ, ಜೀವನ ಕೆಟ್ಟದಾಗುತ್ತದೆ. ಉಪರಾಗ ಯಾವುದರಲ್ಲಾಗುತ್ತದೆ, ಅದೇ ತಿಳಿಯುವುದು. ಅದರಲ್ಲಿ ಬರೆಯಬೇಕು, ಮಗ್ನವಾಗಬೇಕು. ಸಂಗೀತ ಕೇಳಬೇಕು ಹೇಗಂದರೆ ಮೈಮರೆತು, ಬಾಹ್ಯ ಪರವೇ ಇಲ್ಲದೆ, ಅದರಲ್ಲಿ ಮಗ್ನವಾಗಿದ್ದರೆ, ಅದನ್ನು ಕೇಳುವುದು ಎನ್ನುವರು. ಅವರು ಆ ರಾಗವನ್ನು ಮನಸ್ಸಿನಲ್ಲಿ ತುಂಬಿಕೊಂಡು ಬಿಡುತ್ತಾರೆ. ಆ ರಾಗವೇ ತಾವಾಗಿ ಬಿಡುತ್ತಾರೆ. ತನ್ನನ್ನು ಮರೆತು ಅದರಲ್ಲಿ ಬೆರೆತು ಹೋಗುತ್ತಾರೆ. ಅದಕ್ಕೆ ಕೇಳುವುದು ಎನ್ನುವುದು. ಮನಸ್ಸು ತುಂಬಿಕೊಂಡು ಅನುಭವಿಸುವ ಮನುಷ್ಯ ಅದನ್ನು ತುಂಬಿಸಿಕೊಂಡು ಹಿಡಿದಿಟ್ಟು ಕೊಳ್ಳುವದಕ್ಕೆ ಅನುಭವ ಎನ್ನುವರು.
ಮಕ್ಕಳೇ ನಮ್ಮ ಜೀವನ ಒಳ್ಳೆಯದಾಗಬೇಕಾದರೆ, ಏನನ್ನು ತುಂಬಿಸಿಕೊಳ್ಳಬೇಕು?. ಅದನ್ನೇ ಮನಸ್ಸಿನಲ್ಲಿ ತುಂಬಿಸಿಕೊಳ್ಳಬೇಕು. ಒಳ್ಳೆಯದನ್ನು ನೋಡು, ಆ ಸೌಂದರ್ಯ ತುಂಬಿಸಿಕೋ. ಒಳ್ಳೆಯದನ್ನು ಕೇಳು, ಅದನ್ನು ಮನಸ್ಸಿನಲ್ಲಿ ತುಂಬಿಸಿಕೋ. ಒಳ್ಳೆಯದನ್ನು ಮುಟ್ಟು , ಅದರ ಸ್ಪರ್ಶ ಮನಸ್ಸಿನಲ್ಲಿ ತುಂಬಿಸಿಕೋ ಒಳ್ಳೆಯದನ್ನು ತಿನ್ನು ಅದರ ರಸಸ್ವಾದ ಮನಸ್ಸಿನಲ್ಲಿ ತುಂಬಿಸಿಕೋ. ಅದೇ ಅನುಭವ. ಅದೇ ಜ್ಞಾನ. ಅದೇ ಬದುಕಿನ ಶ್ರೀಮಂತಿಕೆ, ಅದೇ ಸುಂದರ, ಸುಖಮಯ, ಶಾಂತ ಜೀವನ, ಅಲ್ಲವೇ ಮಕ್ಕಳೇ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************


Ads on article

Advertise in articles 1

advertising articles 2

Advertise under the article