-->
ಜಗಲಿ ಕಟ್ಟೆ : ಸಂಚಿಕೆ - 39

ಜಗಲಿ ಕಟ್ಟೆ : ಸಂಚಿಕೆ - 39

ಜಗಲಿ ಕಟ್ಟೆ : ಸಂಚಿಕೆ - 39
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ

    ಶಾಲಾ ವಾರ್ಷಿಕೋತ್ಸವ, ಕ್ರೀಡಾಕೂಟ, ಪ್ರವಾಸ ಎಲ್ಲಾ ಕಳೆದು ಶಾಲಾ ಪಠ್ಯದ ಕಲಿಕೆಯತ್ತ ಈಗ ಎಲ್ಲರ ದೃಷ್ಟಿ. ಫೆಬ್ರವರಿ ಮಾರ್ಚ್ ತಿಂಗಳೆಂದರೆ ಶಾಲಾ ಪರೀಕ್ಷಾ ವಿಷಯದಲ್ಲಿ ಬಹುತೇಕ ವಿದ್ಯಾರ್ಥಿಗಳು ಮಗ್ನರಾಗಿರುತ್ತಾರೆ. ಪರೀಕ್ಷಾ ತಯಾರಿಯ ಹಿನ್ನೆಲೆಯಲ್ಲಿ ಬಾಕಿ ಉಳಿದ ನೋಟ್ಸ್ ಗಳು, ಬಾಕಿ ಉಳಿದ ಪ್ರಾಜೆಕ್ಟ್ ಗಳ ನಿರ್ವಹಣೆಯಲ್ಲಿ ಸಮಯ ಸರಿದದ್ದೇ ತಿಳಿಯುತ್ತಿಲ್ಲ.
      ಇನ್ನು ಪರೀಕ್ಷೆ ಮುಗಿಯುವ ತನಕ ಸಾಮಾನ್ಯವಾಗಿ ಎಲ್ಲಾ ಚಟುವಟಿಕೆಗಳು ಬಂದ್ ಆಗಿ ಬಿಡುತ್ತದೆ. ಕಳೆದ ಬಾರಿ 9ನೇ ತರಗತಿಯಲ್ಲಿದ್ದ ವಿದ್ಯಾರ್ಥಿನಿಯಲ್ಲಿ ಹೀಗೆ ಮಾತಾಡಿಸುತ್ತಾ ಇದ್ದಾಗ... "ನಾನು ಬರುವ ವರುಷ 10ನೇ ತರಗತಿ. ಹಾಗಾಗಿ ಇನ್ನು ಭರತನಾಟ್ಯ ದ ತರಗತಿಗೆ ಹೋಗುವುದಿಲ್ಲ" ಅಂದು ಬಿಟ್ಟಳು. ಈ 10ನೇ ತರಗತಿಗೂ ಭರತನಾಟ್ಯಕ್ಕೂ ಎತ್ತಣ ಸಂಬಂಧ. ಕೇವಲ ಪರೀಕ್ಷಾ ದೃಷ್ಟಿಯಿಂದ ಪೂರ್ವಾಗ್ರಹಿತರಾಗಿ ಬಾಕಿ ಎಲ್ಲಾ ಕಲಿಕೆಗಳನ್ನು ಬದಿಗೊತ್ತುವ ಮನೋಭಾವ ಬೆಳೆದು ಬಂದಿದೆ. ಭಯ, ಆತಂಕ, ಒತ್ತಡಗಳು ಮಾತ್ರ ಇದಕ್ಕೆ ಕಾರಣ ವಿರಬಹುದೇನೋ...
       ಇನ್ನೊಂದು ಸಂದರ್ಭದಲ್ಲಿ ಯಕ್ಷಗಾನದ ತರಗತಿಗೆ ಹೋಗುತ್ತಿದ್ದ ಒಬ್ಬ ವಿದ್ಯಾರ್ಥಿಯಲ್ಲಿ, "ಯಕ್ಷಗಾನ ತರಗತಿ ಅಭ್ಯಾಸ ಮಾಡುತ್ತಿರುವ ವಿಷಯವನ್ನು ಯಾರೊಬ್ಬರಲ್ಲಿಯೂ ಹಂಚಿಕೊಳ್ಳಬೇಡ" ಎಂದಿದ್ದೆ. ಹತ್ತನೇ ತರಗತಿ ಎಂದ ಕೂಡಲೇ ಭಯವನ್ನು ನೀಡುವವರು ಅನೇಕರಿದ್ದಾರೆ. ಮನೆಯ ಒಳಗೂ ಹೊರಗೂ ಕೂಡ ನಕಾರಾತ್ಮಕವಾಗಿ ಮಾತನಾಡಿ ಆತ್ಮವಿಶ್ವಾಸವನ್ನು ಕುಂದಿಸುವ ಪ್ರಯತ್ನದ ಸಾಧ್ಯತೆಗಳಿವೆ. ಇವರಿಂದ ತಪ್ಪಿಸಿಕೊಳ್ಳಬಹುದಾದ ಅನಿವಾರ್ಯತೆಯನ್ನು ಸೃಷ್ಟಿಸಿಕೊಳ್ಳಬೇಕಾದದ್ದು ಅಗತ್ಯ. ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದ ಆತ ಪ್ರದರ್ಶನವನ್ನು ಕೂಡಾ ನೀಡಿದ್ದು ನಿರಾಳವಾಗಿ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯುವಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದಾನೆ. 
        ನನ್ನ ಮಗಳು ಅಭ್ಯಾಸ ಮಾಡುತ್ತಿರುವ ಭರತನಾಟ್ಯ ತಂಡದಲ್ಲಿ ಶೀತಲ್ ಹೆಸರಿನ ಪ್ರತಿಭಾನ್ವಿತ ವಿದ್ಯಾರ್ಥಿನಿಯೊಬ್ಬಳು ಯಾವುದೇ ಪರೀಕ್ಷಾ ಭಯವಿಲ್ಲದೆ ನಿರಂತರವಾಗಿ ನೃತ್ಯ ಪ್ರದರ್ಶನ ಕಾರ್ಯಕ್ರಮದಲ್ಲಿಯೂ ಭಾಗವಹಿಸುತ್ತಿರುವುದು ಆತ್ಮವಿಶ್ವಾಸಕ್ಕೆ ಇನ್ನೊಂದು ಉದಾಹರಣೆ ಎನ್ನಬಹುದು. 10ನೇ ತರಗತಿ.. ಅದರಲ್ಲೂ ಅತ್ಯಧಿಕ ಅಂಕದ ನಿರೀಕ್ಷೆಯಲ್ಲಿರುವ ಪ್ರತಿಭಾನ್ವಿತೆ. ಪರೀಕ್ಷೆಯ ಹಿಂದಿನ ದಿನವೂ ಅದ್ಭುತ ಪ್ರದರ್ಶನ ನೀಡಿ ಅತ್ಯಧಿಕ ಅಂಕವನ್ನು ಪಡೆದಿರುವ ಉದಾಹರಣೆಗಳಿವೆ. ಇವರ ಹಿಂದೆ ಪ್ರೋತ್ಸಾಹ ಕೊಡುತ್ತಿರುವ ತಂದೆ ತಾಯಿ ನಿಜಕ್ಕೂ ಪ್ರಶಂಸನೀಯರು. ಇದೇ ರೀತಿಯ ಅದ್ಭುತ ವಿದ್ಯಾರ್ಥಿಗಳು ವಿವಿಧ ಭಾಗದಲ್ಲಿ ಸಾಕಷ್ಟು ಇದ್ದಾರೆ. 
         ಗೋಪಾಡ್ಕರ್ ಹೇಳುವ ಮಾತನ್ನು ನಾನು ಇಲ್ಲಿ ಪ್ರಸ್ತಾಪಿಸುತ್ತೇನೆ... "ಕಲಿಸುವುದರಿಂದ ಯಾರೂ ಕಲಿಯುವುದಿಲ್ಲ... ಕಲಿಸಿದಷ್ಟೂ ಮತ್ತೆ ಮತ್ತೆ ಕಡಿಮೆ ಕಲಿಯುತ್ತಾರೆ." ಈ ಮಾತಿನ ಹಿಂದೆ ಅಗಾಧ, ಆಳವಾದ ಅಧ್ಯಯನವಿದೆ. ನಮಸ್ಕಾರ
    

ಕಳೆದ ಸಂಚಿಕೆಯ ಜಗಲಿಕಟ್ಟೆ - 38 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....


ಎಲ್ಲರಿಗೂ ನಮಸ್ಕಾರಗಳು,
     ಹಿರಿಯರ, ಜ್ಞಾನಿಗಳ ಮಾತುಗಳನ್ನು ನಿರ್ಲಕ್ಷಿಸಬಾರದು ಎಂಬುದನ್ನು ಸುಂದರವಾದ ಕಥೆಯೊಂದರ ಮೂಲಕ ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರು ತಮ್ಮ ಈ ಸಲದ ಸಂಚಿಕೆಯಲ್ಲಿ ಸೊಗಸಾಗಿ ತಿಳಿಸಿದ್ದಾರೆ.
    ಸಾಧಿಸುವ ಛಲವಿದ್ದಲ್ಲಿ ಯಾವುದೇ ಅಡೆ ತಡೆಗಳಿದ್ದರೂ ಅವೆಲ್ಲವನ್ನು ಎದುರಿಸಿ ಸಫಲತೆಯನ್ನು ಪಡೆಯಬಹುದು ಎಂಬುದನ್ನು ಉದಾಹರಣೆಯೊಂದಿಗೆ ಬಹಳ ಸುಂದರವಾಗಿ ರಮೇಶ್ ಬಾಯಾರ್ ರವರು ನಿರೂಪಿಸಿದ್ದಾರೆ. ಧನ್ಯವಾದಗಳು ಸರ್.
     ನಮ್ಮೂರ ಶಾಲೆಯ ಸುದ್ದಿ ಸಂಚಿಕೆಯಲ್ಲಿ ಮೋಹನ್ ಕಡಬರವರು ತಮ್ಮ ಶಾಲೆಯಲ್ಲಿ ಹಮ್ಮಿಕೊಂಡ ಕೃಷಿ ಚಟುವಟಿಕೆಯ ಕುರಿತು ಹಾಗೂ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾದ ಕುರಿತ ಲೇಖನ ಸೊಗಸಾಗಿತ್ತು.
    ವಿದ್ಯಾರ್ಥಿಗಳು ತಮ್ಮ ಮನಸ್ಸಿನ ಏಕಾಗ್ರತೆಯನ್ನು ಹೇಗೆ ಸಾಧಿಸಬಹುದು ಮತ್ತು ಇದರಿಂದ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಹೇಗೆ ಸಾಧಿಸಬಹುದು ಎಂಬುದನ್ನು ಪೂರ್ಣಿಮಾ ಕಾಮತ್ ರವರು ಬಹಳ ಸುಂದರವಾಗಿ ವಿವರಿಸಿದ್ದಾರೆ.
    ಈ ವಾರದ ಹಕ್ಕಿ ಕಥೆಯಲ್ಲಿ ಅರವಿಂದ ಸರ್ ರವರ ಕಪ್ಪು ಬಿಳಿ ಸಿಪಿಲೆ ಎನ್ನುವ ಹಕ್ಕಿಯ ಪರಿಚಯ ಬಹಳ ಸುಂದರವಾಗಿ ಮೂಡಿ ಬಂದಿದೆ.
    ವೈಜ್ಞಾನಿಕ ಲೇಖನದಲ್ಲಿ ದಿವಾಕರ್ ಸರ್ ರವರು ಏಕ ಶರ್ಕರಿಗಳ ಹುಟ್ಟಿಗೆ ಕಾರಣವಾದ ಹಿಂದಿನ ಮತ್ತು ಈಗಿನ ವಿಜ್ಞಾನಿಗಳ ವಾದಗಳನ್ನು ಬಹಳ ಚೆನ್ನಾಗಿ ವಿವರಿಸಿದ್ದಾರೆ.
     ಈ ಸಲದ ಸಂಚಿಕೆಯಲ್ಲಿ ವಿಜಯ ಶೆಟ್ಟಿ ಮೇಡಂರವರು ಕಾಂಡ್ಲಾ ಸಸ್ಯಗಳ ಕುರಿತಾದ ವಿವರವಾದ ಮಾಹಿತಿಯನ್ನು ಒದಗಿಸಿದ್ದಾರೆ. ಜೊತೆಗೆ ಓವಿಪ್ಯಾರಸ್ ಅಂದರೆ ಜರಾಯುಜ ಪ್ರಾಣಿಗಳಂತೆ ಈ ಸಸ್ಯಗಳಲ್ಲೇ ಬೀಜ ಮೊಳೆತು ಭೂಮಿಗೆ ಬಿದ್ದು ಹೊಸ ಸಸ್ಯವನ್ನುಂಟು ಮಾಡುವ ವೈವಿಪರಿ ಎನ್ನುವ ಹೊಸ ಸಂತಾನೋತ್ಪತ್ತಿ ವಿಧಾನ ತಿಳಿಯಿತು. ಧನ್ಯವಾದಗಳು ಮೇಡಂ.
    ಯಾಕೂಬ್ ಸರ್ ರವರ ಈ ಸಲದ ಸಂಚಿಕೆಯಲ್ಲಿ ಶಿಕ್ಷಕಿ ರೂಪಾ ಹಾಗೂ ತಮ್ಮ ರಜತ್ ನ ನಡುವಿನ ಗಟ್ಟಿಯಾದ ಬಾಂಧವ್ಯ ದಾರುಣವಾದ ಅಂತ್ಯ ಕಂಡು ನಿಜಕ್ಕೂ ದುಃಖವಾಯಿತು.
    ಬೇರೆ ಬೇರೆ ಪ್ರದೇಶಗಳ 13 ಕಥೆಗಳ ಸಂಗ್ರಹವಿರುವ ಚೆಂದದ ಪುಸ್ತಕದ ಪರಿಚಯ ವಾಣಿಯಕ್ಕನವರಿಂದ.
      ಶಿಕ್ಷಕರ ಡೈರಿಯಲ್ಲಿ ಈ ಸಲ ಹಸೀನಾ ಪರ್ವಿನ್ ರವರಿಂದ ಮಕ್ಕಳಲ್ಲಿರುವ ವಿಶಿಷ್ಟ ಪ್ರಜ್ಞೆ ಹಾಗೂ ಅದನ್ನು ಗುರುತಿಸುವ ಕುರಿತಾದ ಸುಂದರ ಅನುಭವದ ಬುತ್ತಿ. ಧನ್ಯವಾದಗಳು ಮೇಡಂ.
     ರಮೇಶ್ ಉಪ್ಪುಂದರವರ ಪದದಂಗಳ ಸೊಗಸಾಗಿ ಮೂಡಿ ಬಂದಿದೆ.
     ಮಕ್ಕಳ ಚಿತ್ರಗಳ 3 ಸಂಚಿಕೆಗಳು ಪ್ರಕಟವಾಗಿದ್ದು ಚಿತ್ರಗಳು ತುಂಬಾ ಚೆನ್ನಾಗಿವೆ. ಮಕ್ಕಳ ಕಥೆಗಳ ಸಂಚಿಕೆಯಲ್ಲಿ ಎಲ್ಲಾ ಮಕ್ಕಳ ಕಥೆಗಳು ಸೊಗಸಾಗಿವೆ. ಶ್ರೇಯಾ ರವರ ಕವನಗಳು ಕೂಡ ಚೆನ್ನಾಗಿವೆ. ಚಿತ್ರ, ಕಥೆ ಹಾಗೂ ಕವನ ರಚಿಸಿದ ಮಕ್ಕಳಿಗೆ ಅಭಿನಂದನೆಗಳು.
      ಈ ವಾರದ ಜಗಲಿ ತುಂಬಾ ಚೆನ್ನಾಗಿ ಮೂಡಿ ಬರಲು ಕಾರಣರಾದ ಎಲ್ಲರಿಗೂ ಮನದಾಳದ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************


ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ... ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


Ads on article

Advertise in articles 1

advertising articles 2

Advertise under the article