-->
ಜೀವನ ಸಂಭ್ರಮ : ಸಂಚಿಕೆ - 124

ಜೀವನ ಸಂಭ್ರಮ : ಸಂಚಿಕೆ - 124

ಜೀವನ ಸಂಭ್ರಮ : ಸಂಚಿಕೆ - 124
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 


          
ಮಕ್ಕಳೇ, ಈ ಕಥೆ ಪ್ರಸಿದ್ಧ ಕಥೆ. ವಿಷ್ಣು ಶರ್ಮ ಎನ್ನುವ ಗುರುಗಳು ಮಕ್ಕಳಿಗೆ ಹೇಳಿದ ಕಥೆ. ಒಂದು ವಿಶಾಲ ಮರವಿತ್ತು. ಅದರಲ್ಲಿ ಅನೇಕ ಪಕ್ಷಿಗಳು ಗೂಡು ಕಟ್ಟಿಕೊಂಡು ವಾಸವಾಗಿದ್ದವು. ಬೆಳಿಗ್ಗೆ ಗೂಡಿನಿಂದ ಹೊರ ಹೋಗಿ, ಹಾರಿಕೊಂಡು ಹಾಡಿಕೊಂಡು ಹಣ್ಣು ಧಾನ್ಯಗಳನ್ನು ತಿಂದು ಸಂಜೆ ಗೂಡಿಗೆ ವಾಪಸ್ ಆಗುತ್ತಿದ್ದವು. ಒಂದು ದಿನ ಏನಾಯ್ತು ಅಂದರೆ, ಬೇಡ ಬಂದು ಆ ಮರದ ಕೆಳಗೆ ಬಲೆ ಹಾಕಿದ. ಅದರ ಕೆಳಗೆ ಕಾಳುಗಳನ್ನು ಹಾಕಿ ಮನೆಗೆ ಹೋದನು. ಪಕ್ಷಿಗಳು ಹೊಟ್ಟೆ ತುಂಬ ತಿಂದು ಸಂಜೆ ಗೂಡಿಗೆ ವಾಪಸ್ ಬಂದಿದ್ದವು. ಮರದ ಮೇಲೆ ಕುಳಿತು ಕೆಳಗೆ ನೋಡಿದವು. ಸುಂದರ ಕಾಳುಗಳು ಕಾಣಿಸಿತು. ಅವುಗಳನ್ನು ತಿನ್ನಬೇಕು ಎನಿಸಿತು. ಆಗ ಮರದಲ್ಲಿ ವಾಸವಾಗಿದ್ದ ಹಿರಿಯ ಪಕ್ಷಿ ಹೇಳಿತು. "ಕಂಡದ್ದಕ್ಕೆ ಮನಸ್ಸು ಹಾಕಬಾರದು, ಕಂಡದ್ದರಲ್ಲಿ ಹಿತ ಎಲ್ಲಿದೆ ? ಒಮ್ಮೊಮ್ಮೆ ಯಾವುದು ಆಕರ್ಷಣೆಯಾಗಿರುತ್ತದೆ, ಅದು ನಮ್ಮನ್ನು ಬಂಧನಕ್ಕೆ ಒಳಪಡಿಸುತ್ತದೆ. ಅದಕ್ಕೆ ಆಲೋಚನೆ ಮಾಡಿ ಕೆಳಗೆ ಇಳಿಯಿರಿ" ಎಂದಿತು. ಸುಮ್ಮ ಸುಮ್ಮನೆ ಇಳಿಯಬಾರದು ಎಂದಿತು. ಆಗ ಯುವಕ ಪಕ್ಷಿ ಹೇಳಿತು, "ಅವ ಮುದುಕ, ಆತನಿಗೆ ಏನು ತಿಳಿದೀತು, ಪ್ರತ್ಯಕ್ಷವಾಗಿ ಕಾಳು ಕಾಣುತ್ತಿದೆ. ಕಾಳು ಚೆನ್ನಾಗಿದೆ. ಸುತ್ತಮುತ್ತ ಯಾರು ಇಲ್ಲ. ಇದರಲ್ಲಿ ಏನು ಆತಂಕ ಇದೆ? ದೇವರೇ ನಮಗಾಗಿ ಕರುಣಿಸಿದ್ದಾನೆ" ಅಂದಿತು. ಹೀಗೆ ಅನಿಸುತ್ತದೆ. ಕಾಳು ಕಂಡಾಗ, ಬಲೆ ಕಾಣುವುದಿಲ್ಲ. ಇದು ಮಜಾ. ಅಲ್ಲೇ ಬಲೆ ಇದೆ, ಬಲೆ ಕಾಣಿಸುವುದಿಲ್ಲ, ಬರಿ ಕಾಳು ಕಾಣಿಸುತ್ತದೆ. ಏಕೆಂದರೆ ಕಾಳು ಕಣ್ಣು ತುಂಬಿದೆ, ಮನಸ್ಸನ್ನು ಕಾಳು ತುಂಬಿದೆ. ಇದಕ್ಕೆ ಆಕರ್ಷಣೆ ಎನ್ನುವರು. ಆಕರ್ಷಣೆ ಹೇಗಿರುತ್ತದೆ? ಎಂದರೆ. ಯಾವುದು ಬಂಧಿಸುತ್ತದೆಯೋ ಅದು ಕಾಣುವುದಿಲ್ಲ. ಹೀಗೆ ಕಣ್ಣು ಮನಸ್ಸು ಮಂಕಾಗುತ್ತದೆ. ಆ ಪಕ್ಷಿಗಳಿಗೆ ಕಾಳೇ ಕಾಣಿಸುತ್ತಿತ್ತು. ಆಗ ಹಿರಿಯ ಪಕ್ಷಿ ಹೇಳಿತು, "ಇಂತಹ ಅರಣ್ಯದಾಗ, ಇಂತಹ ಪ್ರದೇಶದಲ್ಲಿ, ಕಾಳು ಹೇಗೆ ಬರುತ್ತದೆ?. ಯೋಚನೆ ಮಾಡಿ. ಎಷ್ಟು ವರ್ಷ ಇದ್ದೇವೆ. ಒಮ್ಮೆ ಸಹಿತ ಕಂಡಿಲ್ಲ , ದಿವಸದ ತುಂಬಾ ತಿಂದು ಬಂದಿದ್ದೇವೆ. ನಮಗೇನು ಕೊರತೆ?. ಎಷ್ಟು ಹಣ್ಣು? ಎಷ್ಟು ಕಾಳುಗಳು ಜಗತ್ತಿನಲ್ಲಿ?. ಎಲ್ಲಿ ಬೇಕಾದಲ್ಲಿ ಚಲಿಸುತ್ತೇವೆ, ತಿನ್ನುತ್ತೇವೆ. ಅಷ್ಟು ಸ್ವಾತಂತ್ರ ವಾತಾವರಣ ಜಗತ್ತಿನಲ್ಲಿ ಇರುವಾಗ. ಈ ಸಣ್ಣ ಕಾಳುಗಳ ಆಸೆ ಏಕೆ ಬಂದಿತ್ತು ?" ಆಗ ಉಳಿದ ಪಕ್ಷಗಳಿಗೆ ಕಾಳು ಬಿಟ್ಟರೆ ಬೇರೇನು ಕಾಣಲಿಲ್ಲ. ಆಗ ಹಿರಿಯ ಪಕ್ಷಿ ಹೇಳಿತು, "ಇಳಿ ಬೇಡ್ರಿ, ಇಳಿ ಬೇಡ್ರಿ" ಎಂದಿತು. ಯುವ ಪಕ್ಷಿಗೆ ಈ ಮಾತು ಕೇಳಲಿಲ್ಲ. ಆದರೆ ಅದೊಂದೇ ಮರದ ಮೇಲೆ ಕುಳಿತಿತ್ತು. ಆದರೆ ಅದರ ಮಾತು ಇವುಗಳಿಗೆ ಕೇಳಿಸಲಿಲ್ಲ. ಬಲೆ ಕಣ್ಣಿಗೆ ಕಾಣಲಿಲ್ಲ. ಈ ಕಥೆ ಓದುವಾಗ ನಾವೇ ಯುವ ಹಕ್ಕಿಗಳೆಂದು ಭಾವಿಸಬೇಕು. ನಮ್ಮ ಸುತ್ತಮುತ್ತ ಅಷ್ಟಷ್ಟು ಜಾಲದ ಕಾಳುಗಳು ಇವೆ. ಪಕ್ಷಿಗೆ ಕೇವಲ ಕಾಳು. ನಮಗೆ ನೂರಾರು ಸಂಗತಿ. ಅವುಗಳನ್ನೆಲ್ಲ ನೋಡುವಾಗ ಬಿಡಬಾರದು, ತಿನ್ನಬೇಕು, ನನ್ನದಾಗಿ ಮಾಡಿಕೊಳ್ಳಬೇಕು, ಅನಿಸುತ್ತದೆ. ಒಂದು ಪಕ್ಷಿ ಕೆಳಗಿಳಿಯಿತು. ಅದರೊಂದಿಗೆ ಉಳಿದ ಪಕ್ಷಿಗಳು ಇಳಿದವು. ಕಾಳುಗಳನ್ನು ತಿನ್ನತೊಡಗಿದವು. ತಿಂದ ನಂತರ ಮೇಲಕ್ಕೆ ಹಾರಲು ಪ್ರಯತ್ನಿಸಿದವು, ಹಾರಲು ಆಗಲಿಲ್ಲ. ಬಲೆಯಲ್ಲಿ ಸಿಕ್ಕ ಬಿದ್ದಿವೆ. ಬಲೆಯಲ್ಲಿ ಸಿಕ್ಕಿ ಸ್ವಾತಂತ್ರ್ಯ ಕಳೆದುಕೊಂಡಿದ್ದವು. ಯಾವಾಗ ಸ್ವಾತಂತ್ರ್ಯ ಹೋಯ್ತೋ? ಆಗ ಹಾರುವ ವೈಭವ ಹೋಗಿತ್ತು. ಬಗೆ ಬಗೆಯ ಹಣ್ಣು ತಿನ್ನುವ ವೈಭವ ಹೋಗಿತ್ತು. ಜೀವನದ ವೈಭವವೇ ಹೋಗಿತ್ತು. ಕೇವಲ ಒಂದು ಆಕರ್ಷಣೆ ಬಂಧನಕ್ಕೆ ಒಳಪಡಿಸಿತ್ತು. ಮರಣ ಸಮಯ ಸಮೀಪಿಸುತ್ತಿತ್ತು. ಹೊಟ್ಟೆ ತುಂಬಾ ತಿಂದು ಬಂದಿದ್ದ ಪಕ್ಷಿಗಳೆ ಆಕರ್ಷಣೆಗೆ ಒಳಗಾಗಿದ್ದವು. ಕೆಳಗೆ ಬಿದ್ದಿದ್ದು ದೊಡ್ಡ ದೊಡ್ಡ ವಸ್ತುಗಳಲ್ಲ. ಕೇವಲ ಸಣ್ಣ ಸಣ್ಣ ಕಾಳುಗಳು. ಜಗತ್ತಿನ ತುಂಬಾ ಹಾರಿಕೊಂಡು ಬೇಕು ಬೇಕಾದ ಹಣ್ಣು ಕಾಳುಗಳನ್ನು ತಿನ್ನಬಹುದಿತ್ತು. ಆದರೂ ಸೋಲುತ್ತದೆ ಮನಸ್ಸು. ಆಕರ್ಷಣೆಗೆ ಸೋಲುತ್ತದೆ. ಮೇಲೆ ಕುಳಿತ ಪಕ್ಷಿ ಹೇಳಿತು, "ನಾನು ಎಷ್ಟು ಹೇಳಿದೆ?. ನೀವು ಕೇಳಲಿಲ್ಲ" ಎಂದಿತು. ಆಗ ಕೆಳಗಿದ್ದ ಪಕ್ಷಿ ಹೇಳಿದವು "ಇವಾಗ ಕೇಳುತ್ತದೆ, ಅವಾಗ ಕೇಳಿಸಲಿಲ್ಲ" ಎಂದವು. ಈಗ ಗೊತ್ತಾಯ್ತು, ಯಾರೋ ಹಾಕಿದ್ದನ್ನು ತಿನ್ನಬಾರದು. ಅವರು ಯಾವ ಉದ್ದೇಶಕ್ಕೆ ಹಾಕ್ತಾರೆ ಗೊತ್ತೇ ಆಗುವುದಿಲ್ಲ. ಆದರೆ ಏನು ಮಾಡೋದು, ಸಿಕ್ಕು ಹಾಕಿಕೊಂಡಿದ್ದೇವೆ. ಆಗ ಮರದ ಮೇಲಿದ್ದ ಹಿರಿಯ ಪಕ್ಷಿ ಹೇಳಿತು, "ಚಿಂತೆ ಇಲ್ಲ, ಈ ರಾತ್ರಿ ಅಲ್ಲೇ ಇರಿ, ನಾನು ಇಲ್ಲೇ ಇರ್ತೀನಿ. ಬೆಳಗ್ಗೆ ಬೇಟೆಗಾರ ಬರ್ತಾನೆ. ಯಾರು ಪುಕ್ಕಟೆ ಹಾಕುವುದಿಲ್ಲ. ಆತನ ಯೋಚನೆ ತಿಳಿಯಲಿಲ್ಲ. ಮನಸ್ಸು ಕಾಣಲಿಲ್ಲ. ಬಲೆಯಲ್ಲಿ ಬಿದ್ದಿದ್ದ ಪಕ್ಷಿಗಳಿಗೆ ರಾತ್ರಿಯೆಲ್ಲಾ ನಿದ್ದೆ ಬರಲಿಲ್ಲ. ಬೆಳಿಗ್ಗೆ ಬೇಡ ಬರ್ತಾನೆ. ನಮ್ಮನೆ ಹಿಡಿತಾನೇ. ನಮ್ಮ ಜೀವನ ಮುಗೀತು ಎಂಬ ಚಿಂತೆಯಲ್ಲಿದ್ದವು. ಮೇಲಿನ ಹಿರಿಯ ಪಕ್ಷಿ ಆರಾಮಾಗಿ ನಿದ್ರೆ ಮಾಡುತ್ತಿತ್ತು. ಬಲೆಯಲ್ಲಿ ಬಿದ್ದಿದ ಎಲ್ಲಾ ಪಕ್ಷಿಗಳನ್ನು ಎಬ್ಬಿಸಿತು, ಹೇಳಿತು. "ಈಗಲಾದರೂ ನಾನು ಹೇಳಿದಂತೆ ಕೇಳಿ. ನಿಮ್ಮನ್ನು ಉಳಿಸುತ್ತೇನೆ" ಎಂದಿತು. ಆಗಲೂ ಯುವ ಪಕ್ಷಿಗಳಿಗೆ ಅನುಮಾನ. ನಾವು ಬಲೆಯಲ್ಲಿ ಸಿಕ್ಕಿದ್ದೇವೆ. ಇವ ಹೇಗೆ ಉಳಿಸುತ್ತಾನೆ ಅಂತ. ಆಗ ಹಿರಿಯ ಪಕ್ಷಿ ಹೇಳಿತು. "ನನಗೊಬ್ಬ ಗೆಳೆಯನಿದ್ದಾನೆ. ಆತ ದೂರ ಇದ್ದಾನೆ. ಅಲ್ಲಿಗೆ ನಿಮ್ಮನ್ನೆಲ್ಲ ಕರೆದುಕೊಂಡು ಹೋಗಬೇಕು. ಆ ಗೆಳೆಯ ಬಲೆಯನ್ನೆಲ್ಲ ಕಡಿದು ಹಾಕುತ್ತಾನೆ. ನಿಮ್ಮನ್ನು ಸ್ವಾತಂತ್ರ್ಯ ಮಾಡ್ತಾನೆ. ನೀವು ಮನಸ್ಸು ಮಾಡಬೇಕು. ನೀವೆಲ್ಲ ಒಮ್ಮೆಲೆ ಒಂದೇ ಕ್ಷಣಕ್ಕೆ ಹಾರಬೇಕು. ಈಗಲಾದರೂ ಒಟ್ಟಿಗೆ ಇರಬೇಕು. ನಾನು ಶುರು ಅಂತೀನಿ ಆಗ ಎಲ್ಲರೂ ಒಟ್ಟಿಗೆ ಹಾರಬೇಕು. ತಡ ಮಾಡಬಾರದು. ಎಲ್ಲರೂ ಒಟ್ಟಿಗೆ ಒಮ್ಮೆಲೇ ಹಾರಬೇಕು. ಒಬ್ಬೊಬ್ಬರೇ ಹಾರಿದರೆ ಆಗುವುದಿಲ್ಲ. ಎಲ್ಲರೂ ಒಟ್ಟಿಗೆ ಹಾರಿದ್ರೆ ಬಲೆ ಮೇಲೆ ಬರುತ್ತದೆ. ನೀವು ನನ್ನನ್ನು ಅನುಸರಿಸಿ ಎಂದಿತು. ಬೇಡ ಬರ್ತಾ ಇದ್ದ, ನೋಡಿದ, ನೂರಾರು ಪಕ್ಷಿಗಳು ಬಿದ್ದಿರುವುದನ್ನು ಕಂಡು ಆತನಿಗೆ ಬಹಳ ಸಂತೋಷವಾಯಿತು. ಇದನ್ನು ನೋಡಿದ ಹಿರಿಯ ಪಕ್ಷಿ ಹೇಳಿತು. ಬೇಡ ಬಂದ. ಹಾರಿರಿ ಹೂಂ ಅಂದಿತು. ಎಲ್ಲಾ ಪಕ್ಷಿಗಳು ಒಮ್ಮೆಲೇ ಹಾರಿದವು. ಬಲೆ ಕಿತ್ತು ಮೇಲೆ ಹಾರಿತು. ಆಗ ಬೇಡ ಅಂದ, "ನನ್ನ ಜೀವನದಲ್ಲಿ ಇದೇ ಮೊದಲು. ಆದರೆ ಇಲ್ಲಿ ಏನೋ ಒಂದು ಬೇರೆ ಇದೆ. ಯಾರದೋ ಕೈವಾಡ ಇದೆ. ಇದರಲ್ಲಿ ಯಾರೋ ಬುದ್ಧಿವಂತ ಸೇರಿಕೊಂಡಿದ್ದಾನೆ. ಮುಂದೆ ಮುಂದೆ ಹೋಗೋದನ್ನ ನೋಡಿ ಇವನು ನನ್ನ ಮಾತು ಕೇಳುವುದಿಲ್ಲ ಅಂದ. ಆದರೂ ವಿಚಾರ ಮಾಡಿದ. ಇವೆಲ್ಲ ಒಟ್ಟಿಗೆ ಹೋಗುತ್ತಿದ್ದವಲ್ಲ ಎಷ್ಟೊತ್ತು. ಇವೆಲ್ಲ ಒಟ್ಟಿಗೆ ಹಾರೋದಿಲ್ಲ, ಒಗ್ಗಟ್ಟು ಮುರಿತದೆ ಕೆಳಗೆ ಬಿದ್ದೆ ಬೀಳುತ್ತವೆ ಎಂದು. ಆತನು ಓಡಲು ಶುರು ಮಾಡಿದ. ಮುಂದಿನ ಹಿರಿಯ ಪಕ್ಷಿ ಹೇಳಿತು, "ಆ ಕಡೆ ನೋಡಬೇಡಿ. ಆತ ಯಾಕೆ ಬೆನ್ನು ಹತ್ತಿದ್ದಾನೆ ಗೊತ್ತೇನು?. ನಿಮ್ಮ ಸಂಘಟನೆ ಈಗ ಮುರಿತದೆ, ಆಗ ಮುರಿತದೆ ಅಂತ. ಸಂಘ ಮುರಿದ ತಕ್ಷಣ ನೀವು ಕೆಳಗೆ ಬೀಳುತ್ತೀರಿ. ಆತ ಹಿಡೀತಾನೆ, ನಾವು ಒಗ್ಗಟ್ಟಾಗಿರಬೇಕು" ಎಂದಿತು. 
     ನಮ್ಮಲ್ಲೂ ಅಷ್ಟೇ. ಹಣ, ಸಿರಿ, ಸಂಪತ್ತು ಇವೆಲ್ಲ ಜಾಲ ಇದ್ದ ಹಾಗೆ. ಮುಂದಿನ ಪಕ್ಷಿ ಬುದ್ಧ, ಬಸವ ಇದ್ದ ಹಾಗೆ. ಪಕ್ಷಿಗಳು ಒಗ್ಗಟ್ಟಿನಿಂದ ಹೋದವು. ಬೇಡ ಅಂದ ಇವು ಸಿಗೋದಿಲ್ಲ ಎಂದು ತೀರ್ಮಾನಿಸಿ ಹಿಂದಿರುಗಿದ. ಹಿರಿಯ ಪಕ್ಷಿ ತನ್ನ ಮಿತ್ರ ಹೆಗ್ಗಣದ ಬಳಿ ಕರೆದುಕೊಂಡು ಹೋಗಿ ಅಲ್ಲಿ ಇಳಿಸಿದ. ಗೆಳೆಯನನ್ನು ಕರೆದು ಹೇಳಿದ. ಈ ಬಲೆ ಕತ್ತರಿಸುವಂತೆ. ಗೆಳೆಯ ಹೆಗ್ಗಣ ಮಿತ್ರನ ಮಾತಿಗೆ ಬೆಲೆ ಕೊಟ್ಟು ಬಲೆ ಕತ್ತರಿಸಿ, ಎಲ್ಲಾ ಪಕ್ಷಿಗಳನ್ನು ಸ್ವತಂತ್ರ ವಾಗಿ ಮಾಡಿ ಹೇಳಿತು. "ಬಲ್ಲವರ ಮಾತನ್ನು ತಿರಸ್ಕರಿಸಬಾರದು" ಎಂದು. ಆದರೆ ನಮ್ಮ ಗೆಳೆತನ ಹೇಗಿದೆ ಅಂದ್ರೆ ಪಾರು ಮಾಡುವುದಕ್ಕಿಂತಲೂ, ಬಲೆಯಲ್ಲಿ ಹಾಕುವುದು. ಸುಂದರ ಕುಟುಂಬದಲ್ಲಿ ಜಗಳ ತಂದು ಹಾಕುವುದು. ಕುಡಿತಕ್ಕೆ ದೂಡುವುದು. ಇದರಿಂದ ಪಾರಾಗಬೇಕಾದರೆ ಬಲ್ಲವರ ಸಂಘ ಮಾಡಬೇಕು. ಬಲ್ಲವರ ಮಾತು ಮೀರಬಾರದು. ಅಲ್ಲವೇ ಮಕ್ಕಳೇ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************


Ads on article

Advertise in articles 1

advertising articles 2

Advertise under the article