-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 102

ಸ್ಫೂರ್ತಿಯ ಮಾತುಗಳು : ಸಂಚಿಕೆ - 102

ಸ್ಫೂರ್ತಿಯ ಮಾತುಗಳು : ಸಂಚಿಕೆ - 102
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com       

 ಬೆಂಗಳೂರಿನ ದಶ ಕೋಟ್ಯಾಧಿಪತಿ ರಮೇಶ್ ಬಾಬು ಇವರ ಹೆಸರು ಕೇಳದವರಿರರು. ಇತ್ತೀಚೆಗೆ ಪತ್ರಿಕೆಯಲ್ಲಿ ಅವರ ಕುರಿತಾದ ಒಂದು ವರದಿ ಪ್ರಸಾರವಾಗಿತ್ತು. ದಿನಾ ಪತ್ರಿಕಾ ವರದಿಗಳಿಗೇನು ಕಡಿಮೆ? ಸಹಸ್ರಾರು ವರದಿಗಳಿರುತ್ತವೆ. ಅಂತಹ ವರದಿಗಳ ಸಾಲಿನಲ್ಲಿ ಈ ವರದಿಯೂ ಒಂದಾಗಿರಬಹುದೆಂದು ಗೌಣವಾಗಿ ಯೋಚಿಸದಿರಿ. ಈ ವರದಿಯು ಎಂತಹ ಕೀಳರಿಮೆಯವರನ್ನೂ ಬಡಿದೆಬ್ಬಿಸುವ ಶಕ್ತಿಯಿರುವ ಬಹಳ ತಾಕತ್ತು ಹೊಂದಿರುವ ವರದಿ. ಹಾಗಾದರೆ ಆ ವರದಿಯಾದರೂ ಏನೆಂದು ತಿಳಿಯುವ ಕಾತರದಲ್ಲಿದ್ದೀರಾ?

ರಮೇಶ್ ಬಾಬು ಮೂಲತಃ ಕ್ಷೌರಿಕವೃತ್ತಿಯವರು. ಬಹಳ ಬಡವರು. ದೈನಂದಿನ ಬದುಕಿಗೆ ಈ ವೃತ್ತಿಯೇ ಅವರಿಗಾಧಾರ. ಸಣ್ಣ ಸೆಲೂನ್, ಮಿತ ಆದಾಯ, ಸರಳ ಜೀವನ. ಒಂದು ದಿನ ಅವರ ತಲೆಯೊಳಗೆ ಯೋಚನೆಯೊಂದು ಮಿಂಚಿನಂತೆ ಉದಯಿಸಿತು. ಆ ಯೋಚನೆಗೆ ಶಕ್ತಿ ತುಂಬುವ ಚಿಂತನೆ ನಡೆಸಿದರು. ಬ್ಯಾಂಕೊಂದನ್ನು ಸಂಪರ್ಕಿಸಿದರು. ಆ ಬ್ಯಾಂಕ್ ಮೇನೇಜರ್ ಬಹಳ ಒಳ್ಳೆಯವರು. ಈ ಕ್ಷೌರಿಕ ಬೆಂಗಳೂರಿನಲ್ಲಿ ಹೊಂದಿದ್ದ ಮನೆ ಮತ್ತು ಸೈಟ್ ನ ಆಧಾರ ಪಡೆದು ಒಂದು ಕೋಟಿ ರೂ ಸಾಲ ನೀಡಿದರು. ಸಾಲದ ಮೊಬಲಗಿನಿಂದ ಕಾರ್ ಖರೀದಿಸುವ ಯೋಜನೆಯನ್ನು ಕ್ಷೌರಿಕ ಮೊದಲೇ ಮೇನೇಜರ್ ಜತೆ ವಿವರಿಸಿದ್ದ. ಒಂದು ಕೋಟಿ ರೂಪಾಯಿಯ ಕಾರು ರಮೇಶ್ ಬಾಬು ಮನೆಗೆ ಬಂತು. ಈ ಕಾರು ಬಂದೊಡನೆಯೆ ರಮೇಶ್ ಬಾಬು ಅದೃಷ್ಟ ಖುಲಾಯಿಸಿತು. ಚಲನಚಿತ್ರ ಕಂಪೆನಿಯವರು ಅಂತಹ ಬೆಲೆ ಬಾಳುವ ಕಾರನ್ನು ಬಾಡಿಗೆಗೆ ನೀಡುವವರಿದ್ದಾರೆಯೇ ಎಂದು ಹುಡುಕಾಡುತ್ತಿದ್ದ ಅಂದಿನ ದಿನಗಳವು. ರಮೇಶ್ ಬಾಬುರವರ ಕೋಟಿ ರೂ ಬೆಲೆ ಬಾಳುವ ಕಾರ್ ಗೆ ಬೇಡಿಕೆ ಬಂತು. ಅಂದಿನಿಂದ ನಿರಂತರ ಬೇರೆ ಬೇರೆ ಚಲನ ಚಿತ್ರ ತಯಾರಕರು ಆ ಕಾರನ್ನು ಬಾಡಿಗೆಗೆ ಪಡೆಯುತ್ತಿದ್ದುದರಿಂದ ರಮೇಶ್ ಬಾಬು ರವರಿಗೆ ಸಾಲ ಹೊರೆಯಾಗಲಿಲ್ಲ. ಸಾಲದ ಅಸಲು ಮತ್ತು ಬಡ್ಡಿ ಕಟ್ಟಿದ ನಂತರವೂ ಸಣ್ಣ ಉಳಿತಾಯವೇ ಆರಂಭವಾಯಿತು.
      
ತನ್ನ ಒಂದು ಕಾರ್ ನಿಂದ ಬಹು ಜನರ ಬೇಡಿಕೆಯನ್ನು ಪೂರೈಸಲು ಅಸಾಧ್ಯವಾದುದನ್ನು ಗಮನಿಸಿದ ರಮೇಶ್ ಬಾಬು ಮತ್ತೊಂದು ಕಾರ್ ಖರೀದಿಸಿದರು. ಬೇಡಿಕೆ ಹೆಚ್ಚಿದಂತೆ ಮುಂದಿನ ದಿನಗಳಲ್ಲಿ ಹೊಸ ಹೊಸ ಕಾರು ಖರೀದಿಸುತ್ತಾ ಹೋದರು. ಅವರ ಕಾರುಗಳು ಅವರ ಕಾರ್ ಶೆಡ್ಡ್ ನೊಳಗಿರದೆ ಸದಾ ಬಾಡಿಗೆಗೆ ಹೋಗುತ್ತಿದ್ದುವು. ಇಂದು ಅವರಲ್ಲಿ ಐದುನೂರಕ್ಕೂ ಹೆಚ್ಚು ಕಾರುಗಳಿಗೆ. ಅಷ್ಟೇ ಜನರು ಚಾಲಕರಾಗಿ ಅವರ ಹೆಸರು ಹೇಳಿ ಜೀವಿಸುತ್ತಿದ್ದಾರೆ. ಇದೇ ವರದಿಯನ್ನು ನಾನು ಆರಂಭದಲ್ಲಿ ಉಲ್ಲೇಖಿಸಿರುವುದು.

ವೃತ್ತಿಯಾಗಲೀ, ವರ್ಗವಾಗಲೀ, ಜಾತಿಯಾಗಲೀ, ಧರ್ಮವಾಗಲೀ ಅಥವಾ ಸಂಪತ್ತಾಗಲೀ ಯಾರನ್ನೂ ಬೆಳೆಸದು. ಶ್ರೇಷ್ಠವಾದ ಹಂಬಲಗಳು, ಅದೃಷ್ಟ ಮತ್ತು ದೃಢ ನಿರ್ಧಾರಗಳು ಕಾರ್ಯಯೋಜನೆಯಾದಾಗ ಒದಗುವ ಸಫಲತೆಯನ್ನು ಯಾರಿಂದಲೂ ತಡೆಯಲಾಗದು. ನಮ್ಮ ಉಳಿವು ಅಳಿವುಗಳು ನಮ್ಮ ಚಿಂತನೆ ಮತ್ತು ಕಾರ್ಯಪಥವನ್ನಾಧರಿಸಿದೆ. ಮೇಲ್ಮುಖವಾದ ಆಕಾಂಕ್ಷೆ, ಧನಾತ್ಮಕ ಚಿಂತನೆ, ಕಠಿಣ ಪರಿಶ್ರಮದ ಸ್ಪರ್ಷವಿದ್ದಾಗ ಉತ್ತಮ ಸ್ಥಾನಕ್ಕೇರಲು ಎಲ್ಲರಿಗೂ ಸಾಧ್ಯವಿದೆ. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ, ಸಾಧಿಸುವ ಛಲವಿರಬೇಕು. ಸಾಧಕನಿಗೆ ಇದಿರೇನು?