-->
ಜೀವನ ಸಂಭ್ರಮ : ಸಂಚಿಕೆ - 123

ಜೀವನ ಸಂಭ್ರಮ : ಸಂಚಿಕೆ - 123

ಜೀವನ ಸಂಭ್ರಮ : ಸಂಚಿಕೆ - 123
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 

             
       ಈ ಘಟನೆ ಓದಿ. ಸಿದ್ದೇಶ್ವರ ಸ್ವಾಮೀಜಿ ಒಂದು ಪ್ರವಚನದಲ್ಲಿ ಹೇಳಿದ್ದು. ಒಂದು ಸಣ್ಣ ಮನೆ. ತಂದೆ ಇಲ್ಲ. ತಾಯಿ ಮಗ ಇದ್ದಾರೆ. ಒಂದು ಎಕರೆ ಜಮೀನು ಇತ್ತು. ಅದರಲ್ಲಿ ಬಗೆ ಬಗೆಯ ಹೂವು ಹಣ್ಣು ಬೆಳೆದಿದ್ದರು. ಮಾವು, ಸಪೋಟ, ಪರಂಗಿ, ನೇರಳೆ ಮತ್ತು ಸೀಬೆ ಹೀಗೆ ಬೆಳೆದಿದ್ದರು. ದಿನದ ತುಂಬಾ ದುಡಿತ‌. ಹಣ್ಣು ಹಂಪಲು ಬೆಳೆದು ಹೋಗುವವರಿಗೆ ಬರುವವರಿಗೆ ನೀಡುತ್ತಾ ಹಾಗೆ ಮಾರಾಟ ಮಾಡುತ್ತಿದ್ದರು. ಒಂದು ದಿನ ಒಬ್ಬ ಬುದ್ಧಿವಂತ ಬಂದನು. ಒಂದು ಹಣ್ಣಿನ ಬೆಲೆ ಕೇಳಿದ. ಆಗ ಮಾರಾಟ ಮಾಡುತ್ತಿದ್ದವನು ಹುಡುಗ. ಹುಡುಗ 10 ರೂ ಎಂದನು. ಆ ಬುದ್ಧಿವಂತ ಹೇಳಿದ ಇಲ್ಲೇ ಗಿಡ ಇದೆ. ನೀನು ಮಾರುಕಟ್ಟೆಗೆ ಹೋಗಿಲ್ಲ. ನಾನೇ ನಿನ್ನ ಬಳಿ ಬಂದಿದ್ದೇನೆ. ಏಕೆ ಇಷ್ಟು ಬೆಲೆ ? ಎಂದನು. ತಾವು ಇಷ್ಟೆಲ್ಲ ಹೇಳಿದ್ದಕ್ಕೆ ಒಂದು ರೂ ಕಡಿಮೆ ಮಾಡಿ ಒಂಬತ್ತು ಕೊಡಿ ಎಂದು ಹೇಳಿದನು. ಇದಕ್ಕೆ ಬುದ್ಧಿವಂತ ಹೇಳಿದ ಮರ ಇದೆ, ಮಳೆ ನೀರು ಕೊಟ್ಟಿದೆ. ನೀನು ವರ್ಷದಿಂದ ಏನು ಮಾಡಿದ್ದಿ ಹೇಳು ಎಂದು. ಇದನ್ನು ಕೇಳಿ ಹುಡುಗ ದಿಗ್ಭ್ರಾಂತನಾದನು. ಯೋಚಿಸಿ ಹೇಳಿದ ನಾನು ಮರ ಏರಿ ಈ ಹಣ್ಣನ್ನು ಕಿತ್ತಿದ್ದಿನಲ್ಲ ಅದಕ್ಕೆ ಎಂದನು. ಅದಕ್ಕೆ ಬುದ್ಧಿವಂತ ಹೇಳಿದ, ನಾನು ಕಿತ್ತರೆ ಪುಕ್ಕಟೆ ಅಲ್ಲವೇ ಎಂದು ಹೇಳಿದನು. ಆಗ ಹುಡುಗ ಹೇಳಿದ ಆಯ್ತು ಎಂದನು. ಈತ ವಿಶ್ವವಿದ್ಯಾನಿಲಯ ಏರಿದವನು. ಲಿಫ್ಟ್ ನಲ್ಲಿ ಏರಿದವನು. ಮರ ಏರಿದವನಲ್ಲ. ಬುದ್ಧಿವಂತ ಮರ ಏರಲು ಶುರು ಮಾಡಿದ. ಏರುವುದು ಜಾರುವುದು, ಏರುವುದು ಜಾರುವುದು ನಡೆದಿತ್ತು. ಹುಡುಗ ಮಜಾದಿಂದ ನೋಡುತ್ತಿದ್ದನು. ಏರಿ ಇನ್ನೇನು ಹಣ್ಣು ಕೀಳಬೇಕು ಅಷ್ಟರಲ್ಲಿ ಕಾಲು ಜಾರಿ ಬಿದ್ದನು. ಆಗ ಹುಡುಗ ಹೇಳಿದ, ತಮಗೆ ಈಗೇನು ಸಿಕ್ಕಿತಲ್ಲ ಅಷ್ಟೇ ಸಾಕು, ಈಗ ಜಾಗ ಖಾಲಿ ಮಾಡಿ, ಜೀವ ಹೋದರೆ ಏನು 9 ರೂ ಉಳಿಸಿದಿರಲ್ಲ ಎಂದನು. ಮುಂದೆ ಒಂಬತ್ತು ರೂಪಾಯಿ ಉಳಿಸಲು ಹೋಗಿ ಆಸ್ಪತ್ರೆಗೆ ದಾಖಲಾಗಿ ರೂ.10,000 ಖರ್ಚು ಮಾಡಿದ್ದನು.
       ಇನ್ನೊಂದು ಘಟನೆ ಒಂದು ಕುಟುಂಬವಿತ್ತು. ಇಬ್ಬರೂ ಮಕ್ಕಳು. ಇಬ್ಬರು ಮೆಟ್ರಿಕ್ಯುಲೇಷನ್ ಪರೀಕ್ಷೆಗೆ ಒಟ್ಟಿಗೆ ಕುಳಿತರು. ಅಂದರೆ ಹಿರಿಯವನು ದಡ್ಡನಾಗಿದ್ದು, ಅನುತ್ತೀರ್ಣನಾಗಿ ಬಂದಿದ್ದನು. ತಮ್ಮ ಬುದ್ಧಿವಂತ. ಫಲಿತಾಂಶ ಬಂದಿತ್ತು. ತಂದೆ ಇಬ್ಬರಿಗೂ ಹಣ ನೀಡಿ ಪಾಸಾದಲ್ಲಿ ಸಿಹಿ ಹಂಚಿ ಎಂದು ಹೇಳಿದನು. ಫಲಿತಾಂಶ ಈಗಿನಂತೆ ಆಗ ಇರಲಿಲ್ಲ. ಆಗ ನೋಟಿಸ್ ಬೋರ್ಡ್ ನಲ್ಲಿ ಹಾಕುತ್ತಿದ್ದರು. ಇಬ್ಬರು ಶಾಲೆಗೆ ಹೋದರು. ಅಣ್ಣ ಫಲಿತಾಂಶ ನೋಡಿದ, ತಮ್ಮ ಶಾಲೆಗೆ ಪ್ರಥಮ ಬಂದಿದ್ದನು. ಅಣ್ಣನಿಗೆ ಎಷ್ಟು ಸಂತೋಷ ಎಂದರೆ ಇಡೀ ಶಾಲೆಗೆ ತಮ್ಮ ಪ್ರಥಮ ಎಂದು ಸಿಹಿ ಖರೀದಿಸಿ ಎಲ್ಲರಿಗೂ ಹಂಚುತ್ತಿದ್ದ. ಎಲ್ಲರೂ ಕೇಳುತ್ತಿದ್ದರು ಏನಪ್ಪಾ ಪಾಸಾದೆ ಏನು?. ಅದಕ್ಕೆ ಆತ ಹೇಳುತ್ತಿದ್ದ, ನನ್ನ ತಮ್ಮ ಇಡೀ ಶಾಲೆಗೆ ಪ್ರಥಮ ಎಂದು. ಅದಕ್ಕೆ ಅವರೆಲ್ಲರೂ ಇವನೊಬ್ಬ ಹುಚ್ಚ ಎನ್ನುತ್ತಿದ್ದರು. ಇಲ್ಲಿ ತಮ್ಮ ಫಲಿತಾಂಶ ನೋಡಿದ, ತಾನು ಶಾಲೆಗೆ ಪ್ರಥಮ ಬಂದಿದ್ದನ್ನು ನೋಡಿ ಸಂತೋಷವಾಯಿತು. ನಂತರ ಅಣ್ಣನ ಫಲಿತಾಂಶ ನೋಡಿದ ಆತನ ಹೆಸರು, ನೊಂದಣಿ ಸಂಖ್ಯೆ ಇರಲಿಲ್ಲ. ಆತನಿಗೆ ಅಣ್ಣನ ಬಗ್ಗೆ ಅಷ್ಟು ತಾತ್ಸಾರವಾಯಿತು. ಊರಿನ ತುಂಬಾ ಅಣ್ಣ ಅನುತ್ತೀರ್ಣ ಎಂದು ಹೇಳುತ್ತಾ ಹೊರಟಿದ್ದನು. ಇಬ್ಬರು ಮನೆಗೆ ಬಂದರು ತಂದೆ ನೋಡಿದ ಅಣ್ಣನ ಕೈಯಲ್ಲಿ ಸಿಹಿ ಇತ್ತು. ತಂದೆ ಇಬ್ಬರೂ ಪಾಸಾಗಿದ್ದಾರೆಂದು ಭಾವಿಸಿ, ಒಳ್ಳೆಯದು ಇಬ್ಬರೂ ಪಾಸಾಗಿದ್ದರಲ್ಲ ಬಹಳ ಸಂತೋಷವಾಯಿತು ಎಂದನು. ಆಗ ಅಣ್ಣ ಹೇಳಿದ ನನ್ನ ತಮ್ಮ ಶಾಲೆಗೆ ಪ್ರಥಮ ಬಂದಿದ್ದಾನೆ, ಅದಕ್ಕೆ ನಾನು ಸಿಹಿ ಹಂಚಿದ್ದೇನೆ ಎಂದು. ತಮ್ಮ ಹೇಳಿದ ಅಣ್ಣ ಅನುತೀರ್ಣನಾಗಿದ್ದಾನೆ ಎಂದು. ಆಗ ತಂದೆ ಹೇಳಿದನು, "ಏನೋ ಇಷ್ಟು ದಡ್ಡ. ನೀನು ಫೇಲ್ ಆಗಿದ್ದು ಸಿಹಿ ಹಂಚುತ್ತಿದ್ದೀಯಲ್ಲ" ಎಂದನು. ಆಗ ಅಣ್ಣ ತಂದೆಗೆ ಹೇಳಿದ, "ನನ್ನ ತಮ್ಮ ಶಾಲೆಗೆ ಪ್ರಥಮ ಬಂದಿದ್ದಾನೆ. ಅದಕ್ಕಿಂತ ದೊಡ್ಡ ಸಂತೋಷ ಎಲ್ಲಿದೆ...? ಅಣ್ಣ ಶಾಲೆಗೆ ಹೋಗಿ ಮುಖ್ಯ ಶಿಕ್ಷಕರಿಗೆ ಸಿಹಿ ನೀಡಿದ. ಈತ ಫೇಲ್ ಆಗಿರುವುದು ಮುಖ್ಯ ಶಿಕ್ಷಕರಿಗೆ ಗೊತ್ತಿತ್ತು. ಸಿಹಿ ಪಡೆದು ಹೇಳಿದರು... "ನಿನ್ನ ತಮ್ಮನಂತವರು ನೂರು ಜನ ಹುಟ್ಟುತ್ತಾರೆ. ನಿನಗೆ ನಾನು ವಿದ್ಯೆ ಕೊಡಬಹುದು. ಇಂತಹ ಹೃದಯ ಕೊಡಲು ಸಾಧ್ಯವಿಲ್ಲ." ಎಂದು ಹೇಳಿ ಆತನನ್ನು ಕರೆಸಿ ವಿದ್ಯೆ ನೀಡಿದರು. ಮುಂದೆ ಆತ ದೊಡ್ಡ ಸಂತನಾದನು. ಅಣ್ಣನ ಹೆಸರು ಎಲ್ಲಾ ಕಡೆ ಪ್ರಸಾರವಾಯಿತು. ತಮ್ಮನ ಹೆಸರು ಎಲ್ಲೂ ಇರಲಿಲ್ಲ.  
    ದೀಪವನ್ನು ಬೆಳಗಲು ಬಳಸಬಹುದು, ಊರನ್ನು ಸುಡಲೂ ಬಳಸಬಹುದು. ಚಾಕನ್ನು ಕೊಲ್ಲಲು ಬಳಸಬಹುದು, ವಸ್ತುವನ್ನು ಕತ್ತರಿಸಿ ಸುಂದರವಾಗಿ ಮಾಡಲು ಬಳಸಬಹುದು. ಕೆಲವರು ಆಹಾರವನ್ನು ಮನಸ್ಸಿನಲ್ಲಿ ಬಯ್ಯುತ್ತಾ ನೀಡುತ್ತಾರೆ, ಅದರಲ್ಲಿ ಹೋಳಿಗೆ ಪಾಯಸ ಎಲ್ಲ ಇರುತ್ತದೆ. ಇನ್ನೊಬ್ಬರು ಅನ್ನವನ್ನು ಪ್ರೀತಿಯಿಂದ ಚೆನ್ನಾಗಿದೆ, ಇದು ನಾನೇ ಮಾಡಿದ್ದೇನೆ, ತುಂಬಾ ರುಚಿಯಾಗಿದೆ, ತಿನ್ನಪ್ಪ ಎಂದು ಹೇಳಿ, ಪ್ರೀತಿಯಿಂದ ನೀಡುತ್ತಾರೆ. ವಿದ್ಯೆ ಬುದ್ಧಿ ದೊಡ್ಡದಲ್ಲ. ಅದರ ಹಿಂದಿರುವ ಉದ್ದೇಶ ದೊಡ್ಡದು. ಸಂತೋಷ ದೊಡ್ಡದು, ಅಲ್ಲವೇ ಮಕ್ಕಳೇ...
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************


Ads on article

Advertise in articles 1

advertising articles 2

Advertise under the article