ಜಗಲಿ ಕಟ್ಟೆ : ಸಂಚಿಕೆ - 37
Sunday, February 4, 2024
Edit
ಜಗಲಿ ಕಟ್ಟೆ : ಸಂಚಿಕೆ - 37
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
ಮಕ್ಕಳ ಜಗಲಿ
www.makkalajagali.com
ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ
ಇತ್ತೀಚೆಗೆ ಜಗಲಿಯ ಸಂಪರ್ಕಕ್ಕೆ ಬಂದ ಪೋಷಕರೊಬ್ಬರು ಫೋನ್ ಮಾಡಿ, "ನನ್ನ ಮಗ ಎಲ್ಲಾ ವಿಷಯಗಳಲ್ಲೂ ತುಂಬಾ ಚುರುಕಾಗಿದ್ದಾನೆ. ಚಿತ್ರಗಳನ್ನು ತುಂಬಾ ಚೆನ್ನಾಗಿ ಬಿಡಿಸುತ್ತಾನೆ. ಮಕ್ಕಳ ಜಗಲಿಗೆ ಕಳುಹಿಸಿಕೊಡಬಹುದಾ.... ಮಕ್ಕಳಿಗೆ ಪ್ರೋತ್ಸಾಹ ಕೊಡುತ್ತಿರುವ ಮಕ್ಕಳ ಜಗಲಿಯ ಬಗ್ಗೆ ನನ್ನೂರಿನ ಹಿತೈಷಿಯೊಬ್ಬರು ಹೇಳಿದ್ದರು." ಎಂದಾಗ ಬಹಳ ಖುಷಿಯಾಯಿತು. ಮಕ್ಕಳ ಜಗಲಿ ಆಸಕ್ತ ವಿದ್ಯಾರ್ಥಿಗಳನ್ನು ತಲುಪುತ್ತಾ ಇರುವುದು ಸಂತೋಷದಾಯಕ ವಿಚಾರ. ಪ್ರತಿ ಬಾರಿ ನಾವು ಸ್ಪರ್ಧೆಗಳನ್ನು ಏರ್ಪಡಿಸಿದಾಗ ಹೊಸ ಹೊಸ ವಿದ್ಯಾರ್ಥಿಗಳನ್ನು ಮಕ್ಕಳ ಜಗಲಿ ತಲುಪುತ್ತಿದೆ. ಈ ಕಾರಣಕ್ಕೆ ಮತ್ತೆ ಹೊಸ ಮುಖಗಳು ಮಕ್ಕಳ ಜಗಲಿಯ ಪರಿಚಯವಾಗಲು ಕಾರಣವಾಗುತ್ತಿದೆ.
'ಸ್ಪರ್ಧೆ' ಗಳು ಪರಿಚಯಕ್ಕೊಂದು ವೇದಿಕೆಯಾದರೆ, ನಿತ್ಯ ನಿರಂತರವಾಗಿ ತೊಡಗಿಸಿಕೊಳ್ಳುವ ಮೂಲಕ ತನ್ನಲ್ಲಿರುವ ಪ್ರತಿಭೆಯನ್ನು ವಿಕಸನಗೊಳ್ಳುವಂತೆ ಮಾಡಬೇಕು. ಸ್ಪರ್ಧೆ ಇದ್ದಾಗ ಮಾತ್ರ ಚಿತ್ರ ಮಾಡುವುದು ಅಥವಾ ಕಥೆ ಕವನಗಳನ್ನು ಬರೆಯುವುದು ರೂಢಿ ಆಗಬಾರದು. ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿಯೂ ತಲೆ ಮತ್ತು ಸಾಹಿತ್ಯದ ಅಭಿರುಚಿ ಬೆಳೆಯಬೇಕೆಂಬುದು ಮಕ್ಕಳ ಜಗಲಿಯ ಆಶಯವಾಗಿದೆ.
ಇತ್ತೀಚೆಗೆ ಸಿಕ್ಕ ಜಗಲಿಯ ಪೋಷಕರೊಬ್ಬರು, "ಮಗ ಚಿತ್ರ ಮಾಡುತ್ತಾನೆ... ಆದರೆ ಕಳುಹಿಸಿಕೊಡಲು ಪುರುಸೊತ್ತು ಸಿಗುತ್ತಿಲ್ಲ" ಎಂದಾಗ ಒಮ್ಮೆ ಆತಂಕವಾಗುತ್ತದೆ.... ಮಕ್ಕಳಿಗಾಗಿ ಬೆಂಬಲ ಕೊಡುವ, ಮಕ್ಕಳಿಗಾಗಿ ಕಿಂಚಿತ್ತು ಸಮಯ ನೀಡುವ ಅನೇಕ ಪೋಷಕರಿದ್ದಾರೆ. ಆದರೆ ಇಂತಹ ವಿಷಯಗಳನ್ನು ಗಂಭೀರವಾಗಿ ತೆಗೆದುಕೊಳ್ಳದೇ ಇರುವವರ ಕಾರಣಕ್ಕೆ ಮಕ್ಕಳ ಅಭಿರುಚಿಗಳು ಬದಲಾಗಬಾರದೆನ್ನುವ ಕಾಳಜಿ ನಮ್ಮದು...!!
ನಾವು ಹೊಸ ಅಂಕಣವನ್ನು ಆರಂಭಿಸಿದ್ದೇವೆ. "ನಿಮ್ಮೂರ ಶಾಲೆಯ ಸುದ್ದಿ"... ವಿದ್ಯಾರ್ಥಿಗಳು ಅಥವಾ ಶಿಕ್ಷಕರು ಯಾರು ಕೂಡ ಈ ಅಂಕಣವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ನಿಮ್ಮ ಬರವಣಿಗೆಯ ಆಸಕ್ತಿಯನ್ನು ಇಮ್ಮಡಿಗೊಳಿಸಿ. "ಮಕ್ಕಳ ಜಗಲಿ" ಅದು ನಿಮ್ಮ ಮನೆಯ ಜಗಲಿ ಎಂದಾಗಲಿ... ನಮಸ್ಕಾರ...
ಕಳೆದ ಸಂಚಿಕೆಯ ಜಗಲಿಕಟ್ಟೆ - 36 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....
ಎಲ್ಲರಿಗೂ ನಮಸ್ಕಾರಗಳು...
ಒಂದೆರಡು ವಾರಗಳ ವಿರಾಮದ ನಂತರ ಮತ್ತೆ ಪ್ರತಿಕ್ರಯಿಸುವ ಪ್ರಯತ್ನ ಮಾಡುತ್ತಿದ್ದೇನೆ. ತಾರನಾಥ ಸರ್ ರವರು ಈ ವಾರದ ಮಾತುಕತೆಯ ಅಂಕಣದಲ್ಲಿ ಬರೆದ ಸಾಲುಗಳು, ಬರವಣಿಗೆಯಿಂದ ಒಳ್ಳೆಯ ಸಾಹಿತಿಗಳಾಗಬಹುದೆನ್ನುವ ಪ್ರೇರಣಾತ್ಮಕ ನುಡಿ ಮತ್ತೆ -ಮತ್ತೆ ಬರೆಯುವಂತೆ ಸ್ಪೂರ್ತಿ ತುಂಬುತ್ತಿವೆ. ಈ ನಿಟ್ಟಿನಲ್ಲಿ "ನಿಮ್ಮೂರ ಶಾಲೆಯ" ಅಂಕಣದಲ್ಲಿ ಅಭಿನವ್ ಬರೆದ ಶಾಲಾ ಅನುಭವ ತುಂಬಾನೇ ಮುದ್ದಾಗಿತ್ತು. ಶಿಸ್ತು ಸಂಯಮಗಳು ಜೀವನವು ಹಿತವಾಗಿ ಸಾಗುವಂತೆ ದಾರಿ ತೋರಿಸಿಕೊಡುತ್ತವೆ. ಆದ್ದರಿಂದ ಮಕ್ಕಳಿಗೆ ಬಾಲ್ಯಾವಸ್ಥೆಯಲ್ಲೇ ಬೆನ್ನು ತಟ್ಟುವ ಕೈಗಳು ದೊರೆತರೆ ಜೀವನಕ್ಕೆ ಆದರ್ಶವಾಗುವ ವಿದ್ಯೆಗಳನ್ನು ಮಕ್ಕಳು ಬೇಗನೇ ಕಲಿಯುತ್ತಾರೆ.
ಈ ವಾರದ ಮಕ್ಕಳ ಜಗಲಿಯಲ್ಲಿ ಮೂಡಿಬಂದ ಜ್ಞಾನೇಶ್ ಸರ್ ರವರ ಲೇಖನ ತುಂಬಾ ಚೆನ್ನಾಗಿತ್ತು. ಆಸೆಯೇ ದುಃಖಕ್ಕೆ ಮೂಲ ಕಾರಣ, ಅತಿಯಾದ ಆಸೆಯನ್ನು ಬಿಟ್ಟರೆ ದುಃಖ ದೂರವಾಗುತ್ತದೆ, ಇದ್ದುದರಲ್ಲೇ ನೆಮ್ಮದಿಯನ್ನು ಕಾಣುವ ಮನಸ್ಸು ನಮ್ಮದಾಗಬೇಕು. ಎಂಬ ನೈಜ ಸಂದೇಶ ಸಾರುವ ಕಥೆ ತುಂಬಾನೇ ಹಿಡಿಸಿತು.
ರಮೇಶ್ ಬಾಯಾರ್ ಸರ್ ರವರ ಸ್ಫೂರ್ತಿಯ ಮಾತು 100 ನೇ ಸಂಚಿಕೆಯಲ್ಲಿ ಪ್ರಕಟವಾದ "ಮನೋರೋಗ" ಎಂಬ ಲೇಖನದಲ್ಲಿ ಮೊಬೈಲ್ ನ ಅತಿಯಾದ ಬಳಕೆಯಿಂದಾಗಿ ನಾವು ಕಳೆದುಕೊಳ್ಳಬಹುದಾದ ಎಷ್ಟೋ ಅಮೂಲ್ಯ ಕ್ಷಣಗಳು, ಮತ್ತೆ ನಮಗೆ ಬೇಕೆನಿಸಿದರೂ ಸಿಗಲಾರವು. ನಾವು ನಮ್ಮನ್ನೇ ಮರೆಯುವಷ್ಟರ ಮಟ್ಟಿಗೆ ಮೊಬೈಲ್ ನ ದಾಸರಾಗುವುದು ಸರಿಯಲ್ಲ ಎಂಬ ಸಂದೇಶ ಚೆನ್ನಾಗಿತ್ತು.
ಯಾಕೂಬ್ ಸರ್ ರವರ "ಬದುಕಿನ ಸಾರ್ಥಕ ಕ್ಷಣಗಳು" ಎಂಬ ಲೇಖನ "ಒಳಿತು ಮಾಡು ಮನುಸ, ನೀ ಇರೋದು ಮೂರೇ ದಿವಸ" ಎಂಬ ಹಾಡಿನಂತೆ, ನಾವು ನಮ್ಮ ಜೀವಿತಾವಧಿಯಲ್ಲಿ ಸಾಧ್ಯವಾದರೆ ಹಿತವಾದವುಗಳನ್ನೇ ಮಾಡಬೇಕು. ಆಗಮಾತ್ರ ನಾವು ಇತರರ ಮನದಲ್ಲಿ ನೆಲೆಯೂರಲು ಸಾಧ್ಯ ಎಂಬ ಸತ್ಯಾಂಶವನ್ನು ಬಿತ್ತರಿಸಿದಂತಿತ್ತು.
ಮಕ್ಕಳ ವಿಜ್ಞಾನ ವಿಭಾಗದಲ್ಲಿ, ದಿವಾಕರ ಸರ್ ರವರು ಬರೆದಿರುವ 'ಜೀವಿಗಳ ಉಗಮ' ಎಂಬ ಲೇಖನ ಮಾಲೆಯು, ಮೆದುಳಿಗೆ ಮೇವು ನೀಡಿದಂತೆ ವಿಚಾರಯುಕ್ತವಾಗಿದೆ. ವಿಜ್ಞಾನವನ್ನೂ ಕಥೆಯೊಂದಿಗೆ ಹೊಂದಿಸಿ ನಮಗೆಲ್ಲಾ ಅರ್ಥೈಸುತ್ತಿರುವ ರೀತಿ ಅಮೋಘವಾದದ್ದು.
ವಿಶೇಷ ಲೇಖನದಲ್ಲಿ ಜಯಪ್ರಕಾಶ್ ಪುಣಚ ಸರ್ ಬರೆದ "ಶಿಕ್ಷಣ ಜಾತ್ರೆಗೆ ಸಜ್ಜಾಗೋಣ" ಎಂಬ ಅಕ್ಕರೆಯ ಕರೆಯು ಎಂತಹ ಸಿಡುಕ, ಮುಗ್ಧ ಅಥವಾ ಸೋಮಾರಿತನ ತೋರಿಸಬಲ್ಲ ಮಕ್ಕಳನ್ನೂ ಬದಲಾಯಿಸಬಲ್ಲದು ಎಂಬ ನಿದರ್ಶನಕ್ಕೆ ಹಿಡಿದ ಕೈಗನ್ನಡಿಯಂತಿತ್ತು.
ವಿಜಯ ಮೇಡಂ ರವರ "ನಿಷ್ಪಾಪಿ ಸಸ್ಯಗಳ" ಲ್ಲಿ ಈ ವಾರ ಮೂಡಿ ಬಂದ ಅನಾನಸು ಹಣ್ಣಿನ ಮಹತ್ವ ಸಾರುವ ಸಾರಯುಕ್ತವಾದ ಲೇಖನ ರಸವತ್ತಾಗಿತ್ತು.
ಹಕ್ಕಿಗಳ ಚರಿತ್ರೆಯನ್ನು ಜಾಲಾಡಿ ವಾರ ವಾರವೂ ಮಾಹಿತಿಗಳ ಕಣಜವನ್ನು ಪ್ರಕಟಿಸುತ್ತಿರುವ ಅರವಿಂದ ಸರ್ ರವರ ಲೇಖನಗಳೂ ಸೊಗಸಾಗಿ ಮೂಡಿ ಬರುತ್ತಿವೆ.
ರಮೇಶ್ ಸರ್ ರವರ "ಪದದಂಗಳ" ಸಂಚಿಕೆಗಳು ಓದುಗರಿಗೆ ಹೊಸ ರೀತಿಯ ಆಯಾಮವನ್ನು ನೀಡುತ್ತಿದೆ.
ವಾಣಿ ಮೇಡಂ ರವರ ಈ ವಾರದ ಪುಸ್ತಕ ಪರಿಚಯ ಚೆನ್ನಾಗಿತ್ತು. ಹಳ್ಳೀ ಸುಬ್ಬ ಕಥಾ ಮಾಲೆ ಖಂಡಿತಾ ಚೆನ್ನಾಗಿರಬಹುದು. ಯಾಕೆಂದರೆ , ಪುಸ್ತಕದ ಮುಖಪುಟದ ಚಿತ್ರಣ ಕಥೆಯ ಸಾರವನ್ನು ಬಿಂಬಿಸುವಂತಿದೆ.
ಆರ್ಟ್ ಗ್ಯಾಲರಿಯಲ್ಲಿ ಹಾಗೂ ಮಕ್ಕಳ ಚಿತ್ರಗಳು ಎಂಬ ಚಿತ್ತಾರವುಳ್ಳ ಅಂಕಣಗಳಲ್ಲಿ ಮೂಡಿ ಬಂದ ಪ್ರತಿಯೊಂದೂ ಚಿತ್ರಗಳು ಸುಂದರವಾಗಿದ್ದವು. ಕಲೆಗಾರರ ಕೈಯಲ್ಲಿ ಗೀಚಿದ ರೇಖೆಗಳು ಜೀವಂತಿಕೆಯನ್ನು ತುಂಬಿಕೊಂಡಂತಿದ್ದವು.
ಮತ್ತಷ್ಟೂ, ಮಗದಷ್ಟೂ ಸಮಾಚಾರಗಳನ್ನು ತಿಳಿದುಕೊಳ್ಳುವ ಕುತೂಹಲದೊಂದಿಗೆ.....
ಚಾಮೆತ್ತಮೂಲೆ ಮನೆ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob: +91 99453 11853
******************************************
ನಮಸ್ತೇ,
ಪ್ರೀತಿಯಿಂದ ಎಲ್ಲವನ್ನೂ ಗೆಲ್ಲಬಹುದು. ಪ್ರೀತಿಗಿಂತ ಮಿಗಿಲಾದ ಸಂಪತ್ತಿಲ್ಲ ಎನ್ನುವುದನ್ನು ಸುಂದರ ಕಥೆಯ ಮೂಲಕ ನಿರೂಪಿಸಿದ್ದಾರೆ ಶಿಕ್ಷಣಾಧಿಕಾರಿಗಳಾದ ಶ್ರೀ ಜ್ಞಾನೇಶ್ ಸರ್ ರವರು.
ರಮೇಶ್ ಬಾಯಾರು ರವರ 'ಸ್ಪೂರ್ತಿಯ ಮಾತುಗಳು' ಲೇಖನ ಸರಣಿಗೆ ಶತಕದ ಸಂಭ್ರಮ. ಅಭಿನಂದನೆಗಳು ಸರ್. ಪ್ರಸ್ತುತ ಸಂಚಿಕೆಯಲ್ಲಿ ಸಹ ಪ್ರಯಾಣಿಕರೊಂದಿಗೆ ಪ್ರಯಾಣಿಸುವ ಸಂದರ್ಭದಲ್ಲಿ ಪ್ರಯಾಣದ ಸುಂದರ ಅನುಭೂತಿಯನ್ನು ಹೇಗೆ ಪಡೆಯಬಹುದು ಎಂಬುದನ್ನು ಉದಾಹರಣೆಯೊಂದಿಗೆ ಚೆನ್ನಾಗಿ ವಿವರಿಸಿದ್ದೀರಿ. ಧನ್ಯವಾದಗಳು ಸರ್.
ಭೂಮಿ ಹುಟ್ಟಿದ ನಂತರ ಈಗಿನ ಸ್ಥಿತಿಗೆ ಹೇಗೆ ಬಂತು ಹಾಗೂ ಅದರಲ್ಲಿ ನೀರು ಉಂಟಾಗಲು ಕಾರಣ ಪ್ರೊಟೀನ್ ಅಣುಗಳ ಉತ್ಪತ್ತಿ ಮುಂತಾದ ಭೂಮಿಯಲ್ಲಿ ನಡೆದ ಹಲವು ವಿದ್ಯಮಾನಗಳ ಕುರಿತಾದ ಸುಂದರ ಲೇಖನ ದಿವಾಕರ ಸರ್ ರವರಿಂದ.
ಅರವಿಂದ ಸರ್ ರವರ ಹಕ್ಕಿ ಕಥೆಯು ಸೊಗಸಾದ ಒಗಟಿನೊಂದಿಗೆ ಮೂಡಿ ಬರುತ್ತಿದೆ. ಈ ವಾರ ಸುಂದರ ಛಾಯಾಚಿತ್ರ ಸಹಿತ ಸಣ್ಣ ಕರಿ ಪಟ್ಟಿ ಗೊರವ ಹಕ್ಕಿಯ ಪರಿಚಯ ಸೊಗಸಾಗಿತ್ತು.
ಅನಾನಸು ಸಸ್ಯದ ಕುರಿತಾದ ವಿವರವಾದ ಮಾಹಿತಿ ಈ ಸಲ ವಿಜಯ ಮೇಡಂ ರವರ ನಿಷ್ಪಾಪಿ ಸಸ್ಯಗಳ ಸಂಚಿಕೆಯಲ್ಲಿ ತುಂಬಾ ಚೆನ್ನಾಗಿತ್ತು.
ಮನದಲ್ಲಿ ಹತಾಶೆ ಭಾವನೆ ಮೂಡದೆ ಒಳ್ಳೆಯದರ ಕುರಿತು ಯೋಚಿಸಿ ಕಾರ್ಯಗತಗೊಳಿಸಿದಾಗ ಯೋಜನೆ ಯಶಸ್ವಿಯಾಗುವ ಸನ್ನಿವೇಶದ ಕುರಿತಾದ ಸುಂದರ ಅನುಭವದ ಲೇಖನ ಯಾಕುಬ್ ಸರ್ ರವರಿಂದ.
ಆರ್ಟ್ ಗ್ಯಾಲರಿಯಲ್ಲಿ ಈ ವಾರ ನವೀನ್ ಕುಮಾರ್ ರವರ ಕಲಾಕೃತಿಗಳ ಪರಿಚಯ ಚೆನ್ನಾಗಿ ಮೂಡಿಬಂದಿದೆ.
ವಾಣಿಯಕ್ಕನವರ ಪುಸ್ತಕ ಪರಿಚಯದಲ್ಲಿ ಹಳ್ಳಿ ಸುಬ್ಬ ಎನ್ನುವ ಸುಂದರ ಕಥೆಗಳಿರುವ ಪುಸ್ತಕದ ಪರಿಚಯ. ಧನ್ಯವಾದಗಳು ಮೇಡಂ.
ವಿಶಿಷ್ಟ ಸಾಧನೆಗೈದ ವಿಶೇಷ ಚೇತನರ ಉದಾಹರಣೆಗಳೊಂದಿಗೆ ಪ್ರತಿ ವಿದ್ಯಾರ್ಥಿಯು ಕೂಡ ತಮ್ಮ ಸಾಧನೆಗೆ ಯಾವುದೇ ಅಡ್ಡಿ ಆತಂಕಗಳು ಎದುರಾದರೂ ದೃತಿಗೆಡದೆ ಮುನ್ನುಗ್ಗುವ ಧೈರ್ಯವನ್ನು ತೋರಬೇಕೆನ್ನುವ ಕಿವಿ ಮಾತಿನೊಂದಿಗೆ ಜಯಪ್ರಕಾಶ್ ರವರ ಲೇಖನ ತುಂಬಾ ಸೊಗಸಾಗಿತ್ತು.
ನಿಮ್ಮೂರ ಶಾಲೆಯ ಸುದ್ದಿ- ಅಂಕಣದಲ್ಲಿ ತನ್ನ ಶಾಲೆಯ ಬ್ಯಾಂಡ್ ಸೆಟ್ ಕುರಿತಾದ ಪುಟಾಣಿ ಅಭಿನವ್ ರವರ ಚೆಂದದ ಅನುಭವ. ಅಭಿನಂದನೆಗಳು ಅಭಿನವ್ ಗೆ.
ರಮೇಶ ಉಪ್ಪುಂದರವರ ಪದಗಳ ಹುಡುಕಾಟಕ್ಕೆ ಕಾರಣವಾದ ಪದದಂಗಳ ಸಂಚಿಕೆ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ಧನ್ಯವಾದಗಳು ಸರ್.
ಮಕ್ಕಳ ಚಿತ್ರಗಳ ಸಂಚಿಕೆಯಲ್ಲಿ ಗಗನ್ ಪೂಜಾರಿ ಮತ್ತು ಸೋನಾಲಿ ಕೆ ಎಸ್ ರವರ ಚಿತ್ರಗಳು ಅದ್ಭುತವಾಗಿದ್ದವು. ಅಭಿನಂದನೆಗಳು ಇಬ್ಬರಿಗೂ...
ಈ ವಾರದ ಜಗಲಿ ಚೆನ್ನಾಗಿ ಮೂಡಿಬರಲು ಕಾರಣರಾದ ಎಲ್ಲರಿಗೂ ನನ್ನ ಮನದಾಳದ ಕೃತಜ್ಞತೆಗಳು.
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************
ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ವಿದ್ಯಾ ಗಣೇಶ್
ಚಾಮೆತ್ತಮೂಲೆ... ಇವರಿಗೆ ಧನ್ಯವಾದಗಳು.
ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
******************************************