-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 103

ಸ್ಫೂರ್ತಿಯ ಮಾತುಗಳು : ಸಂಚಿಕೆ - 103

ಸ್ಫೂರ್ತಿಯ ಮಾತುಗಳು : ಸಂಚಿಕೆ - 103
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
       

    ಸೈಬರ್ ಅಪಾಯಾಕಾರಿಯೇ? ಹೌದು. ಸೈಬರ್ ನಾಗರಿಕತೆಯ ಪ್ರತೀಕ, ಶೈಕ್ಷಣಿಕ ಸಾಧನೆ ಮತ್ತು ಪ್ರಗತಿಯ ದ್ಯೋತಕ. ಸದ್ಬಳಕೆ ಮಾಡುವವರಿಗೆ ವರದಾನವಾಗಿರುವ ಸೈಬರ್ ಬಹಳಷ್ಟು ದುರ್ಬಳಕೆ ಮಾಡುತ್ತಿರುವವರಿಂದಾಗಿ ಅಪಾಯಕಾರಿಯೂ ಎನಿಸಿದೆ. “ಸೈಬರ್ ಕಳ್ಳತನ” ಎಂಬ ಹೊಸ ಕಳ್ಳ ದಂಧೆ ಆರಂಭವಾಗಿರುವುದೇ ಅಪಾಯದ ಮೂಲ. ಕಳ್ಳರು ಹಿಂದೆಯೂ ಇದ್ದರು. ಇಂದೂ ಇದ್ದಾರೆ. ಅಂದಿನ ಕಳ್ಳತನ ಬದುಕಿಗಾಗಿ ನಡೆಯುತ್ತಿತ್ತು. ಕೆಲವರು ಶಿವರಾತ್ರಿಯಂತಹ ಸಂದರ್ಭಗಳಲ್ಲಿ ಶೋಕಿಗಾಗಿ ಮನೆಳ್ಳತನ, ಕಿಡಿಗೇಡಿತನದಂತಹ ಚಟುವಟಿಕೆಗಳನ್ನು ಮಾಡುತ್ತಿದ್ದರು, ಕೆಲವರು ಹೊಟ್ಟೆ ತುಂಬುವ ದಿನಸಿಗಾಗಿ ಅಂಗಡಿಕಳ್ಳತನ ಮಾಡುತ್ತಿದ್ದರೆ ಇಂದಿನ ಸೈಬರ್ ಕಳ್ಳರು ದಿಢೀರ್ ಶ್ರಿಮಂತರಾಗಲು, ಡಾಟಾ ಕಳ್ಳತನ ಮಾಡುವರು. ಕುಳಿತಲ್ಲಿಯೇ ನಮ್ಮ ಬ್ಯಾಂಕ್ ಖಾತೆ ಬರಿದುಗೊಳಿಸುವರು. ಸೈಬರ್ ಕಳ್ಳತನವೂ ಕಾನೂನು ಬಾಹಿರ ಮತ್ತು ಶಿಕ್ಷಾರ್ಹ ಅಪರಾಧ.
 ಎರಡು ರೀತಿಯ ಸೈಬರ್ ಕಳ್ಳತನಗಳಿವೆ. 

1. ಕಂಪ್ಯೂಟರ್ ನ್ನು ಇತರ ಕಂಪ್ಯೂಟರ್‌ಗಳ ಮೇಲೆ ಆಕ್ರಮಣ ಮಾಡಲು ಬಳಸುವುದು. ಉದಾ. ಹ್ಯಾಕಿಂಗ್, ವೈರಸ್ ದಾಳಿ, ವರ್ಮ್ ದಾಳಿ, ಡಾಸ್ ದಾಳಿ ಮುಂತಾದುವು. ಇಲ್ಲಿ ಡಾಟಾಗಳ ಕಳ್ಳತನ ಅಥವಾ ಅವುಗಳ ನಾಶದ ಉದ್ದೇಶವಿರುತ್ತದೆ.
2. ನೈಜ ಜಗತ್ತಿನ ಅಪರಾಧಗಳನ್ನು ಮಾಡಲು ಕಂಪ್ಯೂಟರನ್ನು ಬಳಸುವುದು. ಉದಾ: ಸೈಬರ್ ಭಯೋತ್ಪಾದನೆ, ಐ.ಪಿ.ಆರ್ ಉಲ್ಲಂಘನೆ(Intellectual property rights), ಕ್ರೆಡಿಟ್ ಕಾರ್ಡ್ ವಂಚನೆಗಳು, ಇ.ಎಫ್‌.ಟಿ ವಂಚನೆಗಳು(Electronic funds transfer), ಅಶ್ಲೀಲತೆ ಇತ್ಯಾದಿ. ಇವು ಇ-ಕಂಪ್ಯೂಟರನ್ನು ಕಳ್ಳತನದ ಅಸ್ತ್ರದೋಪಾದಯಲ್ಲಿ ಬಳಸುವ ಉದ್ದೇಶದಿಂದ ಕೂಡಿದೆ
ನೆಟ್ ಬ್ಯಾಂಕಿಂಗ್ ಅಥವಾ ಎಟಿಎಂ ವಂಚನೆಗಳು
◾ಸಿಮ್ ಮೂಲಕ : 
     ಸಿಮ್ ಸ್ವಾಪ್ ಮೂಲಕ ಮೋಸಗಾರರು ನಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ವಿರುದ್ಧ ಮೊಬೈಲ್ ಸೇವಾ ಪೂರೈಕೆದಾರರಿಂದ ಹೊಸ ಸಿಮ್ ಕಾರ್ಡ್ ಪಡೆಯುತ್ತಾರೆ. ಈ ಹೊಸ ಸಿಮ್ ಕಾರ್ಡ್ ಸಹಾಯದಿಂದ ಅವರು ನಮ್ಮ ಬ್ಯಾಂಕ್ ಖಾತೆಯ ಮೂಲಕ ಹಣಕಾಸಿನ ವಹಿವಾಟು ನಡೆಸಲು ಅಗತ್ಯವಾದ ಒನ್ ಟೈಮ್ ಪಾಸ್‌ವರ್ಡ್ (ಒ.ಟಿ.ಪಿ) ಪಡೆಯುತ್ತಾರೆ. ಖಾತೆಯ ನಮ್ಮ ಹಣ ಅವರ ಖಾತೆಗೆ ಜಮೆಯಾಗುತ್ತದೆ.

◾ವಿಶಿಂಗ್ ಮೂಲಕ :
    ವಂಚಕರು ನಮ್ಮ ವೈಯಕ್ತಿಕ ಮಾಹಿತಿಯನ್ನು ಗ್ರಾಹಕರ ಐ.ಡಿ, ನೆಟ್ ಬ್ಯಾಂಕಿಂಗ್ ಪಾಸ್ವರ್ಡ್, ಎ.ಟಿ.ಎಂ ಪಿನ್, ಒ.ಟಿ.ಪಿ., ಕಾರ್ಡ್ ಮುಕ್ತಾಯ ದಿನಾಂಕ, ಸಿ.ವಿ.ವಿ.(Card Verification Value) ಇತ್ಯಾದಿಗಳನ್ನು ಫೋನ್ ಕರೆಯ ಮೂಲಕ ಪಡೆಯುವುದನ್ನು ವಿಶಿಂಗ್‌ ಎಂದು ಕರೆಯುತ್ತಾರೆ.
 
◾ಸ್ಮಿಶಿಂಗ್ ಮೂಲಕ :
     ಸ್ಮಿಶಿಂಗ್ ಎನ್ನುವುದು ಮೋಸದ ಇನ್ನೊಂದು ವಿಧಾನವಾಗಿದ್ದು, ಮೊಬೈಲ್ ಫೋನ್ ಸಂದೇಶಗಳನ್ನು ಮೋಸದ ಫೋನ್ ಸಂಖ್ಯೆಗೆ ವರ್ಗಾಯಿಸಲಾಗುತ್ತದೆ. ಮರಳಿ ಕರೆ ಮಾಡಲು, ಕಳ್ಳ ವೆಬ್‌ಸೈಟ್‌ಗಳಿಗೆ ಭೇಟಿ ನೀಡಲು ಅಥವಾ ಫೋನ್ ಅಥವಾ ವೆಬ್ ಮೂಲಕ ದುರುದ್ದೇಶಪೂರಿತ ವಿಷಯವನ್ನು ಡೌನ್‌ಲೋಡ್ ಮಾಡಲು ಆಮಿಷ ಒಡ್ಡುವರು.

◾ಫಿಶಿಂಗ್ ಮೂಲಕ
  ಫಿಶಿಂಗ್ ಕೂಡಾ ಸೈಬರ್ ವಂಚನೆಯಾಗಿದ್ದು ಅದು ಗ್ರಾಹಕರ ಐ.ಡಿ, ಐಪಿಐಎನ್ (Internet Personal Identification Number) ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಸಂಖ್ಯೆ, ಕಾರ್ಡ್ ಮುಕ್ತಾಯ ದಿನಾಂಕ, ಸಿವಿವಿ ಸಂಖ್ಯೆ ಮುಂತಾದ ವೈಯಕ್ತಿಕ ಮಾಹಿತಿಗಳನ್ನು ಕಾನೂನುಬದ್ಧ ಮೂಲದಿಂದ ಕಂಡುಬರುವ ಇ-ಮೇಲ್‌ಗಳ ಮೂಲಕ ಕದಿಯುವುದಾಗಿದೆ. ಇತ್ತೀಚಿನ ಫಿಶರ್‌ಗಳು ಫೋನ್ (ವಾಯ್ಸ್ ಫಿಶಿಂಗ್) ಮತ್ತು ಎಸ್‌.ಎಂ.ಎಸ್ (ಸ್ಮಿಶಿಂಗ್) ಅನ್ನೂ ಬಳಸುತ್ತಾರೆ.

ಮೋಸದಿಂದ ರಕ್ಷಣೆ : 
    ಮೊಬೈಲ್ ಸಂದೇಶಗಳು, ಕರೆ ಅಥವಾ ಇಮೇಲ್ ಮೂಲಕ ನಮ್ಮ ವೈಯಕ್ತಿಕ ಮಾಹಿತಿ ಅಥವಾ ಹಣಕಾಸಿನ ಮಾಹಿತಿಯನ್ನು ಎಂದಿಗೂ ಯಾರೊಂದಿಗೂ ಹಂಚಿಕೊಳ್ಳಬಾರದು. ತಂದೆ ಮತ್ತು ಮಗನಂತಹ ಸಂಬಂಧಗಳೊಳಗೂ ಹಂಚಿಕೆಯಿರಬಾರದು. ಧ್ವನಿ ಬದಲಾಯಿಸಿ ಪರಿಚಿತರಂತೆ ಮಾತನಾಡುವ ಮೋಸಗಾರರೂ ಇರುತ್ತಾರೆ ಎಂಬ ಎಚ್ಚರಿಕೆ ಸದಾ ಅಗತ್ಯ. ವಿಶ್ವಾಸಾರ್ಹವಲ್ಲದ ಮೂಲದಿಂದ ಬರುವ ಸಂದೇಶಗಳನ್ನು ಮತ್ತು ಸೂಚನೆಗಳನ್ನು ಅನುಸರಿಸಲೇ ಬಾರದು. ಅಂತಹ ಸಂದೇಶಗಳು ಬಂದರೆ ನಮ್ಮ ಮೊಬೈಲಿನಿಂದ ತಕ್ಷಣ ಅಳಿಸಬೇಕು.
     ಮನೆಯ ಬೀಗ ಗಟ್ಟಿಯಿದೆ ಎಂದು ಬಾಗಿಲು ಭದ್ರಪಡಿಸಿ ಮಲಗಿದರೆ ಹೊಟ್ಟೆ ಹೊರೆಯುವ ಕಳ್ಳರು ಬಾರದಿರಬಹುದು; ಕಳ್ಳತನ ನಡೆಯದಿರಬಹುದು. ಸೈಬರ್ ದುರ್ಬಳಕೆಯ ಕಳವುಗಳಿಗೆ ಇ ತಂತ್ರಜ್ಜಾನದ ಸೂಕ್ತ ಮಾಹಿತಿ, ಮಾಹಿತಿಗಳ ಗೌಪ್ಯತೆ, ಸದಾ ಎಚ್ಚರಿಕೆಯ ನಡೆಗಳು ಅತೀ ಅಗತ್ಯ. ನಮ್ಮ ಸಣ್ಣ ಎಡವಟ್ಟುಗಳೂ ನಮ್ಮನ್ನು ನಗ್ನಗೊಳಿಸುವುದು ಖಚಿತ. ಎಚ್ಚರವಿರಲಿ!! ಎಚ್ಚರವಿರಲಿ!!!! 
ನಮಸ್ಕಾರ...