-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 16

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 16

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 16
ಲೇಖಕರು : ದಿವಾಕರ ಶೆಟ್ಟಿ ಎಚ್
ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203


         
ಪ್ರೀತಿಯ ಮಕ್ಕಳೇ....  ಕಳೆದ ಆರು ತಿಂಗಳಿನಿಂದ ಭೂಮಿಯ ಮೇಲೆ ಜೀವಾಂಕುರ ಮತ್ತು ಜೀವ ವಿಕಾಸದ ಬಗ್ಗೆ ಒಂದು ಲೇಖನ ಮಾಲೆಯನ್ನು ಸಿದ್ಧಪಡಿಸಬೇಕು ಮತ್ತು ಅದು ಸಂಕ್ಷಿಪ್ತವೂ ಸರಳವೂ ಆಗಿರಬೇಕೆಂದು ಉದ್ಧೇಶಿಸಿದ್ದೆ. ಆದರೆ ಅದು ಸಾಧ್ಯವಲ್ಲ ಎಂಬ ಅನುಮಾನವಿದ್ದರೂ ಇಷ್ಟೊಂದು ಜಟಿಲವಾದದ್ದು ಎಂಬ ಊಹೆಯೂ ಇರಲಿಲ್ಲ. ಇದಕ್ಕಾಗಿ ನಿರಂತರವಾಗಿ ತಡಕಾಡುತ್ತಿದ್ದೇನೆ. ದಿನಕ್ಕೊಂದು ಹೊಸ ವಿಚಾರ ಮತ್ತು ಹೊಸ ವಾದಗಳು ತೆರೆದುಕೊಳ್ಳುತ್ತಲೇ ಹೋಗುತ್ತವೆ. ಭಾರತೀಯ ಉಪನಿಷತ್ತುಗಳು, ಪುರಾಣ ಮತ್ತು ಜನಪದ ಕಥೆಗಳಲ್ಲಿ ಈ ಜೀವಾಂಕುರದ ಜೀವ ಸೆಲೆಯಾದ ನೀರು ಭೂಮಿಯ ಆಚೆಯಿಂದ ಬಂತು ಎಂದು ಹೇಳುತ್ತವೆ. ಆದರೆ ಅದನ್ನು ಒಪ್ಪಿಕೊಂಡರೆ ಒಂದೋ ಮೂಢ ನಂಬಿಕೆ ಅಥವಾ ಬಲ ಪಂಥೀಯ ಚಿಂತನೆ ಎಂದು ಹಣೆಪಟ್ಟಿ ಧರಿಸಬೇಕಾಗುತ್ತದೆ. ಆದ್ದರಿಂದ ಪಾಶ್ಚಾತ್ಯ ಪ್ರಣೀತ ವೈಜ್ಞಾನಿಕ ವಾದಗಳನ್ನು ಒಪ್ಪಿಕೊಳ್ಳಲೇಬೇಕಾದ‌ ಅನಿವಾರ್ಯತೆ ಇದೆ. ಆದರೆ ಕೆದಕುತ್ತಿದ್ದಾಗ ನಾಸಾ ಇತ್ತೀಚೆಗೆ ಪ್ರಕಟಿಸಿದ ವಾದವೊಂದು ಗಮನ ಸೆಳೆಯಿತು. ಅದನ್ನು ನಿಮ್ಮ ಮುಂದಿಡುತ್ತೇನೆ ನೋಡಿ. 

ಈ ಹಿಂದೆ ನೀರು ಮ್ಯಾಗ್ಮಾದಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯಲ್ಲಿ ಬಿಡುಗಡೆಯಾಯಿತು ಅಥವಾ ಈ ರಾಸಾಯನಿಕ ಕ್ರಿಯೆಯಲ್ಲಿ ಬಿಡುಗಡೆಯಾದ ಪಟುವಾದ ಪರಮಾಣೀಯ ಆಮ್ಲಜನಕ  ಜಲಜನಕದೊಂದಿಗೆ ವರ್ತಿಸಿ ನೀರು ಬಿಡುಗಡೆಯಾಯಿತು ಎಂಬ ವಾದ ಪರಿಣಾಮಕಾರಿಯಾಗಿತ್ತು. ಆದರೆ ಮನುಷ್ಯ ಭೂಮಿಯಿಂದಾಚೆ ನೀರಿನ ನಿರಂತರ ಹುಡುಕಾಟದಲ್ಲಿದ್ದಾನೆ. ಚಂದ್ರನಲ್ಲಿ ನೀರಿದೆ ಎಂದೂ ಅದು ದಕ್ಷಿಣ ದ್ರುವದಲ್ಲಿ ಲಭ್ಯವಿದೆ ಎಂದು ನಂಬಲಾಗಿದೆ. ಆದ್ದರಿಂದಲೇ ಭಾರತ ದಕ್ಷಿಣ ದ್ರುವದಲ್ಲಿ ಇಳಿಯುವ ಪ್ರಯತ್ನ ಮಾಡಿದ್ದು. ಚೀನಾವೂ ಅದೇ ಪ್ರಯತ್ನದಲ್ಲಿರುವುದು. ಈ ಬಾರಿಯ ಚಂದ್ರಯಾನದಲ್ಲಿ ನೀರಿನ ಅಸ್ತಿತ್ವ ಸಾರುವ ಯಾವ ಸಾಕ್ಷ್ಯಗಳು ದೊರೆತಿಲ್ಲ. ಈ ನೀರಿನ ಹುಡುಕಾಟ ಕೇವಲ ಭೂಮಿಯಿಂದಾಚೆ ಮಾನವ ವಸಾಹತು ಸ್ಥಾಪಿಸುವ ಉದ್ಧೇಶ ಹೊಂದಿರುವುದು ಮಾತ್ರವಲ್ಲ ಭೂಮಿಯ ಹುಟ್ಟನ್ನು ಅರ್ಥ ಮಾಡಿಕೊಳ್ಳುವ ಉದ್ಧೇಶವನ್ನೂ ಹೊಂದಿದೆ. ಆದ್ದರಿಂದ ಮಾನವ ನಿರಂತರ ಹುಡುಕಾಟದಲ್ಲಿದ್ದಾನೆ. 2014 ರಲ್ಲಿ ಪೂರ್ತಿ ಪ್ರಮಾಣದಲ್ಲಿ ಕಾರ್ಯತತ್ಪರವಾದ SOFIA ಎನ್ನುವ ದೂರದರ್ಶಕವೊಂದನ್ನು ಮನುಷ್ಯ ಅಂತರಿಕ್ಷಕ್ಕೆ ಕಳುಹಿಸಿದ. ಅದರ ಪೂರ್ಣ ಹೆಸರು Stratospheric Observatory For Infrared Astronomy. ಎರಡು ವರ್ಷದ ಆಯುಷ್ಯ ಹೊಂದಿದ್ದರೂ ಇದು 2022 ರ ಸಪ್ಟೆಂಬರ್ 22 ರಂದು ನಿವೃತ್ತಿಯಾಯಿತು. ಇದರ ಪ್ರಮುಖ ಉದ್ದೇಶ ಐರಿಸ್ ಮತ್ತು ಮೊಲಿಸಾ ಎಂಬ ಎರಡು ಕ್ಷುದ್ರಗ್ರಹಗಳಲ್ಲಿ ನೀರಿನ ಇರುವಿಕೆಯ ಬಗ್ಗೆ ಅಧ್ಯಯನ ನಡೆಸುವುದಾಗಿತ್ತು. ನಾಸಾದ ಅನಿಸಿಯಾ ಅರೆಂಡೆಂಡೋ ಇವರ ತಂಡ  ಸಿಲಿಕೇಟ್  ಸಮೃದ್ಧವಾದ ಪಾರ್ತೆನೋಸ್, ಮಾಲ್ಪೆನೋಸ್, ಐರಿಸ್ ಮತ್ತು ಮೊಲಿಶಾಗಳ ಮೇಲೆ ನಿರ್ದಿಷ್ಟ ತರಂಗಾಂತರದ ಬೆಳಕನ್ನು ಹಾಯಿಸಿ ಅವುಗಳಿಂದ ಪ್ರತಿಫಲನವಾಗುವ ಬೆಳಕಿನ ಗುಣಗಳನ್ನು Faint Infra red camera ದ ಮೂಲಕ ವಿಶ್ಲೇಷಿಸಿ ಕಳುಹಿಸಿದ ದತ್ತಾಂಶಗಳನ್ನು ಪರಿಶೀಲಿಸುತ್ತತ್ತು. ಇದು ನೀರಿನ ಪ್ರತ್ಯಕ್ಷ ಅಸ್ತಿತ್ವವನ್ನು ಸ್ಥಿರ ಪಡಿಸುವುದಿಲ್ಲವಾದರೂ ಆ ಸಾಧ್ಯತೆಯನ್ನು ತೋರಿಸುತ್ತದೆ. ಆಗ ಈ ಕ್ಷುದ್ರಗ್ರಹಗಳು 6 micrometre ತರಂಗಾಂತರದ ಬೆಳಕನ್ನು ಪ್ರತಿಫಲಿಸಿದ್ದು ಗಮನಕ್ಕೆ ಬಂತು. ಇದರ ಆಧಾರದ ಮೇಲೆ ಈಗ ವಿಜ್ಞಾನಿಗಳ ತಂಡವು ನೀರಿನ ಇರುವಿಕೆಯ ಸಾಧ್ಯತೆಗಳು ದಟ್ಟವಾಗಿವೆ ಎನ್ನುತ್ತಿದೆ. ‌ಆದರೆ ನೀರಿನ ಪ್ರಮಾಣ ಅಲ್ಪ ಪ್ರಮಾಣದಲ್ಲಿದೆಯಾದರೂ ನೀರು ಇದೆ ಎಂದು ಸಾಬೀತಾಗಿದೆ. ಹಾಗೆಯೇ ಭೂಮಿಯ ರಚನೆ ಇದೇ ತೆರನಾಗಿತ್ತು ಎಂದು ಭಾವಿಸಲಾಗಿದೆ. ಈ ತೆರನಾಗಿ ಸಂಗ್ರಹಗೊಳ್ಳುವ ನೀರು ಒಟ್ಟು ಭೂ ಕಾಯದ 20% ವನ್ನು ಮೀರುವುದಿಲ್ಲ. ಆದರೆ ಭೂಮಿಯ 71% ದಷ್ಟಿರುವ ನೀರು ಭೂಮಿಯ ಮೇಲೆ ಹುಟ್ಟಿಕೊಳ್ಳಲು ಸಾಧ್ಯವಿಲ್ಲ ಅದರ ಮೂಲ ಈ ಕ್ಷುದ್ರಗ್ರಹಗಳು ಮತ್ತು ಧೂಮಕೇತುಗಳಾಗಿರಬೇಕೆಂದು ವಾದಿಸುತ್ತಾರೆ.

ಹಾಗಾದರೆ ಈ ಕ್ಷುದ್ರಗ್ರಹಗಳು ಮತ್ತು ಧೂಮಕೇತುಗಳಲ್ಲಿರುವ ನೀರಿನ ಕಣಗಳು ಭೂಮಿಗೆ ಬಂದದ್ದಾದರೂ ಹೇಗೆ?  ಭೂಮಿಯ ಹುಟ್ಟಿನ ವೇಳೆ ಭೂಮಿಗೆ ನಿರಂತರವಾಗಿ ಅನ್ಯಕಾಯಗಳು ಡಿಕ್ಕಿ ಹೊಡೆಯುತ್ತಿದ್ದವು ಎನ್ನುವುದನ್ನು ಓದಿದ್ದು ನೆನಪಿರಬಹುದು. ಹೀಗೆ ಈ ತಾಡನದಿಂದ ಲಭ್ಯವಾದ ಈ ಹನಿ ಹನಿ ನೀರೂ ಸಂಗ್ರಹವಾಗಿ ಸಾಗರಗಳು ನಿರ್ಮಾಣವಾದವು. ಹನಿ ಕೂಡಿದರೆ ಹಳ್ಳ ತೆನೆ ಕೂಡಿದರೆ ಕಣಜ ಎನ್ನುವ ಗಾದೆ ಇದೆಯಲ್ಲವೇ. ಮಿಲಿಯನ್ ಗಟ್ಟಲೆ ಕ್ಷುದ್ರಗ್ರಹಗಳ ಮತ್ತು ಧೂಮಕೇತುಗಳ ಹೊಡೆತದಿಂದ ಕೇವಲ 20% ಇರಬಹುದಾಗಿದ್ದ ನೀರಿನ ಪ್ರಮಾಣ 71% ಕ್ಕೆ ಏರಿತು ಎನ್ನುವುದು ಜುಲೈ 2023 ರಲ್ಲಿ NASA ಮಂಡಿಸಿದ ಹೊಸ ವಾದ. ಇದಕ್ಕೆ ಪೂರಕ ಸಾಕ್ಷಿಗಳು ನೀವು ವಿಜ್ಞಾನಿಗಳಾಗಿ ಕಲೆ ಹಾಕುತ್ತೀರಿ ಎನ್ನುವ ನಿರೀಕ್ಷೆಯೊಂದಿಗೆ ಇವತ್ತಿನ ಲೇಖನ ಮುಗಿಸುತ್ತೇನೆ.
.................................... ದಿವಾಕರ ಶೆಟ್ಟಿ ಎಚ್
ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 



Ads on article

Advertise in articles 1

advertising articles 2

Advertise under the article