-->
ಶಾಲೆಯಲ್ಲಿ ಕೃಷಿ ಸಂಸ್ಕೃತಿ

ಶಾಲೆಯಲ್ಲಿ ಕೃಷಿ ಸಂಸ್ಕೃತಿ

ನಿಮ್ಮೂರ ಶಾಲೆಯ ಸುದ್ದಿ : ಸಂಚಿಕೆ - 03
ಬರಹ : ಮೋಹನ್ ಕಡಬ
ಚಿತ್ರಕಲಾ ಶಿಕ್ಷಕರು
ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕ 
ಉಡುಪಿ ಜಿಲ್ಲೆ
Mob : +91 82965 58604
         

     ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿರುವ ನಮ್ಮ ಕರ್ನಾಟಕ ಪಬ್ಲಿಕ್ ಸ್ಕೂಲ್ ಹಳೆಯ ಶಾಲೆ. ಗ್ರಾಮೀಣ ಹಾಗೂ ನಗರದ ವಿದ್ಯಾರ್ಥಿಗಳು ಇಲ್ಲಿ ದಾಖಲಾತಿ ಬಯಸಿ ಬರುತ್ತಾರೆ. ಮಕ್ಕಳ ಆಸಕ್ತಿ, ಕುತೂಹಲಗಳಿಗೆ ಪ್ರೇರಣೆಯಾಗುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ನನ್ನ ಹವ್ಯಾಸ.
     ಮಳೆಗಾಲದ ಸಮಯದಲ್ಲಿ ನೀರು ಪೋಲಾಗುವುದು ಸರ್ವೇ ಸಾಮಾನ್ಯ. ನೀರು ಹರಿದು ಹೋಗದೆ ನಿಲ್ಲುವ ಜಾಗವನ್ನು ಕೂಡಾ ನಾವು ಗಮನಿಸುತ್ತೇವೆ. ಹೀಗೆ ನಮ್ಮ ಶಾಲಾ ವಠಾರದಲ್ಲಿ ನೀರು ನಿಂತ ಜಾಗವನ್ನು ಕಂಡು ಸದುಪಯೋಗಪಡಿಸಿಕೊಳ್ಳುವ ಆಲೋಚನೆ ಬಂದಿತು. ಏನು ಮಾಡುವುದೆಂದು ಯೋಚಿಸಿ "ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು" ಎನ್ನುವ ಗಾದೆಯಂತೆ ಗದ್ದೆ ಮಾಡಿ ಭತ್ತ ಬೆಳೆಯುವ ಆಲೋಚನೆ ಮೂಡಿತು. 
      ಮಕ್ಕಳಲ್ಲಿ ಪರಿಸರದ ಚಿಂತನೆ ಬೆಳೆಸಬೇಕು. ಪರಿಸರ ಸ್ನೇಹಿಯಾಗಿ ಬದುಕಬೇಕೆನ್ನುವ ಇಚ್ಛೆಯನ್ನು ಮೂಡಿಸುವ ಸಲುವಾಗಿ ನಮ್ಮ ಶಾಲೆಯ ನೀರು ನಿಲ್ಲುವ ಖಾಲಿ ಜಾಗದಲ್ಲಿ ಭತ್ತದ ನಾಟಿಗೆ ಮುಂದಡಿಯಿಡಲಾಯಿತು. ಕೃಷಿಯ ಶಿಕ್ಷಣ ನೀಡಲಾಯಿತು. 
       ಗದ್ದೆ ಕೆಲಸ ಮಾಡುವ ಮನೆಗಳಿಗೆ ಮಕ್ಕಳ ಜೊತೆ ಸೇರಿ ಭೇಟಿ ನೀಡಿದೆವು. ಮಕ್ಕಳನ್ನು ಗದ್ದೆಗೆ ಇಳಿಸಿ ನುರಿತ ರೈತರಿಂದ ಪ್ರಾತ್ಯಕ್ಷಿಕೆಯ ಮೂಲಕ ಅರಿವು ಮೂಡಿಸಲಾಯಿತು. ಅನುಭವ ಪಡೆದು ನಾಟಿ ಮಾಡಿದ ಮಕ್ಕಳು ನೆಲದ ಪ್ರೀತಿಗೆ ಸಾಕ್ಷಿಗಳಾದರು. ರೈತರು ಉಪಯೋಗಿಸುವ ಉಪಕರಣಗಳ ಸಾಧನಗಳನ್ನು ಪರಿಚಯಿಸಿ ಕೊಳ್ಳಲಾಯಿತು. ಅದರ ಬಳಕೆ ಉಪಯೋಗಗಳ ಕುರಿತಾಗಿ ತಿಳಿಸಿಕೊಡಲಾಯಿತು. ಗ್ರಾಮೀಣ ಮಕ್ಕಳ ಅನುಭವ ನಗರದ ಮಕ್ಕಳಿಗೆ ಹಂಚಿಕೆಯಾಗಿ ವಿಶೇಷ ಅನುಭವಕ್ಕೆ ಕಾರಣವಾಯಿತು. 
ಕೃಷಿಯ ಸಾಂಸ್ಕೃತಿಕ ಪರಂಪರೆ ಮಾಯವಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಮುಂದಿನ ಜನಾಂಗಕ್ಕೆ ತಲುಪಿಸುವುದು ನಮ್ಮ ಕರ್ತವ್ಯವಾಗಬೇಕು. ಹಿರಿಯರು ಆಚರಿಸಿಕೊಂಡು ಬಂದಿರುವ ಸಂಸ್ಕೃತಿ, ಸಂಪ್ರದಾಯಗಳು ಮಾಯವಾಗಬಾರದು. ವಿದ್ಯಾರ್ಥಿಗಳಲ್ಲಿ ಕೃಷಿಯ ಬಗ್ಗೆ ಅರಿವು ಮತ್ತು ಜಾಗೃತಿಯ ಕಾರಣದಿಂದ ಉಳಿಸುವ ಕೆಲಸವಾಗಿದೆ ಎಂಬುದು ತೃಪ್ತಿಯ ಭಾವನೆ ಮೂಡಿದೆ. ಸಾಂಪ್ರದಾಯಿಕ ಪ್ರತಿ ಮನೆಗಳಲ್ಲೂ ಭತ್ತದ ಹೊಸ ಪೈರನ್ನು ಕಟ್ಟುವ ಪದ್ಧತಿ ಕರಾವಳಿ ಭಾಗದಲ್ಲಿದೆ. ಇದಕ್ಕಾಗಿ ಭತ್ತವನ್ನು ಬೆಳೆಯುವ ರೂಡಿಯನ್ನು ಬೆಳೆಸಿಕೊಂಡಲ್ಲಿ ಕೃಷಿಯ ಆಸಕ್ತಿ, ಕಾಳಜಿ, ಉಳಿಯುವುದರಲ್ಲಿ ಸಂಶಯವಿಲ್ಲ.
ಭತ್ತದ ಪೈರು ಬೆಳೆಸಲು ಪ್ರತಿ ಮನೆಯಲ್ಲೂ ಸಾದ್ಯ ಎನ್ನುವುದನ್ನು ಮಕ್ಕಳಿಗೆ ತಿಳಿಯಪಡಿಸಲಾಯಿತು. ಆಧುನಿಕ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಈ ಭೂಮಿ ತಾಯಿಯನ್ನು ಮಲಿನ ಗೊಳಿಸುವ ಬದಲು ಸಾವಯುವ ಗೊಬ್ಬರದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಲಾಯಿತು. ಆ ಮೂಲಕ ಕೃಷಿ ಸಂಸ್ಕೃತಿಯನ್ನು ಯಾವ ರೀತಿ ಉಳಿಸಬಹುದೆನ್ನುವ ಚಿಂತನೆಯನ್ನು ಜಾಗೃತಿಗೊಳಿಸಲಾಯಿತು. 
ನಾಟಿ ಮಾಡಿದ ಭೂಮಿಯಲ್ಲಿ ಇಳುವರಿ ಬಂದಾಗ ಮಕ್ಕಳ ಸಂತೋಷಕ್ಕೆ ಪಾರವಿಲ್ಲ... ಅವರ ಸಂಭ್ರಮಕ್ಕೆ ಎಣೆಯಿಲ್ಲ... ಜೀವನದಲ್ಲಿ ಕಲಿತ ಪ್ರಾಯೋಗಿಕ ಪಾಠಗಳು ಕಲಿಕೆಯ ಅನುಭವಗಳಾಗಿ ಬದುಕಿನದ್ದಕ್ಕೂ ಅಮರವಾಗಿರುತ್ತದೆ. ಆವಾಗಲೇ ಬದುಕು ಸುಂದರ.....
ಭತ್ತ ಮಾತ್ರವಲ್ಲದೆ ನಾಟಿ ಮಾಡಿದ ಗದ್ದೆಯಲ್ಲಿ ಮೆಣಸಿನ ಗಿಡ ಮತ್ತು ಇತರ ತರಕಾರಿ ಅಲಸಂಡೆ, ಬದನೆ ಇತ್ಯಾದಿಗಳನ್ನು ಬೆಳೆಯುವ ಕುರಿತಾಗಿ ಪ್ರಯೋಗಗಳನ್ನು ಮಾಡಲಾಯಿತು. ಆಯಾಯ ಕಾಲಕ್ಕೆ ಬೆಳೆಸುವ ತರಕಾರಿಗಳ ಪರಿಚಯ ಮತ್ತು ನೆಟ್ಟು ಬೆಳೆಸುವ ಪ್ರಯತ್ನವು ಮಕ್ಕಳ ಜೊತೆಗೆ ಯಶಸ್ವಿಯಾಗಿ ಫಲಪ್ರದವಾಗಿದೆ. 
ಶಾಲಾ ಅಭಿವೃದ್ಧಿ ಸಮಿತಿ, ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಸದಾ ಬೆಂಬಲವಾಗಿ ನಿಂತಿರುವುದು ಅಭಿಮಾನ ಮೂಡಿಸಿದೆ. ನಮ್ಮ ಕಾರ್ಯದ ಜೊತೆ ಇನ್ನಷ್ಟುಸಾಧನೆಯೆಡೆಗೆ ಸಾಗಲು ಪ್ರೇರಣೆಯಾಗಿದೆ.
...................................... ಮೋಹನ್ ಕಡಬ
ಚಿತ್ರಕಲಾ ಶಿಕ್ಷಕರು
ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕ 
ಉಡುಪಿ ಜಿಲ್ಲೆ
Mob : +91 82965 58604
******************************************



Ads on article

Advertise in articles 1

advertising articles 2

Advertise under the article