ಕ್ಯಾಂಪೋರಿ ಸಂಭ್ರಮ - ಒಂದು ಅನುಭವ ಕಥನ
Thursday, January 11, 2024
Edit
ಮಕ್ಕಳ ಲೇಖನ : ಕ್ಯಾಂಪೋರಿ ಸಂಭ್ರಮ - ಒಂದು ಅನುಭವ ಕಥನ
ರಚನೆ: ಸಾನ್ವಿ ಚೆಂಬರ್ಪು
6ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಈ ಬಾರಿಯ ರೋವರ್ಸ್ - ರೇಂಜರ್ಸ್, ಸ್ಕೌಟ್ - ಗೈಡ್ಸ್, ಕಬ್ಸ್ - ಬುಲ್ ಬುಲ್ಸ್ ಕ್ಯಾಂಪೋರಿ ಯು ಡಿಸೆಂಬರ್ ತಿಂಗಳ 7ರಿಂದ 12ರ ತನಕ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಈ ಕ್ಯಾಂಪೋರಿ ಯನ್ನು ಆಯೋಜಿಸಿತ್ತು.
ಮೊದಲ ದಿನ ದಿನಾಂಕ 7 ಡಿಸೆಂಬರ್ ಗೆ ರೋವರ್ಸ್ - ರೇಂಜರ್ಸ್ ಸಮಾಗಮವಿತ್ತು. ನಾನು ಗೈಡ್ಸ್ ನಲ್ಲಿ ಇರುವುದರಿಂದ ನಮಗೆ ಯಾವುದೇ ಕಾರ್ಯಕ್ರಮ ಇರಲಿಲ್ಲ.
8 ಡಿಸೆಂಬರ್ ಗೆ ನಮಗೆ ಸಂಭ್ರಮವೋ ಸಂಭ್ರಮ. ಮೂರು ದಿನಗಳಿಗೆ ಅಗತ್ಯವಿರುವ ವಸ್ತುಗಳು ಹಾಗೂ ಬಟ್ಟೆ ಬರೆಗಳನ್ನು ಮುಂಚಿನ ದಿನವೇ ತುಂಬಿಸಿ ಬ್ಯಾಗ್ ಹಿಡಿದುಕೊಂಡು ಶಾಲೆಯತ್ತ ತೆರಳಿದೆವು. 9 ಗಂಟೆಯ ಸುಮಾರಿಗೆ ನಾವು ವಿಟ್ಲದ ಕ್ಯಾಂಪೋರಿ ನಡೆಯುವ ವಿಠಲ ಪದವಿ ಪೂರ್ವ ಕಾಲೇಜಿನ ಆವರಣಕ್ಕೆ ತಲುಪಿದೆವು. ಅದಾಗಲೇ ಸುಮಾರು 1000 ದಷ್ಟು ಸ್ಕೌಟ್ ಹಾಗೂ ಗೈಡ್ ಗಳು ಅಲ್ಲಿ ಸೇರಿದ್ದರು. ನಾವೆಲ್ಲರೂ ನೋಂದಣಿ ಮುಗಿಸಿ ಉಪಾಹಾರ ಮಾಡಿದೆವು. ಬಹಳ ಶುಚಿ ರುಚಿಯಾದ ಪಲಾವ್ ನನಗೆ ತುಂಬಾ ಇಷ್ಟವಾಯಿತು. ವಿಠಲ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಸ್ಕೌಟ್ ಮತ್ತು ಗೈಡ್ ಧ್ವಜಾರೋಹಣ ನೆರವೇರಿತು. ನಂತರ ನಮ್ಮನ್ನು 5 ಬೇಸ್ ಗಳಾಗಿ ವಿಂಗಡಿಸಿದರು. ನಮ್ಮ ಶಾಲೆಗೆ ಮೂರನೇ ಬೇಸ್ ದೊರೆಯಿತು. 11 ಗಂಟೆಯಿಂದ ನಮಗೆ ವಿವಿಧ ಚಟುವಟಿಕೆಗಳು ಪ್ರಾರಂಭವಾದವು.
ನಮ್ಮ ಬೇಸ್ ನವರಿಗೆ ಮೊದಲು ವೈದ್ಯಲೋಕದ ಚಟುವಟಿಕೆಗಳು ಇದ್ದವು. ವೈದ್ಯಲೋಕದಲ್ಲಿ ಮೊದಲನೆಯದಾಗಿ ಕೆ. ಎಸ್ ಹೆಗ್ಡೆ ಹಾಸ್ಪಿಟಲ್ ನ ವೈದ್ಯಾಧಿಕಾರಿಗಳಿಂದ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ನಡೆಯಿತು. ಇದರಲ್ಲಿ ತುರ್ತು ಚಿಕಿತ್ಸೆ ಯನ್ನು ಹೇಗೆ ಮಾಡಬೇಕು ಎಂದು ಪ್ರಾತ್ಯಕ್ಷಿಕೆ ಯ ಮೂಲಕ ವಿಸ್ತಾರವಾಗಿ ವಿವರಿಸಿ ಬಳಿಕ ನಮ್ಮಲ್ಲೇ ಅದನ್ನು ಮಾಡಿಸಿದರು.
ಮುಂದೆ ನಾವು ಶಾರದಾ ಹಾಸ್ಪಿಟಲ್ ನ ವೈದ್ಯಾಧಿಕಾರಿಗಳಿಂದ ಆಯುರ್ವೇದ ಔಷಧಿಯ ಬಗ್ಗೆ ಮಾಹಿತಿ ಪಡೆದೆವು. ನಾವು ಆರೋಗ್ಯಕ್ಕಾಗಿ ನಮ್ಮ ದಿನಚರಿ ಹೇಗಿರಬೇಕು ಎಂಬುದರ ಕುರಿತು ಅವರು ಮಾಹಿತಿ ನೀಡಿದರು. ಅವರು ಕೇಳಿದ ಪ್ರಶ್ನೆಯೊಂದಕ್ಕೆ ಸರಿಯಾದ ಉತ್ತರ ನೀಡಿದ್ದಕ್ಕೆ ನನಗೆ ಒಂದು ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು. ಬಳಿಕ ನಮಗೆ 108 ಆಂಬುಲೆನ್ಸ್ ಬಗ್ಗೆ ತಿಳಿಯುವ ಕುತೂಹಲ ಇತ್ತು. ಆದರೆ ತುರ್ತು ಅವಶ್ಯಕತೆಗಾಗಿ ಅದು ತೆರಳಿದ್ದರಿಂದ ಅದರ ಮಾಹಿತಿ ಪಡೆಯಲು ನಮಗೆ ಸಾಧ್ಯವಾಗಲಿಲ್ಲ.
ಮಧ್ಯಾಹ್ನದ ರುಚಿಯಾದ ಭೋಜನವನ್ನು ಸವಿದ ಬಳಿಕ ನಾವು ಜಾನಪದ ಲೋಕದ ಕಡೆ ತೆರಳಿದೆವು. ಅಲ್ಲಿ ನಮಗೆ ಬುಟ್ಟಿ ಹೆಣೆಯುವುದು ಹಾಗೂ ಮುಟ್ಟಾಳೆ ತಯಾರಿಸುವುದನ್ನು ವಿಟ್ಲ ಸಮೀಪದ ಹಿರಿಯರು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ತದನಂತರ ಚಿತ್ರಕಲೆ ತರಬೇತಿಯಲ್ಲಿ ಹುಡುಗಿ ಗಾಳಿಪಟ ಹಿಡಿದಿರುವ ಚಿತ್ರವನ್ನು ಬಿಡಿಸಲು ತಾರಾನಾಥ ಕೈರಂಗಳ ಸರ್ ಹಂತ ಹಂತವಾಗಿ ವಿವರಿಸುತ್ತಾ ತುಂಬಾ ಚೆನ್ನಾಗಿ ಕಲಿಸಿದರು. ಮುಂದೆ ಸಾಂಸ್ಕೃತಿಕ ಕಾರ್ಯಕ್ರಮ ವಿಭಾಗದಲ್ಲಿ ತಾಳಮದ್ದಳೆ ವೀಕ್ಷಿಸಿದೆವು. ಅಲ್ಲಿ ನಾವು ಒಬ್ಬರು ಹಿರಿಯ ಸ್ಕೌಟ್ ಮಾಸ್ಟರ್ ರನ್ನು ಭೇಟಿಯಾದೆವು. ಅವರು ಜಗತ್ತಿನ ವಿವಿಧ ದೇಶಗಳ ಸ್ಕಾರ್ಫ್, ಬ್ಯಾಡ್ಜ್ ಹಾಗೂ ಬೇರೆ ಬೇರೆ ದೇಶದ ಸಹೋದರ ಸಹೋದರಿಯರು ತಮಗೆ ನೀಡಿದ ಉಡುಗೊರೆಗಳನ್ನು ನಮಗೆ ತೋರಿಸಿದರು. ಇದನ್ನೆಲ್ಲ ನೋಡಿ ನಾವು ಅಚ್ಚರಿಗೊಂಡೆವು. ಅವರು ನಮ್ಮೊಂದಿಗೆ ಒಂದು ಫೋಟೋ ಕೂಡಾ ತೆಗೆಸಿಕೊಂಡರು.
ಮುಂದೆ ಪೂರಿಯ ಭರ್ಜರಿ ಸಂಜೆಯ ಉಪಾಹಾರದ ನಂತರ ನಗರ ಮೆರವಣಿಗೆ ನಡೆಯಿತು. ವಿಠಲ ಪದವಿ ಪೂರ್ವ ಕಾಲೇಜಿನಿಂದ ವಿಟ್ಲದ ಚಂದ್ರನಾಥ ಬಸದಿ ಯ ತನಕ ಮೆರವಣಿಗೆ ಹೋದೆವು. ವಿವಿಧ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡೆವು.
ನಗರ ಮೆರವಣಿಗೆಯ ನಂತರ ಸ್ಕೌಟ್ - ಗೈಡ್ ಮೇಳ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಈ ಸಭೆಯಲ್ಲಿ ಹಲವಾರು ಗಣ್ಯರು ವೇದಿಕೆಯಲ್ಲಿ ಆಸೀನರಾಗಿದ್ದು, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಭೆಯ ನಂತರ ರಾತ್ರಿಯ ಊಟವನ್ನು ಮಾಡಿ ಸಭಾಂಗಣದಲ್ಲಿ ಆಸೀನರಾದೆವು. ಮುಂದಿನ ಭವ್ಯ ಶಿಬಿರಾಗ್ನಿ ಯಲ್ಲಿ ಸುಮಾರು 20-25 ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಈ ಎಲ್ಲಾ ಕಾರ್ಯಕ್ರಮಗಳು ನಮಗೆ ತುಂಬಾ ಮನೋರಂಜನೆ ನೀಡಿತು. ಆ ಬಳಿಕ ನಮಗೆ ವಸತಿ ನಿಗದಿಪಡಿಸಿದ ಸೈಂಟ್ ರೀಟಾ ಶಾಲೆಗೆ ಬಂದು ಸ್ನಾನ ಮುಗಿಸಿ ನಿದ್ರೆಗೆ ಜಾರಿದೆವು. ಈ ರೀತಿ ಮೊದಲ ದಿನವನ್ನು ಹಲವು ಸಂತಸದ ಕ್ಷಣಗಳೊಂದಿಗೆ ಕಳೆದೆವು.
ಮರುದಿನ ಪ್ರಾತಃ ಕಾಲ 5 ಗಂಟೆಗೆ ಜಾಗೃತ ಧ್ವನಿ ನಮ್ಮನ್ನು ನಿದ್ದೆಯಿಂದ ಎಚ್ಚರಿಸಿತು. ನಿತ್ಯ ಕರ್ಮಗಳನ್ನು ಮುಗಿಸಿದ ನಮಗೆ ಪತಂಜಲಿ ಯೋಗ ಕೇಂದ್ರದವರು ಯೋಗ ತರಬೇತಿಯನ್ನು ನೀಡಿದರು. ಬಳಿಕ ಇಡ್ಲಿ ಸಾಂಬಾರ್ ಸವಿದೆವು.
ಮತ್ತೆ ಸಾಹಸಮಯ ಚಟುವಟಿಕೆಗಳ ಲೋಕಕ್ಕೆ ನಾವು ಪ್ರವೇಶಿಸಿದೆವು. ಸುಮಾರು 20 ಬಗೆಯ ಸಾಹಸಮಯ ಆಟಗಳಲ್ಲೂ ಆಟವಾಡಿದೆವು. ಆಟಗಳಲ್ಲಿ ಒಂದಕ್ಕಿಂತ ಒಂದು ಬಹಳ ಖುಷಿಯೆನಿಸಿತು. ನಂತರ 11 ಗಂಟೆಯಿಂದ ವಿಜ್ಞಾನ ಲೋಕವನ್ನು ಸವಿಯುವ ಭಾಗ್ಯ. ದುರಾದೃಷ್ಟವಶಾತ್ ಇಸ್ರೋ ಬಸ್ ಆ ದಿನ ಇರದ ಕಾರಣ ಚಂದ್ರಯಾನದ ಬಗೆಗಿನ ಮಾಹಿತಿ ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ವಿಜ್ಞಾನ ಮಾದರಿ ಪ್ರದರ್ಶನ ಇತ್ತಲ್ಲ, ಅಲ್ಲಿಗೆ ಹೋದೆವು. ಹಲವಾರು ವಿಜ್ಞಾನದ ಮಾದರಿಗಳು ಅಲ್ಲಿತ್ತು. ಇದರಿಂದ ನಮಗೆ ವಿಜ್ಞಾನದ ಹಲವು ಮಾಹಿತಿಗಳು ದೊರೆತವು.
ಮಧ್ಯಾಹ್ನದ ಭೋಜನದ ಬಳಿಕ ಕೃಷಿ ಲೋಕದ ಕಡೆ ತೆರಳಿದೆವು. ಜೇನು ಕೃಷಿಯ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ನೀಡಿದರು. ಜೊತೆಗೆ ಮಳೆನೀರು ಕೊಯ್ಲು ಬಗ್ಗೆಯೂ ಮಾಹಿತಿ ನೀಡಿದರು. ಇವೆರಡೂ ವಿದ್ಯಾರ್ಥಿಗಳಾದ ನಮಗೆ ತುಂಬಾ ಸಹಕಾರಿ. ಅಲ್ಲಿಯೇ ಮೋಜಿನ ಆಟಗಳು ವಿಭಾಗವೂ ಇತ್ತು. ಅದರಲ್ಲಿ ಸುಮಾರು 14 ಆಟಗಳನ್ನು ಆಡಿದೆವು. ಇಲ್ಲಿ ನಮಗೆ ವಿವಿಧ ಬಗೆಯ ಚಪ್ಪಾಳೆಗಳನ್ನು ಕಲಿಸಿ ಕೊಟ್ಟರು. ಈ ಆಟಗಳೆಲ್ಲವು ಬಹಳ ಮೋಜಿನಿಂದ ಕೂಡಿತ್ತು ಮನಸಿಗೆ ಮುದ ನೀಡಿತು.
ಸಂಜೆಯ ಲಘು ಉಪಾಹಾರದ ಬಳಿಕ ಸಮಾರೋಪ ಸಮಾರಂಭ ನಡೆಯಿತು. ವೇದಿಕೆಯಲ್ಲಿ ಅನೇಕ ಗಣ್ಯರು ಇದ್ದರು ಹಾಗೂ ಭಾಷಣದ ಮೂಲಕ ಕೆಲವೊಂದು ವಿಚಾರಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಹುತಾತ್ಮ ಯೋಧ ಕ್ಯಾಪ್ಟನ್ ಪ್ರಾಂಜಲ್ ಗೆ ಎಲ್ಲರೂ ಮೋಂಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಿದವು. ರಾತ್ರಿಯ ಊಟದ ಬಳಿಕ ವಿಟ್ಲ ಜೇಸೀಸ್ ಶಾಲೆಯ ಜೇಸೀಸ್ ಪೆವಿಲಿಯನ್ ಸಭಾಂಗಣದಲ್ಲಿ ಆಸೀನರಾದೆವು. ಆರ್. ಕೆ ಆರ್ಟ್ಸ್ ವಿಟ್ಲ ಇವರಿಂದ ಅದ್ಭುತವಾದ ಸಾಂಸ್ಕೃತಿಕ ವೈಭವ ಜರಗಿತು. ಅಲ್ಲಿಂದ ಹೊರಡುವಾಗ ಮಳೆ ಸುರಿಯಲು ಆರಂಭವಾಯಿತು. ಮಳೆಯಲ್ಲಿ ನೆನೆದುಕೊಂಡೇ ನಮಗೆ ವಸತಿ ವ್ಯವಸ್ಥೆ ಮಾಡಿದ್ದ ಸೈಂಟ್ ರೀಟಾ ಶಾಲೆಗೆ ತಲುಪಿದೆವು. ಮಳೆಯ ಕಾರಣ ವಿದ್ಯುತ್ ಇರಲಿಲ್ಲ. ಹಾಗಾಗಿ ಟಾರ್ಚ್ ಬೆಳಕಿನಲ್ಲಿ ಸ್ನಾನ ಮುಗಿಸಿ ನಿದ್ರಿಸಿದೆವು. ಎರಡನೇ ದಿನವೂ ಹಲವು ಅವಿಸ್ಮರಣೀಯ, ವಿಶಿಷ್ಟ ಅನುಭವಗಳನ್ನು ನಮಗೆ ನೀಡಿತು.
ಮರುದಿನ ಬೆಳಗ್ಗೆ ಬೇಗನೆ ಎದ್ದೆವು. ಆದರೆ ವಿದ್ಯುತ್ ಇಲ್ಲದ ಕಾರಣ ನೀರು ಇರಲಿಲ್ಲ. ಹಾಗಾಗಿ ಅಲ್ಲೇ ಸಮೀಪದ ಸಭಾಂಗಣ ಒಂದಕ್ಕೆ ಹೋಗಿ ನಿತ್ಯ ಕರ್ಮಗಳನ್ನು ಮುಗಿಸಿ ವಿಠಲ ಪದವಿ ಪೂರ್ವ ಕಾಲೇಜಿನ ಕಡೆಗೆ ನಡೆದೆವು. ಇಷ್ಟೆಲ್ಲಾ ಆಗಿ ಅಲ್ಲಿಗೆ ತಲುಪುವಾಗ ತಡವಾಗಿತ್ತು. ಸರ್ವಧರ್ಮ ಪ್ರಾರ್ಥನೆ ಅದಾಗಲೇ ಮುಗಿದಿತ್ತು. ಧ್ವಜಾರೋಹಣ ದ ಬಳಿಕ ಅವಲಕ್ಕಿ ಉಪಾಹಾರ ಸೇವಿಸಿದೆವು.
ಬಳಿಕ ಅಗ್ನಿ ಶಾಮಕ ದಳದವರು ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ನೀಡಿದರು. ಅಗ್ನಿ ಅವಘಡಗಳ ಸಂದರ್ಭದಲ್ಲಿ ಹೇಗೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಮಾಹಿತಿಯನ್ನು ನೀಡಿದರು. ಪ್ರಾತ್ಯಕ್ಷಿಕೆ ಮಾಡುವಾಗ ಅಗ್ನಿಶಾಮಕ ದಳದವರು ನೀರನ್ನು ಚಿಮ್ಮಿಸುವ ಮೂಲಕ ನಮ್ಮ ಉತ್ಸಾಹವನ್ನು ಹೆಚ್ಚಿಸಿದರು. ನಂತರ ಧ್ವಜಾವರೋಹಣ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಅಲ್ಲಿಯೇ ಊಟ ಮಾಡಿ ಸೈಂಟ್ ರೀಟಾ ಶಾಲೆಗೆ ತೆರಳಿ ನಮ್ಮ ಎಲ್ಲಾ ಬಟ್ಟೆ ಬರೆಗಳನ್ನು ತುಂಬಿಸಿಕೊಂಡು ಬಸ್ ನಲ್ಲಿ ಮನೆ ಕಡೆ ತೆರಳಿದೆವು.
ಇದು ನನಗೆ ಮೊದಲ ಕ್ಯಾಂಪೋರಿ. ಇದು ನನಗೆ ತುಂಬಾ ಸಂತೋಷ ನೀಡಿತು. ಹಲವು ವಿಶೇಷ ಸಾಧನೆ ಮಾಡಿದ ವ್ಯಕ್ತಿಗಳ ಪರಿಚಯ ಮಾಡಿಸಿತು. ಸಮೂಹ ಜೀವನದ ಅನುಭವವನ್ನು ನೀಡಿತು. ಪರಸ್ಪರರಲ್ಲಿ ಸಹಕಾರ ಮನೋಭಾವ ಬೆಳೆಯಿತು. ಒಟ್ಟಾರೆಯಾಗಿ ಒಂದು ಮರೆಯಲಾಗದಂತಹ ಅದ್ಭುತ ಅನುಭವಗಳನ್ನು ನೀಡಿತು. ಇಂತಹ ಕ್ಯಾಂಪೋರಿ ಆಯೋಜಿಸಿದ್ದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಗೂ ಹಾಗೂ ವಿಟ್ಲ ಸ್ಥಳೀಯ ಸಂಸ್ಥೆಗೂ ಅನಂತಾನಂತ ಧನ್ಯವಾದಗಳು. ನಮ್ಮನ್ನು ಈ ಕ್ಯಾಂಪೋರಿ ಗೆ ಕರೆದುಕೊಂಡು ಹೋಗಿ, ಪ್ರತೀ ಹಂತದಲ್ಲೂ ನಮ್ಮ ಜೊತೆಯೇ ಇದ್ದು ನಮಗೆ ಮಾರ್ಗದರ್ಶನ ನೀಡಿದ ನಮ್ಮ ಪ್ರೀತಿಯ ಗೈಡ್ ಟೀಚರ್ ಗಂಗಾ ಮಾತಾಜಿ ಇವರಿಗೆ ನಾನು ನಮನಗಳನ್ನು ಸಲ್ಲಿಸುತ್ತೇನೆ.
6ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************