-->
ಪರೀಕ್ಷಾ ತಯಾರಿ

ಪರೀಕ್ಷಾ ತಯಾರಿ

ಎಸ್ ಎಸ್ ಎಲ್ ಸಿ ಪರೀಕ್ಷಾ ಸಿದ್ಧತೆ : ವಿಶೇಷ ಲೇಖನ ಸಂಚಿಕೆ - 01
ಲೇಖನ : ಪರೀಕ್ಷಾ ತಯಾರಿ
ಬರಹ : ವಿದ್ಯಾವತಿ ಎಮ್. ಅಲದಿ
ಗಣಿತ ಶಿಕ್ಷಕರು
ಸರಕಾರಿ ಪ್ರೌಢ ಶಾಲೆ, ಪಾವೂರು.
ಮಂಗಳೂರು ಉತ್ತರ, ದಕ್ಷಿಣ ಕನ್ನಡ ಜಿಲ್ಲೆ
Mob : +91 89701 53188
                
SSLC ವಿದ್ಯಾರ್ಥಿಗಳೇ, ಪರೀಕ್ಷಾ ತಯಾರಿಗಾಗಿ ನಿಮ್ಮ ಪ್ರತಿ ನಿತ್ಯದ ಓದಿನ ವೇಳಾಪಟ್ಟಿ ಹೀಗಿರಲಿ...
          10ನೇ ತರಗತಿಯು ಪ್ರತಿ ವಿದ್ಯಾರ್ಥಿಯ ಶಾಲಾ ಶಿಕ್ಷಣದ ಪ್ರಮುಖ ಘಟ್ಟ. ಅನೇಕರಿಗೆ ಜೀವನದ ದಿಕ್ಕು ಬದಲಾಯಿಸುವ ಪಥ ಅಂತೂ ಹೌದು. ಏನನ್ನಾದರೂ ಸಾಧಿಸಿ ತನ್ನನ್ನು ತಾನು ಗುರುತಿಸಿಕೊಳ್ಳಬೇಕೆಂಬ ಹಂಬಲ ಪ್ರತಿ ವಿದ್ಯಾರ್ಥಿಯಲ್ಲಿಯೂ ಇರುತ್ತದೆ. ಅದಕ್ಕಾಗಿ ಪರೀಕ್ಷೆಯಲ್ಲಿ ಪ್ರಥಮ ಹಾಗೂ ಉನ್ನತ ಶ್ರೇಣಿಯಲ್ಲಿ ಪಾಸಾಗಿ ಶಾಲೆಗೆ ಮತ್ತು ಹೆತ್ತವರಿಗೆ ಹೆಸರು ತರಬೇಕೆಂಬ ಆಕಾಂಕ್ಷೆ ಇದ್ದೇ ಇರುತ್ತದೆ. ಇಂತಹ ತವಕದಲ್ಲಿರುವ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಕೆಲವೊಮ್ಮೆ ಹೇಗೆ..? ಯಾವಾಗ...? ಏನನ್ನು ಓದಬೇಕು...? ಎಂಬ ಗೊಂದಲ ಉಂಟಾಗುವುದು ಸಹಜ.
               ಇಂತಹ ಗೊಂದಲದಲ್ಲಿರುವ 10ನೇ ತರಗತಿಯ ಮಕ್ಕಳಿಗೆ ಸುಲಭ ಸಾಧ್ಯವಾದ ಪರಿಹಾರವೊಂದಿದೆ. ಪರೀಕ್ಷಾ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗಾಗಿ ಪ್ರತಿನಿತ್ಯ ವ್ಯವಸ್ಥಿತವಾಗಿ ಅಭ್ಯಾಸ ಮಾಡಲು ಅನುಕೂಲವಾಗಲೆಂದು ಈ ವೇಳಾಪಟ್ಟಿ ತಯಾರಿಸಲಾಗಿದೆ. ವಿದ್ಯಾರ್ಥಿಗಳು ಈ ವೇಳಾಪಟ್ಟಿಯಂತೆ ಪ್ರತಿನಿತ್ಯ ಅಭ್ಯಾಸ ಮಾಡಿದರೆ ಅವರು ಪರೀಕ್ಷೆಯಲ್ಲಿ ಉತ್ತಮ ಮತ್ತು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
        ವಿದ್ಯಾರ್ಥಿಗಳು ಮೊದಲು ತಮಗೆ ಇಷ್ಟವಾದ ಬಣ್ಣದ ಪೆನ್ನುಗಳಿಂದ ಡ್ರಾಯಿಂಗ್ ಶೀಟ್ ನಲ್ಲಿ ಈ ವರ್ಷ ತಾವು ಸಾಧಿಸಲು ಇಚ್ಚಿಸುವ ಟಾರ್ಗೆಟ್ ಅಂಕಗಳನ್ನು ಬರೆಯಿರಿ. ಅದರ ಕೆಳಗೆ ನನ್ನಿಂದ ಇದು ಸಾಧ್ಯ ಎಂದು ಬರೆಯಿರಿ ನಂತರ ಈ ಕೆಳಗೆ ತಿಳಿಸಿರುವ ವೇಳಾಪಟ್ಟಿಯನ್ನು ಚೆನ್ನಾಗಿ ಗಮನಿಸಿ. ನಂತರ ಬಣ್ಣದ ಪೆನ್ನುಗಳಿಂದ ದೊಡ್ಡ ಅಕ್ಷರಗಳಲ್ಲಿ ಈ ವೇಳಾಪಟ್ಟಿಯನ್ನು ಬರೆಯಿರಿ. ಕೆಲವರಿಗೆ ಬದಲಾವಣೆ ಮಾಡಬೇಕಾದ ಅನಿವಾರ್ಯತೆ ಇದ್ದರೆ ನಿಮಗೆ ಅನುಕೂಲ ವಾಗುವಂತೆ ವಿಷಯ ಮತ್ತು ಸಮಯವನ್ನು ಬದಲಿಸಿಕೊಂಡು ನಿಮ್ಮ ವೇಳಾಪಟ್ಟಿಯಂತೆ ಓದಿಕೊಳ್ಳಿ. ಇದರಿಂದ ನಿಮ್ಮ ಮೇಲೆ ನಿಮಗೆ ನಂಬಿಕೆ ಹೆಚ್ಚಾಗುತ್ತದೆ. ಅದರಿಂದ ಆತ್ಮವಿಶ್ವಾಸ ಬರುತ್ತದೆ. ನಂತರ ನೀವು ಬರೆದಿರುವ ವೇಳಾಪಟ್ಟಿಯನ್ನು ನಿಮಗೆ ಕಾಣುವಂತೆ ಗೋಡೆಗೆ ನೇತು ಹಾಕಿ. ದಿನನಿತ್ಯ ನನ್ನಿಂದ ಇದು ಸಾಧ್ಯ ಎಂದು ಹೇಳಿಕೊಂಡು ಈ ವೇಳಾಪಟ್ಟಿಯಂತೆ ಅಭ್ಯಾಸ ಮಾಡಬೇಕು.

ಹತ್ತನೆಯ ತರಗತಿಯಲ್ಲಿ ಆರು ವಿಷಯಗಳಿವೆ, ಈ ವೇಳಾಪಟ್ಟಿಯಲ್ಲಿ ಯಾವಾಗ ಯಾವ ವಿಷಯವನ್ನು ಅಭ್ಯಾಸ ಮಾಡಬೇಕು ಎಂದು ತಿಳಿಸಲಾಗಿದೆ. ಅದೇ ರೀತಿಯಲ್ಲಿ ಅಭ್ಯಾಸ ಮಾಡಿರಿ. ಅಲಾರಾಂ ಸಹಾಯದಿಂದ ಅಥವಾ ಮನೆಯವರ ಸಹಾಯದಿಂದ ಬೆಳಿಗ್ಗೆ ನಾಲ್ಕು ಗಂಟೆಗೆ ಏಳುವ ಅಭ್ಯಾಸವನ್ನು ಮಾಡಿಕೊಳ್ಳಬೇಕು.

◾ಬೆಳಿಗ್ಗೆ 4 ಗಂಟೆಯಿಂದ 4.30 ರ ವರೆಗೆ
ಬೆಳಗಿನ ಕೆಲಸಗಳನ್ನು ಮುಗಿಸಿ ಮುಖ ತೊಳೆದು ಒಂದು ಕಪ್ ಬಿಸಿ ನೀರು ಕುಡಿದು ತಯಾರಾಗುವುದು. ಅಭ್ಯಾಸ ಇರುವವರು ಒಂದು ಕಪ್ ಟೀ ಅಥವಾ ಕಾಫಿ ಸೇವಿಸುವುದು.

◾ಬೆಳಿಗ್ಗೆ 4:30 ರಿಂದ 4:45 ರವರೆಗೆ
ಮನಸ್ಸನ್ನು ಕೇಂದ್ರೀಕರಿಸಲು 15 ನಿಮಿಷ ನಿಮಿಷ ಧ್ಯಾನ ಮಾಡಬೇಕು.

◾ಬೆಳಿಗ್ಗೆ 4:45 ರಿಂದ 6 ಗಂಟೆಯವರೆಗೆ
▪️ಸೋಮವಾರ ಮತ್ತು ಗುರುವಾರ ಕನ್ನಡ
▪️ಮಂಗಳವಾರ ಮತ್ತು ಶುಕ್ರವಾರ ಸಮಾಜ ‌
▪️ಬುಧವಾರ ಮತ್ತು ರವಿವಾರ ಹಿಂದಿ ಅಭ್ಯಾಸ ಮಾಡಬೇಕು.

◾ಬೆಳಗ್ಗೆ 6:00 ರಿಂದ 7 ಗಂಟೆಯವರೆಗೆ
ಸೋಮವಾರ ಮತ್ತು ಗುರುವಾರ ಇಂಗ್ಲಿಷ್ 
ಮಂಗಳವಾರ ಮತ್ತು ಶುಕ್ರವಾರ ವಿಜ್ಞಾನ 
ಬುಧವಾರ ಮತ್ತು ಭಾನುವಾರ ಗಣಿತ ಅಭ್ಯಾಸ ಮಾಡಬೇಕು

◾ಬೆಳಿಗ್ಗೆ 7:00 ರಿಂದ ಸಾಯಂಕಾಲ 5:00 ಗಂಟೆಯವರೆಗಿನ ಸಮಯವನ್ನು ಶಾಲೆಗೆ ಹೊರಡುವ ಸಿದ್ಧತೆಯಿಂದ ತರಗತಿ ಮುಗಿಸಿ ಮನೆಗೆ ಹಿಂದಿರುಗುವ ವರೆಗೆ ಮೀಸಲಿಡುವುದು. ಈ ಮಧ್ಯೆ ಸಮಯ ಸಿಕ್ಕರೆ ಓದಿದ ವಿಷಯಗಳನ್ನು ಮತ್ತೆ ಮನನ ಮಾಡಿಕೊಳ್ಳುವುದು.

◾ಶನಿವಾರ ಬೆಳಿಗ್ಗೆ 4:45 ರಿಂದ 7 ಗಂಟೆಯವರೆಗೆ ನಿಮಗೆ ಕಷ್ಟವಾದ ವಿಷಯವನ್ನು ಓದಬೇಕು.

◾ಭಾನುವಾರ ಬೆಳಿಗ್ಗೆ 7 ಗಂಟೆಯಿಂದ 8 ಗಂಟೆಯವರೆಗೆ ಮಾಕ್ ಟೆಸ್ಟ್ ಪರೀಕ್ಷೆಗೆ ವಾರದಲ್ಲಿ ನಡೆದ ಎಲ್ಲ ವಿಷಯಗಳ ಎಲ್ಲ ಪಾಠಗಳನ್ನು ಕುರಿತು ಸಾಧ್ಯವಾದರೆ ನೀವೇ ಪ್ರಶ್ನೆ ಪತ್ರಿಕೆ ರೂಪಿಸಿಕೊಳ್ಳಿ ಆಗದಿದ್ದರೆ ನಿಮ್ಮ ಶಿಕ್ಷಕರಿಂದ ಪಡೆಯಿರಿ.

◾ಬೆಳಿಗ್ಗೆ 8 ಗಂಟೆಯಿಂದ 10 ಗಂಟೆವರೆಗೆ
ಟೀ ಟಿಫನ್ ವಿಶ್ರಾಂತಿ ಪಡೆಯುವುದು.

◾ಬೆಳಿಗ್ಗೆ10 ರಿಂದ ಸಂಜೆ 5 ಗಂಟೆವರೆಗೆ 
ಮಾಕ್ ಟೆಸ್ಟ್ ಪರೀಕ್ಷೆಗಳನ್ನು ಬರೆಯುವುದು.

◾ಶನಿವಾರ 2 ಗಂಟೆಯಿಂದ 5 ಗಂಟೆವರೆಗೆ
ಗಣಿತ ಅಭ್ಯಾಸ ಮಾಡುವುದು ಅಥವಾ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದು.

◾ಸೋಮವಾರದಿಂದ ಶನಿವಾರದವರೆಗೆ ಸಂಜೆ 5 ಗಂಟೆಯಿಂದ 5.30 ಗಂಟೆವರೆಗೆ ಚಹಾ ತಿಂಡಿ ವಿಶ್ರಾಂತಿ

◾ಸಂಜೆ 5.30 ಗಂಟೆಯಿಂದ 7 ಗಂಟೆವರೆಗೆ
ನಿಮ್ಮ ಶಾಲೆಯಲ್ಲಿ ಅಂದು ನಡೆದ ಪಾಠಗಳನ್ನು ಅದೇ ದಿನ ಅರ್ಥಮಾಡಿಕೊಂಡು ಓದುವುದು

◾ರಾತ್ರಿ 7 ಗಂಟೆಯಿಂದ 8 ಗಂಟೆವರೆಗೆ
ಓದಿದ್ದನ್ನು ಬರೆದು ಅಭ್ಯಾಸ ಮಾಡುವುದು.

◾ರಾತ್ರಿ 8 ಗಂಟೆಯಿಂದ 9 ಗಂಟೆವರೆಗೆ
ಊಟ ವಿಶ್ರಾಂತಿ.

◾ರಾತ್ರಿ 9:00 ಗಂಟೆಯಿಂದ 10:30 ಗಂಟೆವರೆಗೆ
ಶಾಲೆಯಲ್ಲಿ ತಿಳಿಸಿದ ಹೋಂವರ್ಕ್ ಮತ್ತು ಪ್ರಶ್ನೆ ಉತ್ತರಗಳನ್ನು ಬರೆಯುವುದು.

◾ರಾತ್ರಿ 10:30 ಗಂಟೆಯಿಂದ ಬೆಳಿಗ್ಗೆ 4 ಗಂಟೆವರೆಗೆ ನಿದ್ದೆ ಮಾಡುವುದು.
  
      ಇದು ನಿಮ್ಮ ದಿನನಿತ್ಯದ ವೇಳಾಪಟ್ಟಿ. ಇದರಲ್ಲಿ ಶನಿವಾರ ಬೆಳಿಗ್ಗೆ ಮಧ್ಯಾಹ್ನ ಮತ್ತು ಭಾನುವಾರ ಸ್ವಲ್ಪ ಬದಲಾವಣೆ ಇರುತ್ತದೆ. ಇದನ್ನು ಪ್ರತಿಯೊಬ್ಬರೂ ಪಾಲಿಸಿದರೆ ಹತ್ತನೆಯ ತರಗತಿಯಲ್ಲಿ ಪ್ರಥಮ ಅಥವಾ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವುದು ನೂರಕ್ಕೆ ನೂರರಷ್ಟು ಖಚಿತ. ಇದು ನನಗೆ ಕಷ್ಟ ಎಂದು ಕೊಳ್ಳದೆ ಕಠಿಣ ಪರಿಶ್ರಮದಿಂದ ಪ್ರಯತ್ನಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಕ್ಷಣ ಕಾಲಕ್ಕೆ ಸುಖ ಕೊಡುವ ಸೋಮಾರಿತನವನ್ನು ನೆಚ್ಚಿಕೊಂಡರೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಗೆಲ್ಲುವುದು ಅಸಾಧ್ಯ. ಆದ್ದರಿಂದ ಮೇಲೆ ತಿಳಿಸಿದ ವೇಳಾಪಟ್ಟಿಯಂತೆ ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಗೆಲುವು ನಿಮ್ಮ ಹೆಗಲೇರುತ್ತದೆ. ಸಾಧಕನಿಗೆ ಅಸಾಧ್ಯವಾದುದು ಯಾವುದೂ ಇಲ್ಲ ಸಾಧಿಸುವ ಛಲ ಬೇಕು. ಶುಭವಾಗಲಿ………
................................. ವಿದ್ಯಾವತಿ ಎಮ್ ಅಲದಿ
ಗಣಿತ ಶಿಕ್ಷಕರು
ಸರಕಾರಿ ಪ್ರೌಢ ಶಾಲೆ, ಪಾವೂರು.
ಮಂಗಳೂರು ಉತ್ತರ, ದಕ್ಷಿಣ ಕನ್ನಡ ಜಿಲ್ಲೆ
Mob : +91 89701 53188
******************************************




Ads on article

Advertise in articles 1

advertising articles 2

Advertise under the article