-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 32

ನಿಷ್ಪಾಪಿ ಸಸ್ಯಗಳು : ಸಂಚಿಕೆ - 32

ನಿಷ್ಪಾಪಿ ಸಸ್ಯಗಳು : ಸಂಚಿಕೆ - 32
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

        
ಪ್ರೀತಿಯ ಮಕ್ಕಳೇ,
        ಹೇಗಿದ್ದೀರಿ? ಹೊಸ ವರ್ಷದ ಹೊಸದಿನಗಳು... ಒಂದಿಷ್ಟು ಮಳೆ ಹನಿಗಳನ್ನುದುರಿಸುತ್ತಾ ನಮ್ಮ ಸುತ್ತಲಿನ ಹಸಿರನ್ನು ಇನ್ನಷ್ಟು ಹಸಿರಾಗಿಸಿವೆಯಲ್ಲವೇ!
        "'ನೀನು ಜಡೆಹೆಣೆದ ಹೆಣ್ಣೇ ಆಗಿದ್ದರೆ ನನ್ನನ್ನು ನೋಡಿದ ಕೂಡಲೇ ಒಂದಾದರೂ ಹೂ ಕಿತ್ತು ಮುಡಿಯದಿರಲಾರೆ" ಎಂದು ಒಂದು ಜಾತಿಯ ಗಿಡ ಹೇಳುತ್ತದೆಯಂತೆ.... ಆ ಗಿಡ ಯಾವುದೆಂದು ನೀವು ಹೇಳಬಲ್ಲಿರಾ? ನೀವು ಆ ಗಿಡವನ್ನು ಖಂಡಿತವಾಗಿಯೂ ನೋಡಿರುತ್ತೀರಿ. ಇದು ಕೆರೆ, ತೋಡು, ಕಾಡುಗಳ ಬದಿಗಳಲ್ಲಿ ಮಾತ್ರವಲ್ಲದೆ ತೋಟದ ನಡುವೆ ಕೂಡ ಕಾಣಿಸಿಕೊಳ್ಳುವ ಒಂದು ಪೊದೆ ಸಸ್ಯ. ಮನೆಯಲ್ಲಿ ಅಜ್ಜಿ ಇದ್ದರೆ ಮಳೆಗಾಲದಲ್ಲಿ ಇದರ ಚಿಗುರು ಚಿವುಟಿ ತಂದು ಚಟ್ನಿ, ತಂಬುಳಿ ಮಾಡಿಕೊಟ್ಟಿರಬಹುದು. ಇದೀಗ ಯಾವ ಗಿಡವೆಂದು ತಿಳಿಯಿತೇ...? ಅದು ನೆಕ್ಕರೆ ಅಥವಾ ದೊಡ್ಡ ನೆಕ್ಕರೆ ಗಿಡ. ಇದನ್ನು ಕಳೆ ಸಸ್ಯವೆಂದು ಪರಿಗಣಿಸಿ ಕಡಿದು ಬಿಸಾಡುವುದೇ ಹೆಚ್ಚು. ಆದರೆ ನಮ್ಮ ಹಿರಿಯರು ಈ ಗಿಡದ ವಿಶೇಷತೆಯನ್ನು ಅರಿತಿದ್ದಾರೆ. ಅವರ ಅನುಭವದ ಪ್ರಕಾರ ಈ ಗಿಡ ನೀರಿರುವ ಜಾಗಗಳಲ್ಲಿ ಇರುತ್ತದೆ. ಅಂದರೆ ಭೂಮಿಯಲ್ಲಿ ಎಲ್ಲಿ ಒಸರು ಅಥವಾ ನೀರಿನ ಸೆಲೆ ಇರುವುದು ? ಎಂದು ಕಂಡುಹುಡುಕಲು ಈ ಗಿಡವನ್ನು ಅವಲಂಬಿಸಲಾಗುತ್ತದೆ. ಹಾಳೆ ಮರ, ಹುತ್ತ ಮತ್ತು ಈ ದೊಡ್ಡ ನೆಕ್ಕರೆ ಗಿಡಗಳು ನೀರು ಇರುವ ಸೂಚನೆಯನ್ನು ನೀಡುವ ಪ್ರಾಕೃತಿಕ ಸಾಧನಗಳಾಗಿವೆ.
           ತಿಳಿ ನೇರಳೆ, ಕಡು ನೇರಳೆ ಮತ್ತು ಬಿಳಿ ಬಣ್ಣದ ಹೂಗಳನ್ನು ಬಿಡುವ ನೆಕ್ಕರೆ ಗಿಡವು ಇತ್ತೀಚೆಗೆ ಅಲಂಕಾರಿಕ ಸಸ್ಯವಾಗಿ ಉದ್ಯಾನಗಳಲ್ಲಿ ಸ್ಥಾನ ಪಡೆದಿದೆ. ಇದರ ಎಲೆ , ಹೂ, ಹಣ್ಣುಗಳನ್ನು ನೈಸರ್ಗಿಕವಾಗಿ ಬಟ್ಟೆಗೆ ಬಣ್ಣ ಹಾಕಲು ವರ್ಣಕಾರಕವಾಗಿ ಬಳಸುತ್ತಾರೆ. ಚಿನ್ನ, ಬೆಳ್ಳಿಯ ನ್ಯಾನೋ ಕಣಗಳ ಸಂಶ್ಲೇಷಣೆಯ ಕ್ರಿಯೆಯಲ್ಲಿ ಈ ಹೂಗಳ ಸಾರವನ್ನು ಅಪಕರ್ಷಣಕಾರಿಯಾಗಿ ಬಳಸಿ ಮಾಡಿದ ಸಂಶೋಧನಾ ಲೇಖನಗಳು ಅಂತರಾಷ್ಟ್ರೀಯ ಮನ್ನಣೆ ಪಡೆದಿವೆ ಎಂದರೆ ನಂಬಲೇಬೇಕು. ಮ್ಯಾಂಗನೀಸ್, ಸತು, ಕಬ್ಬಿಣ, ತಾಮ್ರ, ಸೋಡಿಯಂ ನಂತಹ ಖನಿಜಾಂಶಗಳಿರುವ ಈ ನೆಕ್ಕರೆ ಗಿಡಕ್ಕೆ ಅಲುಮೀನಿಯಂ ಲೋಹವನ್ನು ಸಂಗ್ರಹಿಸುವ ವಿಶೇಷ ಗುಣವಿರುವುದರಿಂದ ಅಲುಮಿನಿಯಂ ಅಕ್ಯುಮರೇಟರ್ ಎಂದು ಕರೆಸಿಕೊಳ್ಳುತ್ತದೆ.
       ಈ ಗಿಡದ ಹೂಜಿಯಂತಿರುವ ಕಾಯಿ ಹಣ್ಣಾಗುವಾಗ ಕಡು ನೇರಳೆ ಬಣ್ಣದ ದ್ರವದಲ್ಲಿ ಪುಟಾಣಿ ಬೀಜಗಳಿರುತ್ತವೆ. ನಮ್ಮ ಬಾಲ್ಯದಲ್ಲಿ ಈ ಹಣ್ಣುಗಳನ್ನು ತಿಂದು ನಾಲಿಗೆ ನೇರಳೆ ಮಾಡಿಕೊಳ್ಳುವುದು ಖುಷಿಯ ವಿಚಾರವಾಗಿತ್ತು.
    ಈ ನೆಕ್ಕರೆ ಗಿಡ ಆರ್ದ್ರತೆ ಇರುವಲ್ಲಿ ಸೊಂಪಾಗಿ ಬೆಳೆಯುತ್ತದೆ. ಬುಡದಿಂದಲೇ ಕವಲುಗಳೊಡೆದು ಸುಮಾರು ಎರಡೂವರೆ ಮೀಟರೆತ್ತರಕ್ಕೆ ಗುಂಪಾಗಿ ಬೆಳೆಯುತ್ತವೆ. ಕಾಂಡವು ಮೆತ್ತಗಿದ್ದು ಸಣ್ಣ ಚೂಪಾದ ಕೂದಲಿನ ರಚನೆ ಹೊಂದಿದ್ದು ಮುಟ್ಟಲು ಒರಟಾಗಿರುತ್ತದೆ. ಕಾಂಡದ ಸಂದುಗಳಲ್ಲಿ ಎದುರು ಬದುರಾಗಿ ಎರಡೆರಡು ಎಲೆಗಳಿರುತ್ತವೆ. ಎಲೆಗಳಲ್ಲಿ ಪ್ರಬಲವಾಗಿ ಕಾಣಿಸುವ ಮೂರು ನರಗಳಿದ್ದು ಆರೇಳು ಸೆಂ.ಮೀ. ಉದ್ದವಿರುತ್ತದೆ. ಗಿಡವು ಮುದ ನೀಡುವ ತಿಳಿ ಹಸಿರು ಬಣ್ಣ ಹೊಂದಿದ್ದರೂ ಎಲೆಗಳು ಒರಟಾಗಿರುತ್ತವೆ. ಪ್ರತಿ ಕೊಂಬೆಗಳ ತುದಿಯಲ್ಲೂ ಹೂಗಳು ಅರಳುತ್ತವೆ. ಹೂಗಳು ಬಹು ಸುಂದರವಾದ ಬಣ್ಣಗಳಿಂದ ಗಾತ್ರ ಹಾಗೂ ರೂಪದಿಂದಲೂ ಆಕರ್ಷಕವಾಗಿ ಕಾಣಿಸುತ್ತವೆ. ಸುಂದರವಾದ ಐದು ಎಸಳುಗಳು ಹಾಗೂ ಮಧ್ಯದಲ್ಲಿ ಅಂದವಾದ ಕುಸುಮಗಳು ಹಸಿರಿನ ಮೇಲೆ ನಲಿಯುತ್ತವೆ. ಹೂವಿನ ತೊಟ್ಟಿನಲ್ಲಿ ಕಾಯಿಯ ರಚನೆ ಇದ್ದು ಮುಂದೆ ಸಂಪೂರ್ಣ ಪುಟ್ಟ ಹೂಜಿಯಂತ ಹಣ್ಣಾಗಿ ಬದಲಾಗುತ್ತದೆ.
       ಮೆಲಸ್ಟೊಮಟೇಸಿ ಕುಟುಂಬಕ್ಕೆ ಸೇರಿದ ನೆಕ್ಕರೆ ಗಿಡ ಮೆಲಸ್ಟೋಮಾ ಮಲಬಾತ್ರಕಂ ಎಂಬ ಸಸ್ಯ ಶಾಸ್ತ್ರೀಯ ಹೆಸರನ್ನು ಹೊಂದಿದೆ. ಈ ನಿಷ್ಪಾಪಿ ಸಸ್ಯದ ಎಲೆ ಮತ್ತು ಹೂಗಳಿಗೆ ಕ್ಯಾನ್ಸರ್ ಪ್ರತಿರೋಧಕ ಗುಣಗಳಿವೆಯೆಂದು ಸಂಶೋಧನೆ ಗಳಿಂದ ಸಾಬೀತಾಗಿದೆ. ಮಲೇಷಿಯಾ, ಜಪಾನ್, ಚೀನಾ, ಥಾಯ್ಲೆಂಡ್, ಆಸ್ಟ್ರೇಲಿಯಾ ಹಾಗೂ ವಿಶ್ವದ ಬಹುತೇಕ ಜಾಗಗಳಲ್ಲಿ ಈ ಸಸ್ಯವು ಕಾಣಿಸುತ್ತದೆ. ಇದರ ಬೇರು, ಕಾಂಡ, ಎಲೆ, ಹೂವು, ಕಾಯಿಗಳು ಔಷಧೀಯ ಗುಣಗಳನ್ನು ಹೊಂದಿದ್ದು ಹಲ್ಲುನೋವು, ಅಜೀರ್ಣ, ಅತಿಸಾರ, ಸುಟ್ಟಗಾಯ, ಹುಣ್ಣು, ಜ್ವರ, ಅಸ್ತಮ, ಉರಿಯೂತ, ತಲೆನೋವು, ಲಿವರ್ ಕಾಯಿಲೆಗಳಿಗೆ ಉಪಶಮನಕಾರಿಯಾಗಿದೆ.
          ಮಕ್ಕಳೇ, ಕಳೆಸಸ್ಯವೆಂದು ಕತ್ತರಿಸಿ ಎಸೆದು ನಾಶದ ಪ್ರಯತ್ನಕ್ಕೆ ಮುಂದಾಗುವ ಬದಲು ನೆಕ್ಕರೆಗೆ ಒಂದಿಷ್ಟು ಅಕ್ಕರೆ ತೋರೋಣವೇ? ಮಳೆಗೆ ನಸುನಕ್ಕು ಚಿಗುರಿದ ಕುಡಿಗಳನ್ನು ಕಿತ್ತು ತಂದು ಮಾಡಿದ ಚಟ್ನಿ, ತಂಬುಳಿಗಳನ್ನು ಅಸಹ್ಯಪಡದೆ ತಿನ್ನೋಣವೇ? ಹಿಂದೆಲ್ಲಾ ಶಿಶುಗಳಿಗೆ ಹಲವು ಗಿಡಮೂಲಿಕೆಗಳ ತುದಿಗಳನ್ನು ಕಿವುಚಿ ರಸ ತೆಗೆದು ನಾಲ್ಕು ಹನಿ ಬಾಯಿಗೆ ಹಾಕುವ ಕ್ರಮವಿತ್ತು. ಇದೀಗ ನಾವು ಗ್ರೈಪ್ ವಾಟರ್, ವಿಟಮಿನ್ ಗಳನ್ನು ಮಕ್ಕಳಿಗೆ ಕುಡಿಸುತ್ತಾ, ಸಕ್ಕರೆ ಹಾಕಿದ ಪಾನೀಯಗಳನ್ನು ಕುಡಿಸುತ್ತಾ ಮುಂದುವರಿದವರಾಗಿದ್ದೇವೆ ! ಮತ್ತೆ ನಾವು ನಿಸರ್ಗದ ಜೊತೆ ಸೇರಲೇ ಬೇಕಾದ ಅನಿವಾರ್ಯತೆ ಬರುವ ಮೊದಲು ಎಚ್ಚೆತ್ತುಕೊಂಡು ನೆಕ್ಕರೆಯಂತಹ ಸಸ್ಯ ಸಂಪತ್ತನ್ನು ಉಳಿಸಲು ಪ್ರಯತ್ನಿಸಲೇಬೇಕಲ್ಲವೇ?
  ಸರಿ ಮಕ್ಕಳೇ, ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.... ನಮಸ್ಕಾರ
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************Ads on article

Advertise in articles 1

advertising articles 2

Advertise under the article