-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 99

ಸ್ಫೂರ್ತಿಯ ಮಾತುಗಳು : ಸಂಚಿಕೆ - 99

ಸ್ಫೂರ್ತಿಯ ಮಾತುಗಳು : ಸಂಚಿಕೆ - 99
ಲೇಖಕರು : ರಮೇಶ  ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 


     ದೇಶದ ಅಭಿವೃದ್ಧಿ ಎಂದೊಡನೆ ನಮ್ಮ ದೃಷ್ಟಿಯು ದೇಶದ ಸರ್ವಾಂಗೀಣ ವಿಕಾಸದ ಚಿಂತನೆಯತ್ತ ಸಾಗುತ್ತದೆ. ದೇಶದ ಅಭಿವೃದ್ಧಿಗೆ ಶಿಕ್ಷಣ, ಆರೋಗ್ಯ, ವ್ಯವಸಾಯ, ಗೃಹ ಮತ್ತು ಬೃಹತ್ ಉದ್ದಿಮೆಗಳು, ವಿಜ್ಞಾನ, ಸಂಚಾರ, ವಿದ್ಯುತ್ ಉತ್ಪಾದನೆ, ನದಿ ಮತ್ತು ಸಾಗರ ಯೋಜನೆಗಳು, ನೀರಾವರಿ, ಮೀನುಗಾರಿಕೆ ಹೀಗೆ ಹಲವಾರು ಕ್ಷೇತ್ರಗಳ ಅಭಿವೃದ್ಧಿಯನ್ನು ಗಮನಿಸುತ್ತೇವೆ. ನಾಗರಿಕತೆಯ ಇಂದಿನ ಯುಗದಲ್ಲಿ ದೇಶದ ಪ್ರಗತಿಗೆ ಯಂತ್ರಗಳ ಕೊಡುಗೆ ಇದೆಯೇ? ಯಂತ್ರಗಳು ದೇಶಕ್ಕೆ ಪೂರಕವೋ, ಮಾರಕವೋ?
    ಯಂತ್ರಗಳಿಲ್ಲದ ಕಾಲದ ಜೀವನ ವ್ಯವಸ್ಥೆ ಹೇಗಿತ್ತು? ಅಂದು ಜೀವನ ಎಷ್ಟು ಶ್ರಮದಾಯಕವಾಗಿತ್ತು? ಪ್ರತಿಯೊಂದು ಕೆಲಸಕ್ಕೂ ತೆಗೆದುಕೊಳ್ಳುತ್ತಿದ್ದ ಕಾಲಾವಧಿ ಮತ್ತು ಉತ್ಪನ್ನದ ಪ್ರಮಾಣಗಳ ಅನುಪಾತ ಹೇಗಿತ್ತು? ಮಾನವ ಸಂಪನ್ಮೂಲದ ವಿನಿಯೋಗ ಎಷ್ಟು ಹೆಚ್ಚಿನ ಪ್ರಮಾಣದಲ್ಲಿತ್ತು? ಉತ್ಪಾದನೆಯ ನಂತರದಲ್ಲಿ ಲಾಭ ನಷ್ಟಗಳ ಸ್ಥಿತಿಗಳು ಹೇಗಿದ್ದುವು? ಹೀಗೆ ಹಲವು ವಿಚಾರಗಳ ಅವಲೋಕನ ನಡೆಯಬೇಕಾಗುತ್ತದೆ. ಯಂತ್ರಗಳ ಬಳಕೆಯಿಂದ ಪ್ರಗತಿಯ ವೇಗದ ಪ್ರಮಾಣವನ್ನೂ ತುಲನೆ ಮಾಡಬೇಕಾಗಿದೆ.
     ಭತ್ತದ ವ್ಯವಸಾಯ ಕ್ಷೇತ್ರವನ್ನು ಗಮನಿಸಿದರೆ ಹಿಂದೆ ಉಳುಮೆಗೆ ನೊಗ, ನೇಗಿಲು, ಎತ್ತುಗಳ ಬಳಕೆ ಹಲವು ದಿನ ನಡೆಯುತ್ತಿತ್ತು. ಇಂದು ಕೆಲವೇ ಘಂಟೆಗಳಲ್ಲಿ ಅದೇ ಜಮೀನನ್ನು ಯಂತ್ರಗಳು ಉಳುಮೆ ಮಾಡುತ್ತವೆ. ನೇಜಿ ನೆಡಲು, ಗೊಬ್ಬರ ಸಿಂಪಡಿಸಲು, ಕೊಯಿಲು ಮಾಡಲು, ಭತ್ತದಿಂದ ಜಳ್ಳುಗಳನ್ನು ಪ್ರತ್ಯೇಕಿಸಲು, ಒಲೆಯಲ್ಲಿ  ಭತ್ತ ಬೇಯಿಸಲು, ಬೆಂದ ಭತ್ತವನ್ನು ಅಥವಾ ಬೇಯಿಸದ ಭತ್ತವನ್ನು ಒಣಗಿಸಿ ಕುಟ್ಟಿ ಅಕ್ಕಿ ಮಾಡಲು ಮಾನವ ಶ್ರಮ ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುತ್ತಿತ್ತು. ಇಂದು ಈ ಕೆಲಸಗಳನ್ನು ಯಂತ್ರಗಳ ಮೂಲಕ ಮಾಡುವುದರಿಂದ ಮಾನವ ಶ್ರಮ ಕಡಿಮೆಯಾಗುತ್ತಿದೆ. ಶ್ರಮಿಕರಿಲ್ಲವೆಂದು ಭತ್ತದ ಕೃಷಿಯನ್ನು ಮಾಡದೇ ಭೂಮಿಯನ್ನು ಬಂಜರು ಬಿಟ್ಟು ಅಕ್ಕಿಯ ಕ್ಷಾಮ ಉಂಟಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಯಾಕೆಂದರೆ ಮಾನವ ನಿರ್ಮಿತ ಯಂತ್ರಗಳು ಭತ್ತದ ವ್ಯವಸಾಯದಲ್ಲಿ ಮಾನವನ ಅಗತ್ಯವನ್ನು ಲಘುಗೊಳಿಸಿದೆ. ಇಂಚಿಂಚು ಜಮೀನನ್ನು ಯಂತ್ರಗಳ ಮೂಲಕ ಭತ್ತದ ವ್ಯವಸಾಯ ಮತ್ತು ಅಕ್ಕಿಯ ಉತ್ಪಾದನೆಯಲ್ಲಿ ಬಳಸಬಹುದು. ಭೂಮಿಯನ್ನು ಫಲವತ್ತುಗೊಳಿಸಿ, ಉತ್ಪನ್ನವನ್ನು ಅಗಾಧ ಪ್ರಮಾಣದಲ್ಲಿ ಹೆಚ್ಚಿಸಿಕೊಂಡು ಆಹಾರದ ಭದ್ರತೆಯನ್ನು ಪಡೆಯಲು ಯಂತ್ರಗಳು ನೆರವಾಗುತ್ತಿವೆ.
     ಹಿಂದೆ ತಲೆ ಹೊರೆ ಅಥವಾ ಎತ್ತಿನ ಗಾಡಿ ಅಥವಾ ಜಟಕಾಗಳಲ್ಲಿ ಸಾಧನ ಸಾಮಗ್ರಿಗಳ ಸಾಗಾಟ ಪರಿಮಿತಿಯೊಳಗೆ ನಡೆಯುತ್ತಿದ್ದರೆ, ಇಂದು ಮೋಟಾರು ಗಾಡಿಗಳಲ್ಲಿ ಬೃಹತ್ ಪ್ರಮಾಣದ ಸಾಗಾಟ ಸುಲಭವಾಗಿದೆ. ವೆಚ್ಚವೂ ಇಳಿಕೆಯಾಗಿದೆ. ಕೈಗಾರಿಕೆಗೀಗ ಕಚ್ಚಾ ಪೂರೈಕೆ, ಉತ್ಪಾದನೆಗಳ ರವಾನೆಗಳಿಗೆ ಜಲಮಾರ್ಗ, ವಾಯು ಮಾರ್ಗ ಮತ್ತು ಭೂಮಾರ್ಗಗಳಲ್ಲಿ ಯಾಂತ್ರೀಕೃತ ಸಂಚಾರ ವ್ಯವಸ್ಥೆಯಿದೆ. ದೇಶದ ಎಲ್ಲ ಉತ್ಪನ್ನಗಳನ್ನು ಗರಿಷ್ಠ ಪ್ರಮಾಣದಲ್ಲಿ ಸರಬರಾಜು ನೀಡಲು ಮತ್ತು ಸರಬರಾಜು ಪಡೆಯಲು ಯಂತ್ರಗಳು ನೆರವಾಗುತ್ತಿವೆ. ಯಂತ್ರಗಳ ಬಳಕೆಯಿಂದ ವೆಚ್ಚ ಕಡಿಮೆ; ಆರ್ಥಿಕ ಲಾಭ ಹೆಚ್ಚು. ರೈತನಿಗೆ ಹೊಸ ಹೊಸ ಮಾರುಕಟ್ಟೆಗಳ ಶೋಧನೆ ಸರಳವಾಗಿದೆ.
      ಮರವೇರಲು ಮರವನ್ನಿಳಿಯಲು ಯಂತ್ರಗಳಿವೆ, ಮರಕಡಿಯಲು ಯಂತ್ರಗಳಿವೆ, ಭಾರ ಎತ್ತಲು, ಭೂ ಸಮತಟ್ಟು ಮಾಡಲು, ಗುಂಡಿ ತೆಗೆಯಲು, ಗಿಡ ನೆಡಲು ಯಂತ್ರಗಳಿವೆ, ನೀರೆತ್ತಲು, ಹಾಯಿಸಲು ಯಂತ್ರಗಳಿವೆ, ಹೀಗೆ ಕೃಷಿಕ್ಷೇತ್ರ ಯಂತ್ರಮಯವಾಗಿದೆ. ಆಹಾರೋತ್ಪಾದನಾ ಕ್ಷೇತ್ರವೂ ಯಂತ್ರಗಳ ಹೊರತು ಊಹಿಸುವಂತಿಲ್ಲ. ಕಲಸಲು, ರುಬ್ಬಲು, ತುರಿಯಲು, ತಟ್ಟಲು.... ಹೀಗೆ ಪ್ರತಿಯೊಂದರಲ್ಲೂ ಯಂತ್ರಲೋಕ ನುಸುಳಿದೆ. 
       ವೈದ್ಯಕೀಯ ಕ್ಷೇತ್ರದಲ್ಲಿ ಕಾಯಿಲೆ ಪತ್ತೆ ಮಾಡಲು ಯಂತ್ರಗಳ ಬಳಕೆಯಾಗುತ್ತಿದ್ದು ಕಾಯಿಲೆಯ ನಿಖರತೆ ಪಡೆಯಲು ಬಹಳ ಅನುಕೂಲವಾಗಿದೆ. ಹಿಂದೆ ವೈದ್ಯರು ಕಾಯಿಲೆಯ ಬಾಹ್ಯ ಲಕ್ಷಣಗಳ ಮೇಲೆ ಚಿಕಿತ್ಸೆ ನೀಡುತ್ತಿದ್ದರು. ಆದರೆ ಆ ಲಕ್ಷಣಗಳ ಆಧಾರದಲ್ಲಿ ನೀಡಿದ ಚಿಕಿತ್ಸೆ ಫಲಕಾರಿಯಾಗದಿರುವ ಸಂಧರ್ಭಗಳಿಂದಾಗಿ ಸಾವುಗಳು ಅಧಿಕವಾಗಿದ್ದುವು. ನಿಜವಾದ ರೋಗವು ಉಲ್ಬಣವಾಗುವ ಸಂದರ್ಭಗಳೇ ಅಧಿಕವಿದ್ದುವು. ನಮ್ಮ ಕಾಲದಲ್ಲಿ ಯಂತ್ರಗಳ ಮೂಲಕ ರೋಗ ಪತ್ತೆ ಹಚ್ಚುವರು. ಪೂರಕ ಔಷಧ ನೀಡುವರು. ಕಾಯಿಲೆಯಳಿದು ಜೀವವುಳಿಯುವುದು.
     ಯಂತ್ರಜ್ಞಾನ ಮತ್ತು ತಂತ್ರಜ್ಞಾನ ಜೊತೆಗೂಡಿ ಬೆಳೆಯುತ್ತಿದೆ. ವ್ಯಾಪಾರ, ಕೈಗಾರಿಕೆ, ಶಿಕ್ಷಣ, ವೈದ್ಯಕೀಯ, ವ್ಯವಸಾಯ, ಇಂಜಿನಿಯರಿಂಗ್.... ಹೀಗೆ ಎಲ್ಲ ವಿಭಾಗಗಳನ್ನು ತನ್ನತ್ತ ಸೆಳೆದಿವೆ. ಯಂತ್ರ-ತಂತ್ರಜ್ಞಾನಗಳು ಮಾನವ ಜೀವನವನ್ನು ಸುಲಭಗೊಳಿಸಿದಷ್ಟೇ  ಪ್ರಮಾಣದಲ್ಲಿ ಅಪಾಯವೂ ಕಾದಿದೆಯೆಂಬ ಭಯವೂ ಇದೆ. ಚಿಕಿತ್ಸಾ ಕ್ಷೇತ್ರಗಳು ಪ್ರಬಲಗೊಂಡಂತೆ, ರೋಗಗಳ ಬಾಹುಳ್ಯವೂ ಇದೆ ಎಂಬ ಕಟು ಸತ್ಯವನ್ನು ಮರೆಮಾಚುವಂತಿಲ್ಲ. ದೃಷ್ಟಿ ದೋಷಗಳು, ಉಸಿರಾಟದ ತೊಂದರೆಗಳು, ಅಂಗಾಂಗಳ ಚೈತನ್ಯದ ಮೇಲೆ ಗಂಭೀರ ಸಮಸ್ಯೆಗಳು ಹೆಚ್ಚುತ್ತಿವೆ. ನವ ನವೀನ ಆರೋಗ್ಯ ಸಮಸ್ಯೆಗಳು ಹುಟ್ಟುತ್ತಲಿವೆ. ತ್ಯಾಜ್ಯಗಳ ವಿಲೇವಾರಿಯೇ ದೊಡ್ಡ ಸಮಸ್ಯೆಯಾಗಿ ರೋಗಮೂಲವಾಗ ತೊಡಗಿದೆ, ಪರಿಸರ ಮಲಿನತೆ ಬಹು ಚಿಂತೆಗೆ ಕಾರಣವಾಗಿದೆ.
........ರಮೇಶ  ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 




Ads on article

Advertise in articles 1

advertising articles 2

Advertise under the article