-->
ಜೀವನ ಸಂಭ್ರಮ : ಸಂಚಿಕೆ - 121

ಜೀವನ ಸಂಭ್ರಮ : ಸಂಚಿಕೆ - 121

ಜೀವನ ಸಂಭ್ರಮ : ಸಂಚಿಕೆ - 121
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 

          
   ಮಕ್ಕಳೇ, ಇದು ವಿದೇಶದಲ್ಲಿ ನಡೆದ ಘಟನೆ. ಒಬ್ಬ ಭಿಕ್ಷುಕನಿದ್ದನು. ವಯಸ್ಸು 20 ರಿಂದ 25. ತಂದೆ ತಾಯಿ ಇರಲಿಲ್ಲ. ಅನಾಥನಾಗಿದ್ದನು. ಭಿಕ್ಷೆ ಬೇಡುತ್ತಿದ್ದನು. ಸಿಕ್ಕಿದ್ದನ್ನು ಉಂಡು, ದೇವಾಲಯದಲ್ಲಿ ಮಲಗುತ್ತಿದ್ದನು. ಒಂದು ದಿನ ಮಧ್ಯಾಹ್ನದವರೆಗೂ ಭಿಕ್ಷೆ ಬೇಡಿದ ಯಾರೂ ನೀಡಲಿಲ್ಲ. ಹಸಿವಾಗಿತ್ತು. ಬೆಳಗಿಂದ ಏನೂ ತಿಂದಿರಲಿಲ್ಲ. ಮಧ್ಯಾಹ್ನ ಒಬ್ಬ ಮುದುಕ ಅದೇ ದಾರಿಯಲ್ಲಿ ಬರುತ್ತಿದ್ದನು. ಸಿರಿವಂತನಾಗಿದ್ದನು. ಆತನನ್ನು ನೋಡಿ ಈ ಹುಡುಗನಿಗೆ ಬಹಳ ಖುಷಿಯಾಯಿತು. ಆ ಮುದುಕನ ಬಳಿ ಹೋಗಿ, "ಮಹಾನುಭಾವರೇ ನಾನು ಬಡವ, ಬೆಳಗಿಂದ ಏನೂ ತಿಂದಿಲ್ಲ. ದಯಮಾಡಿ ಸಹಾಯ ಮಾಡಿ" ಎಂದನು. ಮುದುಕ ಈ ಹುಡುಗನನ್ನು ನೋಡಿ, "ನಾನು ದಾನ ಮಾಡುತ್ತೇನೆ, ಆದರೆ ಶ್ರೀಮಂತರಿಗಲ್ಲ" ಎಂದನು. ಆಗ ಹುಡುಗ ಹೇಳಿದ, "ನಾನು ಶ್ರೀಮಂತನಲ್ಲ, ಬಡವ" ಎಂದನು. ಮುದುಕ ಪುನಃ ಹೇಳಿದ, "ನಾನು ಶ್ರೀಮಂತರಿಗೆ ದಾನ ನೀಡುವುದಿಲ್ಲ. ನಾನು ಲಕ್ಷಾಧೀಶ, ನೀನು ಕೋಟ್ಯಾಧೀಶ" ಎಂದನು. ಆಗ ಹುಡುಗ, "ನೋಡಿ ಬಟ್ಟೆ ಹರಿದಿದೆ, ಹೊಟ್ಟೆ ಹಸಿದಿದೆ, ನಾನು ಬಡವ, ದಯಮಾಡಿ ನೀಡಿ" ಎಂದನು. ಆಗ ಮುದುಕ ಹೇಳಿದ, "ನನಗೆ ಈಗ 80 ವರ್ಷ. ನನ್ನ ಕೈ ಹಿಡಿಯುವ ಶಕ್ತಿ ಇಲ್ಲ. ಕಾಲು ಹೆಚ್ಚು ದೂರ ನಡೆಯಲು ಆಗಲ್ಲ. ದೇಹ ಶಕ್ತಿ ಕಳೆದುಕೊಂಡಿದೆ. ನಿನ್ನ ಕೈ ನೋಡು ಎಷ್ಟು ಬಲಿಷ್ಠವಾಗಿದೆ?. ಕಾಲು ನಡೆಯಲು ಸಮರ್ಥವಾಗಿದೆ. ದೇಹ ಎಷ್ಟು ಬಲಿಷ್ಠ?. ಇಂತಹ ಬಲಿಷ್ಠ ದೇಹ ಇರುವವನಿಗೆ ನಾನ್ಯಾಕೆ ಕೊಡಬೇಕು?. ನನ್ನ ಕೈಗೆ ಶಕ್ತಿ ಬೇಕಾಗಿದೆ. ಕಾಲಿಗೆ ಶಕ್ತಿ ಬೇಕಾಗಿದೆ. ದೇಹಕ್ಕೆ ಶಕ್ತಿ ಬೇಕಾಗಿದೆ. ಹೇಳು ಯಾವುದಾದರೂ ಔಷದ ಇದ್ದರೆ ಹೇಳು ಲಕ್ಷ ಲಕ್ಷ ಕೊಡುತ್ತೇನೆ, ಕೋಟಿ ಕೊಡುತ್ತೇನೆ, ಇದೇ ಕೈ ಬಳಸಿ ನಾನು ಲಕ್ಷಾಧೀಶನಾಗಿದ್ದು. ನಿನ್ನಲ್ಲಿ ಅದ್ಬುತ ಶಕ್ತಿ ಸಾಮರ್ಥ್ಯವಿರುವ ಕೈಕಾಲು ದೇಹ ಇರುವಾಗ, ಇದನ್ನು ಚೆನ್ನಾಗಿ ಬಳಸು. ಭಿಕ್ಷೆ ಪಾತ್ರೆ ತುಂಬಲು ಅಲ್ಲ. ದೇಶ ಶ್ರೀಮಂತ ಮಾಡಲು. ಸುಂದರ ಜಗತ್ತು ನಿರ್ಮಿಸಲು, ನಿನ್ನ ದೇಹವನ್ನು ಚೆನ್ನಾಗಿ ಬಳಸು" ಎಂದು ಹೇಳಿದನು. ಮುಂದೆ ಇದೇ ಭಿಕ್ಷುಕ ದೊಡ್ಡ ಶ್ರೀಮಂತನಾದ.

ಬದುಕಲು ಹೆಚ್ಚು ಬೇಕಾಗಿಲ್ಲ. ಎರಡು ಹಣ್ಣು , ಒಂದು ಕಪ್ಪು ಹಾಲು ಸಾಕು, ಇದೇ ದೇಹ ಕೈ ಬಳಸಿದರೆ, ಸಾವಿರ ಜನ ತಿನ್ನುವಷ್ಟು , ಉತ್ಪಾದನೆ ಮಾಡಬಹುದು. ನಾವೆಲ್ಲ ಚಂದ್ರಲೋಕಕ್ಕೆ ಹೋಗಬೇಕು ಎನ್ನುತ್ತೇವೆ. ಅಲ್ಲಿ ನೀರಿಲ್ಲ. ಗಿಡವಿಲ್ಲ. ಹೂವಿಲ್ಲ. ಹಣ್ಣಿಲ್ಲ. ಒಂದು ಕಪ್ ನೀರಿನ ಬೆಲೆ ಎಷ್ಟು?. ಒಂದು ಹಣ್ಣಿನ ಬೆಲೆ ಎಷ್ಟು ?.ಈ ಭೂಮಿಯಲ್ಲಿ ಸುತ್ತಮುತ್ತ ಕಣ್ಣು ಹಾಯಿಸಿದಲೆಲ್ಲ ಹಸಿರೇ ಹಸಿರು. ಹೂಗಳು, ಹಣ್ಣುಗಳು, ಹರಿಯುವ ನದಿ, ಸಾಗರ, ಸಮುದ್ರ, ಕೆರೆ, ಹೊಳೆ, ಈ ಭೂಮಿ ಶ್ರೀಮಂತವಾಗಿರುವಾಗ, ಇದರ ಮಧ್ಯ ನಾವು ಇದ್ದೀವಿ. ಬಡವನಾಗಿರಬಾರದು. ಈ ಭೂಮಿಯ ಮೇಲೆ ನಾವೆಲ್ಲ ಎಂತೆಂಥ ವಸ್ತುಗಳನ್ನು ನೋಡುತ್ತೇವೆ. ಅವೆಲ್ಲ ಈ ಕೈ ಬಳಸಿಯೇ ಮಾಡಿರುವುದು. ಹಾಗಾಗಿ ನಿಸರ್ಗ ನೀಡಿರುವ ಈ ಸುಂದರ ಬಲಿಷ್ಠ ದೇಹವನ್ನು ಬಳಸಿ ಜಗತ್ತನ್ನು ಶ್ರೀಮಂತ ಗೊಳಿಸಬೇಕು. ಕೇವಲ ಒಂದು ಕೈಯಗಲ ಭೂಮಿಯಲ್ಲಿ ಒಂದು ಮಾವಿನ ಬೀಜ ಹಾಕಿ, ಒಂದು ಬೊಗಸೆ ನೀರು ಹಾಕಿದರೆ, ಗಿಡ ಬೆಳೆಯುತ್ತದೆ. ಎತ್ತರವಾದಂತೆ ಮರವಾಗುತ್ತದೆ. ಮರವಾದಂತೆ ನಾವು ನೀರು ಹಾಕುವ ಅಗತ್ಯವಿಲ್ಲ ಒಂದು ಬೀಜ ನಾವು ಸಾಯುವ ತನಕ ಸಾವಿರ ಸಾವಿರ ಹಣ್ಣು ನೀಡುತ್ತದೆ. ನಾವು ಬ್ಯಾಂಕಿಗೆ ಹಣ ಹಾಕಿದರೆ ನೂರಕ್ಕೆ ಹತ್ತು ರೂ ಬಡ್ಡಿ ಬರುಬಹುದು. ಬೇರೆಯವರಿಗೆ ಬಡ್ಡಿ ನೀಡಿದರೆ ಹದಿನೈದು ರೂ ಸಿಗಬಹುದು. ಆದರೆ ಒಂದು ಬೀಜ ಸಾವಿರ ಸಾವಿರ ಹಣ್ಣು ನೀಡುತ್ತದೆ. ಈ ನಿಸರ್ಗ, ಭೂಮಿ ಬಡವಲ್ಲ. ನಮ್ಮ ಕೈಯಿಂದ ಸುಂದರ ಕೆಲಸ ಮಾಡಬೇಕು. ಉತ್ಪಾದನಾ ಕಾರ್ಯ ಮಾಡಬೇಕು. ನಿರ್ಮಾಣ ಕಾರ್ಯ ಮಾಡಬೇಕು. ವಿನಾಶದ ಕೆಲಸ ಮಾಡಬಾರದು. ಅಲ್ಲವೇ ಮಕ್ಕಳೇ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************



Ads on article

Advertise in articles 1

advertising articles 2

Advertise under the article