-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 12

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 12

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 12
ಲೇಖಕರು : ದಿವಾಕರ ಶೆಟ್ಟಿ ಎಚ್
ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203

              
ಪ್ರೀತಿಯ ಮಕ್ಕಳೇ.... ಕಳೆದ ಎರಡು ವಾರಗಳಲ್ಲಿ ನಕ್ಷತ್ರಗಳ ಮತ್ತು ಭೂಮಿಯ ಹುಟ್ಟಿನ ಬಗ್ಗೆ ತಿಳಿದುಕೊಂಡೆವು. ಹೋ ಇಷ್ಟಾದರೆ ಮುಗಿಯಿತು ಜೀವಿಗಳ ಉಗಮ ಸಲೀಸು ಎಂದು ನೀವು ಭಾವಿಸಿದ್ದೀರಿ. ಇಲ್ಲಿ ನಿಮಗೆ ಸಿಕ್ಕಿದ್ದು ಒಂದು ನಿರ್ಜೀವ ಭೂಮಿ. ಕೆಂಡದುಂಡೆ. ಆ ಉಷ್ಣತೆಯಲ್ಲಿ ಭೂಮಿಯಲ್ಲಿ ಕಾದ ಲಾವಾ, ಭೂ ವಾತಾವರಣದಲ್ಲಿ ಅಮೋನಿಯ, ಮೀಥೇನ್, ಸಾರಜನಕ, ಇಂಗಾಲದ ಡೈಆಕ್ಸೈಡ್, ನೀರಾವಿಯಂತಹ ಅನಿಲಗಳು. ಉಸಿರಾಡಲು ಆಮ್ಲಜನಕ ಬೇಕಲ್ಲ ಅಮ್ಲಜನಕವೆಲ್ಲಿ ಎಂದರೆ ಆಮ್ಲಜನಕವಿರಲು ಸಾಧ್ಯವೇ ಇಲ್ಲ. ಏಕೆಂದರೆ ಈ ಉಷ್ಣತೆಯಲ್ಲಿ ಆಮ್ಲಜನಕ ಅತ್ಯಂತ ಪಟುವಾದದ್ದು. ಬೇರೆ ಮೂಲವಸ್ತುಗಳೊಂದಿಗೆ ವರ್ತಿಸಿ ಆಕ್ಸೈಡ್ ಗಳನ್ನು ರಚಿಸಿ ತೆಪ್ಪಗೆ ಹೊದ್ದು ಮಲಗಿ ಬಿಡುತ್ತವೆ. ಈ ನಿರ್ಜೀವ ಅಂದರೆ ಅಜೈವಿಕ ಭೂಮಿ (abiotic) ಜೀವಗ್ರಹವಾಗಿ (biotic) ಬದಲಾಗುವುದೆಂದರೆ ಅದೊಂದು ಸಂಕೀರ್ಣ ಪ್ರಕ್ರಿಯೆ. ಭೂಮಿ ಹಾದು ಬಂದ ಈ ಜೀವ ಪೂರ್ವ ಭೂಮಿಯ (prebiotic/probitic) ಅವಶ್ಯಕತೆಗಳ ಬಗ್ಗೆ ನೋಡೋಣ.

ಅತ್ಯಂತ ಸರಳವಾದ ಅಮೀಬಾದಿಂದ ಸಂಕೀರ್ಣವಾದ ಮಾನವನ ವರೆಗೆ ಎಲ್ಲಾ ಜೀವಿಗಳೂ ಜೀವಕೋಶಗಳಿಂದ ಮಾಡಲ್ಪಟ್ಟಿವೆ. ಒಂದು ಜೀವಿ ಯಾವೆಲ್ಲಾ ಕೆಲಸಗಳನ್ನು ಮಾಡುತ್ತದೆಯೋ ಆ ಎಲ್ಲಾ ಕೆಲಸಗಳನ್ನು ಜೀವಕೋಶಗಳು ಮಾಡುತ್ತವೆ. ಉಸಿರಾಟ, ಆಹಾರ ಸೇವನೆ, ವಿಸರ್ಜನೆ, ಚಲನೆ, ವಂಶಾಭಿವೃದ್ಧಿ, ಉತ್ಪರಿವರ್ತನೆ ಹೀಗೆ. ಸಂಕೀರ್ಣ ಜೀವಿಗಳಲ್ಲಿ ಇದಕ್ಕೆ ಒಂದು ಚೌಕಟ್ಟು ಇರಬಹುದು ಅಷ್ಟೇ. ಜೀವಿಯ ಅತಿ ವಿಶಿಷ್ಟ ಗುಣ ಎಂದರೆ ತನ್ನದೇ ತದ್ರೂಪು ಪ್ರತಿಯೊಂದನ್ನು ಸಿದ್ದಪಡಿಸುವುದು. ಇದನ್ನು ನಾವು ವಂಶಾಭಿವೃದ್ಧಿ (reproduction) ಎನ್ನುತ್ತೇವೆ. ಇದು ನಿರ್ಜೀವಿ ಮತ್ತು ಸಜೀವಿಗಳನ್ನು ಪ್ರತ್ಯೇಕಿಸುವ ಒಂದು ಪ್ರಮುಖ ಲಕ್ಷಣ.

ಈ ಕೋಶಗಳಿಗೆ ಈ ತದ್ರೂಪು ತಯಾರಿಕೆ ಗುಣ ಬಂದಿರುವುದು ಅವುಗಳಲ್ಲಿರುವ ಅನುವಂಶೀಯ ವಸ್ತುಗಳಿಂದ (genetic materials). ಇವುಗಳನ್ನು ನ್ಯೂಕ್ಲಿಯಿಕ್ ಆಮ್ಲಗಳೆನ್ನುವೆವು. ನಾಲ್ಕು ರೀತಿಯ ಬೇಸ್ ಗಳು ಸಕ್ಕರೆಯ ಅಣುವಿನೊಂದಿಗೆ ಸೇರಿ ಈ ನ್ಯೂಕ್ಲಿಯಿಕ್ ಆಮ್ಲಗಳು ಉತ್ಪತ್ತಿಯಾಗುತ್ತವೆ. ಈ ನ್ಯೂಕ್ಲಿಯಿಕ್ ಆಮ್ಲಗಳಲ್ಲಿ ರೈಬೋಸ್ ಸಕ್ಕರೆ ಇದ್ದರೆ ಅವುಗಳನ್ನು RNA ಗಳೆಂದೂ ಡಿ ಆಕ್ಸಿ ರೈಬೋಸ್ ಸಕ್ಕರೆ ಇದ್ದರೆ DNA ಎಂದು ಕರೆಯುತ್ತೇವೆ. ಈ ನ್ಯೂಕ್ಲಿಯಿಕ್ ಆಮ್ಲಗಳಿದ್ದರೆ ಜೀವಿ ರಚನೆಯಾಗುತ್ತದೆಯೇ ಎಂದು ನೀವು ಕೇಳಬಹುದು. ಹೌದು ಈ ನ್ಯೂಕ್ಲಿಯಿಕ್ ಆಮ್ಲಕ್ಕೆ ಒಂದು ಪ್ರೋಟೀನ್ ಅಥವಾ ಕೊಬ್ಬಿನ ಲೇಪನ (membrane) ಹಾಕಿ ಬಿಟ್ಟರೆ ಅದು ತನ್ನಷ್ಟಕ್ಕೆ ತಾನೇ ವಂಶಾಭಿವೃದ್ಧಿ ಮಾಡಲು ಶುರು ಮಾಡುತ್ತದೆ. ಇಂತಹ ಸರಳ ರಚನೆಗಳನ್ನು ನಾವು ವೈರಸ್‌ಗಳೆಂದು ಕರೆಯುವುದು. ಇಂತಹ ಒಂದು ನ್ಯೂಕ್ಲಿಯಿಕ್ ಆಮ್ಲದ ಎಳೆಯನ್ನು ಒಂದಷ್ಟು ಪೋಷಕಾಂಶಗಳಿರುವ ಕೋಶ ದ್ರವ್ಯದೊಳಗೆ ಬಿಸುಟು (cytoplasm) ಅದರ ಹೊರಗೊಂದು ಪೊರೆ (cell membrane) ಎಳೆದರೆ ಅದೊಂದು ಸರಳ ಜೀವಕೋಶ (prokaryotic cell). ಬ್ಯಾಕ್ಟೀರಿಯಾಗಳು ಇಂತಹ ಸರಳ ಕೋಶ ಜೀವಿಗಳು. ಈ ನ್ಯೂಕ್ಲಿಯಾರ್ ವಸ್ತುವಿಗೂ ಒಂದು ಅಂಗಿ ಹಾಕಿ (nuclear membrane) ಜೀವಕೋಶದೊಳಗೆ ಮತ್ತೊಂದಷ್ಟು ರಚನೆಗಳನ್ನು ತುರುಕಿ ಚೀಲವನ್ನು (cell membrane) ಹೊಲಿದರೆ ಆಗ ಸಂಕೀರ್ಣ ಜೀವಕೋಶ (eukaryotic cell) ಸಿದ್ಧ. ನಾವು ನೀವು ಎಲ್ಲಾ ಈ ಗುಂಪಿಗೆ ಸೇರುವವರು. ಅಂದರೆ ಜೀವಾಂಕುರವಾಗಲು ಸಕ್ಕರೆ, ಪ್ರೋಟೀನ್, ಕೊಬ್ಬು ಮತ್ತು ನ್ಯೂಕ್ಲಿಯಾರ್ ಬೇಸ್ ಗಳು ಅಗತ್ಯವೆಂದಾಯಿತು. ಇವು ಆಹಾರದ ಘಟಕಗಳು. ಈ ಅಹಾರದ ಘಟಕಗಳು ಎಲ್ಲಿಂದ ಬರುತ್ತವೆ ಎಂದು ಪ್ರಶ್ನೆ ಕೇಳಿದರೆ ಮೀನು, ಮಾಂಸ, ಮೊಟ್ಟೆ, ಹಾಲು, ಏಕ ಮತ್ತು ದ್ವಿದಳ ಧಾನ್ಯಗಳು ಎಂದು ಶುರು ಮಾಡುತ್ತೀರಿ. ಅಂದರೆ ನಮಗಿವು ದೊರೆಯುವುದು ಜೀವಿಗಳಿಂದಲೇ. ಅಂದರೆ ನಾವು ಜೀವಿಗಳಿಲ್ಲದ ಭೂಮಿಯಲ್ಲಿ ಜೀವಾಂಕುರ ಎಂಬ ಸಂಕೀರ್ಣ ಕೃಷಿ ಆರಂಭಿಸಬೇಕಾಗಿದೆ.

ಈ ಆರಂಭದ ಭೂಮಿ ಎಂಬ ಕುದಿಪಾತ್ರೆಯಲ್ಲಿ ಈ ಎಲ್ಲಾ ಪಾಕಗಳು ಸಿದ್ಧವಾದದ್ದಾದರೂ ಹೇಗೆ? ಮುಂದಿನ ವಾರ ತಿಳಿಯೋಣ.
.................................... ದಿವಾಕರ ಶೆಟ್ಟಿ ಎಚ್
ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 


Ads on article

Advertise in articles 1

advertising articles 2

Advertise under the article