-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 98

ಸ್ಫೂರ್ತಿಯ ಮಾತುಗಳು : ಸಂಚಿಕೆ - 98

ಸ್ಫೂರ್ತಿಯ ಮಾತುಗಳು : ಸಂಚಿಕೆ - 98
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                  

      ಶಿರೋನಾಮೆಯನ್ನು ಓದಿ ವಿಸ್ಮಯ ಎನಿಸಿತೇ...? ನಮ್ಮ ರಾಷ್ಟ್ರ ಧ್ವಜದಲ್ಲಿ ಮೂರು ಬಣ್ಣಗಳಿರುವಂತೆ ಈ ಲೇಖನವೊಂದರಲ್ಲೇ ಮೂರು ವಿಷಯಗಳಿವೆ. ಇವು ಮೂರೂ ಸಮಾಜದ ಪ್ರತಿಯೊಬ್ಬರಿಗೂ ಸಂಬಂಧಿಸಿದೆ. ಅದಕ್ಕಾಗಿ ಮೂರನ್ನೂ ಒಂದೇ ಸೂರಿಗೆ ತಂದಿದ್ದೇನೆ. ‘ದೇಹ’ ವನ್ನು ಬಿಳಿ, ‘ದೇವ’ ವನ್ನು ಕೇಸರಿ, ‘ದೇಶ’ ವನ್ನು ಹಸುರೆಂದು ವಿಂಗಡಿಸದಿದ್ದರೂ ಲೇಖನದ ಛಾಯೆಯಲ್ಲಿ ಈ ಅಂಶಗಳು ಕಾಕತಾಳೀಯವಾಗಿ ಅಂತರ್ಗತವಾಗಿವೆ.
      ದೇಹವಿಲ್ಲದೆ ಪಶು ಪ್ರಾಣಿ ಪಕ್ಷಿಗಳನ್ನು ಊಹಿಸುವಂತಿಲ್ಲ. ಹುಟ್ಟಿದ ಮೇಲೆ ಮಣ್ಣಾಗುವವರೆಗೂ ದೇಹವಿರುತ್ತದೆ. ದೇವರು ದೇಹ ರೂಪ ಮತ್ತು ವರ್ಣಗಳನ್ನು ಹೊಂದಿರದ ಚೇತನ. ಪ್ರಾಣಿ ದೇಹದೊಳಗೂ ದೇವರ ಚೇತನಾಂಶವಿದೆ ಎಂದು ನಂಬಿದ್ದೇವೆ. ಆದರೆ ದೇವರು ಪ್ರಾಣಿ ಪಕ್ಷಿ ಮರ ಗಿಡಗಳಂತೆ ನಶ್ವರನಲ್ಲ. ದೇಶವು ಕೂಡಾ ಶಾಶ್ವತವಾಗಿ ನಮ್ಮ ಮುಂದಿನ ಪೀಳಿಗೆಯ ಬಳಕೆಗೆ, ಸಕಲ ಜೀವರಾಶಿಗಳ ಬಾಳುವೆಗೆ ಉಳಿದು ಮುಂದುವರಿಯುತ್ತದೆ. ದೇಹ ದೇವ ಮತ್ತು ದೇಶದ ಮೇಲೆ ಪ್ರೀತಿಯಿರಬೇಕು.
      ದೇಹವು ಜನನದಿಂದ ಮರಣದ ತನಕ ಆರೋಗ್ಯದಿಂದಿರಬೇಕು, ಮನಸ್ಸು ನೆಮ್ಮದಿಯಿಂದ ಪ್ರಫುಲ್ಲಿತವಾಗಿರಬೇಕು ಎಂದಾದರೆ ನಾವು ಜಾಗರೂಕರಾಗಿರಬೇಕು. ದೇಹದ ಪುಟ್ಟದಾದ ಒಂದು ಅಂಗ ಊನವಾದರೂ ಒಂದಲ್ಲ ಒಂದು ರೀತಿಯ ತೊಡರು ಖಂಡಿತ. ಕೈ ಕಾಲು ಮಿದುಳು ಕಣ್ಣು ಹೃದಯ ಕಿವಿ ಗಂಟಲು ನಾಲಿಗೆ ಬೆರಳುಗಳು ಪಾದಗಳು ಹಲ್ಲುಗಳು ಜೀರ್ಣಾಂಗ ವ್ಯೂಹ ಶ್ವಾಸಾಂಗವ್ಯೂಹ, ರಕ್ತ ಪರಿಚಲನಾ ವ್ಯವಸ್ಥೆ ಇವು ಯಾವುವನ್ನೂ ನಾವು ಕಳೆದು ಕೊಳ್ಳ ಬಾರದು. ಆದರೆ ಕಳೆದುಕೊಂಡು ಕಷ್ಟಪಡುವವರ ಸಂಖ್ಯೆ ಏರುತ್ತಲೇ ಇದೆ. ಮಾಡುವ ಕೆಲಸಗಳಲ್ಲಿ ಅಶಿಸ್ತು, ಅಶ್ರದ್ಧೆ, ಅಪ್ರಾಮಾಣಿಕತೆ ಮತ್ತು ನಮ್ಮ ಅನೇಕ ‘ಯಮ’ ಗಳು ನಮ್ಮನ್ನು ಅಂಗವೂನ ಗೊಳಿಸುತ್ತವೆ. ಏಕಾಗ್ರತೆ, ನಿಯಮ ಪಾಲನೆ, ಶಿಸ್ತು ತಾಳ್ಮೆ ಕೌಶಲ್ಯ ಮುಂತಾದುವು ನಮ್ಮಲ್ಲಿ ಅಡಕಗೊಂಡಾಗ ಅವಘಡಗಳಾಗುವುದು ಬಹಳ ಕಡಿಮೆಯಾಗುತ್ತದೆ. ದೇಹದ ಅಂಗಗಳ ರಕ್ಷಣೆಯೂ ಆಗುತ್ತದೆ.
      ಮರದಿಂದ ಬಿದ್ದು ಮರಣ, ಬೈಕು ಡಿಕ್ಕಿಯಾಗಿ ಬಾಲಕಿಯ ಸಾವು, ವಾಹನಾಪಘಾತಕ್ಕೆ ನಾಲ್ವರು ಬಲಿ ಇಂತಹ ದೈನಂದಿನ ಸುದ್ದಿಗಳು ಎಲ್ಲರನ್ನೂ ದಿಗಿಲು ಬಡಿಸುತ್ತವೆ. ಕೆಲವೊಮ್ಮೆ ಅರೆಜೀವಗಳಾಗಿ ಉಳಿದರೆ ಅದಕ್ಕಿಂದ ದೊಡ್ಡ ಯಾತನೆಯಿರದು. ಉಗುರು ತೆಗೆಯುವಾಗ ಬೆರಳು ಕತ್ತರಿಸಲ್ಪಟ್ಟ ಸುದ್ದಿಗಳೂ ಇವೆ. ಹಾಗಾದರೆ ನಮ್ಮ ಅಜಾಗರೂಕತೆ ನಮಗೇ ಅಪಾಯ ಎಂಬ ಎಚ್ಚರಿಕೆ ಬೇಕಲ್ಲವೇ? ತಿಂದು ಅಜೀರ್ಣವಾಗಿಯೂ ಸಾಯುವುದಿದೆ. ಆಹಾರದ ಮಿತಿ, ವಿಹಾರದಲ್ಲಿ ನೀತಿ ನಮಗೆ ಬಹಳ ಮುಖ್ಯ. ಎಲ್ಲರ ದೇಹವೂ ಎಲ್ಲ ಬಗೆಯ ಆಹಾರವನ್ನು ಸ್ವೀಕರಿಸುತ್ತದೆನ್ನಲಾಗದು. ದೇಹ ಎಲ್ಲವನ್ನೂ ಸ್ವೀಕರಿಸುವುದಾದರೆ ಅದು ಅವರಿಗೆ ವರ. ದೇಹ ಸ್ವೀಕರಿಸದ ಆಹಾರ ಸೇವಿಸುವುದು ಆರೋಗ್ಯಕ್ಕೆ ಹಾನಿ. ಸಾತ್ವಿಕ ಮತ್ತು ಮಿತ ಆಹಾರವೇ ನಮ್ಮ ಬದುಕಿಗೆ ಪೂರಕವೆಂದು ಹಿರಿಯರು ಹೆಳುತ್ತಾ ಬಂದಿದ್ದಾರೆ. ಆದರೆ ಅವರ ಮಾತನ್ನು ಪಾಲಿಸುವ ಮನಸ್ಸು ಬೇಕು.
     ದೇಹ ಜೈವಿಕ. ದೇಹದ ಯಾವುದೇ ಭಾಗವನ್ನು ಖರೀದಿ ಮಾಡಿ ಜೋಡಿಸಲು ಅಸಾಧ್ಯ. ನೇತ್ರದಾನ, ಮೂತ್ರಕೋಶ ದಾನ, ರಕ್ತದಾನ ಮೊದಲಾದ ವ್ಯವಸ್ಥೆಗಳಿದ್ದರೂ ಅವೆಲ್ಲವೂ ನಿಯಮಿತವಾಗಿರುತ್ತವೆ, ಬೇಕೆಂದಾಗ ದೊರೆಯವು. ಇನ್ನು ಯಾವುದೇ ಭಾಗದ ಊನವನ್ನು ಭರ್ತಿಗೊಳಿಸುವ ಅಥವಾ ಮರುಜೋಡಿಸುವ ಮಾತು ಕಲ್ಪನೆಗೂ ನಿಲುಕುವಂತಹುದಲ್ಲ. ಅದಕ್ಕಾಗಿಯೇ ನಿಧಾನ, ಸಾವಧಾನ, ಜಾಗರೂಕತೆಗಳನ್ನು ಎಲ್ಲ ಹಂತಗಳಲ್ಲೂ, ಎಲ್ಲ ಕೆಲಸಗಳಲ್ಲೂ ಪಾಲಿಸಲೇ ಬೇಕು. “ಬಿದ್ದೆ, ಕಾಲು ಮುರಿಯಿತು.” ಎಂದು ಅತ್ತರೆ ಅದು ಶಾಶ್ವತ ಅಳುವನ್ನೇ ತರಬಹುದಲ್ಲದೆ ಪರಿಹಾರವಿಲ್ಲ. ಅದಕ್ಕಾಗಿಯೇ ದೇಹವನ್ನು ಕಾಪಾಡುವ ಗುರುತರವಾದ ಹೊಣೆ ನಮಗಿದೆ.
       ಈ ದೇಹ ಉತ್ತಮ ಕೆಲಸಗಳಿಗೆ ಮತ್ತು ಉತ್ತಮ ವಿಚಾರಗಳಿಗೆ ಮಾತ್ರ ಮೀಸಲಿರಬೇಕು. ನೋಡುವ ಕಣ್ಣು, ಆಘ್ರಾಣಿಸುವ ಮೂಗು, ತಿನ್ನುವ ನಾಲಿಗೆ, ಕೇಳುವ ಕಿವಿಗಳ ಚಪಲತೆಗಳಿಗೆ ನಮ್ಮ ಮನಸ್ಸು ದಾಸನಾಗಲೇ ಬಾರದು. ಸರಿ ಮತ್ತು ತಪ್ಪುಗಳನ್ನು ವಿಂಗಡಿಸ ಬಲ್ಲ ಶಕ್ತಿ ಎಲ್ಲರಿಗೂ ಇದೆ. ಸರಿಯಾದುದನ್ನೇ ಆಯುವ, ನುಡಿಯುವ, ಮಾಡುವ, ನೋಡುವ, ಉಣ್ಣುವ, ಆಲಿಸುವ ವ್ರತಧಾರಿಗಳಾದರೆ ದೇವರೂ ನಮ್ಮನ್ನು ಮೆಚ್ಚುತ್ತಾನೆ. 
        ದೇಶವು ನಮಗೆ ಬದುಕುವ ಹಕ್ಕನ್ನು ನೀಡಿರುವಂತೆ ಮುಂದಿನ ಪೀಳಿಗೆಗೂ ಬದುಕುವ ಅವಕಾಶವನ್ನು ನೀಡಬೇಕು. ದೇಶದ ಅಗಾಂಗಗಳನ್ನು ಕತ್ತರಿಸುವ, ವಿರೂಪಗೊಳಿಸುವ ಕೆಲಸಗಳು ನಿರಂತರ ನಡೆಯುತ್ತಿವೆ. ಇದರಿಂದ ಮುಂದಿನ ಪೀಳಿಗೆಯ ಬದುಕುವ ಅವಕಾಶವನ್ನು ಕಿತ್ತಂತಾಗುತ್ತದೆ. ಆದುದರಿಂದ ದೇಶದ ಬಗ್ಗೆಯೂ ನಮ್ಮ ಧೋರಣೆಗಳು ಸಕಾರಾತ್ಮಕವಾಗಿರಬೇಕು. ದೇಶದ ಎಲ್ಲ ಸಂಪನ್ಮೂಲಗಳ ರಕ್ಷಣೆ ಮತ್ತು ವರ್ಧನೆಯತ್ತ ನಮ್ಮ ನಿಷ್ಠೆ ಅತೀ ಅಗತ್ಯ. ನಮಸ್ಕಾರ
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 


Ads on article

Advertise in articles 1

advertising articles 2

Advertise under the article