ಜೀವನ ಸಂಭ್ರಮ : ಸಂಚಿಕೆ - 120
Monday, January 15, 2024
Edit
ಜೀವನ ಸಂಭ್ರಮ : ಸಂಚಿಕೆ - 120
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಈ ಎರಡು ಘಟನೆ ಓದಿ. ಮೊದಲನೆಯದು ಕೋಗಿಲೆ ಮತ್ತು ವ್ಯಾಪಾರಿಯ ಸಂವಾದ. ಒಂದು ಕೋಗಿಲೆ ಇತ್ತು. ಅದು ಬೆಳಗ್ಗೆಯಿಂದ ಸಂಜೆಯವರೆಗೆ ಹಾಡುತ್ತಾ ಇತ್ತು. ಇದನ್ನು ಒಬ್ಬ ವ್ಯಾಪಾರಿ ನೋಡಿದ. "ಬೆಳಿಗ್ಗೆಯಿಂದ ಸಂಜೆಯವರೆಗೆ ಹಾಡುತ್ತೀಯಲ್ಲ ಏನು ಲಾಭ?" ಎಂದು ಕೇಳಿದ. ಈತ ಏನೇ ಮಾಡಿದರೂ ಲಾಭ ಏನು...? ಎನ್ನುತ್ತಿದ್ದನು. ಪ್ರತಿದಿನ ವ್ಯಾಪಾರದಲ್ಲಿ ಗಳಿಸುತ್ತಿದ್ದನು, ಖರ್ಚು ಮಾಡುತ್ತಿದ್ದನು, ಲಾಭ ಮಾಡುತ್ತಿದ್ದನು. ಹಾಗಾಗಿ ಆತನಿಗೆ ಉಳಿಸಿದ್ದೆ ಲಾಭವಾಗಿತ್ತು. ಕೋಗಿಲೆ ಹೇಳಿತು, "ನಿನಗೆ ಲಾಭ ಗೊತ್ತಿಲ್ಲ. ನಾನು ನನ್ನ ಸಂತೋಷಕ್ಕಾಗಿ ಹಾಡುತ್ತೇನೆ. ಬೇರೆಯವರಿಗಾಗಿ ಅಲ್ಲ. ಹಾಡಿ ಹಾಡಿ ನನ್ನ ಮನಸ್ಸನ್ನು ಸಂತೋಷದಿಂದ ತುಂಬಿದ್ದೇನೆ. ನಿನ್ನದೇನು ಲಾಭ..?" ಅಂದಿತು. "ದಿನ ದಿನ ಅಳಿಯೋದು, ಗಳಿಸುವುದು, ಉಳಿಸುವುದು. ಉಳಿಸಿದ್ದು ದೊಡ್ಡದಾಗಿ ಬೆಳೆದಿದೆ. ನೀನು ಚಿಕ್ಕವನಾದೆ. ನಿನ್ನದೇನು ಲಾಭ. ಜಗತ್ತಿನಲ್ಲಿ ಸಂತೋಷ ದಂತಹ ಲಾಭ ಎಲ್ಲಿದೆ?. ಸಂತೋಷವೇ ಲಾಭ ಆದ ಬಳಿಕ ಬೇರೆ ಲಾಭ ತೆಗೆದುಕೊಂಡು ಏನು ಮಾಡೋದು?" ಎಂದಿತು. "ಜಗತ್ತಿನಲ್ಲಿ ನಾವು ಪಡೆಯಬೇಕಾದದ್ದು ಪರ ವಸ್ತುವನಲ್ಲ, ಒಳಗಿನ ಸಂತೋಷವನ್ನು ಎಂದಿತು."
ಎರಡನೇ ಘಟನೆ.... ಮಂಗಳೂರಿನಲ್ಲಿ ಒಬ್ಬ ಗೆಳೆಯನಿದ್ದನು. ಆತ ಅಧಿಕಾರಿಯಾಗಿದ್ದ. ಆತನಿಗೆ ಒಬ್ಬ ಚಿಕ್ಕ ಮಗು ಇತ್ತು. ಹಳ್ಳಿಯಿಂದ ಒಬ್ಬ ಹಿರಿಯರು ಬಂದರು. ಬರುವಾಗ ಮಗುವಿಗಾಗಿ ಎರಡು ಚಾಕಲೇಟ್ ತಂದಿದ್ದರು. ಆ ಚಾಕ್ಲೆಟ್ ಮಂಗಳೂರಿನಲ್ಲಿ ತಯಾರಿಸಿದ್ದಾಗಿತ್ತು. ಅದನ್ನು ಕೊಡುತ್ತಲೇ ಮಗು ಸಂತೋಷದಿಂದ ಸ್ವೀಕರಿಸಿತು. ತಂದೆ ಆ ಚಾಕಲೇಟ್ ನೋಡುತ್ತಲೇ ಛೇ ಇದೆಂತ ಚಾಕಲೇಟ್...? ಇದು ಮಂಗಳೂರಿನಲ್ಲಿ ತಯಾರಿಸಿದ್ದು. ಇದು ಬೇರೆ ದೇಶದಲ್ಲ. ಇದು ಕನಿಷ್ಠ ಬೆಲೆಯದ್ದು, ಎಂದು ಲೆಕ್ಕ ಹಾಕುತ್ತಾ, ಹೋಲಿಸುತ್ತಾ, ಬೈಯುತ್ತಾ ಕುಳಿತನು. ಮಗು ಮಾತ್ರ ಸಂತೋಷದಿಂದ ತಿನ್ನುತ್ತಿತ್ತು. ಆತ ಕೈಯಲ್ಲಿ ಚಾಕ್ಲೇಟ್ ಹಿಡಿದು ವಿದೇಶದ ಚಾಕಲೇಟ್ ನೆನೆಸಿಕೊಳ್ಳುತ್ತಿದ್ದಾನೆ. ಆತನ ಕೈಯಲ್ಲಿದ್ದ ಚಾಕಲೇಟ್ ಹೇಳಿತು, "ಈತನ ಕೈಗಿಂತ ಮಗುವಿನ ಕೈಯಲ್ಲಿ ಇದ್ದರೆ ಚೆನ್ನಾಗಿತ್ತು" ಎಂದು.
ನಮ್ಮೆಲ್ಲರ ಪರಿಸ್ಥಿತಿ ಹಾಗೆ ಇದೆ. ಏನು ತಿನ್ನುತ್ತೀರಿ? ಮಹತ್ವದಲ್ಲ. ಎಷ್ಟು ತಿನ್ನುತ್ತೇವೆ..? ಮಹತ್ವದಲ್ಲ... ಎಷ್ಟು ಸಂತೋಷ ಪಡುತ್ತೇವೆ...? ಅದು ಮಹತ್ವದ್ದು. ಸಂತೋಷದ ಅಂಶ ಮಹತ್ವದ್ದು. ನಾವು ಜಗತ್ತಿಗೆ ಬಂದಿದ್ದು ಜೀವನವನ್ನು ಸಂಭ್ರಮಿಸಲು.
ಮಲಗಿದರೆ ನಷ್ಟವಾಯಿತು ಎಂದ ಒಬ್ಬ. ನಿದ್ರೆ ಹೇಳಿತು, "ಬಾ ನಿನಗೆ ಬುದ್ಧಿ ಕಲಿಸುತ್ತೇನೆ" ಎಂದು. ನಾಲ್ಕು ದಿನ ನಿದ್ರೆ ಬರಲಿಲ್ಲ. ನಿದ್ರೆ ಬರುತ್ತಿಲ್ಲ ಎಂದು ವೈದ್ಯರ ಬಳಿ ಹೋದನು. ವೈದ್ಯರು ಹೇಳಿದರು. "ನಿದ್ರೆ ತರಬೇಕಾದರೆ 50,000 ಬೇಕು" ಎಂದರು. ಏಳು ಸಾವಿರ ಉಳಿಸಲು ಹೋಗಿ 50,000 ಕಳೆದುಕೊಂಡನು. ಎಲ್ಲಾ ಮಾಡುವುದು ಏತಕ್ಕೆ?. ಗಳಿಸುವುದು ಏತಕ್ಕೆ?. ವಸ್ತು ಪಡೆಯುವುದು ಏತಕ್ಕೆ?. ದುಡಿಯುವುದು ಏತಕ್ಕೆ?. ಮನೆ ಕಟ್ಟುವುದು ಏತಕ್ಕೆ?. ಮನೆ ಕಟ್ಟಿ ಅದಕ್ಕೆ ಅಷ್ಟಾಯ್ತು ಇಷ್ಟಾಯಿತು ಅಂತ ಲೆಕ್ಕ ಹೇಳುವುದಕ್ಕೆ ಏನು?. ಆನಂದವಾಗಿ ಮಲಗಬೇಕು. ಆನಂದವಾಗಿ ಕೂರಬೇಕು. ಅದು ಬಿಟ್ಟು ಏನು ಲಾಭ ಅಂದ್ರೆ....!! ಜೀವನವನ್ನು ತಕ್ಕಡಿ ಹಿಡಿದು ತೂಗಬಾರದು. ಜೀವನದ ತುಂಬಾ ಸುಂದರ ಕೆಲಸ ಮಾಡಿಕೊಳ್ಳುತ್ತಾ ಇರಬೇಕು. ಯಾವ ಕೆಲಸ ಸಂತೋಷಕ್ಕೆ ಕಾರಣವಾಗುತ್ತದೆಯೋ, ಸಂತೋಷ ಕೊಡುತ್ತದೆಯೋ, ಅಂತಹ ಕೆಲಸ ಮಾಡಿಕೊಳ್ಳುತ್ತಾ ಇರಬೇಕು. ಹೇಗೆ ಮಾಡಬೇಕೆಂದರೆ, ಸಂತೋಷಕ್ಕಾಗಿ ಮಾಡಬೇಕು. ಸಂತೋಷದಿಂದ ಮಾಡಬೇಕು. ಸಂತೋಷಕ್ಕಾಗಿ ಮಾಡುವ ಕೆಲಸ ಜೀವನ ಕಟ್ಟುತ್ತದೆ. ಅಲ್ಲವೇ ಮಕ್ಕಳೆ....
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*******************************************