-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 11

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 11

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 11
ಲೇಖಕರು : ದಿವಾಕರ ಶೆಟ್ಟಿ ಎಚ್
ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203

                 
ಪ್ರೀತಿಯ ಮಕ್ಕಳೇ.... ನಕ್ಷತ್ರಗಳ ಹುಟ್ಟನ್ನು ಈಗಾಗಲೇ 9ನೇ ಸಂಚಿಕೆಯಲ್ಲಿ ತಿಳಿದುಕೊಂಡಿದ್ದೇವೆ. ನಮ್ಮ ಸೂರ್ಯನೂ ಒಂದು ನಕ್ಷತ್ರವೇ. ಈ ನಕ್ಷತ್ರಗಳ ಹೊಟ್ಟೆ ಒಂದು ಕುದಿ ಪಾತ್ರೆ ಇದ್ದ ಹಾಗೆ. ಕ್ಷಣ ಕ್ಷಣವೂ ಅಸ್ಥಿರವಾದದ್ದು. ಒಳಗೆ ಬೈಜಿಕ ಪ್ರಕ್ರಿಯೆಯಿಂದ ಅಪಾರ ಶಾಖ ಬಿಡುಗಡೆಯಿಂದ ಹಿಗ್ಗುತ್ತಿದ್ದರೆ ಗುರುತ್ವಾಕರ್ಷಣ ಬಲದಿಂದ ಕುಗ್ಗುತ್ತಿರುತ್ತದೆ. ಈ ಅಸ್ಥಿರತೆಯಿಂದಾಗಿ ತನ್ನಲ್ಲಿನ ಒಂದಷ್ಟು ಕುದಿಯುವ ಉಂಡೆಗಳನ್ನು ಹೊರ ಹಾಕಿದ ನಮ್ಮ ಸೂರ್ಯ. ಅವುಗಳು ಮರಳಿ ಹಿಂದಿರುಗಲಾರದಷ್ಟು ದೂರ ಹೋಗಿ ಬಿದ್ದವು. ಆದರೆ ದೊಡ್ಡಣ್ಣ ದೂರದ ಆಕರ್ಷಣೆ ಹೊಂದಿದ್ದರಿಂದ ಅವು ತನ್ನ ಸುತ್ತ ಸುತ್ತುವಂತೆ ಮಾಡಿದ. ಸೂರ್ಯನುಗುಳಿದ ಉಂಡೆಗಳಿಗೂ ದ್ರವ್ಯರಾಶಿ ಇತ್ತು. ಆದ್ದರಿಂದ ಅವಕ್ಕೋ ಗುರುತ್ವವಿತ್ತು. ಆ ಕಾರಣದಿಂದ ಅವು ಸುತ್ತಲಿನ ಧೂಳು, ಉಲ್ಕೆಗಳು ಇತರ ಸಣ್ಣ ಕಾಯಗಳನ್ನು ತಮ್ಮ ಕಡೆಗೆ ಸೆಳೆದುಕೊಂಡು ಬೆಳೆಯತ್ತಿದ್ದವು. ಇವುಗಳೇ ಗ್ರಹಗಳು. ಇವುಗಳಲ್ಲಿ ಮೂರನೆಯದ್ದೇ ಭೂಮಿ. ಈ ಗ್ರಹಗಳ ಗಾತ್ರ ಚಿಕ್ಕದಾದುದರಿಂದ ಇವುಗಳ ಕೇಂದ್ರದ ಕಡೆಗೆ ಕುಗ್ಗುವ ಬಲ ಕಡಿಮೆಯಾಯಿತು. ಇದರಿಂದ ಬೈಜಿಕ ಕ್ರಿಯೆ ನಿಂತು ಹೋಗಿ ಕಾಯ ತಣ್ಣಗಾಗ ಬೇಕಾಯಿತು. 

ಆದರೆ ಭೂಮಿ ಕುದಿಯುವ ದ್ರವವಾದ ಲಾವಾದ ಹಂತದಲ್ಲಿರುವಾಗಲೇ ಮಂಗಳನಿಗೆ ಕಡಿಮೆ ಇಲ್ಲದ ಗಾತ್ರದ ಕಾಯವೊಂದು ಬಂದು ಢಿಕ್ಕಿ ಹೊಡೆದಾಗ ಈ ಭೂಮಿಯ ಒಂದು ದೊಡ್ಡ ಚೂರು ಬೇರೆಯಾಗಿ ತನ್ನ ತಾಯಿ ಕಾಯದ ಸುತ್ತತೊಡಗಿತು‌. ಇದು ಚಂದ್ರ. ರಾಗಿ ಮುದ್ದೆಯೋ, ಬೋಂಡಾವೋ ತಣ್ಣಗಾಗುವಾಗ ಮೊದಲು ತಣ್ಣಗಾಗುವುದು ಹೊರ ಭಾಗ. ಆದರೆ ಒಳಭಾಗ ಇನ್ನೂ ಬಿಸಿಯಾಗಿಯೇ ಇರುತ್ತದೆ. ಈ ಕುದಿಯವ ಲಾವಾದಿಂದ ಮಿಥೇನ್, ಇಂಗಾಲದ ಡೈಆಕ್ಸೈಡ್, ಸಾರಜನಕದಂತಹ ಅನಿಲಗಳು ತಪ್ಪಿಸಿಕೊಂಡು ಹೊರಬಂದವು. ಆದರೆ ಅವುಗಳಿಗೆ ಭೂ ಗುರುತ್ವದಿಂದ ತಪ್ಪಿಸಿಕೊಂಡು ಹೋಗಲಾಗದೇ ಇದ್ದುದರಿಂದ ವಾತಾವರಣ ರೂಪಗೊಂಡಿತು. ಆರಂಭಿಕ ವಾತಾವರಣ ಈಗ ಮಂಗಳ, ಶುಕ್ರ ಮತ್ತು ಮತ್ತು ಇತರ ಗ್ರಹಗಳ ವಾತಾವರಣದ ಹಾಗೆ ಇತ್ತು. ಆದರೆ ಈಗಿರುವ ವಾತಾವರಣ ಹೇಗೆ ಬಂತು ಎಂಬುದೇ ಜಿಜ್ಞಾಸೆ.

ಪೌಲೋ ಸೂಸಿಯವರ ಪ್ರಕಾರ 4.5 ಬಿಲಿಯನ್ ವರ್ಷಗಳ ಹಿಂದೆ ಭೂಗ್ರಹ ಅಸ್ತಿತ್ವಕ್ಕೆ ಬಂದಾಗ ಭೂ ವಾತಾವರಣದಲ್ಲಿ 97% ಇಂಗಾಲದ ಡೈಆಕ್ಸೈಡ್ ಮತ್ತು 3% ಸಾರಜನಕ ಇತ್ತು. ಹೆಚ್ಚೂ ಕಡಿಮೆ ಇಂದಿನ ಶುಕ್ರ ಮತ್ತು ಮಂಗಳನ ವಾತಾವರಣದ ಹಾಗೆ ಎಂದು ನಂಬಲಾಗಿತ್ತು. ಆದರೆ ಚಿಕಾಗೋ ವಿಶ್ವವಿದ್ಯಾಲಯದ ಯೂರೇ ಮಿಲ್ಲರ್ ಹಿಂದಿನ ಭೂ ವಾತಾವರಣದ ಮರು ಸೃಷ್ಟಿ ಮಾಡಿ ಪ್ರೋಟೀನ್‌ ನ ಮೂಲಕಣಗಳಾದ ಅಮಿನೋ ಆಮ್ಲಗಳನ್ನು ಪಡೆದ. ಅಮಿನೋ ಆಮ್ಲ ಉತ್ಪತ್ತಿಯಾಗಲು ನೀರು, ಮಿಥೇನ್ ಮತ್ತು ಅಮೋನಿಯಾಗಳು ಅಗತ್ಯವೇ ಹೊರತು ಇಂಗಾಲದ ಡೈಆಕ್ಸೈಡ್ ಮತ್ತು ಸಾರಜನಕ ವಾತಾವರಣದಲ್ಲಿ ಈ ಪ್ರೋಟೀನ್ ತಯಾರಿ ಸಾಧ್ಯವಿಲ್ಲ ಎಂದು ಸೂಸಿ ಹೇಳುತ್ತಾರೆ.

ಭೂಮಿಯ ಮೇಲಿದ್ದ ದ್ರವ ರೂಪದ ನೀರು ಈ ರೀತಿಯ ಭಿನ್ನ ವಾತಾವರಣ ನಿರ್ಮಾಣಕ್ಕೆ ಕಾರಣವಾಯಿತು ಎನ್ನುತ್ತಾರೆ ಪೌಲೋ ಸೂಸಿ. ನಮ್ಮ ನೆರೆಯ ಆಕಾಶಕಾಯಗಳಾದ ಮಂಗಳ ಮತ್ತು ಶುಕ್ರಗಳಲ್ಲಿ ಇಲ್ಲದ ದ್ರವ ರೂಪದ ನೀರಿಗೆ ಕಾರಣ ಭೂಮಿಯ ಗಾತ್ರ ಮತ್ತು ಅದರ ಸ್ಥಾನಗಳೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಭೂಮಿಯ ಗಾತ್ರದ ಕಾರಣದಿಂದ ಸಾಂದ್ರವಾದ ವಾತಾವರಣವಿದೆ. ಶುಕ್ರನ ಮೇಲಿನ ಅತಿ ಉಷ್ಣತೆಯಿಂದ ನೀರು ಆವಿಯಾಗಿದ್ದರೆ ಮಂಗಳನಲ್ಲಿ ಅದು ಮಂಜಿನ ರೂಪದಲ್ಲಿದೆ. ಭೂಮಿಯು ಸೂರ್ಯನಿಂದ ಸರಿಯಾದ ದೂರದಲ್ಲಿರುವುದರಿಂದ ನೀರು ದ್ರವರೂಪದಲ್ಲಿದೆ. ಈ ದ್ರವ ರೂಪದ ನೀರು ನಿರ್ಜೀವ ಭೂಮಿಯನ್ನು ಜೀವ ಗ್ರಹವಾಗಿ ಬದಲಾಯಿಸಿತು ಎಂದರೆ ನಂಬಲೇಬೇಕು. ಈಗಲಾದರೂ ಗೊತ್ತಾಯಿತೇ ನಮ್ಮ ಹಿರಿಯರು ನೀರಿಗೆ ಏಕೆ ದೈವತ್ವ ಆರೋಪಿಸಿದರೆಂದು?

ಮುಂದಿನ ವಾರ ಜೀವಿಗಳ ಉಗಮದ ಬಗ್ಗೆ ತಿಳಿಯೋಣ, ನಮಸ್ಕಾರ....
.................................... ದಿವಾಕರ ಶೆಟ್ಟಿ ಎಚ್
ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 


Ads on article

Advertise in articles 1

advertising articles 2

Advertise under the article