ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 42
Friday, January 12, 2024
Edit
ಲೇಖಕರು : ಸುಶೀಲ ವಿಟ್ಲ
ಮುಖ್ಯ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 97411 31138
ನಾನು ಒಮ್ಮೊಮ್ಮೆ ಹೇಳುವುದಿದೆ… ಐದನೇ ವಯಸ್ಸಿನಲ್ಲಿ ಶಾಲೆಗೆ ಹೋಗಲು ಶುರು ಮಾಡಿದವಳು ಈಗಲೂ ಹೋಗುತ್ತಿದ್ದೇನೆ ಅಂತ….. ಆಗ ಶಾಲಾ ವಿದ್ಯಾರ್ಥಿನಿಯಾಗಿ ಕಲಿಯಲು ಹೋದದ್ದಾಯಿತು.. ಈಗ ಶಿಕ್ಷಕಿಯಾಗಿ ಕಲಿಯುವವರಿಗೆ ಅನುಕೂಲಿಸಲು…. ಆಗಿಂದ ಈಗಿನವರೆಗೂ ಆಲೋಚನೆ ಮಾಡುತ್ತಾ ಸಾಗಿದರೆ ಪ್ರತೀ ದಿನವೂ ಒಂದೊಂದು ಹೊಸ
ಅನುಭವ…
ಮೇ ಜೂನ್ ತಿಂಗಳಿನಲ್ಲಿ ಎಲ್ಲೆಲ್ಲಿಂದಲೋ ಬಂದು ನಮ್ಮ ಶಾಲೆಗೆ ದಾಖಲಾಗುವ ಮಕ್ಕಳು ಕೆಲವೇ ಸಮಯದಲ್ಲಿ ಸ್ನೇಹಿತರಾಗಿಬಿಡುತ್ತಾರೆ. ಶಾಲೆಯ ಪ್ರತೀ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಅಲ್ಲಿ ಯಾವುದೇ ಕಲ್ಮಶ ಇರುವುದಿಲ್ಲ. ತಾನೇ ಬಹುಮಾನ ಪಡೆಯಬೇಕು ಅಂತ ಇದ್ದರೂ ಸ್ನೇಹಿತರಿಗಾಗಿ ತ್ಯಾಗ ಕೂಡ ಕಂಡುಬರುತ್ತದೆ. ಒಂದು ಬಾರಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ತನ್ನ ಶೂ ಲೇಸ್ ಬಿಚ್ಚಿಕೊಂಡಿದ್ದರಿಂದ ತನ್ನ ಸ್ನೇಹಿತ ಮುಂದೆ ಓಡಿ ಪ್ರಥಮ ಸ್ಥಾನ ಪಡೆಯುವಂತೆ ಮಾಡಿದ ಒಬ್ಬ ಬಾಲಕ ಈಗಲೂ ನನ್ನ ಕಣ್ಣ ಮುಂದೆ ಆದರ್ಶಪ್ರಾಯವಾಗಿ ನಿಂತಿದ್ದಾನೆ. ಏನೇನೋ ಚಟುವಟಿಕೆಗಳನ್ನೆಲ್ಲಾ ಮುಗಿಸಿ ಜನವರಿ ಬಂತೆಂದರೆ ಪರೀಕ್ಷೆಯ ಒತ್ತಡ. ಹತ್ತನೇ ತರಗತಿಯವರಿಗಂತೂ ಶಾಲಾ ಮಟ್ಟ, ತಾಲೂಕು, ಜಿಲ್ಲೆ, ರಾಜ್ಯ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಗಳು, ಪಬ್ಲಿಕ್ ಪರೀಕ್ಷೆ ಹೀಗೆ ಸರಣಿ ಪರೀಕ್ಷೆಗಳು. ಪ್ರತಿಭಾ ಕಾರಂಜಿ, ಕ್ರೀಡಾಕೂಟ, ವಾರ್ಷಿಕೋತ್ಸವ, ಶಾಲಾ ಪ್ರವಾಸ ಹೀಗೆ ಒಟ್ಟು ಚಟುವಟಿಕೆಯಲ್ಲಿ ಮಗ್ನರಾಗಿದ್ದ ಮಕ್ಕಳು ಇದರ ನಡುವೆಯೂ ಕಲಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಜನವರಿ ತಿಂಗಳ ನಂತರ ಕೊಂಚ ಜವಾಬ್ದಾರಿಯಿಂದ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವಾಗ ಮನಸ್ಸಿಗೆ ಖುಷಿಯಾಗುತ್ತದೆ.
ಕಳೆದ ವರ್ಷ ಒಬ್ಬ ಹುಡುಗ ಮೊದಲ ಪೂರ್ವ ಸಿದ್ಧತೆಯ ಪರೀಕ್ಷಾ ನಂತರ ಶಾಲೆಗೆ ಬರುವುದನ್ನು ನಿಲ್ಲಿಸಿಬಿಟ್ಟ. ಕಾರಣ ಮೊಬೈಲ್… ಪರೀಕ್ಷೆಗೆ ಓದುವುದಾದರೆ ಮೊಬೈಲ್ ಬಳಸಲು ಆಗುವುದಿಲ್ವಲ್ಲಾ ಅದಕ್ಕೆ… "ಛೆ.. ಬುದ್ಧಿವಂತ ಹುಡುಗ.. ಪರೀಕ್ಷೆಗೆ ಬಂದರೆ ಪಾಸಾಗುವವ.." ಹೀಗೆಲ್ಲಾ ಶಿಕ್ಷಕರು ಮಾತನಾಡುತ್ತಿದ್ದರು. ಅವನನ್ನು ಮನ ಒಲಿಸಿ ಶಾಲೆಗೆ ಕರೆತರುವ ಎಲ್ಲಾ ಪ್ರಯತ್ನಗಳೂ ನಡೆದವು. ಮನೆಗೆ ಭೇಟಿ ಕೊಟ್ಟಾಗ ಸುದ್ದಿ ತಿಳಿದ ಹುಡುಗ ಹಿಂದಿನ ಬಾಗಿಲಿನಿಂದ ಎಸ್ಕೇಪ್…!! ಒಂದು ಸಲ ಅಲ್ಲ.. ತುಂಬಾ ಸಲ ಹೀಗೇ ಮುಂದುವರೆಯಿತು...!! ಮಾಡಿದ ಪ್ರಯತ್ನಗಳೆಲ್ಲಾ ವಿಫಲವಾಗಿ ಅವನು ಶಾಲೆಗೆ ಬರುವುದೇ ಇಲ್ಲ ಅಂತ ಅಂದುಕೊಳ್ಳುತ್ತಿರುವಾಗ ಆತನ ಮಾವನ ಫೋನ್ ನಂಬರ್ ಸಂಪಾದಿಸಿ ಆ ಹುಡುಗನ ಬಗ್ಗೆ ಎಲ್ಲಾ ತಿಳಿಸಿ ಅವನನ್ನು ಹೇಗಾದ್ರೂ ಶಾಲೆಗೆ ಬರುವ ಹಾಗೆ ಮಾಡಿ ಅಂತ ಕೇಳಿಕೊಂಡದ್ದಾಯಿತು. ಹೀಗೆ ಒಂದು ದಿನ ಆಶ್ಚರ್ಯ...!! ಆತನನ್ನು ಬೈಕ್ ನಲ್ಲಿ ಕುಳ್ಳಿರಿಸಿ ಹೇಗೋ ಶಾಲೆಗೆ ಕರೆತಂದರು ಆತನ ಮಾವ. ಪರಿಣಾಮ ಪಬ್ಲಿಕ್ ಪರೀಕ್ಷೆಯಲ್ಲಿ ಪಾಸ್....! ಆ ವಿಶೇಷ ಪ್ರಯತ್ನದಲ್ಲಿ ಅವನಿಂದ ಹೆಚ್ಚಾಗಿ ನಾವು ಶಿಕ್ಷಕರಾಗಿ ಖುಷಿ ಪಟ್ಟಿದ್ದಂತೂ ನಿಜ..!
ಇದರ ಜೊತೆಗೆ ಸುಮಾರು 15 ವರ್ಷಗಳ ಹಿಂದಿನ ಘಟನೆ. ಒಬ್ಬ ವಿದ್ಯಾರ್ಥಿಯ ಇದೇ ರೀತಿಯ ವರ್ತನೆ ನನಗೆ ನೆನಪಾಗುತ್ತಿದೆ. ಆಗ ಪ್ರೌಢಶಾಲೆಗಳು ತುಂಬಾ ದೂರ ದೂರದಲ್ಲಿದ್ದವು. ಮಕ್ಕಳು ತುಂಬಾ ದೂರದಿಂದ ನಡೆದುಕೊಂಡು ಬರುತ್ತಿದ್ದರು. ಈಗಿನ ಹಾಗೆ ಶಾಲೆಗೆ ಬರದಿದ್ದರೆ ಶಾಲೆಯಿಂದ ಹೊರಗುಳಿದ ಮಗು ಎನ್ನುವ ತಲೆಬರಹ ಈಗಿನಷ್ಟು ಗಂಭೀರವಾಗಿರಲಿಲ್ಲ. ಆ ಕಾಲದಲ್ಲಿ ಮೊಬೈಲ್ ಕೂಡಾ ಇಷ್ಟು ಪಾಪ್ಯುಲರ್ ಆಗಿರಲಿಲ್ಲ. ಆಗ 10ನೇ ತರಗತಿಯಲ್ಲಿ ಕಲಿಯುತ್ತಿದ್ದ ಒಬ್ಬ ಹುಡುಗ ಇದ್ದಕ್ಕಿದ್ದ ಹಾಗೆ ಶಾಲೆಗೆ ಬರುವುದನ್ನು ನಿಲ್ಲಿಸಿದ. ಬೇರೆ ಮಕ್ಕಳಲ್ಲಿ ವಿಚಾರಿಸಿದಾಗ ಅವನಿಗೆ ಹುಷಾರಿಲ್ಲ ಎನ್ನುವ ಉತ್ತರ ತಿಳಿದು ಬಂತು. ಏನಾಗಿದೆ ಎಂದು ವಿಚಾರಿಸಿದಾಗ, ನಿಖರವಾದ ಕಾರಣ ತಿಳಿಯಲಿಲ್ಲ. ಆದರೆ ಅವನು ಮಲಗಿದಲ್ಲೇ ಇದ್ದಾನೆ ಅವನಿಗೆ ಕುಳಿತುಕೊಳ್ಳಲೂ ಆಗುವುದಿಲ್ಲ ಅಂತ ಗೊತ್ತಾದಾಗ, "ಛೆ ಅಷ್ಟು ಚೆನ್ನಾಗಿದ್ದ ಹುಡುಗನಿಗೆ ಇದ್ದಕ್ಕಿದ್ದ ಹಾಗೆ ಏನಾಯಿತು" ಅಂತ ನಾವೆಲ್ಲಾ ಬೇಸರ ವ್ಯಕ್ತ ಪಡಿಸಿದೆವು. ಮಲಗಿದಲ್ಲೇ ಇದ್ದಾನೆ ಒಮ್ಮೆ ನೋಡಿ ಬರೋಣ ಅಂತ .... ತುಂಬಾ ದೂರದ ಗದ್ದೆಯ ದಾರಿಯಲ್ಲಿ ನಡೆದುಕೊಂಡು ಅವನ ಮನೆಗೆ ಭೇಟಿ ನೀಡಿದ್ದು ಈಗಲೂ ನೆನಪಿದೆ. ನಾವು ಹೋದಾಗಲೂ ಅವನು ಮಲಗಿದಲ್ಲೇ ಇದ್ದ. ವಿಚಾರಿಸಿದಾಗ ಅವನಿಗೆ ಯಾವ ಕಾರಣಕ್ಕೆ ಹುಷಾರಿಲ್ಲ ಅಂತ ಅವನ ಮನೆಯವರಿಗೂ ಗೊತ್ತಿಲ್ಲ...!! ಒಟ್ಟಿನಲ್ಲಿ ಅವನು ಮಲಗಿದಲ್ಲಿಂದ ಏಳುತ್ತಿಲ್ಲ. ನಾವೆಲ್ಲಾ ಅವನು ಬೇಗ ಗುಣಮುಖವಾಗಲಿ ಅಂತ ಮನೆಯವರಿಗ ಸಮಾಧಾನ ಮಾಡಿ ಬಂದೆವು. "ಅವನಿಗೆ ಪರೀಕ್ಷೆಯ ಭಯ….. ಎಕ್ಸಾಮ್ ಫೋಬಿಯಾ… ಇದರಿಂದ ಅವನು ಈ ತರ ವರ್ತಿಸುತ್ತಿದ್ದ..." ಮನೆಯವರಿಗೆ ಏನು ಕಾಯಿಲೆ ಅಂತ ಗೊತ್ತಿಲ್ಲ. ಹೇಗೆ ಗೊತ್ತಾಗುತ್ತದೆ...? ಕಾಯಿಲೆ ಇದ್ದರೆ ತಾನೇ…? ಆ ವರ್ಷದ ಪರೀಕ್ಷೆ ಮುಗಿದ ತಕ್ಷಣ ಮಹೇಶ ಸೌಖ್ಯವಾಗಿದ್ದಾನೆ ಅನ್ನುವ ವಿಚಾರ ತಿಳಿದು ಸಮಾಧಾನವಾಯಿತು. ಅವನು ಒಂದು ದಿನ ನಮ್ಮ ಮನೆಗೆ ಯಾವುದೋ ಕೆಲಸದ ಮೇಲೆ ಭೇಟಿ ನೀಡಿದ್ದ. ಎಷ್ಟು ವಿಚಿತ್ರ ಅಲ್ವಾ? ಮಕ್ಕಳ ಮನಸ್ಸು …!! ದೊಡ್ಡವರದ್ದು ಕೂಡಾ….!!
ಮಕ್ಕಳೇ ಯಾವುದೇ ವಿಷಯದಲ್ಲಿ ಭಯ ಪಟ್ಟರೆ ಆಗಲ್ಲ. ಮೊದಲಿನಿಂದಲೇ ಸೂಕ್ತ ಸಿದ್ದತೆ ಮಾಡಿಕೊಂಡು ಪರೀಕ್ಷೆಯನ್ನಂತೂ ಹಬ್ಬದಂತೆ ಸಂಭ್ರಮಿಸಬೇಕು. ಪರೀಕ್ಷೆ ಜೀವನದ ಪ್ರತೀ ಸಂದರ್ಭದಲ್ಲೂ ಬೇರೆ ಬೇರೆ ರೀತಿಯಲ್ಲಿ ಎದುರಾಗುತ್ತಿರುತ್ತದೆ. ಎಲ್ಲರೂ ಪರೀಕ್ಷೆಗೆ ಚೆನ್ನಾಗಿ ಸಿದ್ದತೆ ಮಾಡಿಕೊಳ್ಳಿ ಆಯ್ತಾ?...
ಮುಖ್ಯ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 97411 31138
*******************************************