-->
ಸಚಿತ್ರ ವರದಿ : ಚಿತ್ರಸಂತೆ ಸಂಭ್ರಮ - ಬಣ್ಣದ ಲೋಕದ ಮೆರುಗು

ಸಚಿತ್ರ ವರದಿ : ಚಿತ್ರಸಂತೆ ಸಂಭ್ರಮ - ಬಣ್ಣದ ಲೋಕದ ಮೆರುಗು

ಸಚಿತ್ರ ವರದಿ : ಚಿತ್ರಸಂತೆ ಸಂಭ್ರಮ - ಬಣ್ಣದ ಲೋಕದ ಮೆರುಗು
ಬರಹ : ಪ್ರತೀಕ್ಷಾ ಮರಕಿಣಿ 
ದ್ವಿತೀಯ ವರ್ಷದ ಬಿ ವಿ ಎ (ಅಪ್ಲಯ್ಡ್ ಆರ್ಟ್ಸ್)
ಕಾಲೇಜ್ ಆಫ್ ಫೈನಾರ್ಟ್ಸ್
ಕರ್ನಾಟಕ ಚಿತ್ರಕಲಾ ಪರಿಷತ್, ಬೆಂಗಳೂರು


ಬಣ್ಣಗಳ ಚಿತ್ತಾರ ಲೋಕ... 
ವೈವಿಧ್ಯಮಯ ಬಣ್ಣದ ಜಗತ್ತು...
100 ರೂ. ಗಳಿಂದ ಬರೋಬ್ಬರಿ 15 ಲಕ್ಷದವರೆಗೂ ಬೆಲೆಯುಳ್ಳ ವರ್ಣ ಚಿತ್ರಗಳು..... 
ಅದರ ಮಧ್ಯೆ ಚಿತ್ರಕಲಾ ವಿದ್ಯಾರ್ಥಿಗಳಿಂದ ಚಂದ್ರಯಾನ ಯಶಸ್ಸಿನ ಅನಾವರಣ... 
ಲಕ್ಷಾಂತರ ಚಿತ್ರ ಪ್ರೇಮಿಗಳು....!! 
       ಇದು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ 21ನೇ ಚಿತ್ರಸಂತೆಯಲ್ಲಿ ಕಂಡುಬಂದ ದೃಶ್ಯ ಕಾವ್ಯ.... 

21ನೇ ಚಿತ್ರಸಂತೆಯನ್ನು ಭಾರತೀಯ ವಿಜ್ಞಾನಿಗಳಿಗೆ ಸಮರ್ಪಣೆ ಮಾಡಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಜನವರಿ 7ರ ಭಾನುವಾರದಂದು ಉದ್ಘಾಟಿಸಿದರು. ಪರಿಷತ್ತಿನ ಆವರಣದಲ್ಲಿ ಚಿತ್ರಕಲಾ ವಿದ್ಯಾರ್ಥಿಗಳೇ ರೂಪಿಸಿದ್ದ ಚಂದ್ರಯಾನದ ಪ್ರತಿಕೃತಿ ಜನರನ್ನು ಸ್ವಾಗತಿಸುತ್ತಿತ್ತು. ರಸ್ತೆ ಉದ್ದಕ್ಕೂ ಎಲ್ಲಿ ನೋಡಿದರಲ್ಲಿ ಕಲಾಕೃತಿಗಳು ಹಾಗೂ ಕಲಾಸಕ್ತರ ದಂಡು. ಸುಮಾರು 5 ಲಕ್ಷ ಕಲಾಸಕ್ತರು ಸೇರಿರುವ ಅಂದಾಜು. ಈ ಬಾರಿ 22 ರಾಜ್ಯಗಳಿಂದ 1500 ಕಲಾವಿದರು ಭಾಗವಹಿಸಿರುವುದು ವಿಶೇಷ. 
ಚಿತ್ರಸಂತೆ ಕಲಾವಿದರಿಗೆ ಹಾಗೂ ಕಲಾಸಕ್ತರಿಗೆ ಸಿಗುವ ಒಂದು ಅಪೂರ್ವ ಅವಕಾಶ ಎಂದೇ ಹೇಳಬಹುದು. ಇಲ್ಲಿ ಬೇರೆ ಬೇರೆ ಕಡೆಗಳಿಂದ ಬಂದ ಕಲಾವಿದರನ್ನು ಭೇಟಿಯಾಗಿ ಅವರ ಕಲಾಕೃತಿಗಳನ್ನು ನೋಡಿ ಅವರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುವ ಅವಕಾಶ ಲಭ್ಯ. ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಸ್ಪಂದಿಸಿ ಹಾಗೂ ಜನರ ಆಸಕ್ತಿಗೆ ತಕ್ಕಂತೆ ಪ್ರತಿ ವರ್ಷವೂ ಕಲಾವಿದರು ತಮ್ಮ ಕಲಾಕೃತಿಯ ವಿಷಯಗಳನ್ನು ಬದಲಾಯಿಸಿಕೊಂಡಿರುವುದು ಕಾಣ ಬರುತ್ತದೆ. 
ಜಲವರ್ಣ, ತೈಲವರ್ಣ, ಅಕ್ರಿಲಿಕ್, ಗ್ರಾಫಿಕ್ ಆರ್ಟ್, ಡಿಜಿಟಲ್ ಪೇಂಟಿಂಗ್, ಕಾಫಿ ಪೇಂಟಿಂಗ್, ಪೋಸ್ಟ್ ಕಾರ್ಡ್ ಆರ್ಟ್, ತಂಜಾವೂರು ಶೈಲಿ, ರಾಜಸ್ಥಾನಿ ಹೀಗೆ ಅನೇಕ ಕಲಾಕೃತಿಗಳು ಗಮನ ಸೆಳೆದವು. ಈ ಬಾರಿ ವಿಶೇಷವಾಗಿ ನನ್ನನ್ನು ಆಕರ್ಷಿಸಿದ್ದು ಚಂದ್ರ ಗಂಗೊಳ್ಳಿ ಅವರ ಕ್ಯಾರಿಕೇಚರ್ ಆರ್ಟ್. ನೈಜ ಜೀವನದ ಚಿತ್ರಗಳನ್ನು ರಚಿಸುವ ಗುಲ್ಬರ್ಗದ ಕಲಾವಿದರಾದ ಶ್ರೀಶೈಲ್ ಪಾಟೀಲ್‌ ರವರನ್ನು ಭೇಟಿಯಾಗಿ ಅವರಿಂದ ಅನೇಕ ವಿಚಾರಗಳನ್ನು ತಿಳಿದುಕೊಂಡೆ. 
ಕಲಾಕೃತಿಗಳ ಜೊತೆಗೆ ಕರಕುಶಲ ವಸ್ತುಗಳು, ಕಲಾ ರಚನೆಗೆ ಸಂಬಂಧಿಸಿದ ವಸ್ತುಗಳ ಮಾರಾಟಕ್ಕೂ ಅವಕಾಶ ಕಲ್ಪಿಸಿಕೊಡಲಾಗಿತ್ತು. ಸ್ಥಳದಲ್ಲೇ ಭಾವಚಿತ್ರ ಬಿಡಿಸಿ ಕೊಡುವ ಕಲಾವಿದರ ಬಳಿ ತೆರಳಿ ತಮ್ಮ ಪೊಟ್ರೇಟ್‌ ಸಂಭ್ರಮಿಸುವ ಜನರಿಗೂ ಕೊರತೆಯಿರಲಿಲ್ಲ. ವನ್ಯಜೀವಿ, ದೇವಸ್ಥಾನಗಳು, ಧಾರ್ಮಿಕ ಆಚರಣೆಗಳು, ದೇವರು, ದೈವಕೋಲ, ಯಕ್ಷಗಾನ, ಹೂವು ಹಣ್ಣುಗಳು, ಹಬ್ಬಗಳು ಮುಂತಾದ ಹಲವಾರು ಕಲಾಕೃತಿಗಳು ಇದ್ದವು.
ಚಿತ್ರಕಲಾ ಪರಿಷತ್ತು ಆವರಣದೊಳಗೆ ಪರಿಷತ್ತಿನ ವಿದ್ಯಾರ್ಥಿಗಳಿಗೆಂದೇ ಪ್ರತ್ಯೇಕ ಸ್ಟಾಲ್ ವ್ಯವಸ್ಥೆ ಇತ್ತು. ಪರಿಷತ್ತು ವಿದ್ಯಾರ್ಥಿನಿ ಯಾಗಿ ನಾನೂ ಭಾಗವಹಿಸಿದ್ದೆ. ಡಿಜಿಟಲ್ ಆರ್ಟ್ ಬಳಸಿ ಕಾರ್ಟೂನ್ ಸ್ಟಿಕರ್ ಮೂಲಕ ಮಕ್ಕಳ ಗಮನ ಸೆಳೆಯುವಲ್ಲಿ ಯಶಸ್ವಿ ಆದೆ. ಗ್ರೀಟಿಂಗ್ ಕಾರ್ಡ್ ಮತ್ತು ಬುಕ್ ಮಾರ್ಕ್‌ ಗಳನ್ನು ಕಲಾಸಕ್ತರು ಖರೀದಿಸಿದ ಸಂತೋಷ ಇದೆ. 
ಚಿತ್ರ ಸಂತೆಯು ಕಲಾಸಕ್ತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುತ್ತದೆ. ತಮ್ಮ ಕಲಾಕೃತಿಗಳನ್ನು ಜನಸಾಮಾನ್ಯರ ಬಳಿ ಕರೆದೊಯ್ಯುವ ಸಂತೋಷ, ತೃಪ್ತಿ ಕಲಾವಿದರಿಗಾದರೆ, ಅವರನ್ನು ನೋಡಿ ಮಾತನಾಡಿಸಿ ಅವರಿಂದ ಕಲಿಯುವ ಆಸಕ್ತಿ ಹಲವರಿಗೆ. ಪ್ರತಿ ವರ್ಷದಂತೆ ಈ ವರ್ಷವೂ ಚಿತ್ರಸಂತೆ ಬಹಳ ಚೆನ್ನಾಗಿ ನಡೆಯಿತು. ಮುಂಬರುವ ಚಿತ್ರಸಂತೆಗೆ ನಾವೆಲ್ಲರೂ ಕುತೂಹಲದಿಂದ, ಸಂತೋಷದಿಂದ ಕಾಯುತ್ತಿದ್ದೇವೆ.
...................................... ಪ್ರತೀಕ್ಷಾ ಮರಕಿಣಿ 
ದ್ವಿತೀಯ ವರ್ಷದ ಬಿ ವಿ ಎ (ಅಪ್ಲಯ್ಡ್ ಆರ್ಟ್ಸ್)
ಕಾಲೇಜ್ ಆಫ್ ಫೈನಾರ್ಟ್ಸ್
ಕರ್ನಾಟಕ ಚಿತ್ರಕಲಾ ಪರಿಷತ್, ಬೆಂಗಳೂರು
********************************************


Ads on article

Advertise in articles 1

advertising articles 2

Advertise under the article