ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 41
Saturday, January 6, 2024
Edit
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 41
ಲೇಖಕರು : ಕಮಲಾಕ್ಷ ಕಲ್ಲಡ್ಕ
ಮುಖ್ಯ ಶಿಕ್ಷಕರು
ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ
ಸರಕಾರಿ ಪ್ರೌಢಶಾಲೆ ಶಂಭೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 94800 16306
ಅಂದು ಎಸ್ ಎಸ್ ಎಲ್ ಸಿ ಫಲಿತಾಂಶ. ಫಲಿತಾಂಶ ನೋಡಲು ಕುತೂಹಲದಿಂದ ಶಾಲೆ ಕಡೆ ಹೆಜ್ಜೆ ಹಾಕುತ್ತಿದ್ದ ನನಗೆ ಶಾಲಾ ಗೇಟಿನ ಹತ್ತಿರ ಬರುತ್ತಿದ್ದಂತೆ, ಫಲಿತಾಂಶ ನೋಡುತಿದ್ದ ವಿದ್ಯಾರ್ಥಿಗಳ ಕಡೆಯಿಂದ ವಿದ್ಯಾರ್ಥಿಯೊಬ್ಬ ನನ್ನ ಹತ್ತಿರ ಬಂದು, "ಸರ್ ನಾನು ಕನ್ನಡದಲ್ಲಿ ಪಾಸ್ ಸರ್ " ಎಂದು ಸಂತೋಷದಿಂದ ಹೇಳಿದ. ಯಾವಾಗಲೂ ಒಂದಂಕಿಯಿಂದ ಮೇಲೇರದ ಈ ಹುಡುಗ ಹೇಗೆ ಉತ್ತೀರ್ಣನಾದ? ಎಂದು ಯೋಚಿಸಿ, ಏನೂ ಪ್ರತಿಕ್ರಿಯೆ ನೀಡದೆ ಕಛೇರಿಗೆ ಬಂದು ಶಾಲಾ ಅಂಕ ಪಟ್ಟಿ ನೋಡಿದೆ. ಆಂತರಿಕ ಅಂಕ ಸೇರಿ 40ರ ಗಡಿ ದಾಟಿದ್ದ. ಅವನು ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣತೆಗೆ ಬೇಕಾದಷ್ಟು ಅಂಕ ಪಡೆದಿರಲಿಲ್ಲ. ಅವನನ್ನು ಕನ್ನಡದಲ್ಲಿ ಪಾಸ್ ಮಾಡಿಸುವಷ್ಟು ಸಾಧ್ಯವಾಗಿಲ್ಲವಲ್ಲ ಎಂದು ಮನದಲ್ಲೇ ಮರುಗಿದೆ. ಅವನ ಸಂತೋಷಕ್ಕೆ ಯಾಕೆ ತಡೆಯೊಡ್ಡಬೇಕು ಎಂದುಕೊಂಡು ಸುಮ್ಮನಾದೆ. ತಾನು ಎಸ್ ಎಸ್ ಎಲ್ ಸಿಯಲ್ಲಿ ಅನುತ್ತೀರ್ಣನಾಗಿದ್ದೇನೆ ಎಂದು ಮತ್ತೆ ಆತನಿಗೆ ಗೊತ್ತಾಗಿ ಸಪ್ಪೆ ಮೋರೆ ಹಾಕಿ ಶಾಲಾ ಜಗಲಿಯ ಕಂಬಕ್ಕೆ ಒರಗಿ ನಿಂತಿದ್ದ....!!
ಚಿತ್ರಕಲೆಯಲ್ಲಿ ಆತನ ಆಸಕ್ತಿಯನ್ನು ಕಂಡುಕೊಂಡಿದ್ದ ನಾನು ಆತನನ್ನು ಹತ್ತಿರ ಕರೆದು "ನೋಡು ಪ್ರವೀಣ, ಎಸ್ ಎಸ್ ಎಲ್ ಸಿ ಫೇಲಾದರೇನು, ಜೀವನದಲ್ಲಿ ಫೇಲಾಗಬೇಡ... ಕುಲವೃತ್ತಿ ಇದೆಯಲ್ಲ, ಮರದ ಕೆಲಸ ಮಾಡು, ಚಿತ್ರಕಲೆಯನ್ನು ಮುಂದುವರಿಸು" ಎಂದಷ್ಟು ಹೇಳಿ ಕಳಿಸಿದ್ದೆ.
ಕಲಿಕೆಯಲ್ಲಿ ತೀರ ಹಿಂದುಳಿದಿದ್ದರೂ ಶಾಲೆಯ ಇತರೆ ಎಲ್ಲಾ ಚಟುವಟಿಕೆಯಲ್ಲಿ ಹೆಚ್ಚಾಗಿ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದನು. ಪೂರಕ ಪರೀಕ್ಷೆಗೂ ಹಾಜರಾಗದೆ ಮುಂದೆ ತನ್ನ ಊರಿನಲ್ಲೇ ಇದ್ದ ಮರದ ಕೆತ್ತನೆಯ ಅಂಗಡಿಯೊಂದರಲ್ಲಿ ಸೇರಿಕೊಂಡು ಬಹಳ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದ. ಒಂದೆರಡು ಸಲ ಸಿಕ್ಕಿದಾಗ ಮಾತಾಡಿಸಿದೆ. "ಮಾಡುತ್ತಿರುವ ಕೆಲಸವನ್ನೇ ಮುಂದುವರಿಸು" ಎಂದು ಹೇಳಿದ್ದ ನೆನಪಷ್ಟೇ.. ನಂತರ ಅವನು ಸಂಪರ್ಕಕ್ಕೆ ಸಿಗಲಿಲ್ಲ. ಅವನ ಮನೆ ಪಕ್ಕದಿಂದ ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿಗಳಲ್ಲಿ ವಿಚಾರಿಸಿದಾಗ "ಸರ್ ಅವನು ಕಾಸರಗೋಡಿನಲ್ಲಿ ಮರದ ಕೆತ್ತನೆ ಕೆಲಸ ಮಾಡುತ್ತಿದ್ದಾನಂತೆ" ಎಂಬ ವಿಚಾರ ತಿಳಿದು ಬಂತು. ನಾಲ್ಕು ವರ್ಷಗಳ ನಂತರ ಅವನ ಬಗ್ಗೆ ತಿಳಿಯಬೇಕೆಂದುಕೊಂಡು ಹೇಗೋ ಮೊನ್ನೆ ವಿದ್ಯಾರ್ಥಿಯೊಬ್ಬಳಿಂದ ಮನೆ ಸಂಪರ್ಕ ಮಾಡಿ ಮೊಬೈಲ್ ಸಂಖ್ಯೆ ಪಡೆದು ಅವನಿಗೆ ಅಂದೇ 10 ಗಂಟೆ ರಾತ್ರಿಗೆ ಫೋನಾಯಿಸಿದೆ. "ಪ್ರವೀಣ ನಾನು ಕಮಲಾಕ್ಷ ಮಾಸ್ಟ್ರು ಮಾತಾಡ್ತಿದ್ದೇನೆ, ಹೇಗಿದ್ದೀಯ..? ಏನ್ ಮಾಡ್ತಿದ್ದೀಯಾ..?" ಎಂದೆ. "ಸರ್ ನಮಸ್ತೆ, ಚೆನ್ನಾಗಿದ್ದೇನೆ, ಸರ್ ನಾನು ಕೇರಳದಲ್ಲಿದ್ದೇನೆ, ಮರದ ಕೆತ್ತನೆ ಕೆಲಸ ಮಾಡ್ತಿದ್ದೇನೆ, ನಾನು ಈಗ ಶಿಲ್ಪಿಯಾಗಿದ್ದೇನೆ ಸರ್, ತುಂಬಾ ಕೆಲಸ ಇದೆ,12 ಗಂಟೆ ರಾತ್ರಿವರೆಗೂ ಕೆಲಸ ಮಾಡ್ತಿದ್ದೇನೆ ಸರ್" ಎಂಬ ಮಾತುಗಳನ್ನು ಅವನಿಂದ ಕೇಳಿದಾಗ.... ನನ್ನ ಕಣ್ಣಂಚಿನಲ್ಲಿ ಕಣ್ಣೀರ ಹನಿಯೆರಡು ಜಾರಿತು.. "ಒಳ್ಳೆಯದಾಗಲಿ... ನೀನುಊರಿಗೆ ಬಂದಾಗ ಶಾಲೆಗೆ ಬಂದು ಮಾತಾಡಿಸು ಹೋಗು" ಎಂದು ಹೇಳಿ ಕರೆ ಮುಗಿಸಿದೆ. ನಂತರ ಅವನು ಕೆತ್ತನೆ ಮಾಡಿದ ಕಲಾಕೃತಿಯ ವಿಡಿಯೋ ವನ್ನು ಕೂಡ ಆ ಕ್ಷಣವೇ ಕಳಿಸಿದ. ನೋಡಿ ಆನಂದಿಸಿದೆ.
ಅವನು ಎಸ್ ಎಸ್ ಎಲ್ ಸಿ ಫೇಲಾದರೇನು.. ಜೀವನ ಶಿಕ್ಷಣದಲ್ಲಿ ಫೇಲಾಗಲಿಲ್ಲ. ಉತ್ತಮ ವಿದ್ಯೆಯನ್ನು ತನ್ನದಾಗಿಸಿ ಕೊಂಡಿದ್ದಾನೆ...
ಶಾಲೆಯ ತರಗತಿಯಲ್ಲಿ ಕೊನೆಯ ಬೆಂಚಿನ ಕೊನೆಯ ವಿದ್ಯಾರ್ಥಿಯಾದರೇನು.. ಪ್ರವೀಣ ಆಚಾರ್ಯ ಇಂದು ಜೀವನವೆಂಬ ಮುಂದಿನ ಬೆಂಚಿನಲ್ಲಿ ಬಂದು ಕುಳಿತಿದ್ದಾನೆ. ಹತ್ತಾರು ಜನ ನಿತ್ಯ ಸಂಪರ್ಕಿಸುವ ಬೇಡಿಕೆಯ ಕಲಾವಿದನಾಗಿದ್ದಾನೆ. ಸಂಸ್ಕಾರಯುತವಾದ ಕಲೆಯನ್ನು ಕರಗತ ಮಾಡಿಕೊಂಡು ಅಭಿಮಾನದಿಂದ ಹೆಸರು ಹಾಗೂ ಸಂಪತ್ತನ್ನು ಗಳಿಸಿಕೊಂಡಿದ್ದಾನೆ. ಇನ್ನೇನು ಬೇಕು...? ಕಲಿಕೆ ಎಂಬ ಮೂರಕ್ಷರದ ಸಾಧನೆಯಲ್ಲಿ ವಿದ್ಯಾರ್ಥಿಗಳು ಹಿಂದುಳಿದರೂ ಛಲ, ಆತ್ಮ ವಿಶ್ವಾಸ, ಸಂಸ್ಕಾರ ಇದ್ದರೆ ಜೀವನ ಎಂಬ ಮೂರಕ್ಷರದ ಪಥದಲ್ಲಿ ಯಶಸ್ವಿಯಾಗುತ್ತಾರೆ ಎಂಬುದು ನಿಶ್ಚಯ.
ನನ್ನ ಸೇವಾ ಅನುಭವದ ಬುತ್ತಿಯಲ್ಲಿನ ಒಂದು ತುತ್ತನ್ನು ತೆರಿದಿಟ್ಟಿದ್ದೇನೆ. ಈ ತುತ್ತು ಕೆಲವರಿಗಂತೂ ಶಕ್ತಿ ನೀಡೀತು.... ಎಂಬುದೇ ನನ್ನ ಆಶಯ.
ಮುಖ್ಯ ಶಿಕ್ಷಕರು
ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ
ಸರಕಾರಿ ಪ್ರೌಢಶಾಲೆ ಶಂಭೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 94800 16306
*******************************************