-->
ಮಕ್ಕಳ ಕಥೆಗಳು

ಮಕ್ಕಳ ಕಥೆಗಳು

ಮಕ್ಕಳ ಕಥೆಗಳು : ಸಂಚಿಕೆ - 01
ಕಥಾ ರಚನೆ ಮಾಡಿರುವ ವಿದ್ಯಾರ್ಥಿಗಳು :
◾ಚಿನ್ಮಯಿ ಪಿ, 5ನೇ ತರಗತಿ 
◾ಅಹಲ್ಯಾ ಬನಾರಿ, 5ನೇ ಎ‌ ತರಗತಿ
◾ಆರಾಧ್ಯ ಎ ರಾವ್, 5ನೇ ತರಗತಿ
◾ಕಾವ್ಯ ಕೆ, 4ನೇ ತರಗತಿ 
◾ಶರಣ್ಯ, 8ನೇ ತರಗತಿ 
◾ಅನ್ವಿತಾ ಆರ್ ಪೈ, 5ನೇ ತರಗತಿ 
◾ಅಶ್ಮಿತಾ, 10ನೇ ತರಗತಿ
◾ವರ್ಷಿತ ಕೆ. ಜೆ, 10ನೇ ತರಗತಿ
                                             
      

ಒಂದು ಊರು. ಆ ಊರಿನಲ್ಲಿ ಒಂದು ಸರ್ಕಾರಿ ಶಾಲೆ. ಆ ಶಾಲೆಯಲ್ಲಿ ಇಬ್ಬರು ಗೆಳತಿಯರು. ಮೂರನೇ ತರಗತಿಯಲ್ಲಿ ಓದುತ್ತಿದ್ದ ಈ ಗೆಳತಿಯರ ಹೆಸರು ಛಾಯ ಮತ್ತು ಮಾಯ.
      ಒಂದು ದಿನ ಛಾಯ ಶಾಲೆಗೆ ಕೆಲವು ಬಾದಾಮಿ ಬೀಜಗಳನ್ನು ತಂದಿದ್ದಳು. ತಂದಿದ್ದ ಬಾದಾಮಿ ಬೀಜಗಳಲ್ಲಿ ಸ್ವಲ್ಪ ಭಾಗವನ್ನು ವಿರಾಮದ ಸಮಯದಲ್ಲಿ ಇಬ್ಬರೂ ಗೆಳತಿಯರು ಹಂಚಿಕೊಂಡು ತಿಂದಿದ್ದರು.
       ಮಧ್ಯಾಹ್ನ ಊಟದ ನಂತರ ಛಾಯ ಮತ್ತು ಮಾಯಾ ಇಬ್ಬರು ಏನೋ ಬರೆದುಕೊಳ್ಳುತ್ತಿದ್ದರು. ಮಾಯ ತಾನು ಬೇಗ ಬರೆದು ಮುಗಿಸಿ ತನ್ನ ಜಾಗದಲ್ಲಿ ಸುಮ್ಮನೆ ಕುಳಿತಿದ್ದಳು. ಸ್ವಲ್ಪ ಸಮಯದ ಬಳಿಕ ಛಾಯ ಬರೆಯುವುದನ್ನು ಮುಗಿಸಿ ಎದ್ದು ಹೊರಗೆ ಹೋದಳು. ಛಾಯಾ ಹೊರಗೆ ಹೋಗಿ ತಿರುಗಿ ಒಳಗೆ ಬರುವಾಗ ಮಾಯಾ ಛಾಯಾಳ ಬ್ಯಾಗಿನಲ್ಲಿದ್ದ ಕೆಲವು ಬಾದಾಮಿಗಳನ್ನು ತೆಗೆದು ತಿನ್ನುತ್ತಿದ್ದಳು. ಇದನ್ನು ನೋಡಿದ ಛಾಯಾ ನನ್ನ ಬ್ಯಾಗ್ ನಲ್ಲಿದ್ದ ಬಾದಾಮಿ ಬೀಜಗಳನ್ನು ಯಾಕೆ ಕದ್ದು ತಿನ್ನುತ್ತಿದ್ದೀಯಾ? ಕೇಳಿದ್ದರೆ ನಾನು ಕೊಡುತ್ತಿರಲಿಲ್ಲವೇ ಎಂದು ಕೇಳಿದಳು. ನಿನ್ನ ಬ್ಯಾಗಿನಲ್ಲಿರುವ ಬಾದಾಮಿಗಳನ್ನು ನಾನು ಕದ್ದಿಲ್ಲ. ನಾನು ಮನೆಯಿಂದ ಬಾದಾಮಿ ತಂದಿದ್ದೆ ಎಂದು ಮಾಯ ಉತ್ತರಿಸಿದಳು.
       ಮಾಯ ಮನೆಯಿಂದ ಬಾದಾಮಿಗಳನ್ನು ತಂದಿಲ್ಲವೆಂಬುದು ಛಾಯಾಳಿಗೆ ಚೆನ್ನಾಗಿ ಗೊತ್ತಿತ್ತು. ನಾನು ಮನೆಯಿಂದ ಹದಿನಾರು ಬಾದಾಮಿ ಬೀಜಗಳನ್ನು ತಂದಿದ್ದೆ. ಅದರಲ್ಲಿ ಹತ್ತು ಬಾದಾಮಿಗಳನ್ನು ನಾವಿಬ್ಬರೂ ಹಂಚಿ ತಿಂದಿ ದ್ದೇವೆ. ಉಳಿದ ಆರು ಬಾದಾಮಿಗಳಲ್ಲಿ ಈಗ ನನ್ನ ಬ್ಯಾಗಿನಲ್ಲಿ ಎರಡು ಬಾದಾಮಿ ಮಾತ್ರ ಇದೆ. ಉಳಿದ ನಾಲ್ಕು ಬಾದಾಮಿ ಎಲ್ಲಿ ಹೋಯ್ತು ಎಂದು ಛಾಯಾ ಕೇಳಿದಳು. ನನಗೆ ಗೊತ್ತಿಲ್ಲ ಎಂದು ಮಾಯ ಉತ್ತರಿಸಿದಳು. ಮಾಯ ಕದ್ದ ವಿಚಾರ ಒಪ್ಪಿಕೊಳ್ಳಲೇ ಇಲ್ಲ. ಹೀಗೆ ಸಣ್ಣಪುಟ್ಟ ಕಳ್ಳತನ ಮಾಡುವುದು ಅವಳಿಗೆ ಅಭ್ಯಾಸವಾಯಿತು. ದೊಡ್ಡವಳಾದ ಮೇಲೆ ಒಮ್ಮೆ ದೊಡ್ಡ ಕಳ್ಳ ತನ ಮಾಡಿ ಪೊಲೀಸರ ಕೈಗೆ ಸಿಕ್ಕು ಬಿದ್ದಳು. ಜೈಲು ಸೇರಿದಳು.
............................................... ಚಿನ್ಮಯಿ ಪಿ
5ನೆ ತರಗತಿ 
ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ ಗೆಣಸಿನ ಕುಣಿ
ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
*******************************************

                     
          
ಒಂದು ಕಾಡಿತ್ತು. ಆ ಕಾಡಿನಲ್ಲಿ ಚಿಂಪು ಎನ್ನುವ ಮಂಗವು ವಾಸ ಮಾಡುತ್ತಿತ್ತು.‌ ಅದು ಒಂದು ದಿನ ದಾರಿಯಲ್ಲಿ ಹೋಗುತ್ತಿದ್ದಾಗ ಕಾಡಿನ ಪಕ್ಕದಲ್ಲಿದ್ದ ಬಾಳೆ ತೋಟ ಕಣ್ಣಿಗೆ ಕಾಣಿಸಿತು. ಖುಷಿಯಿಂದ ಚಿಂಪು ತೋಟದ ಒಳಗೆ ಹೋಯಿತು.‌ ಬಾಳೆಯ ಗೊನೆಗಳನ್ನು ನೋಡಿ ಅದರ ಬಾಯಲ್ಲಿ ನೀರೂರಿತು. ಬಾಳೆಯ ತೋಟದಿಂದ ತನಗೆ ಬೇಕಾದಷ್ಟು ಹಣ್ಣುಗಳನ್ನು ಅದು ತೆಗೆದುಕೊಂಡಿತು.‌ ನಂತರ ಮರಳಿ ಮನೆಯ ಕಡೆಗೆ ಹೊರಟಿತು.
     ಆಗ ದಾರಿಯಲ್ಲಿ ಮರದ ಬುಡದ ಬಳಿಯಿಂದ 
ಯಾರೋ ಅಳುತ್ತಿರುವುದು ಕೇಳಿಸಿತು. ಅದು ಯಾರು ಎಂದು ನೋಡಲು ಹೋದ ಚಿಂಪುಗೆ ಮೀಕು ಮೊಲ ಕಾಣಿಸಿತು. ಚಿಂಪು ಮೊಲ ಮೀಕುವ ಬಳಿ 'ಯಾಕೆ ಅಳುತ್ತಿದ್ದೀಯಾ' ಎಂದು ಕೇಳಿತು. ಆಗ ಮೀಕು 'ನಾನು ನಿನ್ನೆಯಿಂದ ಏನೂ ತಿಂದಿಲ್ಲ. ನನಗೆ ಸಿಕ್ಕಾಪಟ್ಟೆ ಹಸಿವು ಆಗುತ್ತಿದೆ' ಎಂದು ಹೇಳಿತು.
      ಮೀಕುವಿನ ಮಾತು ಕೇಳಿದ ಚಿಂಪು ಮಂಗನಿಗೆ ಬೇಸರವಾಯಿತು. ಚಿಂಪು ತನ್ನ ಕೈಯಲಿದ್ದ ಬಾಳೆಹಣ್ಣನ್ನು ಮೀಕುವಿಗೆ ನೀಡಿತು. "ಇಗೋ, ಈ ಬಾಳೆಹಣ್ಣನ್ನು ತಿನ್ನು. ನಿನ್ನ ಹಸಿವು ಮಾಯವಾಗುವುದು" ಎಂದು ಹೇಳಿತು. ಮೊದಲೇ ಹಸಿದಿದ್ದ ಮೀಕು, ಬಾಳೆಹಣ್ಣು ಸಿಕ್ಕ ಕೂಡಲೇ ಎಲ್ಲವನ್ನು ಗಬಗಬನೆ ತಿಂದಿತು.‌ ತನ್ನ ಹಸಿವು ಮಾಯ ಮಾಡಿದುದಕ್ಕೆ ಚಿಂಪುವಿಗೆ ಧನ್ಯವಾದ ಹೇಳಿತು.         
.................................... ಅಹಲ್ಯಾ ಬನಾರಿ 
5 ನೇ ತರಗತಿ 
ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ, ನರಿಮೊಗರು 
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************
 
              
            
ಒಂದು ಊರಿನಲ್ಲಿ ಒಬ್ಬ ಸಾಹುಕಾರ ಇದ್ದನು. ಅವನು ಹೊಸ ಮನೆ ಕಟ್ಟಿಸುತ್ತಿದ್ದನು. ಒಂದು ದಿನ ಕೆಲಸದವರೆಲ್ಲ ಮನೆ ಕಟ್ಟುವ ಕೆಲಸ ಮಾಡುತ್ತಿದ್ದಾಗ ಅಲ್ಲಿಗೆ ಒಂದು ಹಾವು ಬಂತು. ನಮ್ಮ ಹಿಂದೂ ಧರ್ಮದಲ್ಲಿ ಹಾವು ಎಂದರೆ ದೇವರು. ಹಾಗೆ ಅಲ್ಲಿದ್ದ ಎಲ್ಲರೂ ಅದಕ್ಕೆ ನಮಸ್ಕಾರ ಮಾಡಿದರು. ಆದರೆ ಅಲ್ಲಿದ್ದ ಹುಡುಗ ಮಹೇಶ, ಆ ಹಾವಿನ ಮೇಲೆ ಬಿಸಿ ನೀರನ್ನು ಎರಚಿದ‌. ಪಾಪ ಹಾವಿಗೆ ನೋವಾಗಿ ಅದು ಹೊರಳಾಡಲು ಪ್ರಾರಂಭಿಸಿತು. ಅದನ್ನು ಕಂಡು ಅಲ್ಲಿದ್ದ ಎಲ್ಲರೂ ಸೇರಿ ಅದಕ್ಕೆ ತಣ್ಣಗಿನ ನೀರನ್ನು ಹಾಕಿದರು. ನಂತರ ಅದನ್ನು ಜಾಗ್ರತೆಯಿಂದ ಹಿಡಿದು ಕಾಡಿಗೆ ಬಿಟ್ಟು ಬಂದರು. ಕೆಲ ತಿಂಗಳ ನಂತರ ಆ ಮಹೇಶನಿಗೆ ಮೈಯೆಲ್ಲಾ ಉರಿಯಲು ಪ್ರಾರಂಭವಾಯಿತು. ಅವನು ಕೆಲವು ಮದ್ದು ಮಾಡಿದ ‌ಆದರೆ ಮೈ ಉರಿ ಕಡಿಮೆಯಾಗಲಿಲ್ಲ. ನಂತರ ಅವನು ಜ್ಯೋತಿಷಿಗಳ ಬಳಿಗೆ ಹೋಗಿ ತನ್ನ ಕಷ್ಟ ಹೇಳಿದ. "ಜ್ಯೋತಿಷಿಗಳೇ ನನ್ನ ಮೈಯೆಲ್ಲಾ ಉರಿಯಲು ಪ್ರಾರಂಭವಾಗಿದೆ. ನಾನು ಕೆಲವು ಮದ್ದುಮಾಡಿದೆ. ಆದರೆ ಮೈ ಉರಿ ಕಡಿಮೆಯಾಗಲಿಲ್ಲ. ಇದಕ್ಕೆ ಈಗ ಏನು ಮಾಡುವುದು" ಎಂದು ಕೇಳಿದ. ಅದಕ್ಕೆ ಜ್ಯೋತಿಷಿಗಳು "ನೀನು ಕೆಲವು ತಿಂಗಳ ಹಿಂದೆ ಯಾವುದಾದರೂ ಒಂದು ಹಾವಿಗೆ ಬಿಸಿ ನೀರನ್ನು ಎರಚಿದ್ದೀಯಾ" ಎಂದು ಕೇಳಿದರು. ಅದಕ್ಕೆ ಮಹೇಶ" ಹೌದು ನಾನು ಕೆಲ ತಿಂಗಳ ಹಿಂದೆ ಒಂದು ಹಾವಿಗೆ ಬಿಸಿ ನೀರನ್ನು ಎರಚಿದ್ದೆ" ಎಂದು ಹೇಳುತ್ತಾನೆ. ಅದಕ್ಕೆ ಜ್ಯೋತಿಷಿಗಳು , "ಓ ! ಅದಕ್ಕೆ ನಿನಗೆ ಹೀಗೆ ಆಗುತ್ತಿದೆ. ಸರಿ ಆಯ್ತು. ನಿನಗೆ ಮೈ ಉರಿ ಕಡಿಮೆಯಾಗಬೇಕೆಂದರೆ ನೀನು ನಾಗದೇವರ ದೇವಸ್ಥಾನಕ್ಕೆ ಹೋಗಿ ಕ್ಷಮೆ ಕೇಳು. ಎಲ್ಲಾ ಸರಿಯಾಗುತ್ತೆ" ಎಂದು ಹೇಳಿದರು. ಹಾಗೆ ಮಹೇಶನು ನಾಗದೇವರ ದೇವಸ್ಥಾನಕ್ಕೆ ಹೋಗಿ ನಮಸ್ಕಾರ ಮಾಡಿದ ನಂತರ, "ನಾನು ಮಾಡಿದ ತಪ್ಪಿಗೆ ನನಗೆ ಕ್ಷಮೆ ಕೊಡಿ" ಎಂದು ಬೇಡಿಕೊಂಡನು. ಹೀಗೆ ಕೆಲ ಸಮಯದ ನಂತರ ಅವನು ಕ್ಷೇಮವಾದನು. ನಂತರ ಅವನಿಗೆ ಯಾವಾಗಲೆಲ್ಲ ಹಾವು ಕಾಣಸಿಗುತ್ತಿತ್ತೋ ಆವಾಗಲೆಲ್ಲಾ ಅದಕ್ಕೆ ನಮಸ್ಕಾರ ಮಾಡುತ್ತಿದ್ದ. ಭಕ್ತಿಯಿಂದ ನಾಗದೇವರ ಪೂಜೆ ಮಾಡಲು ಪ್ರಾರಂಭಿಸಿದ.    
...................................... ಆರಾಧ್ಯ ಎ ರಾವ್
5ನೇ ತರಗತಿ ಎ ವಿಭಾಗ
ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠ ಮೂಲ್ಕಿ
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************


          
ಒಂದು ದಿನ ಮಹಾರಾಣಿಯ ಹುಟ್ಟು ಹಬ್ಬ. ಆಗ ಅವರ ತಂದೆಯವರು ಹುಟ್ಟು ಹಬ್ಬಕ್ಕೆ ಚಿನ್ನದ ಚೆಂಡು ತಂದು ಕೊಟ್ಟರು. ರಾಣಿಯವರಿಗೆ ತುಂಬಾ ಖುಷಿಯಾಯಿತು. ಅವರು ಯಾವತ್ತೂ ನದಿಯ ತೀರದಲ್ಲಿ ಚಿನ್ನದ ಚೆಂಡಲ್ಲಿ ಆಟವಾಡುತ್ತಿದ್ದರು. ಆಗ ಅವರ ಚಿನ್ನದ ಚೆಂಡು ನದಿಗೆ ಬಿದ್ದು ಹೋಯಿತು. ರಾಣಿಯವರು ಅಳುತ್ತಾ ಕೂತಿದ್ದರು. ಅಲ್ಲಿಗೆ ಬಂದ ಕಪ್ಪೆ, "ಏನಾಯ್ತು ರಾಣಿ ಯಾಕೆ ಅಳುತ್ತಿದ್ದೀರಿ" ಎಂದಿತು. "ನನ್ನ ಚಿನ್ನದ ಚೆಂಡು ಬಿದ್ದು ಹೋಯಿತು." "ಅದಕ್ಕೆ ಯಾಕೆ ಅಳುತ್ತಿದ್ದೀರಿ ನಾನು ತಂದು ಕೊಡುತ್ತೇನೆ" ಎಂದು ಕಪ್ಪೆ ನದಿಗೆ ಕುಪ್ಪಳಿಸುತ್ತಾ ಹೋಯಿತು. ಚಿನ್ನದ ಚೆಂಡು ತಂದಿತು. "ತೆಗೆದುಕೊಳ್ಳಿ ರಾಣಿಯವರೇ" ಎಂದಿತು. ರಾಣಿಯವರಿಗೆ ತುಂಬಾ ಖುಷಿಯಾಯಿತು. ಕಪ್ಪೆಗೆ ಧನ್ಯವಾದ ಹೇಳಿದರು. "ಕಪ್ಪೆ ನೀನು ಎಷ್ಟು ಸಹಾಯ ಮಾಡುತ್ತೀಯ ನಿನಗೆ ದೇವರು ಒಳ್ಳೆಯದನ್ನೇ ಮಾಡುತ್ತಾರೆ" ಎಂದಿತು. ಇದನ್ನು ಹೇಳಿದ್ದಕ್ಕೆ ಕಪ್ಪೆಗೆ ಸಂತೋಷವಾಯಿತು.
...................................... ............. ಕಾವ್ಯ ಕೆ
4 ನೇ ತರಗತಿ
ದ.ಕ.ಜಿ.ಪಂ.ಕಿ. ಪ್ರಾ. ಶಾಲೆ ಸೇಡಿಗುಳಿ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ    
*******************************************


   
ಶಾಲೆ ಮುಗಿಸಿ ಮನೆಗೆ ಬಂದ ರಾಜು ಶಾಲೆಯ ಚೀಲವನ್ನು ಇಟ್ಟು ಓದಲು ಪ್ರಾರಂಭಿಸಿದನು. ಅಲ್ಲೇ ಪಕ್ಕದಲ್ಲೇ ರಾಜುವಿನ ಅಮ್ಮ ರುಚಿಕರವಾದ ಅಡುಗೆಯನ್ನು ತಯಾರು ಮಾಡುತ್ತಿದ್ದರು. ಅಮ್ಮ ಮಾಡಿದ ಅಡುಗೆಯ ಸುವಾಸನೆ ರಾಜುವಿನ ಮೂಗಿಗೆ ತಲುಪಿ ಅವನು ಓದುವುದನ್ನು ಬಿಟ್ಟು ಅಡುಗೆಯ ಸುವಾಸನೆಯನ್ನು ಗ್ರಹಿಸಲು ಪ್ರಾರಂಭ ಮಾಡಿದನು. ಆ ಅಡುಗೆ ಮುಗಿಯುತ್ತಾ ಬಂದಾಗ ಅದರ ಸುವಾಸನೆ ಹೆಚ್ಚುತ್ತಲೇ ಹೋಯಿತು. ಅಡುಗೆಯ ಸುವಾಸನೆ ಗ್ರಹಿಸಿದ ರಾಜುವಿನ ಬಾಯಲ್ಲಿ ನೀರು ಬರಲು ಪ್ರಾರಂಭವಾಯಿತು. ರಾಜುವಿನ ತಂದೆ ಕೆಲಸ ಮುಗಿಸಿ ಬರುವಾಗ ರಾಜುವನ್ನು ನೋಡಿದರು. ಅವನ ಬಾಯಲ್ಲಿ ನೀರು ಬರುತ್ತಿರುವುದನ್ನು ನೋಡಿ ನಕ್ಕು ನಕ್ಕು ಸುಸ್ತಾದರು. 
......................................................... ಶರಣ್ಯ 
8ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್ ಕಟ್ಟೆ 
ಕುಂದಾಪುರ ವಲಯ, ಉಡುಪಿ ಜಿಲ್ಲೆ        
*******************************************


                  
ಒಂದು ಊರಿನಲ್ಲಿ ಒಬ್ಬ ಬಡ ಬಾಲಕನಿದ್ದ. ಅವನ ತಾಯಿ ಚಿಂದಿ ಬಟ್ಟೆಗಳನ್ನು ಹೊಲಿದು ಜೀವನ ಸಾಗಿಸುತ್ತಿದ್ದಳು. ಒಂದು ದಿನ ಬಟ್ಟೆ ಹೊಲಿಯುತ್ತಿರುವಾಗ ತಾಯಿಯ ಕನ್ನಡಕವು ಬಿದ್ದು ಒಡೆದು ಹೋಯಿತು. ಬಡ ತಾಯಿಯು ಒಡೆದ ಕನ್ನಡಕವನ್ನು ಬಳಸುತ್ತಿದ್ದಳು. ಬಾಲಕನು ಎಲ್ಲವನ್ನು ಗಮನಿಸುತ್ತಿದ್ದನು. ಒಂದು ದಿನ ಶಾಲೆಯಲ್ಲಿ ಶಿಕ್ಷಕಿಯು ಎಲ್ಲಾ ಮಕ್ಕಳಿಗೆ ಒಂದು ಪ್ರಶ್ನೆಯನ್ನು ಕೇಳಿದರು. ನಾನು ನಿಮಗೆ 500 ರೂಪಾಯಿ ಕೊಟ್ಟರೆ ಏನು ಮಾಡುವಿರಿ? ಎಂದು ಕೇಳಿದರು. ಎಲ್ಲಾ ಮಕ್ಕಳು ಅಂಗಿ, ಆಟಿಕೆ, ಒಡವೆ ಎಂದು ಉತ್ತರಿಸಿದರು. ಆದರೆ ಬಡ ಬಾಲಕನು ತನ್ನ ತಾಯಿಗೆ ಹೊಸ ಕನ್ನಡಕವನ್ನು ಕೊಡಿಸುವುದಾಗಿ ಹೇಳಿದನು. 
    ಶಿಕ್ಷಕಿಯು ಆ ಬಾಲಕನಿಗೆ 500 ರೂಪಾಯಿ ಕೊಟ್ಟಳು. ಮುಂದೊಂದು ದಿನ ಹಿಂದಿರುಗಿಸಬೇಕಂದು ಹೇಳಿದಳು. ಮುಂದೆ ಬಡ ಬಾಲಕನು ಕಷ್ಟ ಪಟ್ಟು ಓದಿ ವಿದ್ಯಾವಂತನಾಗಿ ಒಳ್ಳೆಯ ಕೆಲಸಕ್ಕೆ ಸೇರಿದನು. ತಾನು ಕಲಿತ ಶಾಲೆಗೆ ಹೋಗಿ ಶಿಕ್ಷಕಿಯ ಕೈಗೆ 500 ರೂಪಾಯಿ ಕೊಟ್ಟನು. ಶಿಕ್ಷಕಿಗೆ ಬಾಲಕನ ಗುರುತು ಸಿಗಲಿಲ್ಲ. ಬಾಲಕನು ಶಿಕ್ಷಕಿಯ ಕಾಲಿಗೆ ಬಿದ್ದು ಅವನ ಪರಿಚಯವನ್ನು ಹೇಳಿದನು. ಶಿಕ್ಷಕಿಯು ಖುಷಿಯಿಂದ ನೋಡುತ್ತಾ ಬಾಲಕನನ್ನು ಅಪ್ಪಿಕೊಂಡಳು.
......................................... ಅನ್ವಿತಾ ಆರ್ ಪೈ
5ನೇ ತರಗತಿ
ಸರಕಾರಿ ಮಾದರಿ ಹಿರಿಯ 
ಪ್ರಾಥಮಿಕ ಶಾಲೆ, ಪರ್ವಾಜೇ ಕಾರ್ಕಳ
ಉಡುಪಿ ಜಿಲ್ಲೆ   
*******************************************
      
          

         ಒಂದಾನೊಂದು ಕಾಲದಲ್ಲಿ ರೈತ ಶಂಕ್ರಪ್ಪ ಇದ್ದ. ಅವನಿಗೆ ಪ್ರಾಣಿಗಳ ಮಾತನ್ನು ತಿಳಿದುಕೊಳ್ಳುವ ಹಂಬಲ, ಇದಕ್ಕೆ ದೇವರನ್ನು ಕುರಿತು ತಪಸ್ಸು ಮಾಡಿದ. ದೇವರು ಆತನ ಮನಸ್ಸಿಗೆ ಮೆಚ್ಚಿ ಅವನಿಗೆ ಪ್ರಾಣಿ ಪಕ್ಷಿಗಳ ಮಾತನ್ನು ತಿಳಿದುಕೊಳ್ಳುವಂತೆ ಒಂದು ವರವನ್ನು ಕೊಡುತ್ತಾರೆ. ನಂತರ ಆತ ಮನೆಗೆ ಹಿಂದಿರುಗಿದನು.
         ಶಂಕ್ರಪ್ಪ ಮನೆಯಲ್ಲಿ ಒಂದು ಕತ್ತೆ ಹಾಗೂ ಒಂದು ಎತ್ತು ಇದ್ದಿದ್ದವು. ಒಂದು ದಿನ ಶಂಕ್ರಪ್ಪ ಎತ್ತನ್ನು ಗದ್ದೆ ಉಳುಮೆ ಮಾಡಲು ಕರೆದುಕೊಂಡು ಹೋದನು. ಉಳುಮೆ ಮಾಡಿ ಸುಸ್ತಾದ ಎತ್ತನ್ನು ಶಂಕ್ರಪ್ಪ ಮನೆಗೆ ತಂದನು. ನಂತರ ಎತ್ತು ತನ್ನ ಭಾಷೆಯಲ್ಲಿ ಅಂಬಾ.... ಅಂಬಾ... ಎನ್ನುತ್ತಾ ಕತ್ತೆಗೆ ಹೇಳಿತು, "ಇವತ್ತು ನನಗೆ ಉಳುಮೆ ಮಾಡಿ ತುಂಬಾ ಆಯಾಸವಾಗಿದೆ, ನಾಳೆಯೂ ನನಗೆ ಉಳುಮೆ ಮಾಡಲಿಕ್ಕಿದೆ. ಏನು ಮಾಡಲಿ?" ಎಂದಿತು.
      ಅದಕ್ಕೆ ಕತ್ತೆಯು ತನ್ನ ಭಾಷೆಯಲ್ಲಿ ಹೀಗೆ ಹೇಳಿತು, "ನನ್ನ ಬಳಿ ಒಂದು ಉಪಾಯ ಇದೆ, ಅದೇನೆಂದರೆ ನಾಳೆ ಉಳುಮೆ ಮಾಡುವಾಗ ಪಟ್ಟನೆ ಬಿದ್ದುಬಿಡು. ನಂತರ ರೈತ ನಿನ್ನಿಂದ ಉಳುಮೆ ಮಾಡಿಸುವುದಿಲ್ಲ" ಎಂದಿತು. ಇದನ್ನೆಲ್ಲವನ್ನು ಕೇಳಿಸಿಕೊಂಡ ಶಂಕ್ರಪ್ಪ ಮಾರನೇ ದಿನ ಎತ್ತನ್ನು ಉಳುಮೆ ಮಾಡಲು ಕರೆದುಕೊಂಡು ಹೋದನು. ಉಳುಮೆ ಮಾಡುತ್ತಿರುವ ಎತ್ತು ಥಟ್ಟನೆ ಬಿದ್ದುಬಿಟ್ಟಿತು. ಶಂಕ್ರಪ್ಪ ಅದನ್ನು ಮನೆಗೆ ಬಿಟ್ಟನು. ನಂತರ ಆ ಮನೆಯಲ್ಲಿ ಇರುವ ಆ ಕತ್ತೆಯಿಂದ ಉಳುಮೆ ಮಾಡಿಸಿದನು. ಇದರಿಂದ ಕೆಟ್ಟ ಉಪಾಯವನ್ನು ಕೊಟ್ಟ ಕತ್ತೆಗೆ ತಕ್ಕ ಶಿಕ್ಷೆ ಆಯಿತು.                 
...................................................... ಅಶ್ಮಿತಾ
ಹತ್ತನೇ ತರಗತಿ 
ಶ್ರೀಮತಿ ಗಿರಿಜಾ ಚಂದ್ರಶೇಖರ ಹೆಗ್ಡೆ 
ಸ ಪ್ರೌ ಶಾಲೆ ಕೊರ್ಗಿ 
ಉಡುಪಿ ಜಿಲ್ಲೆ
*******************************************

              

    ಒಂದು ಊರಿನಲ್ಲಿ ಒಂದು ಅಜ್ಜಿ ಇದ್ದಳು. ಆ ಅಜ್ಜಿ ಹೆಸರು ತಿಮ್ಮಕ್ಕ. ಆ ಅಜ್ಜಿಗೆ ಒಬ್ಬಳು ಮೊಮ್ಮಗಳು ಇದ್ದಳು. ಆ ಹುಡುಗಿಗೆ ತಂದೆ-ತಾಯಿ ಇರಲಿಲ್ಲ. ಅವಳ ಅಜ್ಜಿ ಕಷ್ಟಪಟ್ಟು ಕೂಲಿ ಕೆಲಸ ಮಾಡಿ ಸಾಕುತ್ತಿದ್ದಳು. ಆ ಹುಡುಗಿ 5ನೇ ತರಗತಿಯಲ್ಲಿ ಓದುತ್ತಿದ್ದಳು. ಒಂದು ದಿವಸ ಅಜ್ಜಿಯ ಹತ್ತಿರ ಹೋಗಿ, "ನನಗೆ ಮೊಬೈಲ್ ಬೇಕು ಅಜ್ಜಿ" ಎಂದು ಕೇಳಿದಳು. ಅವಳ ಶಾಲೆಯಲ್ಲಿ ಎಲ್ಲಾ ಮಕ್ಕಳನ್ನು ನೋಡಿ, "ಅವರಿಗೆ ಅಪ್ಪ-ಅಮ್ಮ ಮೊಬೈಲ್ ತೆಗೆದುಕೊಟ್ಟಿದ್ದಾರೆ ನನಗೂ ಮೊಬೈಲ್ ಬೇಕು." ಎಂದು ಹಠ ಮಾಡಿದಳು. ಹೇಗೋ ಕಷ್ಟಪಟ್ಟು ಅವಳಿಗೆ ಒಂದು ಮೊಬೈಲ್ ತೆಗೆದು ಕೊಟ್ಟರು. ಆ ದಿವಸದಿಂದ ತುಂಬಾ ಬದಲಾದಳು. ಮೊಬೈಲ್ ನಿಂದ ಆಟವಾಡುತ್ತಿದ್ದಳು. ಪಾಠದ ಕಡೆಗೆ ಗಮನವಿರಲಿಲ್ಲ. ಪರೀಕ್ಷೆಯ ದಿನ ಹತ್ತಿರ ಬರುತ್ತಿದೆ ಎಂದು ಯೋಚನೆ ಮಾಡದೆ ಅವಳು ಮೊಬೈಲ್ ಹಾವಳಿಯಿಂದ ಹಾಳಾಗಿ ಹೋದಳು. ಮೊದಲ ಸ್ಥಾನ ಪಡೆಯುತ್ತಿದ್ದ ಹುಡುಗಿ ಮೊಬೈಲ್ ಹಾವಳಿಯಿಂದ ಅಂಕ ಕಮ್ಮಿ ಬರುತ್ತಿತ್ತು. ಅಂದಿನಿಂದ "ಅಜ್ಜಿ ನಾನು ಇನ್ನು ಮೊಬೈಲ್ ಮುಟ್ಟೋದಿಲ್ಲ ನಾನು ಮೊಬೈಲ್ ನೋಡಿದ ಕಾರಣ ಪಾಠದ ಕಡೆ ಗಮನವಿರಲಿಲ್ಲ. ಇನ್ನು ನಾನು ಕಷ್ಟಪಟ್ಟು ಕಲಿಯುತ್ತೇನೆ" ಎಂದು ಹೇಳಿದಳು. ನಂತರ ಅಜ್ಜಿ ಮತ್ತು ಮೊಮ್ಮಗಳು ಖುಷಿಯಿಂದ ಜೀವನ ನಡೆಸಿದರು.            ............................................. ವರ್ಷಿತ ಕೆ. ಜೆ 
ಹತ್ತನೇ ತರಗತಿ
ಸರಕಾರಿ ಪ್ರೌಢಶಾಲೆ ಮಾಣಿಲ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article