-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 31

ನಿಷ್ಪಾಪಿ ಸಸ್ಯಗಳು : ಸಂಚಿಕೆ - 31

ನಿಷ್ಪಾಪಿ ಸಸ್ಯಗಳು : ಸಂಚಿಕೆ - 31
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

        
     ಪ್ರೀತಿಯ ಮಕ್ಕಳೇ... ಹೇಗಿದ್ದೀರಿ? ನೀವು ನಿಮ್ಮ ಬಾಲ್ಯದಲ್ಲಿ ಅಂದರೆ ಎರಡು ವರ್ಷದಿಂದ ಹತ್ತು ವರ್ಷಗಳ ನಡುವೆ ಕ್ರಿಕೆಟ್, ಕಬಡ್ಡಿ, ಓಟಗಳಂತಹ ಆಟಗಳನ್ನಲ್ಲದೆ ಪ್ರಾಕೃತಿಕವಾಗಿ ಸಿಗುವಂತಹ ಯಾವ ವಸ್ತುಗಳನ್ನು ಬಳಸಿ ಆಟಗಳನ್ನಾಡಿರುವಿರಿ?
        ಎಲೆ ಮಡಚಿ ಪೀ ಪೀ ಊದಿದ್ದು, ಓಟೆಯ ನಡುವೆ ಅಲಿಮಾರ್ ಗಿಡದ ಕಾಯಿ ಇಟ್ಟು ಬೆಡಿ ಬಿಟ್ಟದ್ದು (ಶೂಟ್ ಮಾಡಿದ್ದು), ಗಾಳಿಯಲ್ಲಿ ಹಾರುತ್ತಿದ್ದ ಅಜ್ಜನ ಮೀಸೆಯ ಬೆನ್ನು ಹತ್ತಿದ್ದು ನೆನಪಿದೆಯೇ?
        ಇಂದಿನ ದಿನಗಳಲ್ಲಿ ಎಲ್ಲ ಪುಟಾಣಿಗಳಿಗೂ ಈ ಭಾಗ್ಯ ಸಿಗದಿರಬಹುದು. ಆದರೆ ಅಜ್ಜನ ಮೀಸೆ ಎಂಬ ವಸ್ತುವೊಂದು ಗಾಳಿಗೆ ಹಾರುತ್ತಿರುವುದನ್ನು ಹೆಚ್ಚಿನವರು ಕಂಡಿರಬಹುದು. "ಹೇ..ಮುಟ್ಬೇಡ.. ಮೈಕೈಗೆ ಅಂಟಿಸ್ಕೋ ಬೇಡ" ಅಂತ ಅಮ್ಮ ಗದರಿರಲೂ ಬಹುದು. ಸಣ್ಣ ತೆಳು ಹಾಳೆಯೊಂದಕ್ಕೆ ಕಾರಂಜಿಯಂತೆ ಬಿಳೀ ಕೂದಲು ಇದ್ದು ಊರಿಂದೂರಿಗೆ ಹಾರಾಟದ ಮುಖ್ಯ ಕಾರಣ ಗಾಳಿಯಿಂದಾಗುವ ಬೀಜಪ್ರಸಾರ.
      ನೀವೆಲ್ಲರೂ ನೋಡಿರಬಹುದಾದ ಎಕ್ಕ ಎನ್ನುವ ಗಿಡದ ಕೋಡಿನಲ್ಲಿ ಈ ರಚನೆಗಳನ್ನು ಕಾಣಬಹುದು. ಬಿಳೀ ಬಣ್ಣದ ಕೂದಲಿನಂತಹ ರಚನೆ ಅಜ್ಜನ ಮೀಸೆಯನ್ನು ನೆನಪಿಸುವುದರಿಂದ ಪುಟಾಣಿಗಳಿಗೆ ಅದು ಅಜ್ಜನಮೀಸೆ ಎನಿಸಿಕೊಂಡಿದೆ.
       ಎಕ್ಕದ ಗಿಡವನ್ನು ನಾವು ಮಾರ್ಗದ ಬದಿ, ಹೊಳೆ ಬದಿಗಳಲ್ಲಿ, ನವಗ್ರಹಗಳನ್ನು ಪೂಜಿಸುವ ದೇವಾಲಯಗಳಲ್ಲಿ, ಪಾಳು ಬಿದ್ದ ಐತಿಹಾಸಿಕ ಬಯಲುಗಳಲ್ಲಿ, ಸಸ್ಯೋದ್ಯಾನಗಳಲ್ಲಿ ಕಾಣಬಹುದು. ಇತ್ತೀಚಿನ ದಿನಗಳಲ್ಲಿ ಮನೆಗಳ ಅಂಗಳದಲ್ಲೂ ಈ ಸಸ್ಯಕ್ಕೆ ಜಾಗ ದೊರಕುತ್ತಿದೆ. ಏಕೆಂದರೆ ವಾಸ್ತುವಿನ ಕಲ್ಪನೆಯಲ್ಲಿ ಹಾಗೂ ಧಾರ್ಮಿಕ ವಿಚಾರಗಳಿಗಾಗಿ ಎಕ್ಕವು ಮಹತ್ವ ಪಡೆದುಕೊಂಡಿದೆ.
      ಎಕ್ಕದ ಸಸ್ಯವು ಬುಡದಿಂದಲೇ ಕವಲೊಡೆದು ಪೊದೆಯಂತೆ ಬೆಳೆಯುತ್ತದೆ. ಕೆಲವೊಮ್ಮೆ ಸಣ್ಣ ಮರದಂತೆ ಬೆಳೆಯಬಹುದು. ಗಿಡದ ಕಾಂಡ, ಎಲೆಗಳ ಮೇಲೆ ಪುಟ್ಟ ಬಿಳ ರೋಮವಿರುತ್ತದೆ. ಕಾಂಡ, ಎಲೆ, ಹೂವನ್ನು ಮುರಿದಾಗ ಬಿಳಿ ಬಣ್ಣದ ಹಾಲಿನಂತಹ ನೀರು ಅಥವಾ ಸಸ್ಯಕ್ಷೀರವಿರುತ್ತದೆ. ಚಿಕ್ಕ ತೊಟ್ಟಿನ ಸ್ವಲ್ಪ ದಪ್ಪ ಎಲೆಗಳು ಕಾಂಡದ ಮೇಲೆ ಅಭಿಮುಖವಾಗಿ ಜೋಡಣೆಯಾಗಿರುತ್ತದೆ. ಕಾಂಡದ ತುದಿಗಳಲ್ಲಿ ಹಾಗೂ ಎಲೆಗಳ ಕಂಕುಳಲ್ಲಿ ಹೂಗಳು ಗೊಂಚಲು ಗೊಂಚಲಾಗಿ ಮೂಡುತ್ತದೆ. ಒಂದೇ ಹೂವಿನ ತೊಟ್ಟಿನಲ್ಲಿ ಜೋಡಿ ಕಾಯಿಗಳು ರೂಪುಗೊಳ್ಳುತ್ತವೆ. ಇದರೊಳಗೆ ಸುಂದರವಾಗಿ ಒತ್ತೊತ್ತಾಗಿ ಜೋಡಣೆಯಾಗಿರುವ ತೆಳುವಾದ ಬೀಜಗಳ ತುದಿಗೆ ರೇಷ್ಮೆಯಂತೆ ಹಗುರವಾದ, ನುಣುಪಾದ ಬಿಳಿ ಬಣ್ಣದ ಕೂದಲಿನಂತಹ ಜೋಡಣೆಯಿರುತ್ತದೆ. ಈ ಕೋಡು (ಬೀಜ) ಒಣಗಿದಾಗ ಬಿರಿಯುತ್ತದೆ. ಆಗ ಅದರೊಳಗೆ ರಚನೆಗೊಂಡಿರುವ ತೆಳು ಬೀಜಗಳು ಈ ಕೂದಲಿನಂತಹ ರಚನೆಯ ಸಹಾಯದಿಂದ ಗಾಳಿಯಲ್ಲಿ ಪ್ಯಾರಾಚೂಟ್ ನಂತೆ ಬಿಡಿಸಿಕೊಂಡು ಹಾರುತ್ತವೆ. ಇದರ ಸಹಾಯದಿಂದ ಬೀಜಗಳು ತಾಯಿ ಸಸ್ಯದಿಂದ ಬಹುದೂರ ಹೋಗಲು ಸುಲಭವಾಗುತ್ತದೆ. ಇದು ಪ್ರಕೃತಿ ಸಸ್ಯಗಳ ಉಳಿವು ಮತ್ತು ಬೆಳವಣಿಗೆಗೆ ನೀಡಿದ ಕಾಣಿಕೆಯಲ್ಲವೇ?!
         ಈ ಎಕ್ಕದ ಗಿಡದಲ್ಲಿ ಎರಡು ವಿಧಗಳಿವೆ. ಒಂದು ಬಿಳಿ ಎಕ್ಕವಾದರೆ ಇನ್ನೊಂದು ಕಪ್ಪು ಅಥವಾ ಕರಿ ಎಕ್ಕ. ಬಿಳಿ ಎಕ್ಕದಲ್ಲಿ ಸುಂದರವಾದ ದಪ್ಪ ಎಸಳಿನ ಬಿಳಿ ಹೂಗಳಾದರೆ ಕರಿ ಎಕ್ಕದ ಹೂ ತಿಳಿ ನೇರಳೆಯಾಗಿರುತ್ತದೆ. ಸಂಸ್ಕೃತದಲ್ಲಿ ಬಿಳಿ ಎಕ್ಕವನ್ನು ಅರ್ಕ ಎಂದು ಗುರುತಿಸಿದರೆ ಕರಿ ಎಕ್ಕವನ್ನು ಅಲಾರ್ಕವೆನ್ನುತ್ತಾರೆ. ಕ್ಯಾಲೊಟ್ರೊಪಿಸ್ ಪ್ರೊಸೀರ (Calotropis procera) ಎಂಬ ವೈಜ್ಞಾನಿಕ ಹೆಸರಿರುವ ಎಕ್ಕ ಅಸ್ಕಿಪಿಯಡೇಸಿ (Asclepiepiadaceae) ಕುಟುಂಬಕ್ಕೆ ಸೇರಿದೆ.
       ಬಿಳಿ ಎಕ್ಕದ ಗಿಡವನ್ನು ಪೂಜಿಸುವ ಕ್ರಮ ಪುರಾತನವಾದುದು. ರಥ ಸಪ್ತಮಿಯ ದಿನ ಎಕ್ಕದ ಎಲೆಗಳನ್ನು ತಲೆಮೇಲಿಟ್ಟುಕೊಂಡು ಸ್ನಾನ ಮಾಡುವ ಕ್ರಮವಿದೆ. ಮಹಾಭಾರತದಲ್ಲಿ ಹಾಗೂ ಸ್ಕಂದ ಪುರಾಣದಲ್ಲಿಯೂ ಎಕ್ಕದ ಗಿಡದ ಉಲ್ಲೇಖಗಳಿವೆ. ಬಿಳಿ ಎಕ್ಕವನ್ನು ಸೂರ್ಯನ ಪ್ರತೀಕವಾಗಿ ಪೂಜಿಸಲಾಗುತ್ತದೆ. ಶಿವನಿಗೆ ಹಾಗೂ ಆಂಜನೇಯನಿಗೆ ಈ ಪುಷ್ಪವನ್ನು ಪ್ರಿಯವೆನ್ನಲಾಗುತ್ತದೆ.
         ಅಷ್ಟೇನೂ ಆಕರ್ಷಕವಲ್ಲದ, ದೊಡ್ಡ ಗುಂಪಾಗಿಯೇ ಬೆಳೆಯಬಯಸುವ ಈ ನಿಷ್ಪಾಪಿ ಸಸ್ಯವು ತನ್ನ ಒಡಲಿನ ಶ್ವೇತ ಕ್ಷೀರದ ಮೂಲಕ ಹಲವಾರು ಔಷಧೀಯ ಗುಣಗಳನ್ನು ಪಡೆದಿದೆ. ಇದರ ಎಲೆ, ಹೂವು, ಬೀಜಗಳು ಮಾನವನಿಗೆ ಪ್ರಯೋಜನಕಾರಿಯಾಗಿವೆ. ಸ್ನಾಯು, ಕೀಲು ನೋವು, ಅಸ್ತಮಾ, ಅಜೀರ್ಣ, ತಲೆನೋವು, ಮಧುಮೇಹ, ಮೂಲವ್ಯಾಧಿ, ಕಿವಿನೋವು, ಕಾಲರಾ, ಅಪಸ್ಮಾರ ಇತ್ಯಾದಿಗಳಿಗೆ ಉತ್ತಮ ಔಷಧಿಯಾಗಿಯೂ ಬಳಸಲಾಗುತ್ತದೆ. ಇದರ ಎಲೆಗಳಿಗೆ ಎಣ್ಣೆ ಹಚ್ಚಿ ಬಿಸಿಮಾಡಿ ನೋವಿರುವ ಭಾಗಗಳಿಗೆ ತಾಗಿಸಿದರೆ ನೋವು ಕಡಿಮೆಯಾಗುವುದು. ಮುಳ್ಳು ಚುಚ್ಚಿದಾಗ, ಚೇಳಿನಂತಹ ವಿಷಜಂತುಗಳು ಕಚ್ಚಿದಾಗ ನೋವು, ಉರಿಯ ಉಪಶಮನಕ್ಕೆ ಸಹಾಯಕ. ಔಷಧೀಯ ಗುಣಗಳು ಕಪ್ಪು ಹಾಗೂ ಬಿಳಿ ಎಕ್ಕದಲ್ಲಿ ಸಾಮಾನ್ಯವಾಗಿದ್ದು ಪಶುರೋಗ ಚಿಕಿತ್ಸೆಯಲ್ಲೂ ಹೊಟ್ಟೆಯುಬ್ಬರ, ಗಾಯ ವಾಸಿಯಾಗಲು, ಬಾವು ಬಂದಾಗ ಬಳಸುವರು.
      ಮಕ್ಕಳೇ, ಇದರ ಎಲೆ ಹೂವುಗಳನ್ನು ಮುರಿಯುವಾಗ ಒಸರುವ ಬಿಳಿ ಹಾಲನ್ನು ಕಣ್ಣಿಗೆ ಬೀಳದಂತೆ ಜಾಗ್ರತೆ ವಹಿಸಬೇಕಾಗುತ್ತದೆ. ಎಕ್ಕವನ್ನು ಗಿಡಮೂಲಿಕೆಗಳ ಸಾಲಿಗೆ ಸೇರಿಸಲಾಗಿದೆಯಾದರೂ ಇದರ ಗಿಡಗಳನ್ನು ಎಲ್ಲೆಂದರಲ್ಲಿ ಕಾಣಲಾರೆವು. ಗಾಳಿಯಲ್ಲಿ ಬೀಜಗಳು ಹರಡಿದರೂ ಗಿಡಗಳು ಹುಟ್ಟುವುದು ಬಲು ವಿರಳ. ಈ ಸಸ್ಯ ಅಳಿವಿನಂಚಿಗೆ ಸರಿದಿದೆ ಎಂದೇ ಹೇಳುವ ದೌರ್ಭಾಗ್ಯ ನಮ್ಮೆದುರಿಗಿದೆ.
    ಆದ್ದರಿಂದ ಇದನ್ನು ಒಂದು ತುಂಡು ಗೆಲ್ಲು ನೆಡುವ ಮೂಲಕವೂ ನಾವು ಉಳಿಸಿಕೊಳ್ಳಬಹುದು. ಆ ಪ್ರಯತ್ನವನ್ನು ನಾವು ಮಾಡಲೇ ಬೇಕಲ್ಲವೇ? 
      ಸರಿ ಮಕ್ಕಳೇ, ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.... ನಮಸ್ಕಾರ
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************




Ads on article

Advertise in articles 1

advertising articles 2

Advertise under the article