-->
ಹೃದಯದ ಮಾತು : ಸಂಚಿಕೆ - 24

ಹೃದಯದ ಮಾತು : ಸಂಚಿಕೆ - 24

ಹೃದಯದ ಮಾತು : ಸಂಚಿಕೆ - 24
ಲೇಖಕರು : ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

             
ನನ್ನ ಪ್ರೀತಿಯ ಮಕ್ಕಳೇ... ರಾಷ್ಟ್ರಮಟ್ಟದಲ್ಲಿ ತನ್ನ ಛಾಪನ್ನು ಮೂಡಿಸಿರುವ ಪ್ರೌಢಶಾಲೆಯೊಂದರ ವಿದ್ಯಾರ್ಥಿಗಳಾಗುವ ಅವಕಾಶ ಪಡೆದ ನಿಮಗೆ ಅಭಿನಂದನೆಗಳು. ನೋವು ನಲಿವಿನ ಸಂಗಮಗಳ ಸುದೀರ್ಘ ಪಯಣ ನನ್ನದು. ವರ್ಷಗಳು ಸವೆದು, ದೇಹ ಮಾಗುತ್ತಿದ್ದಂತೆ ನನ್ನನ್ನು ನಾನು ಶುದ್ಧೀಕರಿಸಿಕೊಳ್ಖುತ್ತಾ 28 ವರ್ಷಗಳನ್ನು ಈ ಮಣ್ಣಿನಲ್ಲಿ ಕಳೆದೆ. ನನ್ನಲ್ಲಿ ನನ್ನ ಅಪ್ಪ ಹಾಕಿಕೊಟ್ಟ ಶ್ರೇಷ್ಠ ಸಂಸ್ಕಾರದ ಒಂದಷ್ಟು ಅಂಶ ಪಾಲಿಸಿದ ತೃಪ್ತಿ ಇದೆ. ಕ್ಯಾಲೆಂಡರ್ ದಿನಾಂಕ ಬದಲಾಗುತ್ತಿದ್ದಂತೆ, ಜೀವನದಲ್ಲಿ ಅರಗಿಸಿಕೊಳ್ಳಲಾರದ ಅನೇಕ ಘಟನೆಗಳು ಸಂಭವಿಸಿವೆ. ಬದುಕಿನ ಶಕ್ತಿಗಳಾಗಿದ್ದ ಅಪ್ಪ ಅಮ್ಮ ಸಮಾಧಿಯೊಳಗೆ ಚಿರನಿದ್ರೆಯಲ್ಲಿ ಮಲಗಿದ್ದಾರೆ. ಅವರೆಂದೂ ಎದ್ದು ಬರಲಾರರು. ಆದರೆ ಅದೊಂದು ದಿನ ನಾನು ಅವರ ಬಳಿ ಹೋಗಲಿಕ್ಕಿದೆ. ಅವರ ಸಮಾಧಿಯ ಮುಂದೆ ನಿಂತು ‌"ನಿಮ್ಮ ಮಗನಾದ ನಾನು, ನೀವು ಹೆಮ್ಮೆಪಡುವಂತೆ ಬದುಕಿದ್ದೇನೆ" ಎಂದು ಗರ್ವದಿಂದ ಹೇಳಬಲ್ಲೆ. ಇಂದು ಹಣದ ಶ್ರೀಮಂತಿಕೆ ಹೊರತು ಮತ್ತೆಲ್ಲಾ ಶ್ರೀಮಂತಿಕೆಗಳ ಒಡೆಯನಾಗಿದ್ದೇನೆ. ಅಪ್ಪ- ಅಮ್ಮನಿಗೆ ಉತ್ತಮ ಮಗನಾಗಿದ್ದೇನೆ. ಹೆಂಡತಿ ಗರ್ವ ಪಡುವ ಗಂಡನಾಗಿದ್ದೇನೆ. ಮಕ್ಕಳ ಇಷ್ಟಾರ್ಥಗಳನ್ನು ನೆರವೇರಿಸಿದ ಅಪ್ಪನಾಗಿದ್ದೇನೆ. 

ನಿಮ್ಮಿಂದ ಇಂದು ಅನಿವಾರ್ಯವಾಗಿ ವಿದಾಯ ಹೇಳುತ್ತಿದ್ದೇನೆ. ಕೊಯ್ಯೂರು ನನ್ನ ಜನ್ಮಭೂಮಿ. ಕಾಯಕ ಕೈಗೆ ಬರುವ ತನಕ ನಾನೂ ಓಡಾಡಿದ್ದೂ ಅದೇ ಮಣ್ಣಿನಲ್ಲಿ. ಊರಿನ ಎಲ್ಲಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕುಣಿದಾಡಿದ್ದೇನೆ. ಊರಿನ ಜಾತ್ರೆಯಲ್ಲಿ ಸುತ್ತಾಡಿದ್ದೇನೆ. ಮಸೀದಿಯ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದೇನೆ. ಅಷ್ಟಮಿ, ಚೌತಿ ಇವುಗಳೆಲ್ಲಾ ಏಕತೆಯ ಸಂದೇಶ ಸಾರುತ್ತಿತ್ತು. ಹಸಿದವರ ಹೊಟ್ಟೆ ತಣಿಸುತ್ತಿದ್ದ ಅಪ್ಪನನ್ನು ನೋಡಿಕೊಂಡು ಬೆಳೆದಿದ್ದೇನೆ. ಜಾತಿ - ಧರ್ಮ ನೋಡದೆ ಹಸಿದವರಿಗೆ ತುತ್ತು ಕೊಟ್ಟ ಅಮ್ಮನ ತೆಕ್ಕೆಯಲ್ಲಿ ಮಲಗಿದ್ದೇನೆ. ಅನ್ಯರ ಸೊತ್ತಿಗೆ ಆಸೆ ಪಡಬೇಡವೆಂಬ ಅವರ ತಾಕೀತು ನನಗೆ ನೆನಪಿದೆ. ಕೋಪವನ್ನು ನಿಗ್ರಹಿಸುವ ಕಲೆ ಅವರಿಂದ ಕರಗತ ಮಾಡಿಕೊಂಡವ ನಾನು. ಚಿಕ್ಕ ಹುಡುಗನಾಗಿರುವಾಗಲೇ ಗಂಡನ ಗೂಡು ಸೇರಿದ ಸದ್ಗುಣ ಸಂಪನ್ನೆಯಾದ ನನ್ನಕ್ಕ, ಗ್ರಾಮ ರಾಜಕೀಯದಲ್ಲಿ ಛಾಪು ಮೂಡಿಸಿ, ಊರವರ ಗೌರವ ಪಡೆದಿರುವ ದೊಡ್ಡಣ್ಣ, ಧಾರ್ಮಿಕ ಗುರುವಾಗಿ ಎಲ್ಲರ ಮೆಚ್ಚುಗೆ ಪಡೆದ ಮತ್ತೊಬ್ಬ ಅಣ್ಣ, ಮಧ್ಯಮ ನಾನಾಗಿ, ಒಬ್ಬ ತಮ್ಮ ಸೌಹಾರ್ಧತೆಯ ಸಂಕೇತವಾಗಿ ಮಠ, ಮಸೀದಿ, ಮಂದಿರಗಳಲ್ಲಿ ಹಿಂದೂ - ಮುಸ್ಲೀಂ ಐಕ್ಯತೆಯನ್ನ ಸಾರುವ ಪ್ರಖರ ಭಾಷಣಕಾರನಾದರೆ, ಸಹೃದಯವುಳ್ಳ ತಂಗಿಯನ್ನು ಪಡೆದು, ಕೇಂದ್ರ ಸರ್ಕಾರದ ನೋಟರಿಯಾಗಿ ವಿದ್ಯಾರ್ಥಿಗಳಿಗೆ ಆವಶ್ಯಕತೆಯಿದ್ದರೆ ಶುಲ್ಕರಹಿತ ಸೇವೆ ಸಲ್ಲಿಸುತ್ತಿರುವ ನನ್ನ ಪ್ರೀತಿಯ ತಮ್ಮನನ್ನು ಪಡೆದಿರುವುದು ದೇವರ ಅನುಗ್ರಹವಾಗಿದೆ.

ಕರ್ಮಕ್ಕಾಗಿ ತಾತ್ಕಾಲಿಕವಾಗಿ ಅಲ್ಪಾವಧಿ ಅಲ್ಲಲ್ಲಿ ಸೇವೆಸಲ್ಲಿಸಿ ತನ್ನದೇ ಆದ ಛಾಪನ್ನು ಮೂಡಿಸಿ, ಕಟ್ಟಕಡೆಗೆ ಕರ್ಮಭೂಮಿಯಾಗಿ ನೆಲೆನಿಂತ ಊರೇ ನಡ. ನಡದಲ್ಲಿ ನಾನು ನನ್ನ ಕನಸಿನ ಸೌಧವನ್ನು ಕಟ್ಟಬೇಕಿತ್ತು. ಪಯಣ ಸುಲಭವಿರಲಿಲ್ಲ. ಯೋಜನೆಗಳು ಹಾಗೂ ಯೋಚನೆಗಳು ಒಂದಾದಾಗ ಅವಕಾಶಗಳು ಕೂಡಿಬಂತು. ಮಕ್ಕಳಿಗೆ ಗಣಿತ ಬೋಧಿಸಿದ್ದರೆ ಸಾಕಿತ್ತು!!! ಆದರೆ ಮನಸೊಪ್ಪಲಿಲ್ಲ. ನನ್ನೊಳಗೆ ಹುದುಗಿದ್ದ ಶಕ್ತಿ ಸ್ಪೋಟವಾಗಬೇಕಿತ್ತು. ನನ್ನ ವಿದ್ಯಾರ್ಥಿಗಳು ಬೆಳೆದು ನಿಂತರು. ಬೆಳೆದು ನಿಂತು ಒಂದಷ್ಟು ಸಂಪಾದನೆ ಕೈಸೇರಿದಾಗ, ನಾನು ಅವರ ಮುಂದೆ ಕೈಯೊಡ್ಡಿದೆ. ನೀಡಿದ ಕೈಗಳು ಬರಿದಾಗಲಿಲ್ಲ. ಉದ್ದೇಶ ಹಾಗೂ ಹೃದಯ ದೇವರು ತಿಳಿದಿದ್ದ. ಕುಸಿದು ಹೋಗಬೇಕಾದವ ಎದ್ದು ನಿಲ್ಲಬೇಕಿತ್ತು. ಅದಕ್ಕೊಂದು ವೇದಿಕೆ ಸೃಷ್ಟಿಸಬೇಕಿತ್ತು. 

ಅದೊಂದು ದಿನ ಮಲಗಿ ಕನಸೊಂದು ಕಂಡೆ. ಕಟ್ಟೆಯೊಡೆದು ಕಣ್ಣೀರಲ್ಲಿ ಮಲಗಿ ಜಾರಿದ ನಿದ್ರೆಯಲ್ಲಿ ಕಂಡ ಕನಸಲ್ಲಿ ಕಣ್ಣ ಮುಂದೆ ಬಂದು ನಿಂತದ್ದೇ "ಗಣಿತ ಲೋಕ" ಕನಸು ನನಸಾಗಲು ದಿಟ್ಟ ಹೆಜ್ಜೆ ಇಟ್ಟೆ. ನಡೆಯುವ ಹಾದಿಯಲ್ಲಿ ಕಲ್ಲುಗಳಿದ್ದವು. ಅವುಗಳನ್ನು ಸಾವರಿಸಿಕೊಂಡು ನಡೆಯ ತೊಡಗಿದೆ. ಆದರೆ ಬೂಟಿನೊಳಗೆ ಸೇರಿಕೊಂಡ ಕಲ್ಲಿನ ನೋವು ಕಠಿಣವಾಗಿ ಕಾಡಿತ್ತು. 

"ಗಣಿತ ಲೋಕ" ನನ್ನ ಕನಸು. ಅದು ಮುಂದಿನ ಎಲ್ಲಾ ಕನಸುಗಳನ್ನು ಸಾಕಾರಗೊಳಿಸುತ್ತಾ ಬಂತು. ರಾಜ್ಯದ ತುತ್ತ ತುದಿ ಜೌರಾದ್ ನಿಂದ ಪ್ರಾರಂಭಗೊಂಡ ನನ್ನ ಚೈತ್ರ ಯಾತ್ರೆ ಬಹುತೇಕ ಜಿಲ್ಲೆಗಳನ್ನು ಸುತ್ತಿದವು. ಸಾವಿರಾರು ಅಭಿಮಾನಿಗಳು ನನ್ನೊಳಗೆ ಪ್ರೀತಿಯ ಸಿಂಚನಗೈದರು. ಜಿಲ್ಲೆ, ರಾಜ್ಯದ ಗಡಿದಾಟಿ ಕಟ್ಟಕಡೆಗೆ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡೆ. ಮುಡಿಗೇರಿಸಿದ್ದು ಕೇವಲ ಪ್ರಶಸ್ತಿಯೇ ಹೊರತು ಅಹಂಕಾರವಾಗಿರಲಿಲ್ಲ.

ಮಕ್ಕಳೇ, 2020 ರಿಂದ ಈ ದಿನದವರೆಗೆ ನಿಮಗೆ ಪಾಠ ಮಾಡಿದ್ದು ದೇಶದ ಅತ್ಯುತ್ತಮ ಗಣಿತ ಶಿಕ್ಷಕರಾಗಿದ್ದರು ಎಂಬುವುದು ನಿಮ್ಮ ಗಮನಕ್ಕೆ ಬಾರದೇ ಹೋಗಿರಬಹುದು. ಆದರೆ ನನ್ನ ಒಂದೆರಡು ಗಂಟೆಯ ಅವಧಿಯಲ್ಲಿ ಕಣ್ಣೀರು ಸುರಿಸಿ ಭಾವುಕರಾದ ಸಾವಿರಾರು ಮಕ್ಕಳು ಈ ರಾಜ್ಯದಲ್ಲಿದ್ದಾರೆ. ಪಕ್ಕದ ಶಾಲೆಯ ಮಕ್ಕಳಿಗೆ ಪ್ರೇರಣೆ ನೀಡಲು ಹೋದಾಗ, "ಇವರು ನಮ್ಮ ಶಿಕ್ಷಕರಾಗಿದ್ದರೆ ಎಷ್ಟು ಚೆನ್ನಾಗಿತ್ತು!!! ಎಂದು ಹೇಳಿದ್ದಲ್ಲದೆ, ನಡದ ಮಕ್ಕಳಾದ ನಿಮ್ಮ ಬಗ್ಗೆ ಹೊಟ್ಟೆಕಿಚ್ಚು ಪಟ್ಟದ್ದೂ ಇದೆ.

ಮಕ್ಕಳೇ ನಡವನ್ನು ಶಾಶ್ವತವಾಗಿ ತೊರೆಯುತ್ತಿದ್ದೇನೆ. "ಗಣಿತ ಲೋಕ" ದೊಳಗೆ ಕುಳಿತು ಗಂಟೆಗಟ್ಟಲೆ ಕಣ್ಣೀರು ಸುರಿಸಿದೆ. ಮಡದಿಯೂ ಕಣ್ಣೀರಿಗೆ ಜೊತೆಯಾದಳು. ನನ್ನ "ಗಣಿತ ಲೋಕ" ನನಗೆ ಪರಕೀಯವಾದದ್ದನ್ನು ಅರಗಿಸಿಕೊಳ್ಳಲು ವರ್ಷಗಳು ಸಾಲದು. ಆ ಲೋಕದೊಳಗೆ ಅಗಣಿತ ಮಂದಿಯ ಸಂಗಮವಾಗಿದೆ. ನನ್ನ ಮಾತುಗಳನ್ನು ನಿಬ್ಬೆರಗಾಗಿ ಕೇಳಿದ್ದಾರೆ. ಮಾದರಿಗಳ ಕಾರ್ಯವೈಖರಿಯನ್ನು ನಿಬ್ಬೆರಗಾಗಿ ನೋಡಿದ್ದಾರೆ. ಪ್ರತಿಯೊಬ್ಬರ ಬಾಯಿಂದ ಹೊರಟ ಪದ "ನಿಮ್ಮಿಂದ ಇದು ಹೇಗೆ ಸಾಧ್ಯವಾಯಿತು?"

ಮಕ್ಕಳೇ ನಿಮಗಿಂದು ನಾನು ಕಣ್ಣೀರ ವಿದಾಯ ಹೇಳುತ್ತಿದ್ದೇನೆ. ನನ್ನ ನಿರ್ಗಮನ ಅರಿತು ಕಣ್ಣೀರು ಸುರಿಸಿದ್ದೀರಿ. ಅಪ್ಪಿಕೊಂಡು ಅತ್ತಿದ್ದೀರಿ. ಶೂನ್ಯತೆಯಿಂದ ನನ್ನನ್ನು ನೋಡಿದ್ದೀರಿ. ತೋರಿದ ಪ್ರೀತಿ ಮರೆಯಲಾಗದು. ನಿಮ್ಮಲ್ಲೊಬ್ಬ ನನ್ನನ್ನು ಐದು ನಿಮಿಷಗಳ ಕಾಲ ಬಿಡದೆ ಅಪ್ಪಿಕೊಂಡು ಅತ್ತಾಗ ವೃತ್ತಿ ಬದುಕಿನಲ್ಲಿ ಗೆದ್ದದ್ದು ಅರಿವಾಯಿತು. ಬಹಳಷ್ಟು ಭಾವನೆಗಳನ್ನು ಬರಹಗಳಲ್ಲಿ ವ್ಯಕ್ತಪಡಿಸಿದ್ದೀರಿ. ನಿಮ್ಮ ಪ್ರೀತಿಗೆ ಅಭಾರಿಯಾಗಿದ್ದೇನೆ. ಆ ಪ್ರೀತಿಗೆ ಮರಳಿಕೊಡಲು ನನ್ನಲ್ಲಿ ಉಳಿದ್ದು ಏನೂ ಇಲ್ಲ. ನಿಮಗೆ ಅಪ್ಪನ ಆಸರೆ ನೀಡಿದ್ದೇನೆ. ತಾಯಿಯ ಮಮತೆ ನೀಡಿದ್ದೇನೆ, ಗುರುವಾಗಿ ಮಾರ್ಗದರ್ಶಕನಾದೆ. 

ಬರೆದರೂ ಮುಗಿಯದ ವೇದನೆಯಿದೆ. ಆದರೆ ಅಂತ್ಯಗೊಳಿಸಲೇ ಬೇಕಿದೆ. ನಿಮ್ಮ ಬಾಳು ಸುಗಮವಾಗಲಿ. ಸಮಾಜದ ಅತ್ಯುನ್ನತ ಪದವಿಗಳು ನಿಮ್ಮದಾಗಲಿ. ಮುಂದಿನ ಚಂದ್ರಯಾನ, ಮಂಗಳಯಾನದ ಅಂಗ ನೀವಾಗಿ. ಕೊನೆಯದಾಗಿ ಸಕಲರನ್ನೂ ಪ್ರೀತಿಸುವ ಮಾನವರಾಗಿ. ವಿಶ್ವಮಾನವತೆಯ ಹರಿಕಾರರಾಗಿ ಎಂದು ಹರಸುತ್ತಿದ್ದೇನೆ.
............................ ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************



ನನ್ನ ಲೇಖನಗಳ ಸಂಗ್ರಹ (ಒಟ್ಟು62) ಪುಸ್ತಕದ ರೂಪದಲ್ಲಿ ಲಭ್ಯವಿದೆ. ಆಸಕ್ತಿಯುಳ್ಳ ಓದುಗರು ಸಂಪರ್ಕಿಸಬಹುದು....... ಯಾಕೂಬ್ ಎಸ್ ಕೊಯ್ಯೂರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು, ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************




Ads on article

Advertise in articles 1

advertising articles 2

Advertise under the article