ಹಕ್ಕಿ ಕಥೆ : ಸಂಚಿಕೆ - 134
Tuesday, January 16, 2024
Edit
ಹಕ್ಕಿ ಕಥೆ : ಸಂಚಿಕೆ - 134
Merlin Bird ID app ಬಳಸಿ ಹಕ್ಕಿ ಯಾವುದು ಅಂತ ಹುಡುಕಿದೆ.. ಒಣಭೂಮಿ ಮತ್ತು ಕುರುಚಲು ಕಾಡುಗಳ ತೆರೆದ ಪ್ರದೇಶದಲ್ಲಿ ಮಾತ್ರ ಕಾಣಸಿಗುವ ಈ ಪುಟಾಣಿ ಹಕ್ಕಿಯ ಹೆಸರು ಕಪ್ಪು ಬಿಳಿ ಬೇಲಿ ಚಟಕ. ಹೆಣ್ಣು ಹಕ್ಕಿಗೆ ಥೇಟ್ ಮಣ್ಣಿನ ಬಣ್ಣ. ಒಣ ಹುಲ್ಲುಗಳ ನಡುವೆ ಅದನ್ನು ತಕ್ಷಣ ಗುರುತಿಸುವುದೇ ಕಷ್ಟ. ಹುಳುಹುಪ್ಪಟೆ ಮತ್ತು ಕ್ರಿಮಿ ಕೀಟಗಳೇ ಇದರ ಮುಖ್ಯ ಆಹಾರ. ಫೆಬ್ರವರಿ ಇಂದ ಮೇ ತಿಂಗಳ ನಡುವೆ ಮಣ್ಣಿನ ಸಂದಿಯಲ್ಲಿ, ಇಲ್ಲ ಸಣ್ಣಪುಟ್ಟ ಸೆರೆಗಳಲ್ಲಿ ಪುಟಾಣಿ ಗೂಡನ್ನು ಮಾಡಿ ಮೊಟ್ಟೆ ಇಟ್ಟು ಮರಿ ಮಾಡುತ್ತದೆ. ಕಾವು ಕೊಡುವ ಕೆಲಸವನ್ನು ಹೆಚ್ಚಾಗಿ ಹೆಣ್ಣು ಹಕ್ಕಿಯೇ ಮಾಡುತ್ತದೆ. ಅದರ ಕಂದು ಬಣ್ಣ ಅದಕ್ಕೆ ಒಳ್ಳೆಯ ರಕ್ಷಣೆ ನೀಡುತ್ತದೆ. ಮರಿಗಳಿಗೆ ಆಹಾರ ತಿನ್ನಿಸುವ ಜವಾಬ್ದಾರಿಯನ್ನು ಗಂಡು ಹಕ್ಕಿ ಹೆಚ್ಚಾಗಿ ನೋಡಿಕೊಳ್ಳುತ್ತದೆ. ಬೆಳಗ್ಗೆ ಅಥವಾ ಸಂಜೆ ವಾಕಿಂಗ್ ಹೋಗುವಾಗ ಈ ಪುಟಾಣಿ ಬೇಲಿ ಚಟಕ ನಿಮಗೂ ಕಾಣಸಿಗಬಹುದು. ಇದರ ಬಗ್ಗೆ ನಿಮಗೆ ತಿಳಿದಿರುವ ಕಥೆಗಳಿದ್ದರೆ ನಮ್ಮ ಜೊತೆ ಹಂಚಿಕೊಳ್ಳಿ.
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಗುಬ್ಬಚ್ಚಿ ಗಾತ್ರದ ಪುಟಾಣಿ ಹಕ್ಕಿ
ಹೊಲದಲಿ ಹುಲ್ಲಲಿ ಕಾಣಲು ಸಿಗುವೆ
ಬೇಲಿಯ ಅಂಚಲಿ ಕುಪ್ಪಳಿಸುತಿರುವೆ
ಚಿಪ್ ಚಿಪ್ ಚೀ ಎಂದು ಕೂಗುವೆನು
ಗಂಡಿಗಾದರೆ ಕಪ್ಪನೆ ಬಣ್ಣ
ಹೆಣ್ಣಿಗೆ ಇರುವುದು ಮಣ್ಣಿನ ಬಣ್ಣ
ತಿಳಿಯಿತೆ ನಿಮಗೆ ನಾನ್ಯಾವ ಹಕ್ಕಿ...?
ಇತ್ತೀಚೆಗೆ ತರಬೇತಿಗೆ ಅಂತ ಕಲಬುರ್ಗಿಗೆ ಹೋಗಿದ್ದೆ. ಕಲಬುರಗಿ ಪಟ್ಟಣದ ಹೊರಗಡೆ
ಕೆಸರಟಗಿ ಎಂಬಲ್ಲಿ ನಮ್ಮ ತರಬೇತಿ ಕೇಂದ್ರ ಇತ್ತು. ಸುತ್ತಲೂ ಹೊಲ ಗದ್ದೆಗಳು. ಚಳಿಗಾಲದ ಕಾರಣಕ್ಕೋ ಏನೋ ಪೂರ್ತಿ ಹುಲ್ಲು ಒಣಗಿತ್ತು. ಅಲ್ಲಲ್ಲಿ ಸ್ವಲ್ಪ ಕೃಷಿ ಚಟುವಟಿಕೆ ನಡೆದಿತ್ತು. ನಾವು ಬೆಳಗಿನ ವಾಕಿಂಗ್ ಮಾಡಲು ಅಂತ ಹೋದಾಗ, ಒಂದು ಪುಟಾಣಿ ಹಕ್ಕಿ ರಸ್ತೆಯ ಬದಿಯ ಕಲ್ಲಿನ ಕಂಬದ ಮೇಲೆ ಬಂದು ಕುಳಿತುಕೊಂಡಿತು.
ನೋಡಲಿಕ್ಕೆ ಕಪ್ಪು ಬಣ್ಣದ ಹಕ್ಕಿ. ಮೈಯೆಲ್ಲಾ ಕಪ್ಪಾದರೂ ಎದೆ ಮತ್ತು ಕಿಬ್ಬೊಟ್ಟೆಯ ಭಾಗ ಒಂದಿಷ್ಟು ಬಿಳಿ ಬಣ್ಣ. ಗುಬ್ಬಚ್ಚಿಯ ಗಾತ್ರದ ಈ ಪುಟಾಣಿ ಹಕ್ಕಿ ಬೇಲಿಯ ತುದಿಯಲ್ಲಿ, ಇಲ್ಲ ಹಾರಿ ಪಕ್ಕದ ಹುಲ್ಲಿನ ತುದಿಯಲ್ಲಿ ಕುಳಿತು ಚಿಪ್ ಚಿಪ್ ಅಂತ ಕೂಗಿ ನಮ್ಮ ಗಮನ ಸೆಳೆಯುತ್ತಿತ್ತು. ಕೆಲವೊಮ್ಮೆ ಹುಲ್ಲುಗಳ ನಡುವೆ ನೆಲಕ್ಕೆ ಇಳಿದು ಮಾಯ ಆಗಿಬಿಡುತ್ತಿತ್ತು. ಮತ್ತೆ ಕೆಲವೇ ಕ್ಷಣದಲ್ಲಿ ಬೇಲಿಯ ಬದಿಗೆ ಬಂದು ಕುಳಿತುಕೊಂಡು ತನ್ನ ಪುಟಾಣಿ ಬಾಲವನ್ನ ಅಲ್ಲಾಡಿಸುತ್ತಾ ಆ ಕಡೆ ಈಕಡೆ ನೋಡುತಿತ್ತು.
ಇಂಗ್ಲೀಷ್ ಹೆಸರು: Pied Bushchat
ವೈಜ್ಞಾನಿಕ ಹೆಸರು: Saxicola caprata
ಚಿತ್ರ : ಅರವಿಂದ ಕುಡ್ಲ
ಮುಂದಿನ ವಾರ ಹೊಸತೊಂದು ಹಕ್ಕಿ ಕಥೆ ಮತ್ತು ಒಗಟಿನೊಂದಿಗೆ ಮತ್ತೆ ಭೇಟಿ ಮಾಡೋಣ.
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************