-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 33

ನಿಷ್ಪಾಪಿ ಸಸ್ಯಗಳು : ಸಂಚಿಕೆ - 33

ನಿಷ್ಪಾಪಿ ಸಸ್ಯಗಳು : ಸಂಚಿಕೆ - 33
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

        
ಪ್ರೀತಿಯ ಮಕ್ಕಳೇ,
       ಹೇಗಿದ್ದೀರಿ? ನೀವು ನಿಮ್ಮ ಸುತ್ತಮುತ್ತಲಿರುವ ಗಿಡ, ಮರ, ಬಳ್ಳಿಗಳನ್ನು ಗಮನಿಸುತ್ತಿರುವಿರಾ? ಸಸ್ಯವರ್ಗ ಚಿಗುರು, ಹೂ ಹಣ್ಣುಗಳಿಂದ ನಳನಳಿಸುತ್ತಿರುವುದನ್ನು ನೋಡಿದರೇನೆ ವಸಂತ ಋತುವಿನ ಆಗಮನವಾಗಿದೆ ಎಂದು ತಿಳಿದುಕೊಳ್ಳಬಹುದು ಅಲ್ಲವೇ...?
        ಹೌದು.... ಮಕರ ಸಂಕ್ರಮಣ ಕಳೆದು ಉತ್ತರಾಯಣ ಕ್ಕೆ ಸೂರ್ಯನ ನಡೆ ಸಾಗಿದೆ. ಹಗಲು ಹೆಚ್ಚು ಇರುಳು ಕಡಿಮೆಯಾಗುತ್ತಿದ್ದಂತೆ ವಸಂತನಾಗಮನವಾಗಿದೆ. ಅಲ್ಲಲ್ಲಿ ಹಳದಿ, ಕೆಂಪು, ಬಿಳಿ ಹೂಗಳ ಮಾಲೆಗಳು ಭೂಮಿತಾಯಿಯನ್ನು ಅಲಂಕರಿಸುತ್ತಿವೆ. ಕೆಲವು ಸಸ್ಯಗಳಲ್ಲಿ ಮುಳ್ಳುಗಳದ್ದೇ ಕಾರುಬಾರಾದರೂ ಸುಂದರವಾದ ಹೂಗಳನ್ನರಳಿಸಿ ಹುಬ್ಬೇರುವಂತೆ ಮಾಡುತ್ತವೆ. ಸಸ್ಯ ಯಾವುದೆಂದು ನೋಡುವಂತೆ ಈ ಹೂಗಳ ಲಾವಣ್ಯವೇ ಒತ್ತಾಯಿಸುತ್ತದೆ. ಇಂತಹ ಹೂವೊಂದು ಹಳದಿ ಹಾಗೂ ಅರಶಿನ ಬಣ್ಣ ಹಚ್ಚಿಕೊಂಡು ಗೊಂಚಲುಗಳಲ್ಲಿ ಅರಳಿ ಬಿರುಬಿಸಿಲಿಗೂ ನಗುತ್ತಿರುವುದನ್ನು ನೀವೀ ದಿನಗಳಲ್ಲಿ ಕಾಣಬಹುದು. ಆಸೆಯಿಂದ ಹೂ ಕೊಯ್ಯೋಣವೆಂದು ಹತ್ತಿರಕ್ಕೆ ಹೋದಿರಾದರೆ "ಚೀ..ಮುಳ್ಳು"! ಎಂದು ಖಂಡಿತಕ್ಕೂ ದೂರ ಸರಿಯುವಿರಿ. ಏಕೆಂದರೆ ಆ ಗಿಡದ ಮೈಮೇಲೆಲ್ಲಾ ಪುಟಾಣಿ ಗಾತ್ರದ ಚುಚ್ಚುವ ಮುಳ್ಳುಗಳು! ಇದನ್ನು ತುಳುವಿನಲ್ಲಿ ಚೀಮುಳ್ಳು ಎಂದೇ ಕರೆಯುವರು. ಕನ್ನಡದಲ್ಲಿ ಮುಳ್ಳು ಕೆಂಜಿಗ, ಕೆಂಜಿಗ, ಚೆಂದಿಗೆ ಮುಳ್ಳು, ಈಜಿ ಮುಳ್ಳು, ಗಣಜಿಲು, ಕೊಮ್ಮೆ, ಕೆಂಚಿಕಿ ಎಂದೆಲ್ಲಾ ಕರೆಯುವರು.
      Caesalpina mimosoides ಎಂಬ ಸಸ್ಯ ಶಾಸ್ತ್ತೀಯ ಹೆಸರುಳ್ಳ ಕೆಂಜುಗ ಅಥವಾ ಚೀಮುಳ್ಳು Gulmohar ಅಥವಾ Caesalpiniacese ಕುಟುಂಬಕ್ಕೆ ಸೇರಿದೆ. ಮಲೆನಾಡು, ಕರಾವಳಿಯೆಲ್ಲೆಡೆ ಕಾಣಿಸುವ ಈ ಕೆಂಜಿಗ ಸಸ್ಯ ಗದ್ದೆ, ತೋಟ, ಮಾರ್ಗದ ಬದಿಯ ಬೇಲಿಗಳನ್ನೂ ಆವರಿಸಿಕೊಳ್ಳುವುದುಂಟು. ಬಳ್ಳಿಯಂತೆ ತೆವಳುತ್ತಾ ನೆಲವನ್ನಾವರಿಸಲೂ ಬಹುದು ಅಥವಾ ಮರವನ್ನೇರಲೂ ಸ್ವಲ್ಪಮಟ್ಟಿಗೆ ಸಾಧ್ಯತೆ ಇರುವ ಈ ಸಸ್ಯ ಸಾಮಾನ್ಯವಾಗಿ ಪೊದೆಯಾಗಿ, ಗುಂಪಾಗಿ ಬೆಳೆಯುತ್ತದೆ. ಅದರ ಎಲೆ, ಹೂ, ಕಾಯಿಗಳನ್ನು ಮುಟ್ಟಿದರೆ ಏನೋ ಒಂದು ಘಮ! ಅಭಿಮುಖವಾಗಿ ಜೋಡಣೆಯಾಗಿರುವ ಎಲೆಗಳು ಒಂದೆ ತೊಟ್ಟಿನಲ್ಲಿ ಏಳರಿಂದ ಹದಿನಾಲ್ಕು ಎಲೆಗಳವರೆಗೆ ಉದ್ದಕ್ಕೂ ಸಂಯುಕ್ತವಾಗಿರುತ್ತದೆ. ನವೆಂಬರ್, ಡಿಸೆಂಬರಲ್ಲಿ ಕೊಂಬೆಗಳ ತುದಿಗಳಲ್ಲಿ ಮೂಡುವ ಹೂ ಗೊಂಚಲುಗಳಲ್ಲಿ ಗಾಢ ಹಳದಿ ವರ್ಣದ ಹೂಗಳು ಹಲವು ದಿನ ಅರಳುತ್ತಾ ಉದುರುತ್ತಾ ಸಾಗಿ ಗಿಡಗಳ ಇರುವಿಕೆಯನ್ನು ಸಾರುತ್ತವೆ. ಕಂದು ಬಣ್ಣದ ಐದು ದಳವಿರುವ ಪುಷ್ಪಪಾತ್ರೆಗೆ ಒತ್ತಿಕೊಂಡು ವಿವಿಧ ವಿನ್ಯಾಸದ ನಾಲ್ಕು ಎಸಳುಗಳಿರುತ್ತವೆ. ಹೂಗಳ ಎರಡು ವೃತ್ತಾಕಾರದ ಎಸಳುಗಳು ಬದಿಗೆ ಬಗ್ಗಿದ್ದರೆ ಒಂದು ಎಸಳು ಸಣ್ಣದಾಗಿದ್ದು ಬೀಜ, ಕೇಸರಗಳ ರಕ್ಷಣೆಗೆ ನಿಲ್ಲುತ್ತದೆ. ಮುಂಭಾಗದ ಎಸಳು ಪ್ರತ್ಯೇಕವಾಗಿ ನಿಲ್ಲುತ್ತದೆ. ಬಾಗಿಸಿದರೂ ಬಗ್ಗದಷ್ಟು ಛಲದ ಎಸಳುಗಳು! ಹೂವು ಒಣಗಿ ಉದುರಿದಾಗ ಮೂಡುವ ಕೋಡುಗಳಲ್ಲಿ ಎರಡು ಮೂರು ಬೀಜಗಳು ಮಾತ್ರವಿರುತ್ತವೆ. ಈ ಎಳೆಯ ಕೋಡುಗಳು ಕೂಡ ಹಸಿರಾಗಿದ್ದರೂ ದೊರಗಾಗಿದ್ದು ಮುಟ್ಟಿದರೆ ಸುವಾಸನೆ ಕೈಗಳಿಗಂಟುತ್ತದೆ. ಈ ಗಿಡದ ಹೂಗಳಲ್ಲಿ ಮಧುವಿದ್ದು ಕೀಟಗಳನ್ನು ಆಕರ್ಷಿಸುತ್ತದಾದರೂ ಕಣಜದ ಹುಳುಗಳಿಗೆ ವಿಷವಾಗಿದೆ. ಚೀಮುಳ್ಳು ಹೂ ಬಿಟ್ಟಾಗ ಕಣಜದ ಹುಳುಗಳು ತಂತಾನೆ ಸಾಯುತ್ತವೆ. ಜೇನು ಹುಳಕ್ಕೆ ಕಣಜದ ದಾಳಿಯಾಗದಂತೆ ತಡೆಯಲು ಇದರ ಗೆಲ್ಲನ್ನೂ ಕತ್ತರಿಸಿಡುತ್ತಾರೆ. ಇದು ಸಂತಾನ ನಿಯಂತ್ರಣ ಕ್ಕಾಗಿ ಪ್ರಕೃತಿಯೇ ಮಾಡಿದ ಉಪಾಯವಾಗಿರಲೂ ಬಹುದು. ರೈತರು ಭತ್ತದ ಕಣಜದ ಮೇಲೆ ಮೂರು ಕೆಂಜಿಗದ ಚಿಗುರಿನ ಜೊತೆ ಐದು ಕಲ್ಲುಗಳನ್ನಿಟ್ಟು ಲಕ್ಷ್ಮಿ ಸದಾ ಮನೆಯಲ್ಲಿರಲೆಂದು ಹಾರೈಸುತ್ತಾರೆ.
       ಉರಿ ಬಿಸಿಲಿಗೂ ಸೊಂಪಾಗಿ ಬೆಳೆವ ಈ ಕೆಂಜಿಗ ಸಸ್ಯದಲ್ಲಿ ಬಿಳಿ ಹಾಗೂ ಕೆಂಪು ಎಂಬ ಎರಡು ವಿಧಗಳಿವೆ. ಹಳದಿ ಹೂಗಳ ಗಿಡವು ಕೆಂಪಾಗಿದ್ದರೆ ಬಿಳೀ ಹೂ ಬಿಡುವ ಸಸ್ಯ ಹಸಿರಾಗಿರುತ್ತದೆ. ಬಿಳಿ ತುಂಬಾ ತೀಕ್ಷ್ಣ ಗುಣ ಹೊಂದಿದೆ. ತಾಯಿ ಬೇರು ಆಳಕ್ಕಿಳಿಯುವುದರಿಂದ ಎಷ್ಟು ಕಡಿದರೂ ಮತ್ತೆ ಮತ್ತೆ ಚಿಗುರೊಡೆಯುತ್ತದೆ.
      ಮೈ ತುಂಬಾ ಮುಳ್ಳು, ಗಿಡ ಮುಟ್ಟಲೂ ಭಯಪಡಬೇಕಾದ ಈ ನಿಷ್ಪಾಪಿ ಸಸ್ಯದಲ್ಲಿ ಎಥೆನಾಲ್ ಹಾಗೂ ಇತರ ರಾಸಾಯನಿಕಗಳ ಅಂಶವು ಹೆಚ್ಚಾಗಿದ್ದು ಬ್ಯಾಕ್ಟೀರಿಯಾ ನಾಶಮಾಡುವ ಗುಣ ಹೊಂದಿದೆ. ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಕೆಂಜಿಗೆ ಕುಡಿ, ಜೀರಿಗೆ, ತೆಂಗಿನೆಣ್ಣೆಗಳನ್ನು ಸಮಪ್ರಮಾಣದಲ್ಲಿ ಕಾಯಿಸಿ ಹಚ್ಚಿದರೆ ಸುಟ್ಟ ಗಾಯ ವಾಸಿಯಾಗುವುದಲ್ಲದೆ ಕಲೆಯೂ ಉಳಿಯುವುದಿಲ್ಲ ಎನ್ನುತ್ತಾರೆ ಹಿರಿಯರು. ಕಜ್ಜಿ, ಮೂರ್ಛೆ ರೋಗ, ತಲೆಸುತ್ತು, ಸಂಧಿವಾತ, ಅಲ್ಸರ್, ಕೀಟಗಳು ಕಚ್ಚಿದಾಗ ಉಂಟಾಗುವ ಉರಿ, ತುರಿಕೆ, ಬಾವು ಕಡಿಮೆಮಾಡಲು, ಚರ್ಮರೋಗಗಳಿಗಲ್ಲದೆ ಜಾನುವಾರುಗಳ ಗಾಯಕ್ಕೂ ಉತ್ತಮ ಔಷಧಿಯೆಂದು ಸಂಶೋಧನೆಗಳಿಂದ ಸಾಬೀತಾಗಿ ಬಳಕೆಯಲ್ಲಿದೆ.
      ಹಳ್ಳಿಯಲ್ಲಿ ಚಿರಪರಿಚಿತವಾದ ಈ ಕೆಂಜಿಗೆ ಕುಡಿಯನ್ನು ತುಪ್ಪದಲ್ಲಿ ಬಾಡಿಸಿ ಎಳ್ಳು, ತೆಂಗಿನಕಾಯಿ ಬಳಸಿ ಚಟ್ನಿ, ಸಾರು ಮಾಡಿದರೆ ವಿಶೇಷ ಪರಿಮಳದ ಜೊತೆ ರುಚಿಯಾಗಿರುತ್ತದೆ. ತಂಬುಳಿಯಾಗಿಯೂ ಸೇವಿಸಬಹುದು.
       ಮಾನವನಿಗೆ ಸಾಮಾನ್ಯವೆಂದು ಪರಿಗಣಿಸಲ್ಪಟ್ಟ ಈ ಕೆಂಜಿಗ ಸಸ್ಯವು ಪ್ರಕೃತಿಯೊಳಗೆ ಅಪೂರ್ವ ಕೊಡುಗೆ ನೀಡುವ ಸಸ್ಯವಾಗಿದೆಯಲ್ಲವೇ? ನಮ್ಮ ಸುತ್ತಮುತ್ತ ಎಲ್ಲಾದರೂ ಇದ್ದರೆ ಇದ್ದುಬಿಡಲಿ. ನಾವು ಬೆಳೆಯಲಾರೆವಾದರೂ ಉಳಿಸುವುದು ನಮ್ಮ ಕರ್ತವ್ಯವಾಗಲಿ ಎಂದು ಹಾರೈಸೋಣ, ಏನಂತೀರಾ?
       ಸರಿ ಮಕ್ಕಳೇ, ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.... ನಮಸ್ಕಾರ
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
********************************************




Ads on article

Advertise in articles 1

advertising articles 2

Advertise under the article