-->
ಹಕ್ಕಿ ಕಥೆ : ಸಂಚಿಕೆ - 133

ಹಕ್ಕಿ ಕಥೆ : ಸಂಚಿಕೆ - 133

ಹಕ್ಕಿ ಕಥೆ : ಸಂಚಿಕೆ - 133
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

              
 ಎಲ್ಲರಿಗೂ ನಮಸ್ಕಾರ. ಈ ವಾರದ ಹಕ್ಕಿ ಕಥೆಗೆ ಸ್ವಾಗತ..

ಮೈಮೇಲೆಲ್ಲ ಕಪ್ಪಿನ ಬಣ್ಣ 
ಉದ್ದನೆ ಕೊಕ್ಕು ಇರುವುದು ಅಣ್ಣ 
ಉದ್ದದ ಕಾಲಲ್ಲಿ ನೀರಲಿ ಕೆಸರಲಿ 
ನಡೆಯುತ ಮೀನನೆ ಹಿಡಿಯುವೆನಣ್ಣ
ಚಂದದ ಉದ್ದದ ಕತ್ತನು ನೋಡಿ 
ಬೆಳ್ಳನೆ ಉಣ್ಣೆಯು ಇರುವುದು ಅಣ್ಣ 
ಅಗಲದ ರೆಕ್ಕೆಯ ಚಾಚುತ ಹಾರುವೆ
ಕೆರೆ ನದಿ ಬಯಲಲಿ ನಾನಿರುವೆ 
ಎತ್ತರ ಮರದಲಿ ಗೂಡನ್ನು ಕಟ್ಟಿ 
ಎನ್ನಯ ಮರಿಗಳ ಸಾಕಿ ಸಲಹುವೆ
ತಿಳಿಯಿತೇ ನಾನ್ಯಾವ ಹಕ್ಕಿ
ಕಳೆದ ತಿಂಗಳು ಕಾರ್ಯಕ್ರಮ ಒಂದರಲ್ಲಿ ಪಾಲುಗೊಳ್ಳಲು ಅಂತ ಹಾಸನದ ಬಳಿಯ ಹಳೇಬೀಡಿಗೆ ಹೋಗಿದ್ದೆ. ದ್ವಾರಸಮುದ್ರ ಎಂಬ ಬೃಹದಾಕಾರದ ಕೆರೆಯ ಪಕ್ಕದಲ್ಲಿರುವ ಹೊಯ್ಸಳೇಶ್ವರ ದೇವಾಲಯವನ್ನು ನೋಡಿ, ಅಲ್ಲಿಂದ ಮುಂದೆ ಸ್ವಲ್ಪ ದೂರದ ಗೋಣಿ ಸೋಮನಹಳ್ಳಿ ಎಂಬ ಹಳ್ಳಿಯ ಗುಡ್ಡದ ಮೇಲಿನ ವೀರಭದ್ರೇಶ್ವರ ದೇವಾಲಯದ ಬಳಿ ತಿಂಡಿ ತಿನ್ನಲು ಹೋದೆವು. ದೇವಾಲಯದ ಗುಡ್ಡದ ಕೆಳಗಡೆ ಒಂದು ದೊಡ್ಡ ಕೆರೆ. ಆ ಕೆರೆಯ ಒಂದು ಬದಿಯಲ್ಲಿ ಎತ್ತರದ ಏರಿ. ಏರಿಯ ಇನ್ನೊಂದು ಬದಿಯಲ್ಲಿ ಅಡಿಕೆ ತೋಟ ಬೆಳೆಸಿದ್ದರು. ಕೆರೆಯಲ್ಲಿ ನೀರು ಸ್ವಲ್ಪವಷ್ಟೇ ಇತ್ತು. ಕೆರೆಯ ಹೆಚ್ಚಿನ ಭಾಗ ತೆರೆದುಕೊಂಡು ಮಣ್ಣು ಕಾಣುತ್ತಿತ್ತು. ತಿಂಡಿ ತಿಂದು ಬೇಲೂರಿನತ್ತ ಹೊರಟ ನಾವು ಕೆರೆ ಏರಿಯ ಮೇಲೆ ಹೋಗುತ್ತಿರುವಾಗ ಅಲ್ಲಿ ಕಂಡ ಹಕ್ಕಿಗಳ ಹಿಂಡನ್ನು ನೋಡಿ ಆಶ್ಚರ್ಯವಾಯಿತು. ಅದುವರೆಗೂ ಒಂದೇ ಜಾಗದಲ್ಲಿ ಅಷ್ಟೊಂದು ಬಿಳಿ ಕತ್ತಿನ ಕೊಕ್ಕರೆಗಳನ್ನು ನಾನು ನೋಡಿರಲಿಲ್ಲ. ಇವು ಒಂಟಿಯಾಗಿ ಕೆರೆ, ನದಿಯಬದಿ ಅಥವಾ ಹೊಲಗದ್ದೆಗಳಲ್ಲಿ ಕಾಣಲು ಸಿಗುತ್ತವೆ. ಉಪ್ಪು ನೀರಿನ ಪ್ರದೇಶಗಳಲ್ಲಿ ಕಾಣಲು ಸಿಗುವುದು ತೀರಾ ಅಪರೂಪ. ಇದುವರೆಗೂ ಒಂಟಿಯಾಗಿ ಓಡಾಡುವ ಪಕ್ಷಿಯನ್ನ ನೋಡಿದ್ದ ನನಗೆ ಅಂದು ಗೋಣಿ ಸೋಮನಹಳ್ಳಿಯ ಆ ಕೆರೆಯಲ್ಲಿ 11ಕ್ಕೂ ಹೆಚ್ಚು ಬಿಳಿ ಕತ್ತಿನ ಕೊಕ್ಕರೆಗಳನ್ನು ನೋಡಿ ಬಹಳ ಆಶ್ಚರ್ಯವಾಯಿತು. ಆ ಮಾಹಿತಿಯನ್ನು ebird app ನಲ್ಲಿ ದಾಖಲಿಸದೇ ಮುಂದೆ ಹೋಗಲು ಮನಸ್ಸೇ ಬರಲಿಲ್ಲ. ಅಲ್ಲಲ್ಲಿ ಉಳಿದಿದ್ದ ಅಲ್ಪ ಸ್ವಲ್ಪ ನೀರಿನಲ್ಲಿ ಮೊಣಕಾಲಿನವರೆಗೂ ಕಾಲುಗಳನ್ನು ಹುದುಗಿಸಿಕೊಂಡು ನೀರಿನಲ್ಲಿ ಸಿಗಬಹುದಾದ ಮೀನು ಏಡಿ ಅಥವಾ ಶಂಕು ಹುಳುವಿನಂತಹ ಜೀವಿಗಳನ್ನು ಹುಡುಕುತ್ತಿತ್ತು. ಒಂದೆರಡು ಹಕ್ಕಿಗಳು ಸಿಕ್ಕಿದ ಮೀನನ್ನು ಸಂತೋಷದಿಂದ ತಿನ್ನುತ್ತಿದ್ದವು. ನೆಟ್ಟಗೆ ನಿಂತರೆ ಮೂರಡಿಗಿಂತಲೂ ಎತ್ತರದ ಈ ಹಕ್ಕಿಗಳು ರೆಕ್ಕೆಯನ್ನು ಬಿಡಿಸಿ ಹಾರಿದವೆಂದರೆ ಪುಟ್ಟ ವಿಮಾನವೇ ಹಾರಿದಂತೆ ಕಾಣುತ್ತಿತ್ತು. ಅದರ ಕರಿ ಬಣ್ಣದ ದೇಹದಲ್ಲಿ ಎದ್ದು ಕಾಣುವ ಅಚ್ಚ ಬಿಳಿ ಬಣ್ಣದ ಕುತ್ತಿಗೆಯನ್ನು ನೋಡುವುದೇ ಒಂದು ಚೆಂದ. ಉಳಿದ ನೀರಿನಂಚಿಗೆ ಬರುವ ಹಕ್ಕಿಗಳ ನಡುವೆ ದೊಡ್ಡಣ್ಣನಂತೆ ನೀರಿನಲ್ಲಿ ಓಡಾಡುತ್ತಾ ಆಹಾರ ಹುಡುಕುತ್ತಿತ್ತು. ಭಾರತದಾದ್ಯಂತ ನೀರಿನ ಮೂಲಗಳ ಆಸು ಪಾಸಿನಲ್ಲಿ ಕಾಣಸಿಗುವ ಈ ಹಕ್ಕಿ ಮರದ ಮೇಲೆ ಕಡ್ಡಿಗಳನ್ನು ಜೋಡಿಸಿ ಅಟ್ಟಳಿಗೆಯಂತಹ ಗೂಡು ಮಾಡಿ ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ನೋಡಲು ಒಂದೇ ರೀತಿ ಇರುವ ಗಂಡು ಮತ್ತು ಹೆಣ್ಣು ಹಕ್ಕಿಗಳೆರಡೂ ಮಕ್ಕಳನ್ನು ಬೆಳೆಸುವ ಕೆಲಸವನ್ನು ಸಮಾನವಾಗಿ ಹಂಚಿಕೊಳ್ಳುತ್ತವೆ. ಆದರೆ ಹೆಚ್ಚು ಹೆಚ್ಚಾಗಿ ಕೆರೆಗಳ ಒತ್ತುವರಿಂದಾಗಿ ಇವುಗಳ ಆವಾಸ ಅಪಾಯದಲ್ಲಿದೆ. ನಿಮ್ಮ ಆಸುಪಾಸಿನಲ್ಲಿ ಈ ಹಕ್ಕಿ ಕಾಣಲು ಸಿಕ್ಕಿದರೆ ಖಂಡಿತ ಅದನ್ನು ದಾಖಲಿಸಿ.
ಕನ್ನಡದ ಹೆಸರು: ಬಿಳಿ ಕತ್ತಿನ ಕೊಕ್ಕರೆ
ಇಂಗ್ಲಿಷ್ ಹೆಸರು: Woolly-necked stork
ವೈಜ್ಞಾನಿಕ ಹೆಸರು: Ciconia episcopus
ಚಿತ್ರ : ಅರವಿಂದ ಕುಡ್ಲ
ಮುಂದಿನ ವಾರ ಹೊಸತೊಂದು ಹಕ್ಕಿ ಕಥೆ ಮತ್ತು ಒಗಟಿನೊಂದಿಗೆ ಮತ್ತೆ ಭೇಟಿ ಮಾಡೋಣ. 
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************


Ads on article

Advertise in articles 1

advertising articles 2

Advertise under the article