ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 10
Tuesday, January 9, 2024
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 10
ಲೇಖಕರು : ದಿವಾಕರ ಶೆಟ್ಟಿ ಎಚ್
ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ನಿಮಗೆಲ್ಲರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು. ಮಕರ ಸಂಕ್ರಾಂತಿಯಂದು ಎಳ್ಳು ಬೀರುವುದು ಕ್ರಮ. ಮನೆ ಮನೆಗೆ ಹೋಗಿ ಎಳ್ಳು ಬೆಲ್ಲ ಹಂಚಿ ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡಿ ಎಂದು ಹಾರೈಸುತ್ತಾರೆ ಮತ್ತು ಹರಸುತ್ತಾರೆ. ನೀವೂ ಎಳ್ಳು ಬೆಲ್ಲ ಹಂಚಿರಬಹುದು ಅಲ್ಲವೇ? ಕಳೆದ ಬಾರಿ ಭೂಮಿಯ ಹುಟ್ಟಿನ ಬಗ್ಗೆ ಹೇಳುತ್ತೀರಿ ಎಂದಿದ್ದೀರಿ ಮತ್ತೆ ವಿಷಯಾಂತರ ಮಾಡಬೇಡಿ ಪ್ಲೀಸ್ ಎನ್ನುತ್ತೀರಾ? ಇವತ್ತು ವಿಷಯಾಂತರ ಮಾಡಲೇ ಬೇಕಾಗಿದೆ ಏಕೆಂದರೆ ನಾವು ಮಕರ ಸಂಕ್ರಮಣದ ಆಸುಪಾಸಿನಲ್ಲಿದ್ದೇವೆ. ನೀವು ರೈಲಿನಲ್ಲಿ ಹೋಗುತ್ತಿರುವಾಗ ಒಂದು ಊರು ಬರುತ್ತದೆ. ಆ ಊರಿನ ಬಗ್ಗೆ ತಿಳಿದವರೊಬ್ಬರು ಊರು ಬರುವ ಮುನ್ನ ಅಥವಾ ಅದು ದಾಟಿ ಹೋದ ಕೂಡಲೇ ಆ ಊರಿನ ಬಗ್ಗೆ ವಿವರಣೆ ನೀಡುತ್ತಾರಲ್ಲ ಹಾಗೆ.
ನಮ್ಮ ಅರಿವಿಗೆ ಬರುವ ಹಾಗೆ ಭೂಮಿ ಎರಡು ರೀತಿಯ ಚಲನೆಗಳನ್ನು ಹೊಂದಿದೆ. ದೈನಂದಿನ ಹಾಗೂ ವಾರ್ಷಿಕ. ದೈನಂದಿನ ಚಲನೆಯಿಂದಾಗಿ ಹಗಲು ಮತ್ತು ರಾತ್ರಿಗಳುಂಟಾದರೆ ವಾರ್ಷಿಕ ಚಲನೆಯಿಂದ ವರ್ಷದ ಪುನರಾವರ್ತನೆ. ಈ ಬಾರಿ ಜನವರಿ 1 ರಂದು ಒಂದು ನಕ್ಷತ್ರ ಆಕಾಶದಲ್ಲಿ ಯಾವ ಸ್ಥಾನದಲ್ಲಿರುತ್ತದೆಯೋ ಮುಂದಿನ ವರ್ಷ ಜನವರಿ 1 ಕ್ಕೆ ಅದೇ ಸ್ಥಾನಕ್ಕೆ ಮರಳುತ್ತದೆ. ಸೌರಮಾನ ಯುಗಾದಿಯಂದು ಗವಿ ಗಂಗಾಧರೇಶ್ವರನ ಲಿಂಗದ ಮೂಲಕ ಸೂರ್ಯನ ಬೆಳಕು ಹಾದು ಹೋಗುತ್ತದೆ. ವಾರ್ಷಿಕ ಚಲನೆಯಿಂದ ಋತುಗಳು ಉಂಟಾಗುತ್ತವೆ ಎಂದು ನಿಮ್ಮ ಗುರುಗಳು ಹೇಳಿದ್ದರೆ ಅದು ಭಾಗಶಃ ಸರಿ. ಋತುಗಳು ಉಂಟಾಗುವುದು ಭೂಮಿಯ ವಾರ್ಷಿಕ ಚಲನೆ ಮತ್ತು ಭೂಮಿ ತನ್ನ ಅಕ್ಷದಲ್ಲಿ 23.5° ಗಳಷ್ಟು ವಾಲಿಕೊಂಡಿರುವುದರ ಫಲಿತ. ಭೂಮಿ ಸೂರ್ಯನ ಸುತ್ತಲೂ ದೀರ್ಘ ವೃತ್ತಾಕಾರದ ಪಥದಲ್ಲಿ ಸುತ್ತುವ ಚಿತ್ರವನ್ನು ನಿಮ್ಮ ಮನಸ್ಸಿನ ಮುಂದೆ ಇರಿಸಿಕೊಳ್ಳಿ. ಈ ಚಲನೆಯ ಸಂದರ್ಭದಲ್ಲಿ ಭೂಮಿ ಎರಡು ಬಾರಿ ಸೂರ್ಯನಿಂದ ದೂರ ಮತ್ತು ಎರಡು ಬಾರಿ ಹತ್ತಿರ ಬರುತ್ತದೆ. ಈ ಸಂದರ್ಭದಲ್ಲಿ ಭೂಮಿ ಸೂರ್ಯನಿಂದ ದೂರ ಇರುವಾಗ ಚಳಿಗಾಲ ಮತ್ತು ಹತ್ತಿರ ಬಂದಾಗ ಬೇಸಿಗೆ ಎಂದು ನೀವಂದುಕೊಂಡಿದ್ದರೆ ತಪ್ಪು. ಹಾಗಾದರೆ ವರ್ಷದಲ್ಲಿ ಎರಡು ಚಳಿಗಾಲ ಮತ್ತು ಎರಡು ಬೇಸಿಗೆ ಇರುತ್ತಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಸೂರ್ಯನಿಗೆ ಹತ್ತಿರ ಇದ್ದಾಗ ಚಳಿಗಾಲ (ಶಿಶಿರ) ಮತ್ತು ಬೇಸಿಗೆ (ಗ್ರೀಷ್ಮ) ಹಾಗೂ ದೂರ ಹೋದಾಗ ವಸಂತ (Autumn) ಮತ್ತು ಹೇಮಂತ (pre winter). ಉಳಿದ ಎರಡು ಕಾಲಗಳೆಲ್ಲಿ ಎಂದು ಕೇಳಿದರೆ ಅವುಗಳ ತಲಾ ಒಂದು ತಿಂಗಳುಗಳು 4 ಕಾಲಗಳಲ್ಲಿ ತಮ್ಮ ಕಾಲುಗಳನ್ನು ಚಾಚಿಕೊಂಡಿವೆ. ಈ ಕಾರಣದಿಂದಲೇ ಆಸ್ಟ್ರೇಲಿಯನ್ನರು ಬೇಸಿಗೆಯಲ್ಲಿ ಕ್ರಿಸ್ಮಸ್ ಆಚರಿಸಿದರೆ ಯುರೋಪಿಯನ್ನರು ಚಳಿಗಾಲದಲ್ಲಿ ಸಾಂತಾ ಕ್ಲಾಸ್ ಗೆ ಚಳಿಗಾಲದಲ್ಲಿ ದಿರಿಸು ಹಾಕಿ ಕ್ರಿಸ್ಮಸ್ ಆಚರಿಸುತ್ತಾರೆ (ಆದರೆ ಕ್ರಿಸ್ಮಸ್ ಮಾತ್ರ ದಶಂಬರ 25 ಕ್ಕೆ). ಭೂಮಿ ಹೀಗೆ ತನ್ನ ಅಕ್ಷದಲ್ಲಿ ವಾಲಿಕೊಂಡಿರುವುದರಿಂದ ಸೂರ್ಯ ಉತ್ತರದಿಂದ ದಕ್ಷಿಣಕ್ಕೆ ದಕ್ಷಿಣದಿಂದ ಉತ್ತರಕ್ಕೆ ಅಂದರೆ ಕರ್ಕಾಟಕ ಸಂಕ್ರಾಂತಿ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತಗಳ ನಡುವೆ ಗಡಿಯಾರದ ಲೋಲಕದಂತೆ ಓಲಾಡುತ್ತಿರುವಂತೆ ಅನ್ನಿಸುತ್ತದೆ. ಇದನ್ನೇ ನಾವು ಆಯನಗಳು ಎಂದು ಕರೆಯುವುದು. ಹೀಗೆ ಸೂರ್ಯ ಉತ್ತರದಿಂದ ದಕ್ಷಿಣಕ್ಕೆ ಮತ್ತು ದಕ್ಷಿಣದಿಂದ ಉತ್ತರಕ್ಕೆ ಓಡಾಡುವಾಗ ಒಂದು ದಿನ (ವರ್ಷದಲ್ಲಿ 2) ನಿಮ್ಮ ಅಕ್ಷಾಂಶವನ್ನು ದಾಟುತ್ತಾನೆ. ಈ ದಿನ ಮಧ್ಯಾಹ್ನ ನಿಮ್ಮ ನೆರಳು ನಿಮ್ಮ ಕಾಲಿನ ಕೆಳಗೆ ಇರುತ್ತದೆ ಅಥವಾ ಕಾಣಿಸುವುದಿಲ್ಲ. ಇದನ್ನು ನೆರಳಿಲ್ಲದ ದಿನ (Zero Shadow Day ZSD) ಎನ್ನುವುದು. ಈಗ ನಿಮ್ಮ ತಿಳುವಳಿಕೆಯ ಹರವು ವಿಸ್ತಾರಯವಾಯಿತು ಎಂದುಕೊಳ್ಳುತ್ತೇನೆ. ಭೂಮಿ ತನ್ನ ಕಕ್ಷೆಯಲ್ಲಿ ವಾಲಿಕೊಂಡಿರುವುದರ ಪರಿಣಾಮವೇನು? ಎಂದು ಕೇಳಿದರೆ ಋತುಗಳು ಉಂಟಾಗುತ್ತವೆ, ಆಯನಗಳು ಉಂಟಾಗುತ್ತವೆ ಮತ್ತು ನೆರಳಿಲ್ಲದ ದಿನಗಳು ಕಂಡುಬರುತ್ತವೆ ಎಂದು ನೀವು ಉತ್ತರಿಸಬಲ್ಲಿರಿ.
ಅಯ್ಯೋ ಸರ್ ನೀವು ಮಕರ ಸಂಕ್ರಾಂತಿಯ ಬಗ್ಗೆ ಹೇಳುತ್ತೇನೆ ಎಂದು ಹೇಳಿ ಭೂ ಚಲನೆಯ ಸುತ್ತ ಸುತ್ತುತ್ತಿದ್ದೀರಲ್ಲ ಎಂದು ಸಿಟ್ಟಾಗಬೇಡಿ ವಿಷಯಕ್ಕೆ ಬಂದೆ. ಸೂರ್ಯನು ಮಕರ ಸಂಕ್ರಾಂತಿ ರೇಖೆಯನ್ನು ತಲುಪಿ (ಇದು ಸಾಪೇಕ್ಷ) ಅಲ್ಲಿಂದ ಹಿಂದಿರುಗುತ್ತಾನೆ. ಮಕರ ಸಂಕ್ರಾಂತಿ ವೃತ್ತದಿಂದ ಹಿಂದಿರುಗುವ ದಿನವೇ ಮಕರ ಸಂಕ್ರಮಣ. ಆಗ ಕೊರೆಯುವ ಚಳಿ. ಅಲ್ಲಿಂದ ಉತ್ತರಾರ್ಧ ಗೋಳದ ಕಡೆಗೆ ಸೂರ್ಯ ಚಲಿಸುತ್ತಾ ನಮ್ಮ ನಿಮ್ಮೆಲ್ಲರನ್ನೂ ಬೆಚ್ಚಗೆ ಮಾಡುತ್ತಾನೆ. ಕಷ್ಟದ (ಚಳಿ) ಕಾಲ ಮುಗಿದು ಅಹ್ಲಾದಕರ ವಾತಾವರಣ (ವಸಂತಾಗಮನ) ಮರಳುವ ಭರವಸೆ ಹುಟ್ಟಿಸುವ ದಿನ ನಿಜವಾಗಿಯೂ ಪುಣ್ಯಕಾಲ. ಅಂದು ಸ್ವರ್ಗದ ಬಾಗಿಲು ತೆರೆಯುತ್ತದಂತೆ. ಸ್ವರ್ಗ ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಸ್ವರ್ಗದಲ್ಲಿ ಸುಖ ಇದೆ ಎನ್ನುವುದು ನಮ್ಮ ಭಾವನೆ. ಮಕರ ಸಂಕ್ರಾಂತಿ ವೃತ್ತದಿಂದ ಹೊರಟ ಸೂರ್ಯ ಕರ್ಕಾಟಕ ಸಂಕ್ರಾಂತಿ ವೃತ್ತದ ಕಡೆಗೆ ಧಾವಿಸುವಾಗ ಭೂ ಮಧ್ಯ ರೇಖೆ (ವಿಷು ವೃತ್ತ) ಯನ್ನು ದಾಟುತ್ತಾನೆ. ಈ ವಿಷು ವೃತ್ತವನ್ನು ದಾಟುವ ದಿನವೇ ವಿಷು ಅಥವಾ ಸೌರಮಾನ ಯುಗಾದಿ. ನಮಗೆಲ್ಲರಿಗೂ ಹೊಸ ವರ್ಷ. ವಿಷು ಎಂದ ಕೂಡಲೇ ಎಳೆಯ ಗೇರುಬೀಜದ ಪಾಯಸ ಘಮ ಮೂಗಿಗೆ ಹೊಡೆಯತ್ತದಲ್ಲವೇ?
ಕರ್ಕಾಟಕ ಸಂಕ್ರಾಂತಿ ವೃತ್ತ ದಾಟುವ ದಿನ ಯಾವ ಹಬ್ಬವಿದೆ ಎಂದು ಕೇಳಿದರೆ? ಅದು ಬೆಚ್ಚನೆಯ ತಿಂಗಳುಗಳು ಮುಗಿದು ಕಷ್ಟದ ದಿನಗಳ ಆರಂಭವನ್ನು ಯಾರಾದರೂ ಸಂತಸದಿಂದ ಆಚರಿಸುತ್ತಾರೆಯೇ? ಕರ್ಕಾಟಕ ಸಂಕ್ರಮಣ ಮುಗಿದ ಮೇಲೆ ಆಟಿ ತಿಂಗಳು ಆರಂಭ. ಪುನರ್ವಸು ಪುಷ್ಯ ಮಳೆಗಳ ಆರ್ಭಟ. ತೋಡು ಕೆರೆಗಳೆಲ್ಲ ತುಂಬಿ ಒಂದೊಂದು ಮನೆಯೂ ದ್ವೀಪವಾಗುವ ಕಾಲ. ನಿತ್ಯ ಪೂಜೆ ಮಾಡುವ ದೈವಸಾನಕ್ಕೂ ಹೂವಿಡುವುದು ಕಷ್ಟ. ಅದಕ್ಕೆ ಒಂದು ತಿಂಗಳ ಕಾಲ ದೈವ ಸ್ಥಾನಗಳಿಗೆ ಬಾಗಿಲ ಭಾಗ್ಯ.
ಭೌಗೋಳಿಕವಾಗಿ ದಶಂಬರ 22 ರಿಂದ ಜೂನ್ 21 ರ ವರೆಗೆ ಉತ್ತರಾಯಣ ಮತ್ತು ಉಳಿದ ದಿನಗಳು ದಕ್ಷಿಣಾಯನ. ಸೌರಮಾನ ಪಂಚಾಂಗದೊಂದಿಗೆ ಇಲ್ಲಿ 21 ದಿನಗಳ ಅಂತರವಿದೆ. ಈ ಅಂತರ ಏಕಿದೆ ಯಾರಿಗೂ ಗೊತ್ತಿಲ್ಲ. ದಕ್ಷಿಣಾಯನದಲ್ಲಿ ನಡೆದ ಮಹಾಭಾರತ ಯುದ್ದದಲ್ಲಿ ನಿವೃತ್ತರಾಗಿ ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮರು ದೇಹ ತ್ಯಾಗ ಮಾಡಲು ಮಕರ ಸಂಕ್ರಮಣದ ಉತ್ತರಾಯಣ ಪುಣ್ಯ ಕಾಲದ ವರೆಗೆ ಕಾದ ಕಥೆ ನೀವು ಓದಿದ್ದೀರಿ ತಾನೆ?
ಮುಂದಿನ ವಾರ ಭೂಮಿಯ ಮತ್ತು ಜೀವಿಗಳ ಹುಟ್ಟಿನ ಕಥೆ ತಿಳಿಯೋಣ, ನಮಸ್ಕಾರ....
ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
********************************************