-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 13

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 13

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 13
ಲೇಖಕರು : ದಿವಾಕರ ಶೆಟ್ಟಿ ಎಚ್
ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203

              
ಪ್ರೀತಿಯ ಮಕ್ಕಳೇ.... ಕಳೆದ ಸಂಚಿಕೆಗಳಲ್ಲಿ ನಕ್ಷತ್ರಗಳ ಹುಟ್ಟಿಗೆ ಒಂದು ಮಿಲಿಯನ್ ವರ್ಷಗಳು ಸಾಕು ಎಂದು ಹೇಳಿದ್ದೆ. ನೀವು ಗೂಗಲ್ ಗೆ ಹೋಗಿ ಸೂರ್ಯನ ವಯಸ್ಸು ಎಂದು ಟಂಕಿಸಿ. ಅದು 4.5 ಬಿಲಿಯನ್ ವರ್ಷಗಳು ಎನ್ನುತ್ತದೆ. ಅದೇ ಭೂಮಿಯ ವಯಸ್ಸು ಎನ್ನಿ ನಿಮ್ಮ ಸಮಯದ ಪಟ್ಟಿ ಅಲ್ಲೇ ಇರುತ್ತದೆ. ಅಂದರೆ ಸೂರ್ಯನಿಗೂ ಆತನ ಮಗಳಿಗೂ ಕೇವಲ 10 ರಿಂದ 20 ಮಿಲಿಯನ್ ವರ್ಷಗಳಷ್ಟೇ ವ್ಯತ್ಯಾಸ. ಜೂನ್ 2023 ರಲ್ಲಿ ವಿಜ್ಞಾನಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸೂರ್ಯ ಹುಟ್ಟಿದ ಕೇವಲ 3 ಮಿಲಿಯನ್ ವರ್ಷಗಳಲ್ಲಿ ಭೂಮಿ ಆವಿರ್ಭವಿಸಿತು ಎಂದು ಸಾಕ್ಷ್ಯ ಸಮೇತ ವಿವರಿಸುತ್ತಿದ್ದಾರೆ. ಮಹಾ ಸ್ಪೋಟ ಅಂದರೆ ಬಿಗ್ ಬ್ಯಾಂಗ್ ನಡೆದು ವಿಶ್ವದ ಹುಟ್ಟಿನ ಆರಂಭಿಕ ಪ್ರಕ್ರಿಯೆ ಆರಂಭವಾದದ್ದು 14 ಬಿಲಿಯನ್ (13.787+/- 0.020 billion years)  ವರ್ಷಗಳ ಹಿಂದೆ. ಅಲ್ಲಿಂದ ಸೂರ್ಯನ ಜನನಕ್ಕೆ 9 ಬಿಲಿಯನ್ ವರ್ಷಗಳಾದುವು. ಆದರೆ  ಅಲ್ಲಿಂದ ಭೂಮಿಯ ಜನನಕ್ಕೆ ಕೇವಲ 0.003 ಬಿಲಿಯನ್ ವರ್ಷಗಳು (3 ಮಿಲಿಯನ್) ಹೆರಿಗೆಗೆ ಸೂರ್ಯನಿಗೆ  ಎಷ್ಟೊಂದು ತರಾತುರಿ ನೋಡಿ. ಈಗ ನಿಮ್ಮ ಮನಸ್ಸಿನಲ್ಲಿ ಒಂದು ಯೋಚನೆ ಬಂದಿರಬಹುದು. ಏನು ವಿಶ್ವದ ಹುಟ್ಟಿನೊಂದಿಗೆ ಅಂದರೆ ಮಹಾ ಸ್ಪೋಟದ ನಂತರ ಸಮಯ ಆರಂಭವಾಯಿತೇ ಎಂದು. ಹಾಗೇನೂ ಇಲ್ಲ ಅದಕ್ಕಿಂತಲೂ ಮೊದಲು ಸಮಯವಿತ್ತು. ಸಮಯವಿರಬೇಕಾದರೆ ವಿಶ್ವವಿರಬೇಕಲ್ಲ ಎಂಬ ಇನ್ನೊಂದು ಪ್ರಶ್ನೆ. ಹೌದು ಮೊದಲು ವಿಶ್ವ ಶಕ್ತಿಯ ರೂಪದಲ್ಲಿತ್ತು. ಬಿಗ್ ಬ್ಯಾಂಗ್ ನಂತರ ವಸ್ತು ರೂಪಕ್ಕೆ ಬದಲಾಯಿತು. ಬಿಗ್ ಬ್ಯಾಂಗ್ ನಡೆದ ಕೆಲವೇ ಸೆಕೆಂಡುಗಳಲ್ಲಿ ಪ್ರೋಟಾನ್ ನ್ಯೂಟ್ರಾನ್ ಗಳು ಹುಟ್ಟಿಕೊಂಡವು. ಅವುಗಳು ಅಲ್ಲಲ್ಲೇ ಒಟ್ಟು ಸೇರಿ ಜಲಜನಕದ ಐಸೋಟೋಪ್ ಗಳಾದವು. ಈ ಜಲಜನಕದಿಂದ ಉಳಿದ ಮೂಲವಸ್ತುಗಳ ಹೆರಿಗೆಯಾಯಿತು. ಈ ಜಲಜನಕದ ಮಗಳಾದ ಆಮ್ಲಜನಕ ತಾಯಿಗಿಂತ 8 ಮಿಲಿಯನ್ ವರ್ಷ ಚಿಕ್ಕವಳು. ಆದರೆ ದುರದೃಷ್ಟ ತಾಯಿ ಮಾತ್ರ ಹಂಚಿಕಡ್ಡಿಯ ಹಾಗೆ (slim) ಮತ್ತು ಹಗುರ. ಆದ್ದರಿಂದಲೇ ನಾವು ಜಲಜನಕವನ್ನು ಬಲೂನುಗಳಲ್ಲಿ ತುಂಬಿ ಹಕ್ಕಿಯ ತೆರದಿ ಹಾರುವುದು. ಅವಳ ಮಕ್ಕಳು ಮಾತ್ರ ಸಿಕ್ಕಾಪಟ್ಟೆ ತಿಂದು ಕೊಬ್ಬಿದ್ದಾರೆ. ಈ ಮೂರು ಮಿಲಿಯನ್ (10 ರಿಂದ 20 ಮಿಲಿಯನ್ ಅಂದುಕೊಂಡರೂ) ವರ್ಷಗಳಲ್ಲಿ ಹುಟ್ಟಿದ ಭೂಮಿಯ ಮೇಲೆ ಮೊದಲ ಜೀವಿಯ ಅವಶೇಷ ಸಿಕ್ಕಿದ್ದು ಬರೋಬ್ಬರಿ 800 ಮಿಲಿಯನ್ ವರ್ಷಗಳ ನಂತರ. ಅಂದರೆ ಜೀವಾಂಕುರದ ಸಂಕೀರ್ಣತೆಯನ್ನು ಊಹಿಸಿಕೊಳ್ಳಿ. 

ಇಲ್ಲಿಯವರೆಗೆ ಊಹಾ ಲೋಕದಲ್ಲಿಯೇ ಇದ್ದೀರಿ. ಈಗ ಒಂದು ಕಥೆ ನೋಡೋಣ.

ಉರಿಯುತ್ತಿದ್ದ ಸೂರ್ಯನಿಂದ ಸಿಡಿದು ಬಂದ ಭೂಮಿ ಒಡಲ ಬೆಂಕಿ ನಂದಿ ಹೋದದ್ದರಿಂದ ಅಲ್ಲಿಯೇ ತಣ್ಣಗಾಗ ತೊಡಗಿತ್ತಷ್ಟೆ. ಅದರ ಹೊರ ಭಾಗ ನಿಧಾನವಾಗಿ ಗಟ್ಟಿಯಾಗುತ್ತಾ ಹೊರಗಿನ ಕವಚ (earth crust) ರೂಪುಗೊಳ್ಳುತ್ತಿತ್ತು. ಒಳಗಿನ ಕುದಿಯುವ ಪಾಕದಲ್ಲಿ ಬಿಡುಗಡೆಯಾದ ಅನಿಲಗಳು ಪಾತ್ರೆಯಿಂದ ಹೊರ ಬರುತ್ತಿದ್ದವು.  ಆದರೆ ಭೂಮಿ ತನ್ನ ಗುರುತ್ವ ಬಲದ ಕದಂಬ ಬಾಹುಗಳ ಮೂಲಕ ಅವುಗಳನ್ನೆಲ್ಲ ಹಿಡಿದಿಟ್ಟು ತನ್ನದೇ ವಾತಾವರಣ ರೂಪಿಸಿಕೊಳ್ಳುತ್ತಿತ್ತು. ಉಳಿದ ಗ್ರಹಗಳಿಗೆ ಭಿನ್ನವಾಗಿ ಅಂದರೆ ಸಾರಜನಕ ಮತ್ತು ಇಂಗಾಲದ ಡೈಆಕ್ಸೈಡ್ ನ ಬದಲಾಗಿ ಮೀಥೇನ್, ಅಮೋನಿಯಾ ನೀರಾವಿಯನ್ನೇ ಹೆಚ್ಚಿನ ಪ್ರಮಾಣದಲ್ಲಿ ಹೊಂದಿತ್ತದು. ಹೊರಕವಚ ತಂಪಾಗುತ್ತಿದ್ದಂತೆ ವಾತಾವರಣ ತಂಪಾಗ ತೊಡಗಿತು. ನೀರಾವಿ ಸಾಂದ್ರಗೊಳ್ಳುತ್ತಾ ಮೋಡಗಳು ಉಂಟಾದವು. ಈ ಮೋಡಗಳನ್ನು ವಾತಾವರಣದ ಬಿರುಸಿನ ಗಾಳಿ ಈಚೆಯಿಂದ ಆಚೆಗೆ ಆಚೆಯಿಂದ ಈಚೆಗೆ ಉರುಳಾಡಿಸುತ್ತಾ ಗಾಳಿಯೊಡನೆ ತಿಕ್ಕಿ ವಿದ್ಯುತ್ ಪೂರಣಗೊಳಿಸಿದವು. ವಿರುದ್ಧಾವೇಶದ ಮೋಡಗಳ ನಡುವೆ ವಿದ್ಯುತ್ತಾವೇಶಗಳ ವಿನಿಮಯವಾಯಿತು. ಭೂಮಿಯೂ ಈ ಕತ್ತಿಯ ಹೊಡೆತ ತಿಂದಿತು. ಇದೇ ಮಿಂಚು, ಸಿಡಿಲು ಮಯಗುಡುಗು. ಮಿಂಚಿನ ಝಳಪಿಸುವಿಕೆಯೊಂದಿಗೆ ಖಟ್ ಖಡಲ್ ಎಂಬ ಗುಡುಗು ಸಿಡಿಲಿನ ಆರ್ಭಟದೊಂದಿಗೆ  ಧಾರಾಕಾರ ಮಳೆ. ಅದು ಮುಸಲಧಾರೆಯೇ ಕುಂಭ ದ್ರೋಣವೇ ಕೇಳಬೇಡಿ. ಬಂದ ಮಳೆ ಹರಿದು ಗುಂಡಿಗೆ ಹೋಯಿತು. ನದಿ ಸಮುದ್ರ ಸಾಗರಗಳು ರೂಪುಗೊಂಡವು. ಮಳೆಗಾಲದಲ್ಲಿ ಮಾತ್ರ ಮಳೆಯಲ್ಲ. ಇದ್ದುದು ಒಂದೇ ಕಾಲ ಅದು ಮಳೆಗಾಲ. ಸಿಡಿಲು ಮಿಂಚುಗಳ ಧಾರಾಕಾರ ಮಳೆ ಸಾವಿರ ಸಾವಿರ ವರ್ಷಗಳ ಕಾಲ. ಆಮ್ಲಜನಕವಿಲ್ಲದ ವಾತಾವರಣದಲ್ಲಿ ಓಝೋನ್ ಪದರ ಬೇರೆ ಇರಲಿಲ್ಲ. ಆದ್ದರಿಂದ ಅಲ್ಟ್ರಾ ವೈಲೆಟ್ ಕಿರಣಗಳ ನಿರಂತರ ಆಘಾತ ಬೇರೆ ಇತ್ತು. ಈ ಅತಿಯಾದ ಅಲ್ಟ್ರಾ ವೈಲೆಟ್ ಮತ್ತು ವಿದ್ಯುದಾಘಾತದಿಂದ ಅಮೋನಿಯಾ, ಮೀಥೇನ್, ನೀರು ಅತಿ ಕಡಿಮೆ ಪ್ರಮಾಣದಲ್ಲಿದ್ದ ಆಮ್ಲಜನಕಗಳು ಇತ್ಯಾದಿ ವಾತಾವರಣದ ಅನಿಲಗಳು ಸಂಯೋಗ ಹೊಂದಿ ಪ್ರೋಟೀನುಗಳ ಮೂಲ ಘಟಕಗಳಾದ ಅಮೈನೋ ಆಮ್ಲಗಳು ಉತ್ಪತ್ತಿಯಾದವು.‌ ನೀರಿನಲ್ಲಿ ಬೆರೆತು ಹೋದವು. ನೀರಿನಲ್ಲಿ ಹೈಡ್ರೋಜನ್ ಅಯಾನುಗಳ ಸಹಾಯದಿಂದ ತಮ್ಮೊಳಗೆ ಹೈಡ್ರೋಜನ್ ಬಾಂಡ್ ನ ಮೂಲಕ ಡೊಡ್ಡ ಅಣುಗಳಾದವು. ಅವುಗಳೇ ಪ್ರೋಟೀನುಗಳು. ನಿರ್ಜೀವ ಭೂಮಿಯಲ್ಲಿ ಜೀವ ಉಗಮಕ್ಕೆ ಬೇಕಾದ ಪ್ರೋಟೀನುಗಳು ಪ್ರತ್ಯಕ್ಷವಾದುವು. ಯಕ್ಷಗಾನದ ಒಡ್ಡೋಲಗದಲ್ಲಿ ಒಂದೊಂದೇ ವೇಷಗಳು ತೆರೆ ಮರೆಯ ಕುಣಿತ ಆರಂಭಿಸಿದ ಹಾಗೆ.
ಆರಂಭದಲ್ಲಿ ನಾನು ಇದನ್ನು ಕಥೆ ಎಂದು ಹೇಳಿದೆನೇ? ಇದು ಕಥೆಯಲ್ಲ. ಇದು 1953 ರಲ್ಲಿ ಆಪರೇನ್ - ಹಾಲ್ಡೇನ್ ಸಿದ್ದಾಂತವನ್ನು ಪರೀಕ್ಷಿಸಲು ಹೆರಾಲ್ಡ್ ಸಿ ಯೂರೇ ಮತ್ತು ಸ್ಟ್ಯಾನ್ಲಿ ಮಿಲ್ಲರ್ ಎಂಬ ಅಮೇರಿಕನ್ ವಿಜ್ಞಾನಿಗಳು ಮಾಡಿದ  ಪ್ರಯೋಗ. ಅವರು ಇದಕ್ಕೆ ಒಂದು ವಿಶಿಷ್ಟ ಉಪಕರಣ ಸಿದ್ದಪಡಿಸಿ ಪ್ರಯೋಗ ನಡೆಸಿದರು. (ಚಿತ್ರ ನೋಡಿ) ನೀರು ತುಂಬಿದ ಉಬ್ಬಿದ ಪಾತ್ರೆ  ಸಮುದ್ರವನ್ನು ಸೂಚಿಸಿದರೆ ಇನ್ನೊಂದು ಉಬ್ಬಿದ ಪಾತ್ರೆ ಆಗಸವನ್ನು ಸೂಚಿಸುತ್ತದೆ. ಆ - ಹಾ ಸಿದ್ದಾಂತದಲ್ಲಿ ಭೂ ವಾತಾವರಣದಲ್ಲಿನ ಅನಿಲಗಳು ಹೊರ ಶಕ್ತಿಯೊಂದರ ಹೊಡೆತದಿಂದ  ಜೀವ ಮೂಲ ವಸ್ತುಗಳಾಗಿ ಬದಲಾದುವು ಎಂದು ಹೇಳಿರುವುದು. ನಿಜವಾಯಿತು. ಎರಡು ವಾರಗಳ ಕಾಲ ನಡೆದ ಪ್ರಯೋಗದಲ್ಲಿ ಯೂರೇ - ಮಿಲ್ಲರ್ ಹಲವು ರಾಸಾಯನಿಕಗಳನ್ನು ಪಡೆದರು. ಆದರೆ ಇವರಿಗೆ ಸಕ್ಕರೆಯಾಗಲೀ ನ್ಯೂಕ್ಲಿಯೊಟೈಡ್ ಗಳ ಕಣಗಳಾಗಲೀ ಸಿಗಲಿಲ್ಲ.

ಮುಂದಿನ ದಿನಗಳಲ್ಲಿ ಇನ್ನಿತರ ವೇಷಗಳೆಲ್ಲಿ ನೋಡೋಣ. ಕಾಯತ್ತಾ ಇರಿ.
.................................... ದಿವಾಕರ ಶೆಟ್ಟಿ ಎಚ್
ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 


Ads on article

Advertise in articles 1

advertising articles 2

Advertise under the article