ಸ್ಫೂರ್ತಿಯ ಮಾತುಗಳು : ಸಂಚಿಕೆ - 100
Monday, January 29, 2024
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 100
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪುತ್ತೂರು ಡಿಪೊ ಬಸ್ ಮೂಲಕ ಇತ್ತೀಚೆಗೆ ನಾನು ವಿಟ್ಲದಿಂದ ಉಪ್ಪಳ ಕಡೆಗೆ ಪಯಣಿಸುತ್ತಿದ್ದೆ. ದಾರಿ ಮಧ್ಯೆ ಉಕ್ಕುಡ ಬಳಿ ಕಾನತ್ತಡ್ಕ ಎಂಬ ಊರಿದೆ. ಅಲ್ಲಿನ ಬಸ್ ನಿಲುಗಡೆ ತಾಣದಿಂದ ಒಬ್ಬ ಯುವಕ ಬಸ್ಸನ್ನೇರಿದ. ಕಿಟಕಿ ಬಳಿಯ ಸೀಟೊಂದರಲ್ಲಿ ಆಸೀನನಾದ. ಬಸ್ ನಿರ್ವಾಹಕರು ಬಂದರು. ಯುವಕನನ್ನು, “ಎಲ್ಲಿಗೆ?” ಎಂದು ಪ್ರಶ್ನಿಸಿದರು. ನಾನು ಗಮನಿಸುತ್ತಲೇ ಇದ್ದೆ. “ಆತ, “ಬಾಯಿಕಟ್ಟೆ” ಎಂದ. ನಿರ್ವಾಹಕರು ಚೀಟಿ ಹರಿದು ಕೊಟ್ಟು ಹಣ ಪಡೆದು ಮುಂದುವರಿದರು. ಯುವಕ ತನ್ನ ಜೇಬಿನಿಂದ ಮೊಬೈಲ್ ತೆಗೆದನು. ನಾನು ನೋಡುತ್ತಲೇ ಇದ್ದೆ. ಆತನನ್ನು ಎಲ್ಲೋ ನೋಡಿದ ಹಾಗೆ ಅನಿಸುತ್ತಿತ್ತು. ನೆನಪು ಮಾಡುತ್ತಲೇ ಇದ್ದೆ. ಯುವಕನು ಮೊಬೈಲಿಗೆ ಇಯರ್ ಫೋನ್ ಸಿಕ್ಕಿಸಿದ. ಮೊಬೈಲ್ ಚಾಲೂ ಮಾಡಿದ. ಆತ ಮೊಬೈಲ್ ಹೊರತು ಅತ್ತಿತ್ತ ನೋಡಲೇ ಇಲ್ಲ. ಸಂಪೂರ್ಣ ಮೊಬೈಲಿನೊಳಗೆ ಪ್ರವೇಶಿಸಿ ಮೈಮರೆತನು.
ನಾನು ಅವನನ್ನು ಗಮನಿಸುವುದನ್ನು ಮಾತ್ರ ಬಿಡಲೇ ಇಲ್ಲ.”ಈತ ಯಾರಿರಬಹುದು” ಎಂದು ನೆನಪಿಸುತ್ತಲೇ ಇದ್ದೆ. ದೀಢಿರನೆ ನನ್ನ ಸ್ಮರಣೆಯ ಬಾಗಿಲು ತೆರೆಯಿತು. ಪ್ರೌಢ ಶಾಲೆಯಲ್ಲಿ ಆತ ನನ್ನ ವಿದ್ಯಾರ್ಥಿಯಾಗಿದ್ದನು. ತಡವಾಗಿಯಾದರೂ ನೆನಪಾಯಿತಲ್ಲ ಎಂದು ಖುಷಿ ಪಟ್ಟೆ. ತನ್ನ ಹಿಂದಿನ ಶಾಲೆಯ ಎಂಟನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಆತ “ಢುಮ್ಕಿ” ಹೊಡೆದಿದ್ದ. ಅವನು ಓದಿದ ಶಾಲೆ ಪ್ರತಿಷ್ಠಿತ ಶಾಲೆ. ಅವನ ಅಪ್ಪ ಮತ್ತು ಅಮ್ಮ ತುಂಬಾ ಶುಲ್ಕ ಪಾವತಿಸಿ ಮಗನ ಭವಿಷ್ಯ ಸುಖದಾಯಕವಾಗುವ ಕನಸು ಹೊತ್ತಿದ್ದರು. ಫೇಲಾದನಲ್ಲ! ಛೇ, ಇನ್ನೇನು ಮಾಡುವುದೆಂದು ಚಿಂತೆಗೊಳಗಾದರು. ಆಗ ನಮ್ಮ ಪ್ರೌಢ ಶಾಲೆಯಲ್ಲೂ ಎಂಟನೆಯ ತರಗತಿಯಿಂದ ಹತ್ತನೇ ತರಗತಿಯ ತನಕ ಆಂಗ್ಲ ಮಾಧ್ಯಮ ತರಗತಿಗಳು ಆರಂಭಗೊಂಡಿದ್ದುವು. ಆತನ ಅಪ್ಪ ನನ್ನನ್ನು ಭೇಟಿಯಾದರು. ದಾಖಲಿಸುವ ಬಗ್ಗೆ ಮನವಿ ಮಂಡಿಸಿದರು. “ಯಾಕೆ? ಹಿಂದಿನ ಶಾಲೆಯಲ್ಲೇ ಮುಂದುವರಿಯಬಹುದಲ್ಲ? ನಮ್ಮದೇನಿದ್ದರೂ ಎಂಟನೇ ತರಗತಿಯಲ್ಲಿ ದ್ವಿಭಾಷಾ ಮಾಧ್ಯಮವಿರುತ್ತದೆ. ಅವನಿಗೆ ತರಗತಿ ಸಪ್ಪೆಯೆನಿಸೀತು” ಎಂದು ನಿರಾಸೆಗೊಳಿಸಲು ಪ್ರಯತ್ನಿಸಿದೆ.
ಅವನ ತಂದೆ ಹೇಳಿದ ಮಾತು ಇನ್ನೂ ನೆನಪಿದೆ, “ಅವನು ಕಲಿಯುವುದರಲ್ಲಿ ಬಹಳ ಹುಷಾರಿದ್ದಾನೆ (ಜಾಣ), ಕಳೆದ ವರ್ಷ ಏಳನೆಯಲ್ಲಿ ಒಳ್ಳೆಯ ಮಾರ್ಕು ಬಂದಿದೆ. ಗಾಬರಿ ಬೇಡ ಕಲಿತಾನು” ಎಂದು ಹೇಳಿದರೇ ಹೊರತು ಎಂಟನೇ ಫೈಲ್ ಅಂತ ಹೇಳಲಿಲ್ಲ. ನಮ್ಮ ಪ್ರೌಢ ಶಾಲೆಯ ಆಂಗ್ಲ ಮಾಧ್ಯಮದ ಎಂಟನೇ ತರಗತಿಗೆ ಅವನನ್ನು ದಾಖಲಿಸಲಾಯಿತು. ಈ ನಡುವೆ ಅವನ ವರ್ಗಾವಣೆ ಪ್ರಮಾಣ ಪತ್ರ ತರಿಸಲಾಯಿತು. ಅದನ್ನು ಪರಿಶೀಲಿಸಿದಾಗಲೇ ನನಗೆ ತಿಳಿದುದು, “ಈತ ಢುಮ್ಕಿ” ಎಂದು. ವಿದ್ಯಾರ್ಥಿಯ ಜತೆ ಈ ಬಗ್ಗೆ ಮೌನವಾಗಿದ್ದೆ. ಅವನ ಅಪ್ಪನನ್ನು ಕರೆಸಿ ವಿಚಾರ ವಿನಿಮಯ ಮಾಡಿದೆ. ಅವನು ಫೈಲ್ ಆಗಿರುವ ಬಗ್ಗೆ ಹೇಳಿದೆ. ಕಳೆದ ವರ್ಷ ಏಳನೆಯಲ್ಲಿ ಒಳ್ಳೆಯ ಅಂಕ ಪಡೆದಿದ್ದ ಎಂದು ಹೇಳಿರುವ ಸುಳ್ಳು ನೆನಪಾಗಿ ಅವರ ಮುಖ ಕಪ್ಪಿಟ್ಟಿತು. ನಾನೇ ಅವರನ್ನು ಸುಧಾರಿಸಿದೆ. ಹೆತ್ತವರ ಹೆಜ್ಜೆಗಳೇ ಮಕ್ಕಳಿಗೆ ಮಾದರಿಯಲ್ಲವೇ?
ನಾನಿಲ್ಲಿ ಉಲ್ಲೇಖಿಸಿರುವ ವಿದ್ಯಾರ್ಥಿಯು ಬಹಳ ವಿಧೇಯತೆಯಿಂದ ಕಲಿಯುತ್ತಿದ್ದ. ಶಾಲಾ ಕೆಲಸಗಳಲ್ಲಿ, ಸಂದರ್ಭೋಚಿತ ಸ್ವಯಂಸೇವೆಯಲ್ಲಿ ಮಂಚೂಣಿಯಲ್ಲಿದ್ದ. ಅವನ ಆಂಗ್ಲ ಅಕ್ಷರಗಳು ಬಹಳ ಮುದ್ದಾಗಿದ್ದುವು. ಆಂಗ್ಲ ಅಕ್ಷರಕ್ಕೆ ಕಡಿಮೆ ತಿದ್ದುವಿಕೆ ಸಾಕಾಗುತ್ತಿದ್ದರೆ, ಪದ ಮತ್ತು ವಾಕ್ಯಗಳ ಬರವಣಿಗೆಯಲ್ಲಿ ಹಿಂದೆ ಬೀಳುತ್ತಿದ್ದನು. ಕನ್ನಡ ಭಾಷೆಯಲ್ಲಿ ಬಹಳ ಕೆಳಗಡೆಯೇ ಉಳಿದಿದ್ದ. ಶಿಕ್ಷಕರ ನಿರಂತರ ಬೆಂಬಲ ಮತ್ತು ಆತನ ಪ್ರಯತ್ನದಿಂದ ಕಲಿಕೆಯಲ್ಲಿ ಪ್ರಗತಿ ಕಾಣಲಾರಂಭಿಸಿತು. ಹತ್ತನೇ ತರಗತಿಯನ್ನಂತೂ ಪ್ರಥಮ ಶ್ರೇಣಿಯಲ್ಲೇ ಉತ್ತೀರ್ಣನೂ ಆದ. ಆತನನ್ನು ಪರಿಚಯಿಸುವುದಾಗಲಿ, ಅವನ ಬಗ್ಗೆ ಆರೋಪಿಸುವುದಾಗಲೀ ಈ ಲೇಖನದ ಉದ್ದೇಶವಲ್ಲ. ಅಂದು ಮೊಬೈಲ್ ಜೊತೆ ವಶಗೊಂಡಿದ್ದ ಅವನ “ಪರಿ” ನನಗೆ ಸಮಾಧಾನ ತರಲಿಲ್ಲ. ನಾನು ಆತನ ಗುರುತು ಹಿಡಿದ ಮೇಲೆ ಅವನ ಗಮನ ಸೆಳೆಯುವ ಅನೇಕ ಪ್ರಯತ್ನಗಳನ್ನು ಮಾಡಿದೆ. ಪಕ್ಕಕ್ಕೆ ಹೋಗಿ ಬೆನ್ನು ಮುಟ್ಟಿ ಕರೆಯಲಿಲ್ಲ. ಹಾಗೆ ಕರೆಯುವುದರಿಂದ ರಸಭಂಗವಾಗಿ ಕೆಲವರಿಗೆ ಸಿಟ್ಟು ಬರುವುದಿದೆ. ರಸಭಂಗದಿಂದ ಬಂದ ಸಿಟ್ಟು ಅನಾಹುತಕ್ಕೆ ಕಾರಣವಾದರೆ..... ಎಂಬ ಭಯವಿತ್ತು. ಹೆಸರೆತ್ತಿ ಕರೆದರೂ ಆತನಿಗೆ ಕೇಳಿಸಲಿಲ್ಲ. ತನ್ನ ದೃಷ್ಟಿಯನ್ನು ಮೊಬೈಲ್ ಸ್ಕ್ರೀನ್ ಮೇಲೆ ಮಾತ್ರವೇ ಹರಡಿದ್ದ. ಕಿವಿಗೆ ಇಯರ್ ಫೋನ್ ಸಿಕ್ಕಿಸಿದ್ದರಿಂದ ಕಿವುಡನಂತಿದ್ದ.
"ಮೊಬೈಲ್" - ಮೊಬೈಲಿನಲ್ಲಿ ತನ್ಮಯತೆ ತೋರುವ ನಮ್ಮ ಯುವ ವಿದ್ಯಾರ್ಥಿಗಳು, “ನನಗೆ ಏಕಾಗ್ರತೆಯಿಲ್ಲ” ಎಂದು ತಮ್ಮನ್ನೇ ತಾವು ಕೀಳಾಗಿಸುವ ಅಸಭ್ಯತೆಯ ಬಗ್ಗೆ ಜಿಗುಪ್ಸೆ ಮೂಡುತ್ತದೆ. ಪ್ರಯಾಣವೂ ಅರಿವು ಮತ್ತು ಆನಂದಕ್ಕೆ ಮೂಲವಾಗಬೇಕು ಎಂಬ ಪ್ರಜ್ಞೆ ಯಾಕೆ ಮೂಡುತ್ತಿಲ್ಲ ಎಂಬುದು ಯಕ್ಷ ಪ್ರಶ್ನೆ. ಪ್ರಯಾಣಿಸುವಾಗ ಗಮನಿಸಬಹುದಾದ ಅಸಂಖ್ಯ ಸಂಗತಿಗಳು, ಮುದ ನೀಡುವ ಹಲವಾರು ವಿಚಾರಗಳು ಗೋಚರಿಸುತ್ತವೆ. ಪ್ರಯಾಣಿಕರ ಆಗಮನ ನಿರ್ಗಮನಗಳು ನಮ್ಮ ಗಮನ ಸೆಳೆಯುತ್ತಿರಬೇಕು. ಪಕ್ಕದಲ್ಲಿ ಕುಳಿತವರೊಡನೆ ಪರಿಚಯ ಮಾಡಿ ಅವರ ಅನುಭವಗಳನ್ನು ನಮ್ಮದಾಗಿಸಬೇಕು. ನಮಗೆ ಪ್ರತಿ ಪಯಣದಲ್ಲೂ ಮಿತ್ರರ ಗಳಿಕೆಯಾಗುತ್ತಿರಬೇಕು. ಹಲವರ ಬದುಕಿನ ಏರು ಪೇರುಗಳ, ಬವಣೆ ಬಿನ್ನಾಣಗಳ ತಿಳುವಳಿಕೆಯಾಗಬೇಕು. ಮೊಬೈಲ್ ಜ್ಞಾನ ಮತ್ತು ಮನರಂಜನೆ ನೀಡವುದಿಲ್ಲವೇ? ಎಂದು ಕೇಳುವವರೂ ಇರಬಹುದು. ಮೊಬೈಲ ನ್ನು ಪ್ರಯಾಣದಲ್ಲೇ ನೋಡಬೇಕಾಗಿಲ್ಲ. “ಮತ್ತೆ” ಯೂ ನೋಡಬಹುದಲ್ಲ! ಪ್ರಯಾಣದಲ್ಲಿ ಸಾರ್ವಜನಿಕ ವಾಹನದೊಳಗಿರುವಾಗ ಉಚ್ಛ ದನಿಯಲ್ಲಿ ಹಾಡು ಹಾಕುವುದು, ವೀಡಿಯೋ ವೀಕ್ಷಿಸುವುದು, ಏರು ಧ್ವನಿಯಲ್ಲಿ ಮಾತನಾಡುವುದು, ಕೆಲವೊಮ್ಮೆ ಮೊಬೈಲ್ ಮೂಲಕವೇ ಜಗಳವಾಡುವುದು, ಜಗಳದಲ್ಲಿ ಹರಕು ಮುರುಕು ಭಾಷೆ ಬಳಸುವುದು ಇಂತಹ ಅಸಭ್ಯತೆಗಳು ಸಹಪ್ರಯಾಣಿಕರಿಗೆ ಕಿರಿಕಿರಿಯಲ್ಲವೇ? ಮಕ್ಕಳಿದ್ದರೆ ಅವರ ಬೈಗುಳದ ಪದಕೋಶ ಬೆಳೆದು ಬಳಸದಿರುವರೇ? “ಬರ್ಕತ್” ನಲ್ಲಿ ಪ್ರಯಾಣಿಸಲೇನು ದಾಡಿ?
ಪ್ರಯಾಣದಲ್ಲಿ ಹಾಗೂ ವಾಹನ ಏರಿ ಇಳಿಯುವ ಸಂದರ್ಭಗಳಲ್ಲಿ ಸುತ್ತಮುತ್ತ ಗಮನಿಸದೆ ಮೊಬೈಲ್ ಚಾಲನೆ ಮಾಡಿ ಅದರಲ್ಲೇ ಮುಳುಗುವುದು ಒಂದು ಮನೋರೋಗ ಅಲ್ಲವೇ? ಮೊಬೈಲ್ ಗೀಳು ಅನೇಕ ಅಪಘಾತಗಳು ಮತ್ತು ಅನಾಹುತಗಳಿಗೆ ಕಾರಣವಾಗಿರುವುದು ನಿತ್ಯ ಹಸಿರಾಗಿರಲು ಯಾರು ಕಾರಣ? ಮೊಬೈಲ್ ನಿಯಂತ್ರಣ ಆರೋಗ್ಯ ಮತ್ತು ಸಂತಸಗಳನ್ನು ವೃದ್ಧಿಸುತ್ತದೆ ಎಂಬ ಸತ್ಯ ನಿಮಗೆ ತಿಳಿದಿರಲಿ. ನಮಸ್ಕಾರ
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
********************************************
"ಮನೋರೋಗ" ಮಕ್ಕಳ ಜಗಲಿಯಲ್ಲಿ ನನ್ನ ನೂರನೇ ಸಂಚಿಕೆ. ಈ ತನಕದ ನನ್ನ ಎಲ್ಲ ಸಂಚಿಕೆಗಳನ್ನು ಮಕ್ಕಳ ಜಗಲಿಯಲ್ಲಿ ತಾರಾನಾಥ ಕೈರಂಗಳ ಮತ್ತು ತುಳಸಿ ಕೈರಂಗಳ ದಂಪತಿಗಳು ಪ್ರತಿ ಮಂಗಳವಾರ ಪ್ರಕಟಿಸುತ್ತಲೇ ಬಂದಿದ್ದಾರೆ. ನನ್ನ ಹೆಚ್ಚಿನ ಲೇಖನಗಳಿಗೆ ನಿವೃತ್ತ ಅಧ್ಯಾಪಕ ಶ್ರೀರಾಮ ಮೂರ್ತಿಯವರು ಮಕ್ಕಳ ಜಗಲಿಯಲ್ಲಿ ಪ್ರತೀ ಭಾನುವಾರ ಉತ್ತಮ ಮಾತುಗಳಿಂದ ಸ್ಫೂರ್ತಿಯಾಗಿದ್ದಾರೆ. ಬಹಳಷ್ಟು ಮಂದಿ ಕರೆ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಕೆಲವರು ಮುಖಾಮುಖಿಯಾದಾಗ, “ನಾನೂ ನಿಮ್ಮ ಲೇಖನಗಳನ್ನು ಓದುತ್ತಿದ್ದೇನೆ.” ಎಂದು ಹೇಳಿ ಬೆಂಬಲದ ಮಾತು ಹೇಳುತ್ತಾರೆ. ಕೆಲವರು ಆನಂದದ ಸಂದೇಶ ರವಾನಿಸುತ್ತಾರೆ. ಕೆಲವರು ಪ್ರಕಟಣೆಯಾದ ದಿನವೇ ಹೆಬ್ಬೆರಳೆತ್ತಿ, ಬೆರಳು ಮಡಚಿ, ನಮನ ಹೇಳಿ ಖುಷಿಯನ್ನು ಪದ ಸಮೇತ ಹಂಚಿಕೊಳ್ಳುತ್ತಿದ್ದಾರೆ. ಎಲ್ಲರಿಗೂ ಧನ್ಯವಾದಗಳು. 101ನೇ ಸಂಚಿಕೆ ಖಂಡಿತಾ ಇರುತ್ತದೆ. ಬರವಣಿಗೆ ತಮ್ಮೆಲ್ಲರ ಉತ್ತೇಜನದಿಂದ ನನಗೆ ಖುಷಿ ತಂದಿದೆ. ಮತ್ತೆ ಭೇಟಿಯಾಗೋಣ. ಎಲ್ಲರಿಗೂ ಶಿರಬಾಗಿ ವಂದಿಸುವೆ.
..............................ರಮೇಶ ಎಂ. ಬಾಯಾರು