-->
ಹಕ್ಕಿ ಕಥೆ : ಸಂಚಿಕೆ - 136

ಹಕ್ಕಿ ಕಥೆ : ಸಂಚಿಕೆ - 136

ಹಕ್ಕಿ ಕಥೆ : ಸಂಚಿಕೆ - 136
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

              
ಎಲ್ಲರಿಗೂ ನಮಸ್ಕಾರ.... ಈ ವಾರದ ಹಕ್ಕಿ ಕಥೆಗೆ ಸ್ವಾಗತ.. 

ನದಿ ಕೆರೆ ತೊರೆಗಳ ಹತ್ತಿರ ಇರುವೆ
ಕೀಟ ಏಡಿಗಳ ಹುಡುಕಿ ತಿನ್ನುವೆ
ಕೀಲು ಕುದುರೆಯಂತೆ ಕುಣಿಯುತ ನಡೆವೆ
ಮರಳಿನ ಮೇಲೆಯೆ ಮೊಟ್ಟೆಯನಿಡುವೆ
ಕಣ್ಣಿನ ಸುತ್ತಲು ಹೊನ್ನಿನ ಬಳೆಯು
ಪುಟಾಣಿ ಗಾತ್ರದ ಹಕ್ಕಿಯು ನಾನು
ಹೇಳಬಲ್ಲಿರೇ ನನ್ನಯ ಹೆಸರು?

ಉತ್ತರಕನ್ನಡ ಜಿಲ್ಲೆಯ ಕಾರವಾರದ ಸಮೀಪ ಕೈಗಾ ಎಂಬ ಪುಟ್ಟ ಊರು. ಅಲ್ಲೊಂದು ಅಣು ವಿದ್ಯುತ್ ಸ್ಥಾವರ ಇದೆ. ಅಲ್ಲಿನ ಒಂದಷ್ಟು ಜನ ಉದ್ಯೋಗಿಗಳು ಪಕ್ಷಿ ವೀಕ್ಷಣೆಯ ಹವ್ಯಾಸ ಹೊಂದಿದ್ದಾರೆ. ಅವರೆಲ್ಲ ಸೇರಿ ಸುತ್ತಮುತ್ತ ತಾವು ಓಡಾಡುವ ಪ್ರದೇಶದಲ್ಲಿ ಪಕ್ಷಿ ವೀಕ್ಷಣೆ ಕೈಗೊಳ್ಳುತ್ತಾರೆ. ವರ್ಷಕ್ಕೆ ಒಂದು ಬಾರಿ ಕೈಗಾ ವಸತಿ ಸಮುಚ್ಛಯದ ಆಸು ಪಾಸು ಒಂದಷ್ಟು ಪ್ರದೇಶದಲ್ಲಿ ಆಸಕ್ತ ಪಕ್ಷಿ ವೀಕ್ಷಕರನ್ನು ಆಹ್ವಾನಿಸಿ ಬರ್ಡ್ ಮ್ಯಾರಥಾನ್ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಹಲವಾರು ವರ್ಷಗಳ ಹಿಂದೆ ನಾನು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಕಾಳಿ ನದಿಗೆ ಕಟ್ಟಲಾದ ಕದ್ರಾ ಅಣೆಕಟ್ಟಿನ ಹಿನ್ನೀರು ಪ್ರದೇಶದಲ್ಲಿ ನಾವು ಪಕ್ಷಿ ವೀಕ್ಷಣೆಗೆ ಹೋಗಿದ್ದೆವು. ಹಿನ್ನೀರಿನ ಆಸು ಪಾಸಿನಲ್ಲೇ ಪುಟಾಣಿ ಕೋಳಿ ಮರಿಯ ಗಾತ್ರದ ಹಕ್ಕಿಯೊಂದು ಓಡಾಡುತ್ತಾ ನಿಲ್ಲುತ್ತಾ ಅದೇನನ್ನೋ ಹುಡುಕುತ್ತಿತ್ತು. 
      ನೋಡಲು ಟಿಟ್ಟಿಭ ಹಕ್ಕಿಯ ರೀತಿಯೇ ಕಂಡರೂ ಬಣ್ಣ ರಚನೆಗಳೆಲ್ಲ ಹಾಗೆ ಇರಲಿಲ್ಲ. ಓಡಾಡುವ ವಿಧಾನವು ವಿಭಿನ್ನವಾಗಿತ್ತು. ಕೀಲು ಕುದುರೆಯಂತೆ ದೇಹವನ್ನು ಕುಣಿಸುತ್ತಾ ನಾಲ್ಕು ಹೆಜ್ಜೆ ಓಡುವುದು ಥಟ್ಟನೆ ನಿಲ್ಲುವುದು. ನೆಲದಲ್ಲಿ ಒದ್ದೆ ಮರಳಿನ ನಡುವೆ ಕೊಕ್ಕಿನಿಂದ ಅಗೆಯುತ್ತ ಅದೇನನ್ನೋ ಹುಡುಕಿ ತಿನ್ನುವುದು ಮಾಡುತ್ತಿತ್ತು. ರೆಕ್ಕೆ ಬೆನ್ನಿನ ಮೇಲೆಲ್ಲ ಮರಳಿನದ್ದೇ ಬಣ್ಣ. ಕತ್ತಿನ ಸುತ್ತ ಬಿಳಿ ಬಣ್ಣದ ಪಟ್ಟಿ ಅದರ ಮೇಲೆ ಕೆಳಗೆ ಕಪ್ಪು. ಕಣ್ಣಿನ ಸುತ್ತ ಹಳದಿ ಬಣ್ಣದ ಉಂಗುರ. ಹೊಟ್ಟೆಯ ಭಾಗವೆಲ್ಲ ಬಿಳಿ ಬಣ್ಣ, ಪುಟಾಣಿ ಗುಲಾಬಿ ಮಿಶ್ರಿತ ಹಳದಿ ಬಣ್ಣದ ಕಾಲುಗಳಿಂದ ಒದ್ದೆ ಮರಳಿನಲ್ಲಿ ಓಡಾಡುತ್ತಾ ಆಹಾರ ಹುಡುಕುತ್ತಿತ್ತು. ನೀರಿನ ಆಸುಪಾಸು ಸಿಗುವ ಕೀಟಗಳು, ಸಣ್ಣಪುಟ್ಟ ಏಡಿಗಳು ಇದರ ಮುಖ್ಯ ಆಹಾರ. ಮರಳಿನ ಒಳಗೆ ಅಡಗಿರಬಹುದಾದ ಆಹಾರವನ್ನು ಎಳೆಯಲು ಸಾಧ್ಯವಾಗುವಂತಹ ಪುಟಾಣಿ ಕೊಕ್ಕು. ಭಾರತದಾದ್ಯಂತ ನೀರಿನ ಮೂಲಗಳ ಆಸುಪಾಸಿನಲ್ಲಿ ಈ ಹಕ್ಕಿಯನ್ನು ನೋಡಲು ಸಾಧ್ಯವಂತೆ. ಸಮುದ್ರ ತೀರದಲ್ಲೂ ಈ ಹಕ್ಕಿಗಳು ಇತರೆ ವಲಸೆ ಹಕ್ಕಿಗಳ ಜೊತೆ ಕಾಣಲು ಸಿಗುತ್ತವೆ. ಕೆಲವೊಮ್ಮೆ ಜೋಡಿಯಾಗಿ, ಕೆಲವೊಮ್ಮೆ ಗುಂಪಾಗಿ ಓಡಾಡುವ ಈ ಹಕ್ಕಿಗಳು ಅಪಾಯ ಎದುರಾದಾಗ ಸಣ್ಣದಾಗಿ ಪೀ.. ಊ ಎಂದು ಕೂಗುತ್ತಾ ಹಾರಿ ತಮ್ಮ ಜಾಗವನ್ನು ಬದಲಾಯಿಸುತ್ತದೆ. ಮಾರ್ಚ್ ನಿಂದ ಮೇ ತಿಂಗಳ ನಡುವೆ ಬಿರು ಬೇಸಿಗೆಯಲ್ಲಿ ಮರಳಿನ ಮೇಲೆ ಅದೇ ಬಣ್ಣದ ಕಲ್ಲಿನಂತೆ ಕಾಣುವ ಪುಟಾಣಿ ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತವೆ ಎಂದು ಪರಿಣಿತರು ಹೇಳುತ್ತಾರೆ. ನೋಡಲು ಗಂಡು ಮತ್ತು ಹೆಣ್ಣು ಹಕ್ಕಿಗಳೆರಡು ಒಂದೇ ರೀತಿ ಇರುತ್ತವೆ. ನಿಮ್ಮ ಆಸು ಪಾಸಿನ ಕೆರೆ ನದಿ ಹಿನ್ನೀರು ಅಥವಾ ಸಮುದ್ರ ತೀರದಲ್ಲಿ ಈ ಪುಟಾಣಿ ಹಕ್ಕಿ ಖಂಡಿತಾ ಇರಬಹುದು.
ಕನ್ನಡದ ಹೆಸರು: ಸಣ್ಣ ಕರಿಪಟ್ಟಿ ಗೊರವ
ಇಂಗ್ಲೀಷ್ ಹೆಸರು: Little Ringed Plover
ವೈಜ್ಞಾನಿಕ ಹೆಸರು: Charadrius dubius
ಚಿತ್ರ : ಅರವಿಂದ ಕುಡ್ಲ
ಮುಂದಿನ ವಾರ ಹೊಸತೊಂದು ಹಕ್ಕಿ ಕಥೆ ಮತ್ತು ಒಗಟಿನೊಂದಿಗೆ ಮತ್ತೆ ಭೇಟಿ ಮಾಡೋಣ. 
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************



Ads on article

Advertise in articles 1

advertising articles 2

Advertise under the article