-->
ಜಗಲಿ ಕಟ್ಟೆ : ಸಂಚಿಕೆ - 35

ಜಗಲಿ ಕಟ್ಟೆ : ಸಂಚಿಕೆ - 35

ಜಗಲಿ ಕಟ್ಟೆ : ಸಂಚಿಕೆ - 35
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 



ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


ಜಗಲಿ ಕಟ್ಟೆ - 35
      ಇಂದು ಭಾರತದಾದ್ಯಂತ ಸಂಭ್ರಮದ ದಿನ. ಈ ಜಗತ್ತಿಗೆ "ರಾಮಾಯಣ" ದ ಕೊಡುಗೆಗೆ ಕಾರಣರಾದ ಶ್ರೀ ರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲಾನ ವಿಗ್ರಹದ ಪ್ರಾಣಪ್ರತಿಷ್ಠೆಯ ದಿನ. 
     ನಿನ್ನೆಯ ದಿನ ಶ್ರೀರಾಮನ ಕಥಾ ಭಾಗದಲ್ಲಿ ಭಾಗವಹಿಸಿ ಕಥೆ ಕೇಳ್ತಾ ಇದ್ದೆ. ಕಥೆಯಲ್ಲಿ ಶ್ರೀರಾಮನ ಬಗ್ಗೆ ಹೇಳ್ತಾ.... ಶ್ರೀರಾಮ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚಿನ ನಾಯಕನಾಗಿದ್ದ. ದಶರಥ ನ ಉತ್ತರಾಧಿಕಾರಿ ಯಾರಾಗಬಹುದೆನ್ನುವ ಪ್ರಶ್ನೆಗೆ.... ಪ್ರತಿಯೊಬ್ಬರಲ್ಲೂ ಕೂಡ "ಶ್ರೀರಾಮ" ಮಾತ್ರ ಉತ್ತರವಾಗಿತ್ತು. ನಂತರ ನಡೆದ ವಿಧಿಯಾಟದಲ್ಲಿ ಮಂಥರೆ ಖಳನಾಯಕಿಯಾಗಿ ಭರತನ ತಾಯಿಯಾದ ಕೈಕೇಯಿಗೆ ದುಷ್ಟಬುದ್ಧಿಯನ್ನು ತುಂಬುತ್ತಾಳೆ. ಬದಲಾದ ಕೈಕೇಯಿ ಭರತನೇ ಅಯೋಧ್ಯೆಯ ರಾಜನಾಗಬೇಕೆಂಬ ಮನದ ಇಂಗಿತವನ್ನು ವ್ಯಕ್ತಪಡಿಸುತ್ತಾಳೆ. ಅಷ್ಟಕ್ಕೂ ನಿಲ್ಲದ ಕೈಕೇಯಿ ಯ ಸ್ವಾರ್ಥ ಶ್ರೀರಾಮ 14 ವರ್ಷಗಳ ವನವಾಸ ಮಾಡಬೇಕೆಂಬ ಹಠಕ್ಕೆ ದಶರಥ ದಿಗ್ಭ್ರಾಂತನಾಗುತ್ತಾನೆ. 
      ಆದರೆ ಇವೆಲ್ಲವನ್ನು ಪ್ರೀತಿಪೂರ್ವಕವಾಗಿಯೇ ಸ್ವಾಗತಿಸುವ ಶ್ರೀರಾಮ ಎಲ್ಲರನ್ನು ಗೆಲ್ಲುತ್ತಾನೆ. ತನ್ನ ಪ್ರೀತಿಗೆ ಸೋಲುವ ಇಡೀ ಅಯೋಧ್ಯೆ ತನ್ನ ಸಂಗಡ ಕಾಡಿಗೆ ಹೊರಟು ನಿಂತಾಗ ಅಕ್ಷರಶಃ ಶ್ರೀರಾಮನ ವ್ಯಕ್ತಿತ್ವ ಆದರ್ಶಪ್ರಾಯವೆನಿಸುವುದು ಸುಳ್ಳಲ್ಲ. ವಿಚಾರ ತಿಳಿದುಕೊಂಡ ಭರತ ತನ್ನ ತಾಯಿಯ ಬಗ್ಗೆನೇ ಅಸಹ್ಯಪಡುತ್ತಾ... ತನ್ನ ತಾಯಿಗೊಂದು ಮಾತು ಹೇಳುತ್ತಾನೆ.. ಯಾರೂ ನಿನ್ನನ್ನು ಕ್ಷಮಿಸಲಾರರು... ನಿನ್ನನ್ನು ಕ್ಷಮಿಸುವ ವ್ಯಕ್ತಿಯೊಬ್ಬ ಇದ್ದರೆ... ಅವನು "ಶ್ರೀರಾಮ" ಮಾತ್ರ. ಈ ಕಾರಣಕ್ಕಾಗಿಯೇ ಶ್ರೀ ರಾಮ ಎಲ್ಲರ ಪ್ರೀತಿಯ ವ್ಯಕ್ತಿಯಾಗುತ್ತಾನೆ. ದೇವರಾಗುತ್ತಾನೆ....!!
      ನಂತರ ನಡೆದ ವಿಚಾರ ಸಂಕಿರಣದಲ್ಲಿ ಪ್ರೇಕ್ಷಕರೊಬ್ಬರು.... "ರಾಮ ರಾಜ್ಯದ ಕನಸು ಸ್ಥಾಪನೆಯಾದೀತೇ...?" ಎಂದರು.. ಉತ್ತರ ಬಹಳ ಸೊಗಸಾಗಿತ್ತು. ರಾಮನಂತಹ ಯಜಮಾನ, ಸೀತೆಯಂತಹ ಪತ್ನಿ, ತಾಯಿ, ಭರತ,  ಲಕ್ಷ್ಮಣ ರಂತಹ ಸಹೋದರರು, ಲವಕುಶ ರಂತಹ ಮಕ್ಕಳು, ಹನುಮಂತನಂತಹ ಸೇವಕರು ಒಳಗೊಂಡಂತಹ ಕುಟುಂಬ ಇದ್ದಾಗ ರಾಮರಾಜ್ಯವಾಗುತ್ತದೆ....! ರಾಮ ರಾಜ್ಯದ ಕನಸು ಮತ್ತೊಬ್ಬರಿಂದ ನಿರೀಕ್ಷೆ ಮಾಡುವುದಕ್ಕಿಂತ ಮುಂಚೆ ತನ್ನ ಕುಟುಂಬದಿಂದಲೇ ಆರಂಭವಾಗಬೇಕೆನ್ನುವುದು ನಿಲುವಾಗಬೇಕು....!! ಹೀಗೊಂದು ಉತ್ತರ ನಮ್ಮೆಲ್ಲರಲ್ಲೂ ಕೂಡ ಜವಾಬ್ದಾರಿಯನ್ನು ಮೂಡಿಸುತ್ತದೆ..!! ರಾವಣನಂತಹವರನ್ನು ಬದಿಸರಿಸಿ ಆದರ್ಶ ವೃಕ್ತಿತ್ವದವರನ್ನು ನಾಯಕನನ್ನಾಗಿ ಆರಿಸುವ ಮೂಲಕ ಸುಂದರ ದೇಶದ ಕನಸನ್ನು ನನಸಾಗಿಸುವ ಎಲ್ಲಾ ಶಕ್ತಿ ನಮ್ಮಲ್ಲಿದೆ ಅನ್ನೋದು ಇಲ್ಲಿನ ಉತ್ತರವಾಗಿತ್ತು...!!
ಎಲ್ಲರಿಗೂ ಶುಭವಾಗಲಿ...
       ಮಕ್ಕಳ ಜಗಲಿಯ 3ನೇ ವರ್ಷದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಅಂದಾಜು 3000 ಕಲಾಕೃತಿಗಳನ್ನು ಕಳುಹಿಸಿರುವ ಎಲ್ಲಾ ಸ್ಪರ್ಧಾರ್ಥಿಗಳಿಗೆ ಆನ್ಲೈನ್ ಮೂಲಕ ಡಿಜಿಟಲ್ ಪ್ರಮಾಣ ಪತ್ರವನ್ನು ಕಳುಹಿಸಿಕೊಡುವ ಕಾರ್ಯ ಪ್ರಗತಿಯಲ್ಲಿದೆ. ಜನವರಿ 26 ರಂದು ಫಲಿತಾಂಶ ಪ್ರಕಟವಾಗಲಿದೆ.


ಕಳೆದ ಸಂಚಿಕೆಯ ಜಗಲಿಕಟ್ಟೆ - 34 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ.... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....

ನಮಸ್ತೇ,
    ಸಂತೋಷದಿಂದ ಬಾಳಿ ಇತರರಿಗೂ ಸಂತೋಷವನ್ನುಂಟು ಮಾಡುವುದೇ ಸುಂದರ ಜೀವನದ ಉದ್ದೇಶ ಎಂಬ ಕಿವಿಮಾತಿನೊಂದಿಗೆ ಶಿಕ್ಷಣಾಧಿಕಾರಿಯವರಾದ ಜ್ಞಾನೇಶ್ ಸರ್ ರವರ ಲೇಖನ ತುಂಬಾ ಚೆನ್ನಾಗಿತ್ತು.
      'ದೇಹ - ದೇವ - ದೇಶ' ಲೇಖನದಲ್ಲಿ ರಮೇಶ್ ಸರ್ ರವರು ಪ್ರತಿಯೊಂದರ ಕುರಿತಾದ ವಿಶ್ಲೇಷಣೆ ಅವುಗಳು ಪರಸ್ಪರ ಒಂದಕ್ಕೊಂದು ಹೇಗೆ ಪೂರಕವೆನ್ನುವುದನ್ನು ಬಹಳ ಸೊಗಸಾಗಿ ತಿಳಿಸಿದ್ದಾರೆ.
    ಸೂರ್ಯನಿಂದ ಭೂಮಿ ಮತ್ತು ಇತರ ಗ್ರಹಗಳ ಹುಟ್ಟು ಭೂಮಿಯ ವಾತಾವರಣದ ನಿರ್ಮಾಣಕ್ಕೆ ಕಾರಣಗಳನ್ನು ಬಹಳ ಚೆನ್ನಾಗಿ ದಿವಾಕರ ಸರ್ ರವರು ತಮ್ಮ ಈ ಸಲದ ಸಂಚಿಕೆಯಲ್ಲಿ ವಿವರಿಸಿದ್ದಾರೆ.
    ಅರವಿಂದ ಸರ್ ರವರ ಹಕ್ಕಿಕಥೆಯಲ್ಲಿ ಈ ಸಲ ಪುಟಾಣಿ ಗಾತ್ರದ ಕಪ್ಪು ಬಿಳಿ ಬೇಲಿ ಚಟಕ ಹಕ್ಕಿಯ ಪರಿಚಯ ಸೊಗಸಾಗಿ ಮೂಡಿ ಬಂದಿದೆ.
    ಎಲ್ಲೆಂದರಲ್ಲಿ ಬೆಳೆಯುವ ಕೆಂಜಿಗೆ ಸಸ್ಯ ಬಹಳ ಉಪಯುಕ್ತ ಸಸ್ಯವೆಂದು ತಿಳಿಯಿತು. ಮಳೆ ಬಿದ್ದರೆ ಬೇರಿನ ಮೂಲಕ ಚಿಗುರಿ ಎದ್ದು ನಿಲ್ಲುತ್ತದೆ. ತುಂಬಾ ಉಪಯುಕ್ತ ಮಾಹಿತಿ ವಿಜಯಾ ಮೇಡಂರವರಿಂದ.
     ಪ್ರತಿಯೊಂದು ಮಗುವಿನಲ್ಲೂ ಅದಮ್ಯ ಚೇತನವಿರುತ್ತದೆ. ಅದನ್ನು ಹೊರಗೆಡಹುವ ಕೆಲಸವನ್ನು ಮಾಡಬೇಕೆ ಹೊರತು ಚಿವುಟಿ ಬಿಸಾಕುವ ಕೆಲಸ ಮಾಡಬಾರದನ್ನುವ ಉದಾತ್ತ ಸಂದೇಶವನ್ನು ಯಾಕೂಬ್ ಸರ್ ಸುಂದರ ಕಥೆಯ ಮೂಲಕ ತಿಳಿಸಿದ್ದಾರೆ. ಧನ್ಯವಾದಗಳು ಸರ್.
     ಈ ಸಲದ ಆರ್ಟ್ ಗ್ಯಾಲರಿಯಲ್ಲಿ ಕಲಾವಿದ ರಾಜೇಂದ್ರ ಕೇದಿಗೆಯವರ ಪರಿಚಯ ಚೆನ್ನಾಗಿ ಮೂಡಿಬಂದಿದೆ.
    ಬೋನ್ ಬೀಬಿಯ ಕಾಡಿನಲ್ಲಿ ಪುಸ್ತಕದ ಪರಿಚಯ ವಾಣಿಯಕ್ಕನ ವರಿಂದ. ತುಂಬಾ ಕುತೂಹಲ ಮೂಡಿಸುವ ಪುಸ್ತಕ.
    ವಿಶೇಷ ಅಗತ್ಯವುಳ್ಳ ಮಕ್ಕಳ ಸಾಧನೆ ಜೊತೆಗೆ ಅವರಿಗೆ ಬೇಕಾಗುವ ಅಗತ್ಯತೆಗಳ ಪೂರೈಕೆಗೆ ಸರಕಾರದ ಸಹಾಯ ಹಾಗೂ ಅವರ ಜೊತೆಗಿನ ಒಡನಾಟದ ಸುಂದರ ಅನುಭವ ರವಿಕಲಾ ಮೇಡಂ ರವರಿಂದ ಈ ಸಲದ ಶಿಕ್ಷಕರ ಡೈರಿಯಲ್ಲಿ .
    ರಮೇಶ ಉಪ್ಪುಂದರವರ ಈ ಸಲದ ಪದದಂಗಳ ಸಂಚಿಕೆ ಚೆನ್ನಾಗಿತ್ತು. ಈ ವಾರದ ಜಗಲಿಯ ಸೊಗಸಿಗೆ ಕಾರಣರಾದ ಎಲ್ಲರಿಗೂ ನನ್ನ ಮನದಾಳದ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************

      ಶಿಕ್ಷಕರ ಸ್ಕೂಲ್ ಡೈರಿ ಅಂಕಣದಲ್ಲಿ ಮನದಾಳದ ಮಾತು ಲೇಖನ ತುಂಬಾ ಚೆನ್ನಾಗಿತ್ತು. ವಿಶೇಷ ಅಗತ್ಯವುಳ್ಳ ಮಕ್ಕಳ ಬಗ್ಗೆ ಕನಿಕರ ತೋರುವ ಬದಲಿಗೆ ಅವರ ಬಾಳಿಗೆ ಬೆಳಕಾಗುವ ರೀತಿಯಲ್ಲಿ ತನ್ನ ನಿಸ್ವಾರ್ಥ ಸೇವೆಯನ್ನು ಮಾಡಿ ಅವರಲ್ಲಿ ಹಾಗೂ ಅವರ ಕುಟುಂಬದವರಲ್ಲಿ ಉತ್ತಮ ಭರವಸೆಯನ್ನು ಮೂಡಿಸಿ ನಾವು ಕೂಡ ಈ ಸಮಾಜದಲ್ಲಿ ಸಾಮಾನ್ಯ ಮಕ್ಕಳಂತೆ ಬದುಕಬಹುದೆಂಬ ದಾರಿ ತೋರಿಸಿದ ನಮ್ಮ ಗೌರವಾನ್ವಿತ ಬಿ ಇ ಐ ಆರ್ ಟಿ ಶ್ರೀಮತಿ ರವಿಕಲ ಮೇಡಂ ಇವರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಆ ಮಕ್ಕಳ ಬಾಳಿನಲ್ಲಿ ಬೆಳಕು ನೀಡುವಂತೆ ಮಾಡಲು ಆ ದೇವರ ಆಶೀರ್ವಾದ ಇರಲಿ ಎಂದು ಆಶಿಸುವ..... 
................................................ ಪ್ರಮೀಳ 
ಶಿಕ್ಷಣ ಸಂಯೋಜಕಿ 
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ
ಮಂಗಳೂರು ಉತ್ತರ ವಲಯ
******************************************

ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ .... ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************



Ads on article

Advertise in articles 1

advertising articles 2

Advertise under the article