-->
ಜಗಲಿ ಕಟ್ಟೆ : ಸಂಚಿಕೆ - 34

ಜಗಲಿ ಕಟ್ಟೆ : ಸಂಚಿಕೆ - 34

ಜಗಲಿ ಕಟ್ಟೆ : ಸಂಚಿಕೆ - 34
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ    ಮಕ್ಕಳ ಜಗಲಿಯ ಎಲ್ಲರಿಗೂ ಮಕರ ಸಂಕ್ರಮಣ ಹಬ್ಬದ ಶುಭಾಶಯಗಳು....
     ಜಗಲಿಯಲ್ಲಿ ಅನೇಕ ಸಂಚಿಕೆಗಳು ನೂರರ ಗಡಿ ದಾಟಿರುವುದು ಹಾಗೂ ಇನ್ನಷ್ಟು ಸಂಚಿಕೆಗಳು ನೂರರ ಆಸು ಪಾಸು ಇರುವುದು ತುಂಬಾ ಹೆಮ್ಮೆಯ ವಿಷಯ. ಅನೌಪಚಾರಿಕವಾಗಿ ಆರಂಭವಾದ ಮಕ್ಕಳ ಜಗಲಿ ಇಷ್ಟೊಂದು ದೊಡ್ಡ ಮೈಲುಗಲ್ಲನ್ನು ಸ್ಥಾಪಿಸಬಹುದೆನ್ನುವ ಕಲ್ಪನೆಯನ್ನು ಕನಸಲ್ಲೂ ಹೊಂದಿರಲಿಲ್ಲ. ಬಹಳಷ್ಟು ಅನುಭವಿ ಬರಹಗಾರರು ಮಕ್ಕಳ ಜಗಲಿ ಜೊತೆ ಸೇರಿ ನಡೆಸಿಕೊಂಡು ಬಂದಿರುವುದರಿಂದ ಪ್ರತಿಯೊಬ್ಬರ ಮನ - ಮನೆ ತಲುಪಿದೆ ಎಂದುಕೊಳ್ಳುತ್ತೇನೆ.
       ಈಗಾಗಲೇ "ಜೀವನ ಸಂಭ್ರಮ", "ಬದಲಾಗೋಣವೇ ಪ್ಲೀಸ್...!!" , "ಹಕ್ಕಿಕಥೆ", ಪದದಂಗಳ, ಸೆಂಚುರಿ ಬಾರಿಸಿದ ಸಂಚಿಕೆಗಳಾದರೆ, "ಸ್ಪೂರ್ತಿಯ ಮಾತುಗಳು" , "ಪ್ರೀತಿಯ ಪುಸ್ತಕ" ಇತ್ಯಾದಿ ನೂರರ ಸಮೀಪಕ್ಕಿದೆ.
      ಇತ್ತೀಚೆಗೆ ಮಕ್ಕಳ ಪುಸ್ತಕವನ್ನು ಪರಿಚಯಿಸುತ್ತಿರುವ ವಾಣಿಯಕ್ಕ ನೂರನೇ ಸಂಚಿಕೆಗೆ ನಿಲ್ಲಿಸಿ ಬಿಡೋಣ ಎಂದಿದ್ದರು. ಅಪರೂಪವೆನಿಸಿರುವಂತಹ ಇಂತಹ ಪುಸ್ತಕಗಳ ಪರಿಚಯದ ಸಂಚಿಕೆಗಳು ನಿಜವಾಗಲೂ ಅಗತ್ಯವಿರುವಂತಹದ್ದು. ಪೋಷಕರಿಗೆ, ಶಾಲಾ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಇಂಥ ಪುಸ್ತಕಗಳ ಸಂಗ್ರಹಕ್ಕೂ ಬಹು ಅಗತ್ಯವಾಗಿರುವ ಸಂಚಿಕೆ ಎನಿಸಿದೆ. ಹಾಗಾಗಿ ಸಾಧ್ಯ ಇರುವಷ್ಟು ಪುಸ್ತಕಗಳ ಪರಿಚಯಕ್ಕೆ ಮನ ಮಾಡಿ ಮುಂದುವರಿಸುತ್ತಿದ್ದಾರೆ. ಅವರ ಕಾಳಜಿಗೆ ಮಕ್ಕಳ ಜಗಲಿ ಆಭಾರಿಯಾಗಿದೆ. "ಪದದಂಗಳ" - ಸಂಚಿಕೆಯ ರಮೇಶ್ ನಾಯ್ಕ ಉಪ್ಪುಂದ ಇವರೂ ಕೂಡಾ ಇನ್ನು ಸಾಕೆನ್ನುವ ಮಾತಿನಲ್ಲಿದ್ದರು. ಈ ಸಂಚಿಕೆಯೂ ಕೂಡಾ ಮಕ್ಕಳ ಕಲಿಕಾ ದೃಷ್ಟಿಯಿಂದ ಮಹತ್ವವೆನಿಸಿರುವುದಕ್ಕೆ ಮುಂದುವರಿಸುವ ಪ್ರೀತಿಯನ್ನು ನೀಡಿದ್ದಾರೆ.
        ಜಗಲಿಯಲ್ಲಿ ಹೊಸ ಹೊಸ ಅಂಕಣಗಳು ಸೇರ್ಪಡೆಯಾಗುತ್ತಿದೆ. "ಮಕ್ಕಳಿಗಾಗಿ ವಿಜ್ಞಾನ" ಎನ್ನುವ ಅಂಕಣವನ್ನು ಹಿರಿಯರಾದ ದಿವಾಕರ ಶೆಟ್ಟಿಯವರು ಬರೆಯುತ್ತಿದ್ದಾರೆ. ಮಕ್ಕಳಿಗಾಗಿ ಬಹಳ ಸರಳವಾಗಿ ವಿಜ್ಞಾನವನ್ನು ತಿಳಿಸಿಕೊಡುವ ಪ್ರಯತ್ನ ಈ ಅಂಕಣದ ಮೂಲಕ ನಡೀತಾ ಇದೆ. ಮಕ್ಕಳ ಜೊತೆಗೆ ಎಲ್ಲರಲ್ಲಿಯೂ ವಿಜ್ಞಾನದ ಬಗೆಗಿನ ಇನ್ನಷ್ಟು ಆಸಕ್ತಿ ಹಾಗೂ ಕುತೂಹಲಗಳನ್ನು ಮೂಡಿಸುವಲ್ಲಿ ಯಶಸ್ವಿಯಾಗುತ್ತಿದೆ. 
     ಆರಂಭವಾಗಿರುವ ಇನ್ನೊಂದು ಹೊಸ "ನಿಮ್ಮೂರ ಶಾಲೆಯ ಸುದ್ದಿ" - ಈ ಅಂಕಣಕ್ಕೆ ಪ್ರತಿಯೊಬ್ಬರೂ ಬರೆಯಬಹುದಾಗಿದೆ. ನಿಮ್ಮ ಶಾಲೆಯಲ್ಲಿ ಜರಗುವ ವಿಶೇಷವೆನಿಸುವ ಕಾರ್ಯಕ್ರಮಗಳನ್ನು ವರದಿ ರೂಪದಲ್ಲಿ ಬರೆದು ಕಳುಹಿಸಬಹುದು. ಪ್ರತಿಯೊಬ್ಬರೂ ಬರಹಗಾರರಾಗಬೇಕೆನ್ನುವುದು ಈ ಅಂಕಣದ ಉದ್ದೇಶವಾಗಿದೆ. 
       ಬಹಳಷ್ಟು ವಿದ್ಯಾರ್ಥಿಗಳು "ಅಕ್ಕನಪತ್ರ" ಕ್ಕೆ ಉತ್ತರಿಸುವ ಮೂಲಕ ಬರವಣಿಗೆಯಲ್ಲಿ ಆಸಕ್ತಿಯನ್ನು ಕಂಡುಕೊಂಡಿದ್ದು, ಅದನ್ನು ಮುಂದುವರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಅದೇ ರೀತಿ ಬಹಳಷ್ಟು ಪೋಷಕರು, ಶಿಕ್ಷಕರೂ ಮಕ್ಕಳ ಜಗಲಿಯಲ್ಲಿ ತುಂಬಾನೇ ಒಳಗೊಳ್ಳುತ್ತಿರುವುದು ಅಭಿಮಾನ ಮೂಡಿಸುತ್ತಿದೆ. ತಮಗೆ ಅವಕಾಶ ಒದಗಿ ಬಂದಾಗ ಬರೆಯುವ ಮೂಲಕ ತಮ್ಮ ಆಸಕ್ತಿಗೆ ಮೆರುಗು ತುಂಬುತ್ತಿದ್ದಾರೆ. ಶಿಕ್ಷಕರ ಡೈರಿ, ವೈಯಕ್ತಿಕ ಕೆಲವಷ್ಟು ಅಂಕಣಗಳಿಂದಾಗಿ ಮಕ್ಕಳ ಜಗಲಿಯ ವೈವಿಧ್ಯತೆಗೆ ಸಾಕ್ಷಿಯಾಗಿದ್ದಾರೆ. ನಮ್ಮ ಜಗಲಿ ಕಟ್ಟೆಯಲ್ಲಿ ನಿತ್ಯ ಬರೆಯುತ್ತಿರುವ ಜಗಲಿಯ ಮಾರ್ಗದರ್ಶಕರಾದ ಶ್ರೀರಾಮಮೂರ್ತಿಯವರು ಪ್ರತಿಯೊಬ್ಬ ಬರಹಗಾರರಿಗೂ ಸ್ಫೂರ್ತಿಯ ಸಲೆಯಾಗಿದ್ದಾರೆ. ಪೋಷಕರ ಪರವಾಗಿ ದಿವ್ಯಾಗಣೇಶ್ ಚಾಮೆತ್ತಮೂಲೆ, ಕವಿತಾ ಶ್ರೀನಿವಾಸ ದೈಪಲ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವುದು ತುಂಬಾ ಖುಷಿಯ ವಿಚಾರ.
     ಈಗಾಗಲೇ ಮಕ್ಕಳ ಜಗಲಿಯಲ್ಲಿ ನಿರಂತರವಾಗಿ ಬರೆಯುತ್ತಿದ್ದ ವಿದ್ಯಾರ್ಥಿಗಳು ಪುಸ್ತಕವನ್ನು ಪ್ರಕಟಿಸಿರುವುದು ಜಗಲಿಯ ಸಾಧ್ಯತೆಗೆ ಸಾಕ್ಷಿಯಾಗಿದೆ. ಮುಖ್ಯವಾಗಿ ಮಕ್ಕಳ ಅಂಕಣಗಳು ಇನ್ನೂ ಹೆಚ್ಚೆಚ್ಚು ಪ್ರಕಟವಾಗಬೇಕೆನ್ನುವುದು ನಮ್ಮ ಆಶಯವಾಗಿದೆ. ಈ ಬಗ್ಗೆಯೂ ನಾವು ಯೋಜನೆಗಳನ್ನು ಹಾಕಿಕೊಂಡಿದ್ದೇವೆ..... ಧನ್ಯವಾದಗಳು...


ಕಳೆದ ಸಂಚಿಕೆಯ ಜಗಲಿಕಟ್ಟೆ - 33 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ವಿದ್ಯಾಗಣೇಶ್ ಚಾಮೆತ್ತಮೂಲೆ, ಕವಿತಾ ಶ್ರೀನಿವಾಸ.... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....

ಎಲ್ಲರಿಗೂ ನಮಸ್ಕಾರಗಳು,
     ಇಚ್ಚಾ ಶಕ್ತಿಯು ಜ್ಞಾನ ಶಕ್ತಿಗೆ, ಜ್ಞಾನ ಶಕ್ತಿಯು ಕ್ರಿಯಾ ಶಕ್ತಿಗೆ ಕಾರಣವಾಗುತ್ತದೆ. ನಮ್ಮಲ್ಲಿನ ಇಚ್ಛಾ ಶಕ್ತಿ ಸರಿಯಾದ ದಾರಿಯಲ್ಲಿರಲಿ. ಕೆಟ್ಟ ದಾರಿಯನ್ನು ತುಳಿಯದಿರಲಿ. ಎಂಬ ಕಿವಿಮಾತಿನೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರ ಲೇಖನ ಅರ್ಥಪೂರ್ಣವಾಗಿತ್ತು.
     ಎಲ್ಲರೂ ಜ್ಞಾನಿಗಳೇ ಆದರೂ ಕೆಲವೊಮ್ಮೆ ಅಜ್ಞಾನಿಗಳಂತೆ ವರ್ತಿಸುತ್ತೇವೆ. ನಮ್ಮ ಜ್ಞಾನದಿಂದ ಸಮಾಜಕ್ಕೆ ಉತ್ತಮ ಕೊಡುಗೆಗನ್ನು ನೀಡುವಂತಾಗಬೇಕು. ಜ್ಞಾನಿಗಳಾಗಿ ದಿನನಿತ್ಯ ಆಹಾರದ ಪೋಲಾಗುವಿಕೆ ಅದರಿಂದಾಗುವ ನಷ್ಟ ಮುಂತಾದುವುಗಳ ಕುರಿತಾದ ಉತ್ತಮ ಮಾಹಿತಿ ರಮೇಶ್ ಬಾಯಾರ್ ರವರಿಂದ.
     ಭೂಮಿಯ ಭ್ರಮಣ ಚಲನೆ ಹಾಗೂ ಸೂರ್ಯನ ಸುತ್ತ ಸುತ್ತುವ ಪರಿಭ್ರಮಣ ಚಲನೆಯ ಕಾರಣದಿಂದ ಹಗಲು ರಾತ್ರಿಗಳ ಉಂಟಾಗುವಿಕೆ, ಋತುಮಾನಗಳ ಬದಲಾವಣೆ ಮುಂತಾದವುಗಳನ್ನು ತಮ್ಮ ವೈಜ್ಞಾನಿಕ ಲೇಖನದಲ್ಲಿ ದಿವಾಕರ ಸರ್ ರವರು ಬಹಳ ಸುಂದರವಾಗಿ ವಿಶ್ಲೇಷಿಸಿದ್ದಾರೆ.
     ಒಗಟಿನೊಂದಿಗೆ ಅರವಿಂದ ಸರ್ ರವರ ಈ ವಾರದ ಹಕ್ಕಿಕಥೆಯಲ್ಲಿ ಎತ್ತರದ ಬಿಳಿ ಕತ್ತಿನ ಕೊಕ್ಕರೆಯ ಪರಿಚಯ ಸೊಗಸಾಗಿತ್ತು.
     ನಮ್ಮಮನೆಯ ಸುತ್ತ ಮುತ್ತ ಹಾಗೂ ಮಾರ್ಗದ ಬದಿಯ ಕಣಿವೆಗಳಲ್ಲಿ ಈ ಗಿಡಗಳನ್ನು ನೋಡಿದ್ದೇನೆ. ಇದೊಂದು ಉಪಯುಕ್ತ ಗಿಡ ಎಂಬ ಮಾಹಿತಿ ವಿಜಯ ಮೇಡಂರವರ ಈ ವಾರದ ಲೇಖನದಿಂದ ತಿಳಿಯಿತು. ನೆಕ್ಕರೆ ಗಿಡದ ಸುಂದರ ಪರಿಚಯಕ್ಕಾಗಿ ಧನ್ಯವಾದಗಳು ಮೇಡಂ. 
      ನಾವು ಸೇವಿಸುವ ಆಹಾರದಲ್ಲಿರುವ ಪ್ರಮುಖ ವಿಷ ವಸ್ತುಗಳು ನಮ್ಮ ದೇಹಕ್ಕೆ ನಿಧಾನವಾಗಿ ತೊಂದರೆಯನ್ನುಂಟು ಮಾಡಿ ಹೃದಯ ಸ್ತಂಭನ, ಮಧುಮೇಹ, ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಗೆ ಕಾರಣವಾಗಿ ಮನುಷ್ಯನ ಸಾವಿಗೆ ಹೇಗೆ ಕಾರಣವಾಗುತ್ತವೆ ಎಂಬುದನ್ನು ಯಾಕೂಬ್ ಸರ್ ರವರು ಬಹಳ ಸುಂದರವಾಗಿ ವಿವರಿಸಿದ್ದಾರೆ. ಯಾಕೂಬ್ ಸರ್ ರವರಿಂದ ಸಕಾಲಿಕ ಲೇಖನ.
      ಪರೀಕ್ಷಾ ತಯಾರಿ ಕುರಿತಾಗಿ ವಿದ್ಯಾವತಿ ಮೇಡಂ ರವರ ಲೇಖನ ಚೆನ್ನಾಗಿತ್ತು. ವೇಳಾಪಟ್ಟಿಯನ್ನು ಅನುಸರಿಸಿದಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸು ಖಂಡಿತ.
     ನನ್ನ ಹಾಗೂ ತಾರಾನಾಥ್ ಸರ್ ರವರ ವಿದ್ಯಾರ್ಥಿ ಹರ್ಷಿತ್ ಶೆಟ್ಟಿ ರವರ ಚಿತ್ರಗಳ ಪರಿಚಯ ಈ ಸಲದ ಆರ್ಟ್ ಗ್ಯಾಲರಿಯಲ್ಲಿ. ಕ್ರಿಯಾಶೀಲ ವಿದ್ಯಾರ್ಥಿಯ ಸುಂದರ ಚಿತ್ರಗಳನ್ನು ಕಣ್ತುಂಬಿಕೊಂಡಂತಾಯಿತು. ಧನ್ಯವಾದಗಳು ಸರ್.
     ವಾಣಿಯಕ್ಕ ನವರಿಂದ ಈ ವಾರ ಮಕ್ಕಳಿಗಾಗಿಯೇ ಇರುವ 'ಗೋಲಿಯ ಆಟ' ಎನ್ನುವ ಒಂದು ಹೊಸ ಸುಂದರ ಪುಸ್ತಕದ ಪರಿಚಯ.
      ಶಿಕ್ಷಕರ ಡೈರಿ ಸಂಚಿಕೆಯಲ್ಲಿ ನಮ್ಮ ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಸುಶೀಲಾ ಮೇಡಂ ರವರ ಚಂದದ ಅನುಭವದ ಬುತ್ತಿ - ಮಕ್ಕಳು ಪರೀಕ್ಷಾ ಭಯದಿಂದ ದೂರವಿರಬೇಕೆನ್ನುವ ಕಳಕಳಿಯ ವಿನಂತಿಯೊಂದಿಗೆ.
     ಮಕ್ಕಳ ಕವನಗಳಲ್ಲಿ ಶರ್ಮಿಳಾ ರವರ ಕವನಗಳು ಪ್ರಬುದ್ಧವಾಗಿದ್ದುವು. ಜಾಂಬೂರಿಯಲ್ಲಿ ಸ್ಕೌಟ್ ಮತ್ತು ಗೈಡ್ಸ್ ಶಿಬಿರದ ಅನುಭವಗಳನ್ನು ಸುಂದರವಾಗಿ ಹಂಚಿಕೊಂಡಿದ್ದಾರೆ ಸಾನ್ವಿ ಯವರು. ಇಬ್ಬರಿಗೂ ಅಭಿನಂದನೆಗಳು.
     ಪ್ರತೀಕ್ಷಾ ಮರಕಿಣಿಯವರಿಂದ ಚಿತ್ರಕಲಾ ಪ್ರದರ್ಶನದ ಕುರಿತಾದ ಸುಂದರ ವರದಿ ಚಿತ್ರಕಲಾ ಪ್ರದರ್ಶನದ ವಿವಿಧ ಆಯಾಮಗಳ ಕೈಗನ್ನಡಿಯಂತಿತ್ತು.
      ನೂರರ ಗಡಿ ದಾಟಿ ಮುನ್ನಡೆಯುತ್ತಿರುವ ಪದದಂಗಳ .ಇನ್ನಷ್ಟು ಹೊಸತನ ಹೊಸ ಪದಗಳ ಹುಡುಕಾಟಕ್ಕೆ ಕಾರಣೀಭೂತವಾಗಿದೆ. ಅಭಿನಂದನೆಗಳು ರಮೇಶ ಉಪ್ಪುಂದರವರಿಗೆ.
     ಈ ವಾರ ಒಂದು ಹೊಸ ಚಂದದ ಅಂಕಣ - ನಿಮ್ಮೂರ ಶಾಲೆಯ ಸುದ್ದಿ. ಮೊದಲ ಸಂಚಿಕೆಯಲ್ಲಿ ಸಾವ್ಯ ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ ಅರ್ಚನಾರವರಿಂದ ಆ ಶಾಲೆಯ ವಜ್ರ ಮಹೋತ್ಸವದ ಕುರಿತ ಸವಿಸ್ತಾರವಾದ ಅನುಭವದ ವರದಿ ಮನ ಮುಟ್ಟುವಂತಿತ್ತು. ಧನ್ಯವಾದಗಳು ಮೇಡಂ
ತಮಗೆ. 
    ಈ ವಾರದ ಜಗಲಿಯು ಸುಂದರವಾಗಿ ಮೂಡಿ ಬರಲು ಕಾರಣರಾದ ಎಲ್ಲರಿಗೂ ನನ್ನ ಮನದಾಳದ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************

ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ .... ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


Ads on article

Advertise in articles 1

advertising articles 2

Advertise under the article