ನಿಮ್ಮೂರ ಶಾಲೆಯ ಸುದ್ದಿ : ಸಂಚಿಕೆ - 02
Monday, January 29, 2024
Edit
ನಿಮ್ಮೂರ ಶಾಲೆಯ ಸುದ್ದಿ : ಸಂಚಿಕೆ - 02
ಬರಹ : ಅಭಿನವ್. ಪಿ.ಎನ್
5ನೇ ತರಗತಿ
ಸ ಉ ಹಿ ಪ್ರಾ ಶಾಲೆ ಮುಂಡೂರು
ಪುತ್ತೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ
ರಾಜ್ಯಮಟ್ಟದ ಕ್ರೀಡಾಕೂಟವು ನಮ್ಮ ಪುತ್ತೂರು ತಾಲೂಕು ಕ್ರೀಡಾಂಗಣವಾದ ಕೊಂಬೆಟ್ಟಿನಲ್ಲಿ ಡಿಸೆಂಬರ್ ಒಂದರಿಂದ ನಾಲ್ಕರವರೆಗೆ ನಡೆಯಲಿದೆ ಎಂಬುದಾಗಿ ನಮ್ಮ ಶಾಲಾ ಮುಖ್ಯ ಗುರುಗಳಾದ ವಿಜಯ ಮಿಸ್ ತಿಳಿಸಿದರು. ಇದರಲ್ಲಿ ನಮ್ಮ ಶಾಲಾ ಬ್ಯಾಂಡ್ ಸೆಟ್ ಗೆ ಭಾಗವಹಿಸಲು ಅವಕಾಶ ಇದೆ ಎಂಬುದಾಗಿ ನಮ್ಮ ದೈಹಿಕ ಶಿಕ್ಷಕಿ ವನಿತಾ ಮಿಸ್ ಹೇಳಿದರು. ಈ ಬ್ಯಾಂಡ್ ಸೆಟ್ ಗೆ ಸೇರಲು ನನಗೆ ತುಂಬಾ ಆಸೆಯಾಯಿತು.
ನನ್ನನ್ನು ಬ್ಯಾಂಡ್ ಸೆಟ್ ಗೆ ಸೇರಿಸಿದರು. ಅಂದಿನಿಂದ ಅಭ್ಯಾಸ ಪ್ರಾರಂಭವಾಯಿತು. ಇದರ ಅಭ್ಯಾಸಕ್ಕಾಗಿ ದಿನಾಲು ಸಂಜೆ ವಿಶೇಷ ತರಗತಿಗಳನ್ನು ನಡೆಸುತ್ತಿದ್ದರು. ಬಹಳ ಸಂತೋಷದಿಂದ ಈ ತರಗತಿಯಲ್ಲಿ ನಾವು ಅಭ್ಯಾಸ ಮಾಡುತ್ತಿದ್ದೆವು. ನನಗೆ ಶಂಖವನ್ನು ಕಲಿಸಿಕೊಟ್ಟರು. ನಾನು ಇದನ್ನು ಮನೆಯಲ್ಲೂ ಅಭ್ಯಾಸ ಮಾಡುತ್ತಿದ್ದೆ.
ಡಿಸೆಂಬರ್ ಒಂದರಂದು ನಮ್ಮ ಶಾಲೆಗೆ ರಾಜ್ಯಮಟ್ಟದ ಕ್ರೀಡಾ ಜ್ಯೋತಿಯು ಬರುತ್ತದೆ ಎಂದು ತಿಳಿಸಿದರು. ಅದನ್ನು ಸ್ವಾಗತಿಸಲು ನಾವೆಲ್ಲರೂ ತಯಾರಾದೆವು. ಹೊರೆ ಕಾಣಿಕೆ ಕೊಡಲಿಕ್ಕಾಗಿ ನಾವೆಲ್ಲ ವಿದ್ಯಾರ್ಥಿಗಳು ತರಕಾರಿಗಳನ್ನು ಶಾಲೆಗೆ ತಂದಿದ್ದೆವು. ನಾನೂ ಕೂಡ ತರಕಾರಿಯನ್ನು ಮತ್ತು ಹೂವನ್ನು ತಂದಿದ್ದೆನು. ಸಂಜೆ 4:00 ಗಂಟೆಗೆ ಕ್ರೀಡಾ ಜ್ಯೋತಿಯ ಆಗಮನವಾಯಿತು. ನಮ್ಮ ಶಾಲೆಯ ಎಸ್ ಡಿ ಎಂ ಸಿ ಯ ಅಧ್ಯಕ್ಷರು ಸದಸ್ಯರು ಶಾಲೆಗೆ ಬಂದಿದ್ದರು. ನಮ್ಮ ಶಾಲೆಯ ಶಿಕ್ಷಕರಾದ ರಾಮಚಂದ್ರ ಸರ್, ರವೀಂದ್ರ ಶಾಸ್ತ್ರಿ ಸರ್, ಬಶೀರ್ ಸರ್, ಶಶಿಕಲಾ ಮಿಸ್, ನಾಗವೇಣಿ ಮಿಸ್, ರೂಪ ಮಿಸ್, ಅನ್ನಪೂರ್ಣ ಮಿಸ್, ಹಾಗೂ ಶಕುಂತಲ ಮಿಸ್ ಇವರು ನಮ್ಮನ್ನು ಕ್ರೀಡಾ ಜ್ಯೋತಿಯ ಸ್ವಾಗತಕ್ಕಾಗಿ ಸಾಲಾಗಿ ನಿಲ್ಲಿಸಿ ವಿದ್ಯಾರ್ಥಿಗಳ ಕೈಯಲ್ಲಿ ಒಂದೊಂದು ಬಲೂನನ್ನು ನೀಡಿದರು.
ನಾನು ಬ್ಯಾಂಡ್ ಸೆಟ್ ತಂಡದಲ್ಲಿದ್ದೆನು. ಅಲ್ಲಿಯೂ ನಾವು ಬ್ಯಾಂಡ್ ಪ್ರದರ್ಶನ ಮಾಡಿದೆವು. ಹಾಗೆಯೇ ಕ್ರೀಡಾ ಜ್ಯೋತಿಯ ರಥಕ್ಕೆ ಹೂವನ್ನು ಹಾಕುವುದರ ಮೂಲಕ ಸ್ವಾಗತಿಸಿದೆವು. ಬಂದಂತಹ ಎಲ್ಲರಿಗೂ ತಂಪು ಪಾನೀಯವನ್ನು ನೀಡಿದರು. ನಮಗೂ ತಂಪು ಪಾನೀಯವನ್ನು ಕೊಟ್ಟರು. ಈ ಕ್ರೀಡಾ ಜ್ಯೋತಿಯ ರಥವು ಬಹಳ ಸುಂದರವಾಗಿತ್ತು. ಇದನ್ನು ನೋಡಿ ನಮಗೆಲ್ಲರಿಗೂ ಬಹಳ ಸಂತೋಷವಾಯಿತು. ನಂತರ ಆ ದಿನದ ಅಭ್ಯಾಸವನ್ನು ಮಾಡಿ ನಮ್ಮ ಮನೆಗೆ ತೆರಳಿದೆವು. ಮರುದಿನ ಶಾಲೆಗೆ ಬಂದು ನಮ್ಮ ಅಭ್ಯಾಸವನ್ನು ಆರಂಭಿಸಿದೆವು. ಮಧ್ಯಾಹ್ನದವರೆಗೆ ಶಾಲೆಯಲ್ಲಿ ಅಭ್ಯಾಸ ನಡೆಸಿದ ನಂತರ ನಮಗೆ ಬ್ಯಾಂಡ್ ಸೆಟ್ ನ ಸಮವಸ್ತ್ರವನ್ನು ನೀಡಿ ನಮ್ಮನ್ನು ಪುತ್ತೂರಿಗೆ ಕರೆದುಕೊಂಡು ಹೋದರು.
ಪುತ್ತೂರಿನ ವಿಕ್ಟರ್ಸ್ ಶಾಲೆಯಿಂದ ಕೊಂಬೆಟ್ಟಿನ ತನಕ ನಾವು ಬ್ಯಾಂಡ್ ಸೆಟ್ ನ ಮೆರವಣಿಗೆಯೊಂದಿಗೆ ಹೋದೆವು. ಆಮೇಲೆ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಬ್ಯಾಂಡ್ ಪ್ರದರ್ಶನ ಮಾಡಿದೆವು. ಇದೊಂದು ಮರೆಯಲಾರದ ಅನುಭವ. ಬಹಳ ಚೆನ್ನಾಗಿ ನಾವು ಬ್ಯಾಂಡ್ ಪ್ರದರ್ಶನ ಮಾಡಿದೆವು. ನಂತರ ನಮಗೆ ಲಘು ಉಪಹಾರವನ್ನು ನೀಡಿದರು. ಆಮೇಲೆ ನಾವು ಅಲ್ಲಿಂದ ನಮ್ಮ ಶಾಲೆಯ ಕಡೆಗೆ ಹೊರಟೆವು. ಅಲ್ಲಿ ನನ್ನನ್ನು ಕರೆದುಕೊಂಡು ಹೋಗಲು ನನ್ನ ಅಮ್ಮ ಬಂದಿದ್ದರು. ಅವರ ಜೊತೆಗೆ ಮನೆಗೆ ಹೋದೆನು. ಇದು ನನಗೆ ಮೊದಲ ಅನುಭವ. ನನಗಂತೂ ಬಹಳ ಸಂತೋಷವಾಯಿತು. ಅವಕಾಶ ಮಾಡಿಕೊಟ್ಟ ನನ್ನ ಶಾಲೆಯ ಶಿಕ್ಷಕ ವೃಂದಕ್ಕೂ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ವಂದನೆಗಳೊಂದಿಗೆ.....
5ನೇ ತರಗತಿ
ಸ ಉ ಹಿ ಪ್ರಾ ಶಾಲೆ ಮುಂಡೂರು
ಪುತ್ತೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ
*********************************************