-->
ನಿಮ್ಮೂರ ಶಾಲೆಯ ಸುದ್ದಿ : ಸಂಚಿಕೆ - 01

ನಿಮ್ಮೂರ ಶಾಲೆಯ ಸುದ್ದಿ : ಸಂಚಿಕೆ - 01

ನಿಮ್ಮೂರ ಶಾಲೆಯ ಸುದ್ದಿ : ಸಂಚಿಕೆ - 01
ಬರಹ : ಅರ್ಚನಾ 
ಗೌರವ ಶಿಕ್ಷಕಿ
ಸರ್ಕಾರಿ ಉನ್ನತೀಕರಿಸಿದ ಹಿರಿಯ 
ಪ್ರಾಥಮಿಕ ಶಾಲೆ ಸಾವ್ಯ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ


ರಮ್ಯವಾದ ಹಚ್ಚ ಹಸಿರಿನ ವನಸಿರಿಯ ಮಡಿಲಲ್ಲಿ ವಿದ್ಯಾಭಿಮಾನಿಗಳಿಗೆ ವಿದ್ಯಾರ್ಜನೆಯ ಸವಿಯ ಉಣಬಡಿಸಲು ಬೆಳ್ತಂಗಡಿ ತಾಲೂಕಿನಲ್ಲಿ ತಲೆ ಎತ್ತಿ ನಿಂತಿರುವ ವಿದ್ಯಾದೇಗುಲವೇ "ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಸಾವ್ಯ". 
          ಆ ಪರಿಸರದ ಸಹಸ್ರ ವಿದ್ಯಾರ್ಥಿಗಳ ಜ್ಞಾನದ ಹಸಿವ ನೀಗಿಸಿ ಮೌಲ್ಯಾಧಾರಿತ ಜ್ಞಾನದ ಸುಧೆಯನ್ನೇ ಹರಿಸಿದೆ‌. "ಕತ್ತಲೆಯನ್ನು ದೂರುವುದಕ್ಕಿಂತ ಒಂದು ದೀಪವನ್ನು ಹಚ್ಚು" ಎಂಬ ಮಾತಿನಂತೆ ಹಲವು ವರ್ಷಗಳಿಂದ ಜ್ಞಾನ ದೀವಿಗೆ ಬೆಳಗಿ ಸುಜ್ಞಾನದ ಜ್ಯೋತಿ ಪಸರಿಸಿ, ಸಹಸ್ರಾರು ದಿವ್ಯ ಪ್ರಣತಿಗಳನ್ನು ಸಮಾಜಕ್ಕೆ ಧಾರೆ ಎರೆದು ಯಶಸ್ವಿ ವಜ್ರಮಹೋತ್ಸವದ ಸಂಭ್ರಮದ ಸವಿಘಳಿಗೆಗೆ ಸನ್ನದ್ಧವಾಗಿರುವುದು ಹೆಮ್ಮೆಯ ವಿಷಯ.

ಅರ್ಕನು ಮೂಡಣದಿ 
ಹೊನ್ನ ಬಣ್ಣದಿ ರಂಗೇರುತಲಿ
ಅರುಣೋದಯದ ಜ್ಯೋತಿ 
ಭುವಿ ಆವರಿಸುತಲಿ
ವಸುಮತಿ ಮಿಂಚಿದೆ 
ಹರ್ಷದಿ ನಿತ್ಯ ನೂತನದಲಿ
ಸಂಭ್ರಮ ಇಮ್ಮಡಿಗೊಳಿಸಿ 
ಮೇಳೈಸುತಲಿ ಜ್ಞಾನದೇಗುಲ 
ವಜ್ರಮಹೋತ್ಸವದ ಸಡಗರದಲಿ 
          ದಿನಾಂಕ : 15-12-2023 ನೇ ಶುಕ್ರವಾರದಂದು ಶಾಲೆಗೆ ಸಮೀಪಿಸುತ್ತಿದ್ದಂತೆ ಹೊಸದಾಗಿ ಸಜ್ಜಾದ ಶಾಲಾ ಮುಖ್ಯ ದ್ವಾರವು ಸ್ವಾಗತಿಸಿ ತನ್ನತ್ತ ಕೈ ಬೀಸಿ ಕರೆಯುವಂತಿತ್ತು. ಮುಂದೆ ಸಾಗುತ್ತಿದ್ದಂತೆ ಶಾಲೆಯು ಮದುವಣಗಿತ್ತಿಯಂತೆ ದೀಪಾಲಂಕಾರದಿಂದ ಕಂಗೊಳಿಸಿ ನಯನ ಮನೋಹರವಾಗಿತ್ತು. ನೂತನ ಭವ್ಯವಾದ ರಂಗಮಂದಿರವು ಶೃಂಗಾರದಿ ನವ್ಯತೆಯನ್ನು ಸಾರುತ್ತ "ವಜ್ರಕಲಾ ವೇದಿಕೆ" ಎಂಬ ನಾಮಕರಣದಿ ಕದ ತೆರೆದು ಕಣ್ಮನ ಸೆಳೆಯುವಂತಿತ್ತು. ಶಾಲಾ ಪುಟಾಣಿಗಳೆಲ್ಲರೂ ಎರಡು ಕರಗಳನ್ನು ಜೋಡಿಸಿ ನಮಸ್ತೇ ಟೀಚರ್ ಹೇಳುತ್ತಿದ್ದಂತೆ ಸಂತೋಷದ ಜೊತೆಗೆ ಆನಂದ ಭಾಷ್ಪ ಭಾಷ್ಪ ಉಮ್ಮಳಿಸಿ ಬಂತು. ಶಾಲಾ ಕಛೇರಿ ತಲುಪುತ್ತಿದ್ದಂತೆ ಮುಖ್ಯ ಶಿಕ್ಷಕರ ಸ್ವಾಗತದೊಂದಿಗೆ ಸಹೋದ್ಯೋಗಿ ಮಿತ್ರಬಾಂಧವರು ಆತ್ಮೀಯವಾಗಿ ಅಪ್ಪುಗೆಯ ನುಡಿಗಳಿಂದ ನನ್ನನ್ನು ಬರಮಾಡಿಕೊಂಡರು. ಎಲ್ಲರನ್ನೂ ನೋಡಿದ ಕ್ಷಣವು ಮನಸ್ಸು ಪ್ರಪುಲ್ಲಿತವಾಯಿತು. 
            ಮುಂಜಾನೆಯ ಸಡಗರದ ಈ ದಿನದಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು. ಬಳಿಕ ಸುಸಜ್ಜಿತವಾದ ಶಾಲಾ ಮುಖ್ಯ ದ್ವಾರದ ಉದ್ಘಾಟನೆಯು ನಡೆಯಿತು. ತದನಂತರ ಬೆಳಗ್ಗಿನ ಉಪಹಾರ ಮುಗಿಸಿ ಎಲ್ಲರೂ ವೇದಿಕೆಯ ಸಭಾಂಗಣದತ್ತ ಹೆಜ್ಜೆ ಹಾಕಿದೆವು. ಇನ್ನೇನು ಕೆಲವೇ ಕ್ಷಣದಲಿ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಸರ್ವರ ಚಿತ್ತ ವಜ್ರಕಲಾ ವೇದಿಕೆಯ ಕಡೆಗೆ. ವಿನಾಯಕನನ್ನು ಪ್ರಾರ್ಥಿಸುವ ಮೂಲಕ ಶುಭಾರಂಭಕ್ಕೆ ಮುನ್ನುಡಿಯಾಯಿತು. ದೀಪ ಸ್ವರೂಪಿಣಿ ಜ್ಯೋತಿ ಮಾತೆಯ ಆಗಮನದೊಂದಿಗೆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದಿತ್ತು. ಪುಟಾಣಿಗಳ ಪ್ರತಿಭೆಗಳಿಗೆ ಬಹುಮಾನದ ಸರದಿಯೂ ಆಯಿತು. ಸೇವೆ ಸಲ್ಲಿಸಿದ ಶಿಕ್ಷಕರನ್ನು ಗುರುತಿಸಿ ವಜ್ರಮಹೋತ್ಸವದ ಸುಸಂದರ್ಭದಿ ಗೌರವಾಭಿಮಾನದಿ ಸನ್ಮಾನಿಸಿದ ಸಾಲಿನಲ್ಲಿ ನಾನು ಕೂಡ ಓರ್ವಳೆಂದು ಹೇಳಲು ಸಂತೋಷ ವೆನಿಸುತ್ತದೆ. ಈ ಶಾಲೆಗೆ ನನ್ನ ಅಲ್ಪಕಾಲದ ಸೇವೆಯಾಗಿದ್ದರೂ ಅಭಿನಂದಿಸಿರುವುದು ನನ್ನ ಸೌಭಾಗ್ಯವೇ ಸರಿ. ಶಾಲಾ ಸರ್ವ ಗುರುವೃಂದದವರಿಗೆ, ಎಸ್‌. ಡಿ. ಎಮ್. ಸಿ. ಪದಾಧಿಕಾರಿಗಳಿಗೂ, ವಜ್ರಮಹೋತ್ಸವದ ಪದಾಧಿಕಾರಿಗಳಿಗೂ ಹೃನ್ಮನದ ನಮನಗಳನ್ನು ತಿಳಿಸುತ್ತೇನೆ. ಸಭಾಕಾರ್ಯಕ್ರಮವು ಬಹಳ ಅಚ್ಚುಕಟ್ಟಾಗಿ ನೆರವೇರಿತು. ಮಧ್ಯಾಹ್ನದ ಸಮಯದಿ ಹಸಿದೊಡಲಿಗೆ ನೀಡಿದ ಊಟದ ವ್ಯವಸ್ಥೆಯು ಸವಿರುಚಿಯಾಗಿತ್ತು. 
      ಸಂಜೆ 7ಗಂಟೆಯ ಸಮಯದಿ ಪುಟಾಣಿಗಳ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ನೆರೆದ ಜನಸಾಗರವೇ ಅಧಿಕ. ಎಲ್ಲಾ ನೃತ್ಯಗಳು ಒಂದಕ್ಕಿಂತ ಒಂದು ವಿಭಿನ್ನವಾಗಿ, ವಿಶಿಷ್ಟವಾಗಿ ಮನರಂಜನೀಯವಾಗಿತ್ತು. ಇಷ್ಟೊಂದು ವಿಜೃಂಭಣೆಯ ಕಾರ್ಯಕ್ರಮಕ್ಕೆ ಮಕ್ಕಳನ್ನು ತಯಾರುಗೊಳಿಸುವ ಮಹತ್ತರ ಜವಾಬ್ದಾರಿ ಶಾಲಾ ಶಿಕ್ಷಕರದ್ದು ಜೊತೆಗೆ ನೃತ್ಯ ಗುರುಗಳದ್ದು ಎಂಬ ಆನಂದಭಾವ ನನ್ನದು. ಇಲ್ಲಿ ಶಿಕ್ಷಕರ, ಊರವರ ಶ್ರಮ ಮತ್ತು ತ್ಯಾಗವಿದೆ. ಮಿಗಿಲಾಗಿ 'ಗುರುಗಳನ್ನು ದೇವರಂತೆ ಗೌರವಿಸುವ ಸಂಸ್ಕಾರವಿದೆ'.
             'ಶಿಕ್ಷಣದಿಂದ ಅಭಿವೃದ್ಧಿ' ಎಂಬ ಕಾಲಘಟ್ಟದಲ್ಲಿ ಇಂದಿನ ಸಮಾಜದ ಎಲ್ಲಾ ಮಕ್ಕಳಿಗೂ ಅವರ ಬದುಕನ್ನು ರೂಪಿಸುವ ಸೂಕ್ತ ಶಿಕ್ಷಣ ಈ ಶಾಲೆಯಿಂದ ನಿರಂತರವಾಗಿ ಲಭಿಸಲಿ ಶಾಲೆಯು ಅಭಿವೃದ್ಧಿ ಪಥದತ್ತ ಸಾಗಲಿ ಎಂದು ಆಶಿಸುತ್ತೇನೆ.
            ನನ್ನ ಮನದಂಗಳದಿ ಈ ಶಾಲೆಯ ನೆನಪು, ಶಾಲಾ ಶಿಕ್ಷಕರ ನೆನಪು, ಶಾಲಾ ಪುಟಾಣಿಗಳೆಲ್ಲರೊಂದಿಗೆ ಕಳೆದ ಸಮಯವೆಲ್ಲವೂ ಅಚ್ಚಳಿಯದೆ ಸ್ಮೃತಿ ಪಟಲದಿ ಸದಾ ಚಿರಸ್ಥಾಯಿಯಾಗಿ ಇರುತ್ತದೆ.
..................................................... ಅರ್ಚನಾ 
ಗೌರವ ಶಿಕ್ಷಕಿ
ಸರ್ಕಾರಿ ಉನ್ನತೀಕರಿಸಿದ ಹಿರಿಯ 
ಪ್ರಾಥಮಿಕ ಶಾಲೆ ಸಾವ್ಯ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************



Ads on article

Advertise in articles 1

advertising articles 2

Advertise under the article