-->
ಅಂತರಾಷ್ಟ್ರೀಯ ಬಾಲಪ್ರತಿಭೆ - ಡಾ. ಶೌರ್ಯ ಎಸ್ ವಿ

ಅಂತರಾಷ್ಟ್ರೀಯ ಬಾಲಪ್ರತಿಭೆ - ಡಾ. ಶೌರ್ಯ ಎಸ್ ವಿ

ಪ್ರತಿಭಾ ಪರಿಚಯ : ಅಂತರಾಷ್ಟ್ರೀಯ ಬಾಲಪ್ರತಿಭೆ - ಡಾ. ಶೌರ್ಯ ಎಸ್ ವಿ
ಲೇಖನ : ತಾರಾನಾಥ್ ಕೈರಂಗಳ


        ಶೌರ್ಯ...!! ಹೆಸರಿಗೆ ತಕ್ಕ ಹಾಗೆ ಈಕೆ ಶೌರ್ಯವಂತೆ....! ಸಾಹಸವಂತೆ...!! ಅಗಾಧ ಪ್ರತಿಭೆಯ ಗಣಿಯನ್ನು ಹೊಂದಿರುವ ಪ್ರತಿಭಾವಂತೆ...!! ಡಾ. ಶೌರ್ಯ ಎಸ್ ವಿ.
     ಯಾರಿಗಾದರೂ ಒಮ್ಮೆ ಆಶ್ಚರ್ಯವಾಗದಿರದು. ಶೌರ್ಯ ಇನ್ನೂ 13ರ ಬಾಲಕಿ. ಸರಕಾರಿ ಶಾಲೆಯೊಂದರಲ್ಲಿ ಕಲಿತ ಈಕೆ ಡಾಕ್ಟರ್ ಪದವಿಯನ್ನು ಪಡೆದಿರುವುದು ಹೇಗೆ...? ಕುತೂಹಲ ಯಾರನ್ನೂ ಕೆರಳಿಸದಿರದು...!!
     ಮೂಲತ: ಚಿಕ್ಕಮಗಳೂರಿನ ವಲೇಕರೇಟಿಯಲ್ಲಿ ಜನಿಸಿದ ಡಾ. ಶೌರ್ಯ ಎಸ್ ವಿ ಧರ್ಮಸ್ಥಳದ ನಿವಾಸಿ. ತಂದೆ ಸುರೇಶ್ ವಳೇಕರೆಟಿ, ತಾಯಿ ಕುಸುಮ ಸುರೇಶ್. ಪ್ರಸ್ತುತ ಶ್ರೀ ರಾಮಕೃಷ್ಣ ಪ್ರೌಢಶಾಲೆ ಪುತ್ತೂರು ಇಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
     'ಬೆಳೆಯುವ ಸಿರಿ ಮೊಳಕೆಯಲ್ಲಿ' ಅನ್ನುವ ಗಾದೆ ಮಾತಿಗೆ ಶೌರ್ಯ ಸಾಕ್ಷಿಯಾಗುತ್ತಾಳೆ. 1ನೇ ತರಗತಿಯಲ್ಲಿರುವಾಗಲೇ ಭಗವದ್ಗೀತೆ ಅಭ್ಯಾಸ ಮಾಡಿ ಜಿಲ್ಲಾ ಮಟ್ಟದ ಭಗವದ್ಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದ ಕೀರ್ತಿ ಇವಳದ್ದು. ಅಂದ ಹಾಗೆ ಶೌರ್ಯನ ಹಿನ್ನೆಲೆಯಲ್ಲಿ ದೊಡ್ಡಮಟ್ಟದ ತರಬೇತುದಾರರಿದ್ದಾರೆ ಎಂದುಕೊಳ್ಳಬೇಡಿ. ಎಲ್ಲವೂ ಸ್ವ ಪ್ರಯತ್ನ. ತಾಯಿಯೇ ಮೊದಲ ಗುರು ಅನ್ನುವಂತೆ ತನ್ನ ತಾಯಿ ಕುಸುಮ ಸುರೇಶ್ ಎಲ್ಲದಕ್ಕೂ ಕಾರಣ ಅನ್ನುತ್ತಾರೆ ಶೌರ್ಯ.
       ಎಲ್ಲವೂ ಪ್ರಭಾವ, ಅನುಕೂಲ, ಅನುಕಂಪ, ಐಶ್ವರ್ಯ, ಅಂತಸ್ತುಗಳಿಂದ ಸಿದ್ಧಿಸುತ್ತದೆ ಎಂದರೆ ಅದು ತಪ್ಪು ಕಲ್ಪನೆ. ಕೇವಲ ತನ್ನ ಆಸಕ್ತಿ, ಛಲ, ಶ್ರದ್ಧೆ, ಪ್ರತಿಭಾ ಶಕ್ತಿಯಿಂದ ಗಳಿಸಿಕೊಂಡ ಶೌರ್ಯ ಓರ್ವ ಪ್ರತಿಭಾ ಸಂಪನ್ನೆ. ಆಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡ ಶೌರ್ಯ ತನ್ನ ಪ್ರತಿಭಾವಿಕಸನಕ್ಕೆ ಪೂರಕವಾಗಿ ಬಳಸಿಕೊಂಡಿದ್ದಾರೆ. ಟಿವಿ, ಮೊಬೈಲ್ಗಳಲ್ಲಿ ಬರುವ ಮಾಹಿತಿಗಳನ್ನು ತನ್ನ ಗುರುವಿನ ನೆಲೆಯಲ್ಲಿ ಸದ್ಬಳಕೆ ಮಾಡಿಕೊಂಡಿದ್ದಾರೆ. ತನ್ನ ಆಸಕ್ತಿಯ ಎಲ್ಲಾ ಕ್ಷೇತ್ರಗಳನ್ನು ಒಂದೆಡೆ ಕಲೆ ಹಾಕಲು ಗೂಗಲ್, ಯೂಟ್ಯೂಬ್ಗಳೇ ಕಾರಣವಾಯಿತು. ಎಲ್ಲಾ ಕಲೆಯ ರಸದೌತಣವನ್ನು ಆತ್ಮೀಯವಾಗಿ ಸ್ವೀಕರಿಸಲು ಅಂತರ್ಜಾಲವೇ ಪ್ರೇರಣೆಯಾಯಿತು. ಟಿವಿಯ ಹಾಡು ಕೇಳುತ್ತಾ ಸಂಗೀತಗಾರ್ತಿಯಾಗಿ, ನೃತ್ಯಗಳನ್ನು ನೋಡುತ್ತಾ ನೃತ್ಯಗಾರ್ತಿಯಾದ ಬಗೆ ಮಾತ್ರ ಅದ್ಭುತ ಪಯಣ...!!
      ಅತೀ ಚಿಕ್ಕ ವಯಸ್ಸಿನಲ್ಲಿ ರಾಷ್ಟ್ರೀಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಊರಿನ, ತಾನು ಕಲಿತ ಸರಕಾರಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾಳೆ. ಇದು ಸಾಧ್ಯವಾದದ್ದು ಮಾತ್ರ ಎಲ್ಲರೂ ಶಪಿಸುತ್ತಿದ್ದ ಕೊರೋನ ಕಾಲಾವಧಿಯಲ್ಲಿ. ತಾನು 7ನೇ ತರಗತಿಯಲ್ಲಿ ಕಲಿಯುತ್ತಿದ್ದಾಗ ಲಾಕ್ಡೌನ್ ಸಂದರ್ಭದಲ್ಲಿ ರಾಷ್ಟ್ರ ಮಟ್ಟದ ಗಾಂಧೀಜಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರುವುದು ಸಾಮಾನ್ಯ ಸಂಗತಿಯೇನಲ್ಲ...! 
      ಒಂದರ್ಥದಲ್ಲಿ ಸಕಲಕಲಾವಲ್ಲಭೆ ಎಂದರೂ ಅತಿಶಯೋಕ್ತಿಯಾಗಲಾರದು.. ಕೊರೋನಾದ ಸಂಧಿಗ್ಧತೆಯನ್ನು ಅವಕಾಶವನ್ನಾಗಿ ಮಾರ್ಪಡಿಸಿಕೊಂಡ ಈಕೆ ಅದ್ಭುತ ಸಾಧನೆಯನ್ನೇ ಮಾಡಿಬಿಟ್ಟಿದ್ದಾಳೆ...!
   ಕನ್ನಡ ರಸಪ್ರಶ್ನೆ , ಗಾಂಧೀಜಿ ರಸಪ್ರಶ್ನೆ, ತುಳು ರಸಪ್ರಶ್ನೆ, ನೃತ್ಯ, ಸಂಗೀತ, ಯೋಗ, ಕ್ರೀಡೆ, ಸಾಂಸ್ಕೃತಿಕ, ಪ್ರಬಂಧ, ಭಾಷಣ, ಕವನ, ಕಥೆ, ಭಗವದ್ಗೀತೆ ಪಠಣ, ಭಗವದ್ಗೀತೆ ಕಂಠ ಪಾಠ, ಹೂಪ್ ನೃತ್ಯ, ನಾಟಕ , ಫ್ಯಾಷನ್ ಶೋ, ಮಾಡೆಲಿಂಗ್, ವಿಜ್ಞಾನ ಮಾದರಿಗಳು ಇತ್ಯಾದಿ.. ವಿಷಯಗಳಲ್ಲಿ ರಾಜ್ಯ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿರುವುದು ಎಲ್ಲರನ್ನು ಹುಬ್ಬೇರಿಸಿಬಿಡುತ್ತದೆ. ಈ ಎಲ್ಲ ವಿಷಯಗಳಲ್ಲಿ ಭಾಗವಹಿಸಿ ಬರೋಬ್ಬರಿ 174 ಪ್ರಮಾಣ ಪತ್ರಗಳು, 34 ಪ್ರಶಸ್ತಿಗಳು, 87 ಬಹುಮಾನ ಫಲಕಗಳನ್ನು ಸ್ವೀಕರಿಸಿದ್ದಾರೆಂದರೆ ಇವರ ಪ್ರತಿಭೆಗೆ ಮತ್ತೊಂದು ಸಾಕ್ಷಿಯ ಅಗತ್ಯತೆ ಇಲ್ಲ.
        ಇತ್ತೀಚೆಗೆ ಫೋಕ್ ಡೆಪ್ತ್ ಅಹಮದಾಬಾದ್ ಇಲ್ಲಿ ನಡೆಸುತ್ತಿರುವ ಭಗವದ್ಗೀತೆ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಆಗಿದ್ದಾಳೆ. ಮಕ್ಕಳ ಜಗಲಿ ಆಯೋಜಿಸಿರುವ 2ನೇ ವರ್ಷದ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ ಗಳಿಸಿರುವುದು ತನ್ನ ಸಾಧನೆಯ ಶಿಖರಕ್ಕೆ ಮತ್ತೊಂದು ಹಿರಿಮೆಯನ್ನು ಮೂಡಿಸಿದ್ದಾರೆ.
     ಗಿನ್ನಿಸ್ ವರ್ಲ್ಡ್ ರೆಕಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್, ಕಲಾಮ್ ವರ್ಲ್ಡ್ ರೆಕಾರ್ಡ್, ಸೈಮ ರಾಷ್ಟ್ರೀಯ ಯುವ ರತ್ನ ಸಾಧಕ ಪ್ರಶಸ್ತಿ ಗಳ ಒಡತಿಯಾಗಿರುವ ಶೌರ್ಯನಿಗೆ ಈ ಎಲ್ಲ ಮಹಾನ್ ಪ್ರಶಸ್ತಿಗಳನ್ನು ಪಡೆದಿರುವ ಸಾಧನೆಗಾಗಿ ಈ ಬಾಲ ಪ್ರತಿಭೆಯನ್ನು ಗುರುತಿಸಿ ತಮಿಳುನಾಡಿನ ಏಷ್ಯಾ ವೇದಿಕ್ ಕಲ್ಚರ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಕನ್ಯಾಡಿ - 2 ಗ್ರಾಮೀಣ ಪರಿಸರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿತಿರುವ ಈ ಪುಟ್ಟ ಬಾಲಕಿ ಗೌರವ ಡಾಕ್ಟರೇಟ್ ಪದವಿ ಪಡೆದಿರುವುದು ಇಡೀ ಜಗತ್ತಿನ ದೇಶಗಳಲ್ಲಿ ಪ್ರಪ್ರಥಮವಾಗಿದೆ. ಇದುವರೆಗೂ 30 ವರ್ಷದ ಕೆಳಗಿನವರಿಗೆ ಯಾರಿಗೂ ಸಿಗದ ಗೌರವ ಡಾಕ್ಟರೇಟ್ ಪದವಿಯನ್ನು ತನ್ನ 12ನೇ ವರ್ಷದಲ್ಲಿ ಶೌರ್ಯ ಪಡೆದುಕೊಂಡಿರುವುದು ಭಾರತವೇ ಹೆಮ್ಮೆ ಪಡುವ ಸಂಗತಿಯಾಗಿದೆ.
        ಮಕ್ಕಳ ಜಗಲಿ, ಆಮಂತ್ರಣ, ಸಂಸ್ಕೃತ ಸಿರಿ, ಕಲಾ ಪ್ರತಿಭೆಗಳು, ಚಿಲಿ ಪಿಲಿ ಮಕ್ಕಳ ಸಮಾಗಮ, ಕರುನಾಡ ಕಲಾ ಕಣ್ಮಣಿಗಳು, ಟೆಂಟ್ ಆಫ್ ಟ್ಯಾಲೆಂಟ್, ಬೆಳದಿಂಗಳು ಹೀಗೆ ಮಕ್ಕಳ ಪರವಾದ ಸಂಸ್ಥೆಗಳನ್ನು ಪ್ರೀತಿಯಿಂದ ಸ್ಮರಿಸುವ ಶೌರ್ಯ ಓದಿನಲ್ಲಿಯೂ ಬಹಳ ಜಾಣೆಯಾಗಿದ್ದಾಳೆ. ಈ ಬಾಲ ಪ್ರತಿಭೆ ಇನ್ನಷ್ಟು ಹೊಸ ಹೊಸ ಸಾಧನೆಯ ಅಧ್ಯಾಯಗಳಿಗೆ ಸಾಕ್ಷಿಯಾಗಲಿ ಎನ್ನುವುದೇ ನಮ್ಮ ಹಾರೈಕೆ.
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************
Ads on article

Advertise in articles 1

advertising articles 2

Advertise under the article