-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 6

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 6

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 6
ಲೇಖಕರು : ದಿವಾಕರ ಶೆಟ್ಟಿ ಎಚ್
ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203

              
     ಪ್ರೀತಿಯ ಮಕ್ಕಳೇ... ಕಳೆದ ಸಂಚಿಕೆಯಲ್ಲಿ ಮಾನವನ ವಿಕಾಸದ ಉತ್ತುಂಗವನ್ನು ತಲುಪಲು ಕಾರಣಗಳೇನು ಎಂಬ ಬಗ್ಗೆ ತಾವು ತಿಳಿದುಕೊಂಡಿದ್ದೀರಿ. ಅದನ್ನು ಓದಿ ನಿಮ್ಮ ಬಗ್ಗೆ ನಿಮಗೆ ಅಭಿಮಾನ ಮೂಡಿತೇ ಅಥವಾ ಅಹಂಭಾವ ಮೂಡಿತೇ ನನಗೆ ತಿಳಿಯದು. ತನ್ನ ಸುತ್ತಲ ಪರಿಸರವನ್ನು ತನಗೆ ಬೇಕಾದ ಹಾಗೆ ಮಾರ್ಪಡಿಸಿಕೊಳ್ಳಬಲ್ಲ ಮಾನವ ತನ್ನ ಬದುಕಿನ ವಾತಾವರಣವನ್ನೇ ಕಲುಷಿತಗೊಳಿಸಿದ್ದಾನೆ ಎನ್ನುವುದು ಅರಿವಾದರೆ ಆತ್ಮಾವಲೋಕನಕ್ಕೆ ದಾರಿಯಾದೀತು. ಅದೇ ತಾನು ತನ್ನ ಪರಿಸರವನ್ನು ಹೇಗೆ ಬೇಕಾದರೂ ಮಾರ್ಪಾಡುಮಾಡಿಕೊಳ್ಳಬಲ್ಲೆ ಎಂದರೆ ಅದು ಅಹಂಭಾವವಾದೀತು.

     ನಾನು ನೀವು ಎಲ್ಲಿದ್ದೀರಿ...? ಎಂದು ಕೇಳಿದರೆ ಭೂಮಿಯ ಮೇಲೆ ಎಂಬ ಉತ್ತರ ನೀಡಿ ಕೊನೆಗೆ ನಿಖರವಾಗಿ ನಿಮ್ಮ ಶಾಲೆಯ ಮೂರನೆಯ ಕೊಠಡಿಯ ಎರಡನೆಯ ಬೆಂಚಿನ ಮೊದಲ ಸ್ಥಾನದಲ್ಲಿ ಆಸೀನರಾಗಿದ್ದೀರಿ ಎನ್ನಬಹುದು. ಏನು ಮಾಡುತ್ತಿದ್ದೀರಿ ಎಂದರೆ ಸುಮ್ಮನೆ ಕುಳಿತಿದ್ದೇನೆ (ಇದನ್ನು ನಾವು ವಿಜ್ಞಾನದ ಪರಿಭಾಷೆಯಲ್ಲಿ ನಿಶ್ಚಲ ಸ್ಥಿತಿ ಎನ್ನುತ್ತೇವೆ) ಎನ್ನಬಹುದು. ಇದು ಶುದ್ಧ ಸುಳ್ಳು. ಏಕೆಂದರೆ 
1. ಮಕ್ಕಳು ಸುಮ್ಮನೇ ಕುಳಿತುಕೊಳ್ಳುವುದಿಲ್ಲ. (ತೀವ್ರವಾದ ಕಾಯಿಲೆ ಮತ್ತು ನಿದ್ರೆಯನ್ನು ಹೊರತುಪಡಿಸಿ ಮಕ್ಕಳು ಸುಮ್ಮನೇ ಕುಳಿತುಕೊಳ್ಳುವುದು ಸಾಧ್ಯವೇ ಇಲ್ಲ). 
2. ಭೂಮಿಯ ಮೇಲಿರುವ ಪ್ರತಿಯೊಂದು ವಸ್ತುವೂ 3 ರೀತಿಯ (ಕೆಲವರು ನಾಲ್ಕೆನ್ನುತ್ತಾರೆ) ಉಚಿತ ಪ್ರವಾಸವನ್ನು (free ride) ಅನುಭವಿಸುತ್ತದೆ. ಅದರಂತೆ ನೀವೂ ಕೂಡಾ. ನೀವು ಮಲಗಿರಿ, ಕೆಲಸ ಮಾಡುತ್ತಿರಿ ಅಥವಾ ನಡೆದಾಡುತ್ತಿರಿ ನೀವು ಈ ಪ್ರವಾಸಗಳನ್ನು ಮಾಡುತ್ತಲೇ ಇರುತ್ತೀರಿ. ಈ ಪ್ರವಾಸಗಳು ಯಾವುದು ಎಂದು ನೋಡೋಣ ಬನ್ನಿ.

ಮೊದಲನೆಯದು : ಭೂಮಿ ತನ್ನ ಅಕ್ಷದ ಸುತ್ತಲೂ ಸುತ್ತುತ್ತಿರುತ್ತದೆ. ಅದೂ ಎಂತ ವೇಗ ಎನ್ನುತ್ತೀರಿ!! ಗಂಟೆಗೆ 1000 ಮೈಲಿಗಳು ಅಂದರೆ 1600 ಕಿಲೋಮೀಟರ್ ಗಳು (460 m/sec). ಈ ವೇಗದಲ್ಲಿ ನಾನು, ನೀವು, ನಿಮ್ಮ ಸ್ನೇಹಿತ, ನಿಮ್ಮ ಶಾಲೆ, ನಮ್ಮ ಸುತ್ತ ಇರುವ ಗಾಳಿ, ಆ ಗಾಳಿಯಲ್ಲಿ ಹಾರುತ್ತಿರುವ ವಿಮಾನ ಎಲ್ಲವೂ. ಎಲ್ಲಿಯಾದರೂ ಈ ವಾತಾವರಣ ಭೂ ಗುರುತ್ವದಿಂದ ಕಳಚಲ್ಪಟ್ಟರೆ ಗಂಟೆಗೆ 1600 ಕಿಮೀ ವೇಗದ ಬಿರುಗಾಳಿ ಬೀಸತೊಡಗುತ್ತದೆ. 20 ಅಕ್ಟೋಬರ್ 2015 ರಲ್ಲಿ ಬೀಸಿದ ಪ್ರಪಂಚದ ಇತಿಹಾಸದಲ್ಲಿ ಅತ್ಯಂತ ವೇಗದ ಪೆಟ್ರಿಸಿಯಾ ಚಂಡಮಾರುತದ (Hurricane Patricia) ವೇಗ ಗಂಟೆಗೆ ಕೇವಲ 345 ಕಿಮೀ ಗಳಷ್ಟಿತ್ತಷ್ಟೆ.
ಎರಡನೆಯದು : ನಮ್ಮ ಭೂಮಿ ತನ್ನ ಗ್ರಹವಾದ ಚಂದ್ರನೊಂದಿಗೆ ದೀರ್ಘ ವೃತ್ತಾಕಾರದ ಪಥದಲ್ಲಿ ಸೂರ್ಯನ ಸುತ್ತ ಫೇರಿ ಹೊರಟಿರುತ್ತದೆ ಗಂಟೆಗೆ ಕೇವಲ 67,000 ಮೈಲಿ ಅಥವಾ 1,07,000 ಕಿಮೀ ವೇಗದಲ್ಲಿ (30 km/sec). ಯಾಕಿಷ್ಟು ಧಾವಂತ ಎಂದರೆ...? ಒಂದು ವರ್ಷದಲ್ಲಿ ಸೂರ್ಯನಿಗೆ ಒಂದು ಸುತ್ತು ಬರಬೇಕಲ್ಲ!

ಮೂರನೆಯದು : ನಮ್ಮ ಸೂರ್ಯ ತನ್ನ ಪರಿವಾರವಾದ ಸೌರವ್ಯೂಹದ ಎಲ್ಲ ಸದಸ್ಯರುಗಳನ್ನೂ ಕೂಡಿಕೊಂಡು ಕುಟುಂಬದ ಯಜಮಾನ ಕೋಟಿಲಿಂಗೇಶ್ವರನ ತೇರಿಗೋ ಮಹಾಲಿಂಗೇಶ್ವರನ ರಥೋತ್ಸವಕ್ಕೋ ಹೊರಟ ಹಾಗೆ ಆಕಾಶ ಗಂಗೆಯ ಕೇಂದ್ರದ ಸುತ್ತ ಪರಿಭ್ರಮಣ ಹೊರಟಿದ್ದಾನೆ. 230 ಮಿಲಿಯನ್ ವರ್ಷಗಳಿಗೊಮ್ಮೆ ಹೀಗೆ ಸುತ್ತು ಬರಲು ಸೆಕುಂಡಿಗೆ 137 ಮೈಲಿ ಅಥವಾ 220 ಕಿಲೋಮೀಟರ್ ವೇಗದಲ್ಲಿ. 
ಇಷ್ಟೇ ಅಲ್ಲ ಬಿಗ್ ಬ್ಯಾಂಗ್ ಸಿದ್ಧಾಂತದ ಪ್ರಕಾರ ವಿಶ್ವದ ಕೇಂದ್ರದಿಂದ ಎಲ್ಲಾ ಗ್ಯಾಲೆಕ್ಸಿಗಳೂ ಪರಸ್ಪರ ದೂರ ಸರಿಯುತ್ತಿದೆ ಎಂದರೆ ಇನ್ನೊಂದು ಪ್ರವಾಸವನ್ನು ಹೊರಟಿರುತ್ತೀರಿ.

ಹೌದ್ದಾ!! ಇದೆಲ್ಲಾ ನನಗೆ ಗೊತ್ತೇ ಆಗುತ್ತಿಲ್ಲವಲ್ಲಾ ಎಂದು ಮೂಗಿನ ಮೇಲೆ ಬೆರಳಿಡಬಹುದು. ಏಕೆಂದರೆ ನಿಮ್ಮ ಸ್ನೇಹಿತರು, ನಿಮ್ಮ ಶಾಲೆ ಎಲ್ಲವೂ ಅಲ್ಲಿಯೇ ಇವೆಯಲ್ಲಾ ಎನ್ನುತ್ತೀರಿ. ಹೌದು ವೇಳೆ ಬಹಳವಾಯಿತು. ನಿಮಗೆ ಬೇರೆ ಕೆಲಸಗಳಿರಬೇಕು. ಇದರ ವಿವರಣೆಯನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.
ಚಿತ್ರಗಳು : ಅಂತರ್ಜಾಲ ಕೃಪೆ
.................................... ದಿವಾಕರ ಶೆಟ್ಟಿ ಎಚ್
ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 



Ads on article

Advertise in articles 1

advertising articles 2

Advertise under the article