-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 93

ಸ್ಫೂರ್ತಿಯ ಮಾತುಗಳು : ಸಂಚಿಕೆ - 93

ಸ್ಫೂರ್ತಿಯ ಮಾತುಗಳು : ಸಂಚಿಕೆ - 93
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
                    

       ವಿಶ್ರಾಂತಿಯ ಅತ್ಯುನ್ನತ ಸ್ಥಿತಿಯೇ ನಿದ್ದೆ. ನಿದ್ದೆಯೆಂದೊಡನೆ ಯಾರೂ ಬೆಚ್ಚುವುದಿಲ್ಲ, ಎಲ್ಲರೂ ನಿದ್ದೆಯನ್ನು ಮೆಚ್ಚುವವರೇ. ನಿದ್ದೆಗೆ ರಾಮಾಯಣದ ಕುಂಭಕರ್ಣನ ಹೆಸರು ಅತ್ಯಂತ ಪ್ರಸಿದ್ಧ. ಕುಂಭಕರ್ಣನ ನಿದ್ದೆ ಆರು ತಿಂಗಳಷ್ಟು ದೀರ್ಘ. ಆರು ತಿಂಗಳಾಗುವ ಹೊತ್ತಿಗೆ ಅವನು ಹಸಿದು ಎಚ್ಚರಗೊಳ್ಳುತ್ತಾನೆ. ಎದ್ದವನೇ ಒಂದು ಹಳ್ಳಿಯಲ್ಲಿ ತಯಾರಾಗುವ ಆಹಾರ ತಿಂದು ಮರುದಿನ ಮತ್ತೆ ದೀರ್ಘ ನಿದ್ದೆಗೆ ಜಾರುತ್ತಾನೆ. ದೀರ್ಘ ನಿದ್ರಾ ಸುಖಿಗಳಿಗೆ ಕುಂಭ ಕರ್ಣ ಎಂದು ಹೇಳುವುದಿದೆ. ಕುಂಭ ಕರ್ಣ ವಜ್ರ ದೇಹಿ, ಮಹಾಪ್ರತಾಪಿ ಮತ್ತು ಕ್ರೂರಿ. ಅವನ ನಿದ್ದೆಗೆ ಸಂಬಂಧಿಸಿದಂತೆ ಒಂದು ಕಥೆಯಿದೆ.

     ಕುಂಭಕರ್ಣ ತನ್ನ ಅಣ್ಣ ರಾವಣನ ಜೊತೆಯಲ್ಲಿ ಬ್ರಹ್ಮನನ್ನು ಕುರಿತು ಕಠಿಣವಾದ ತಪಸ್ಸು ಮಾಡುತ್ತಾನೆ. ಹಲವು ವರುಷಗಳ ಅವರ ತಪಸ್ಸಿಗೆ ಮೆಚ್ಚಿದ ಬ್ರಹ್ಮನು ಪ್ರತ್ಯಕ್ಷನಾಗಿ, “ಏನು ವರಬೇಕು?” ಎಂದು ಕೇಳಿದನು. ಮಹಾ ಶಕ್ತಿವಂತನಾದ ಕುಂಭಕರ್ಣ ಬ್ರಹ್ಮನ ವರದಿಂದ ಇನ್ನೂ ಶಕ್ತಿಶಾಲಿಯಾದರೆ ಲೋಕಕ್ಕೆ ಅಪಾಯವಿದೆ ಎಂದರಿತ ಬ್ರಹ್ಮನ ಮಡದಿ ಸರಸ್ವತಿ ದೇವಿಯು ವರಕೇಳುವ ಕ್ಷಣದಲ್ಲಿ ಕುಂಭಕರ್ಣನ ನಾಲಿಗೆಯ ಮೇಲೆ ಕುಳಿತುಕೊಂಡಳು. ಬ್ರಹ್ಮನಿಂದ ವರಾನುಗ್ರಹವಾಗಿ “ಇಂದ್ರಾಸನ” ವನ್ನು ಕೇಳುವ ಸಂಕಲ್ಪ ಮಾಡಿದ ದೈತ್ಯ ಕುಂಭಕರ್ಣ, ನಾಲಿಗೆಯಲ್ಲಿ ಕುಳಿತ ಸರಸ್ವತಿಯ ಕಾರಣದಿಂದಾಗಿ ಮಾತಿನ ಹೊರಳುವಿಕೆಯಲ್ಲಿ ದೋಷವುಂಟಾಗಿ; “ನಿದ್ರಾಸನವನ್ನು ಕರುಣಿಸು” ಎಂದು ಕೈಮುಗಿದು ಬೇಡಿದನು. ಬ್ರಹ್ಮನು “ತಥಾಸ್ತು” (ಹಾಗೆಯೇ ಆಗಲಿ) ಎಂದು ವರವಿತ್ತು ಮಾಯವಾದನು.

     ಕಥೆಯು ಮನಸನ್ನು ರಂಜಿಸಿರಬಹುದು. ಕೃತಯುಗದ ರಾಮಾಯಣದಲ್ಲಿ ಓರ್ವ ಕುಂಭಕರ್ಣನನ್ನು ಕಾಣುವ ನಾವು, ಇಂದಿನ ಕಲಿಯುಗದಲ್ಲಿ ಅದೆಷ್ಟೋ ಕುಂಭ ಕರ್ಣರನ್ನು ಕಾಣುತ್ತೇವೆ. ನಾವೂ ಕುಂಭಕರ್ಣರ ಪಟ್ಟಿಯೊಳಗೆ ಸೇರಿರುವೆಯೋ ಎಂದು ಆತ್ಮ ಶೋಧನೆ ಮಾಡಿದರೆ ಒಳ್ಳೆಯದು. ಭರ ಪೂರ್ಣ ತಿಂದುಂಡು ರಾತ್ರಿಯಿಡೀ ನಿದ್ರಿಸಿ, ಹಗಲು ಎಚ್ಚರದಲ್ಲಿದ್ದರೂ ನಿದ್ದೆಗೆ ಜಾರುತ್ತಲೇ ಇದ್ದರೆ ನಮಗೂ ಕುಂಭಕರ್ಣನಿಗೂ ವ್ಯತ್ಯಾಸವಿಲ್ಲ. ತಿಂದರೆ ದೇಹ ಬೆಳೆಯುತ್ತದೆ, ಬೊಜ್ಜು ಆರೋಗ್ಯವನ್ನು ಕೆಡಿಸುತ್ತದೆ. ಅತಿಯಾದ ನಿದ್ದೆ ಬುದ್ಧಿಶಕ್ತಿಯನ್ನು ಮಬ್ಬುಗೊಳಿಸುತ್ತದೆ, ನಮ್ಮ ವೈಚಾರಿಕ ಸಾಮರ್ಥ್ಯವನ್ನು ನಾಶಗೊಳಿಸುತ್ತದೆ. ನಾವು ಬೆಳೆಯುವುದರ ಬದಲು ಕಮರುತ್ತೇವೆ. ನಮ್ಮ ವ್ಯಕ್ತಿತ್ವ ನಾಶವಾಗುತ್ತದೆ.

      ನಮಗೆ ಭೂಮಿಯ ಮೇಲೆ ಮನುಷ್ಯರಾಗಿ ಜನ್ಮ ಪಡೆಯುವ ಮಹಾ ಪುಣ್ಯ ಲಭಿಸಿದೆ. ಇಲ್ಲಿ ಬದುಕಿನ ಸಾರ್ಥಕತೆಗಾಗಿ ನಾವು ಬೆಳೆಯಬೇಕು, ಸತ್ತ ಮೇಲೆಯೂ ದೀರ್ಘ ಕಾಲ ಎಲ್ಲರೂ ನಮ್ಮನ್ನು ನೆನಪಿಸಿಕೊಳ್ಳುವಂತೆ ಯಾವುದಾದರೂ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ವಿಶ್ವವೇ ನಮ್ಮನ್ನು ಗುರುತಿಸುವಂತಹ ಸಾಧಕರಾಗುವ ಪಣ ತೊಡಬೇಕು. ಗುರಿ ತಲುಪಲು ಆಗದಿದ್ದರೂ ನಮ್ಮ ಸಮಾಜದೊಳಗೆ ಗುರುತಿಸಲ್ಪಡುವ ಉತ್ತಮ ಕೆಲಸಗಳನ್ನು ಮಾಡುವ ನಿತ್ಯ ಜಾಗೃತ ಮನಸ್ಕರಾಗಬೇಕು. ದಿನದ ಇಪ್ಪತ್ತನಾಲ್ಕು ಘಂಟೆಗಳಲ್ಲಿ ಏಳು ಘಂಟೆ ಮಾತ್ರ ನಿದ್ರಿಸಿ ಉಳಿದ ಸಮಯವನ್ನು ನಮ್ಮ ವಿಕಾಸಕ್ಕಾಗಿ ಸದ್ವಿನಿಯೋಗಿಸ ಬೇಕು. ಅವಕಾಶಗಳು ವಿಶಾಲ, ಬದುಕು ನಶ್ವರ. ಈ ಕ್ಷಣ ಒದಗಿದ ಅವಕಾಶವನ್ನು ದೇವರು ನೀಡಿದ ಅದೃಷ್ಟವೆಂದು ಅರಿಯಬೇಕು. ದೇವರು ಒಮ್ಮೆ ಮಾತ್ರ ಅದೃಷ್ಟದೇವಿಯನ್ನು ನಮ್ಮ ಬಳಿಗೆ ಕಳುಹಿಸುವನಂತೆ, ಬಂದ ಆಕೆಯನ್ನು ತಿರಸ್ಕರಿಸಿದರೆ, ದೇವರು ಎರಡನೆಯ ಬಾರಿ ಅವಳ ಮಗಳಾದ ದುರದೃಷ್ಟ ದೇವಿಯನ್ನು ಕಳುಹಿಸುವನಂತೆ. ಒಮ್ಮೆ ದುರದೃಷ್ಟ ದೇವಿ ನಮ್ಮ ಬಳಿಗೆ ಬಂದರೆ ಆಕೆ ಮತ್ತೆ ನಮ್ಮೊಂದಿಗೆಯೇ ಉಳಿಯುವಳಂತೆ. ಆದುದರಿಂದ ಪ್ರತಿ ಕ್ಷಣವೂ ನಮಗೆ ದೇವರು. ದೇವರೆಂದರೆ ಒಳಿತಾದುದು. ಒಳಿತನ್ನೇ ಮಾಡುವುದೆಂದರ್ಥ. ಕಾಯಕವೇ ದೇವರು ಎಂದು ಹಿರಿಯರು ಹೇಳಿರುವರಲ್ಲವೇ? ಜಡಭರತರಾಗದೆ, ಕುಂಭಕರ್ಣರಾಗದೆ ನಮ್ಮ ವಿಕಾಸದೊಂದಿಗೆ ರಾಷ್ಟ್ರವಿಕಾಸದ ಶಿಲ್ಪಿಗಳಾಗೋಣ. ಜನಮಾನಸದಲ್ಲಿ ಉಳಿಯಬಲ್ಲ ಸಾಧನಾ ಮುಖಿಗಳಾಗೋಣ. 
ನಮಸ್ಕಾರ..
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** Ads on article

Advertise in articles 1

advertising articles 2

Advertise under the article