ಜೀವನ ಸಂಭ್ರಮ : ಸಂಚಿಕೆ - 115
Monday, December 11, 2023
Edit
ಜೀವನ ಸಂಭ್ರಮ : ಸಂಚಿಕೆ - 115
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ನಾನು ಸುಮಾರು 18 ವರ್ಷಗಳ ಹಿಂದೆ ಒಂದು ಕಚೇರಿಯಲ್ಲಿ ಅಧಿಕಾರಿಯಾಗಿದ್ದೆ. ಅಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಒಬ್ಬ ಕೆಂಪರಸಯ್ಯ ಎನ್ನುವ ವ್ಯಕ್ತಿ ಟೈಪಿಸ್ಟ್ ಮತ್ತು ಗುಮಾಸ್ತನಾಗಿ ತಾತ್ಕಾಲಿಕ ನೆಲೆಯಲ್ಲಿ ಕೆಲಸಕ್ಕೆ ಸೇರಿದ್ದನು. ಆತನಿಗೆ ಕಡಿಮೆ ವೇತನ ಬರುತ್ತಿತ್ತು. ತುಂಬಾ ಒಳ್ಳೆಯವನಾಗಿದ್ದ ಹಾಗೂ ವಿಧೇಯನಾಗಿದ್ದನು. ಆತನಿಗೆ ಸುಂದರಳಾದ ಪತ್ನಿ ಹಾಗೂ ಮುದ್ದಾದ ಎರಡು ಗಂಡು ಮಕ್ಕಳಿದ್ದರು. ಆತನಿಗೆ ಬರುತ್ತಿದ್ದ ಸಂಬಳ ಕಡಿಮೆಯಾಗಿದ್ದರಿಂದ ಒಂದು ಆಟೋ ನಿರ್ವಹಣೆ ಮಾಡುತ್ತಿದ್ದನು. ಸಂಜೆ ಕಛೇರಿ ಮುಗಿದ ಬಳಿಕ ರಾತ್ರಿಯವರೆಗೆ ನಂತರ ಬೆಳ್ಳಂಬೆಳಗ್ಗೆ ಆಟೋ ಓಡಿಸಿ ನಂತರ ಕಚೇರಿ ಕೆಲಸಕ್ಕೆ ಸರಿಯಾದ ಸಮಯಕ್ಕೆ ಬರುತ್ತಿದ್ದನು. ಆತ ಮನೆಯಿಂದಲೇ ಊಟ ತರುತ್ತಿದ್ದನು. ನಮ್ಮಲ್ಲಿ ತರಬೇತಿಯಿದ್ದಲ್ಲಿ ಊಟ ತರುತ್ತಿರಲಿಲ್ಲ. ಆತನ ನಿಷ್ಠೆ ಪ್ರಾಮಾಣಿಕತೆ ನೋಡಿ ಆತನಿಗೆ ಯಾವುದಾದರೂ ತರಬೇತಿ ಅಥವಾ ಕಾರ್ಯಕ್ರಮ ಮಾಡಿದರೆ ಆತನಿಗೆ ಪ್ರೀತಿಯಿಂದ ಸ್ವಲ್ಪ ಹಣ ನೀಡುತ್ತಿದ್ದೆವು. ಆತ ಗಳಿಸಿದ ಹಣ ಎಷ್ಟು ಚಿಕ್ಕದಾದರೂ ಸರಿ ಬ್ಯಾಂಕಿಗೆ ಹಾಕುತ್ತಿದ್ದನು. ಅನಾವಶ್ಯಕವಾಗಿ ಹಣ ಖರ್ಚು ಮಾಡುತ್ತಿರಲಿಲ್ಲ. ಹೀಗಿರಬೇಕಾದರೆ ನನಗೆ ವರ್ಗಾವಣೆ ಆಯಿತು. ವರ್ಗಾವಣೆಯಾದ ಎರಡು ವರ್ಷದ ನಂತರ ಆತ ತೀರಿಹೋದ ಸುದ್ದಿ ಬಂದಿತ್ತು. ಮಕ್ಕಳು ಚಿಕ್ಕವರು, ಹೆಂಡತಿಗೆ ಸಣ್ಣ ವಯಸ್ಸು , ಏಕೆ ತೀರಿಹೋದ ಎಂದಾಗ, ಆತನಿಗೆ ಜಾಂಡೀಸ್ ಕಾಯಿಲೆ ಬಂದಿದ್ದು ಸರಿಯಾಗಿ ಚಿಕಿತ್ಸೆ ಪಡೆಯಲಿಲ್ಲ. ಔಷಧೋಪಚಾರದ ಕಡೆ ಗಮನ ನೀಡಲಿಲ್ಲ. ತನಗೆ ಈ ಕಾಯಿಲೆ ಬಂದಿದೆ ಎಂಬುದನ್ನು ಯಾರೊಂದಿಗೂ ಹಂಚಿಕೊಳ್ಳಲಿಲ್ಲ. ಎಲ್ಲಿ ಹಣ ಖರ್ಚಾದರೆ ಹೆಂಡತಿ ಮಕ್ಕಳಿಗೆ ತೊಂದರೆ ಆಗುತ್ತದೆ ಎಂದು ಯಾರಿಗೂ ಹೇಳದೆ, ಔಷಧೋಪಚಾರ ಮಾಡಿಕೊಳ್ಳದೆ, ತಾನೇ ತಪ್ಪು ಮಾಡಿ ಮರಣ ಹೊಂದಿದ್ದನು.
ನಮ್ಮೆಲ್ಲರ ಬದುಕು ಹೀಗೆ ಆಗಿದೆ. ಬದುಕಿನ ಬಗ್ಗೆ ಆಲೋಚಿಸುವುದನ್ನು ಬಿಟ್ಟು ಉಳಿದ ಎಲ್ಲಾ ಯೋಚನೆ ಮಾಡುತ್ತೇವೆ. ಆಗ ನನಗೆ ನೆನಪಿಗೆ ಬಂದಿದ್ದು ಅಮೆರಿಕದ ತತ್ವಜ್ಞಾನಿ ಎಮರ್ಸನ್ ಜೀವನದ ಕುರಿತು ಹೇಳಿದ ಮಾತು. ಆತ ಬದುಕನ್ನು ಕುರಿತು ಆಳವಾಗಿ ಚಿಂತಿಸಿದವನು. ಆತ ಹೇಳುತ್ತಾನ "life consist in what we are thinking all our life. ಜೀವನ ಎಂದರೆ ಜೀವನಪೂರ್ತಿ ಏನು ಕುರಿತು ಆಲೋಚಿಸುತ್ತೇವೆಯೋ ಅದೇ ಜೀವನ." ನಾವೆಲ್ಲ ಜೀವನ ಕುರಿತು ಚಿಂತಿಸಬೇಕು. ಬದುಕು ಎಂದರೇನು? ಬದುಕು ಹೇಗೆ ಅರಳುತ್ತದೆ? ಬದುಕನ್ನು ಸುಂದರಗೊಳಿಸುವುದು ಹೇಗೆ..?. ಹೀಗೆ ಪ್ರತಿಯೊಬ್ಬರೂ ವಿಚಾರ ಮಾಡಬೇಕು. ಯಾವ ವಿಚಾರ ಕುಳಿತಾಗ, ನಿಂತಾಗ ಕಾಡುತ್ತದೆಯೋ ಅದೇ ಜೀವನ. ನಾವು ಯಾವುದನ್ನು ಕುರಿತು ಚಿಂತಿಸುತ್ತೇವೆಯೋ, ಆಲೋಚಿಸುತ್ತೇವೆಯೋ ಅದೇ ಜೀವನ. ನಾವು ಒಂದು ಟೇಬಲ್ ಬಗ್ಗೆ ಚಿಂತಿಸಿದರೆ, ನಮ್ಮ ಜೀವನ ಕೇವಲ ಟೇಬಲ್. ಹಣ ಕುರಿತು ಆಲೋಚಿಸಿದರೆ, ಜೀವನ ಕೇವಲ ಹಣ. ಅದು ಸುಂದರ ಬದುಕು ಅಲ್ಲ. ನಾವು ಕೆಟ್ಟದ್ದರ ಕುರಿತು ಆಲೋಚಿಸಿದರೆ ಜೀವನ ಕೆಟ್ಟದ್ದು. ಒಳ್ಳೆಯದನ್ನು ಕುರಿತು ಆಲೋಚಿಸಿದರೆ ಬದುಕು ಒಳ್ಳೆಯದಾಗುತ್ತದೆ. ಒಂದು ಭೃಂಗ ಇದೆ. ಅದು ಕುಳಿತಲ್ಲಿ, ನಿಂತಲ್ಲಿ ಅದರ ಮನಸ್ಸಿನಲ್ಲಿ ಹೂವು ಮಾತ್ರ. ಕನಸಿನಲ್ಲಿ ಹೂವು. ಮನಸ್ಸಿನಲ್ಲಿ ಹೂವು. ಹಾರಿದರೆ ಹೂವು. ಮಕರಂದ ಹೀರುವುದು ಹೂವಿನಿಂದ. ಹಾಗಾಗಿ ಅದರ ಜೀವನ ಹೂಮಯ. ಹಾಗೆ ನಾವು ಶಾಂತ ಜೀವನ ಸಾಗಿಸಬೇಕಾದರೆ, ಶಾಂತಿಯ ಬಗ್ಗೆ ಆಲೋಚನೆ ಮಾಡಬೇಕು. ಯಾರೆಲ್ಲಾ ಚಿಂತಿಸಬೇಕೆಂದರೆ, ಯಾರೆಲ್ಲ ಬದುಕಿದ್ದಾರೋ ಅವರೆಲ್ಲ ಚಿಂತಿಸಬೇಕು. ಏಕೆಂದರೆ ಬದುಕೇ ಸಂಪತ್ತು. ನಾವು ಏನು ಮಾಡುತ್ತೀವಿ..? ಏಕೆ ಮಾಡುತ್ತೇವೆ..? ಅಂದರೆ ಬದುಕುವುದಕ್ಕೆ ಅಲ್ಲವೇ. ಹಣ ಸಂಪಾದನೆ, ಅಧಿಕಾರ, ಆಸ್ತಿ ಏನೇ ಇರಲಿ ಯಾವುದಕ್ಕೆ? ಬದುಕುವುದಕ್ಕೆ. ಹೇಗೆ ಬದುಕಬೇಕು ಎಂದರೆ ಚೆನ್ನಾಗಿ ಬದುಕಬೇಕು. ಆದರೆ ನಾವು ಬದುಕನ್ನು ಮರೆಯುತ್ತೇವೆ. ಉಳಿದೆಲ್ಲ ಆಲೋಚನೆ ಮಾಡುತ್ತೇವೆ. ನಮ್ಮ ಜೀವನ ಕುರಿತು ನಿರ್ಧರಿಸಿದರೆ ಅದನ್ನೇ ಕುರಿತು ಆಲೋಚಿಸಬೇಕು. ನಮ್ಮ ಜೀವನ ಮಧುರತೆಯಿಂದ ಇರಬೇಕು. ಅದಕ್ಕಾಗಿ ಮಾಧುರ್ಯ ಕುರಿತು ಚಿಂತಿಸಬೇಕು. ಯಾವುದು ನಮ್ಮ ಬದುಕಿಗೆ ರೂಪ ಕೊಡುತ್ತದೆಯೋ ಅದೇ ರೀತಿ ಚಿಂತಿಸಬೇಕು ಮತ್ತು ಅದೇ ರೀತಿ ಮಾತನಾಡಬೇಕು. ಅದೇ ರೀತಿ ಕಾರ್ಯ ಮಾಡಬೇಕು. ಒಬ್ಬ ಶಿಲ್ಪಿ ಒಂದು ಕಲ್ಲು ಬಂಡೆ ನೋಡಿ ಗಣಪತಿ ಶಿಲ್ಪ ಕೆತ್ತಬೇಕೆಂದುಕೊಂಡರೆ, ಆ ಶಿಲ್ಪ ಮುಗಿಯುವವರೆಗೂ ಅದೇ ಚಿಂತನೆ ಮಾಡಬೇಕು. ಅದೇ ರೀತಿ ಕೆಲಸ ಮಾಡಬೇಕು. ಬೆಳಿಗ್ಗೆ ಗಣೇಶನ ಮೂರ್ತಿ ಕೆತ್ತುವುದು, ಸಂಜೆ ಅದೇ ಕಲ್ಲಿಗೆ ಶಿವನ ಮೂರ್ತಿ, ಮಾರನೇ ದಿನ ಅದೇ ಕಲ್ಲಿಗೆ ವಿಷ್ಣುಮೂರ್ತಿ ಕೆತ್ತಲು ಹೋದರೆ ಯಾವುದೇ ಕೆಲಸ ಪೂರ್ತಿಯಾಗುವುದಿಲ್ಲ. ನಿರ್ಧಾರ ಮಾಡಿದ ಮೇಲೆ ಆ ಕೆಲಸ ಮಾಡುವವರೆಗೂ ಅದನ್ನೇ ಆಲೋಚನೆ ಮಾಡಬೇಕು. ಅದರದೇ ತನ್ಮಯತೆ ಇರಬೇಕು. ಕೈಯಲ್ಲಿ , ಮನಸ್ಸಿನಲ್ಲಿ, ಬುದ್ಧಿಯಲ್ಲಿ ಅದೇ ತನ್ಮಯತೆ ಇರಬೇಕು. ಆಗ ಸುಂದರ ಶಿಲ್ಪ ತಯಾರಾಗುತ್ತದೆ. ಅಧಿಕಾರದಿಂದ ರೂಪಿತವಾಗುತ್ತದೆ ಎಂದಲ್ಲ. ನಮ್ಮ ಜೀವನ ನಾವು ಮಾಡುವ ಆಲೋಚನೆಯಿಂದ ರೂಪಿತವಾಗುತ್ತದೆ. ನಾವು ಮಾಡುವ ಆಲೋಚನೆ, ವಿಚಾರ, ಚಿಂತನೆ ನಮ್ಮ ಜೀವನ ರೂಪಿಸುತ್ತದೆ. ಕೆಂಪರಸಯ್ಯ ಕೇವಲ ಹಣ ಉಳಿಸುವ ಕುರಿತು ಆಲೋಚಿಸಿದ ಅದಕ್ಕಾಗಿ ಬದುಕು ಕಳೆದುಕೊಂಡ. ಆದ್ದರಿಂದ ಮಕ್ಕಳೇ ನಮ್ಮ ಬದುಕು ಹೇಗಿರಬೇಕೆಂದು ನಾವೇ ಆಲೋಚಿಸಬೇಕು ಅಲ್ಲವೇ ಮಕ್ಕಳೇ...
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*******************************************