-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 8

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 8

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 8
ಲೇಖಕರು : ದಿವಾಕರ ಶೆಟ್ಟಿ ಎಚ್
ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203

                 
      ಪ್ರೀತಿಯ ಮಕ್ಕಳೇ.... ಎರಡು ವಾರದ ಲೇಖನಗಳು ನಿಮ್ಮನ್ನು ಗೊಂದಲಕ್ಕೆ ತಳ್ಳಿರಬೇಕಲ್ಲವೇ? ಎರಡಕ್ಕೆ ಮುಗಿಸಬಾರದಂತೆ ಮೂರಕ್ಕೆ ಮುಕ್ತಾಯ ಎಂಬ ಮಾತೇ ಇದೆಯಲ್ಲ. ಗೊಂದಲವೇ ಕಲಿಕೆಯ ಮೂಲ. ನೀವು ಗೊಂದಲದಿಂದ ಹೊರ ಬರಲು ಪ್ರಯತ್ನಿಸಿದಾಗ ಅರಿವು ಮೂಡುತ್ತದೆಯಲ್ಲ ಅದನ್ನೇ ಮನದಟ್ಟುಗೊಳ್ಳುವಿಕೆ (conceptualisation) ಎನ್ನುತ್ತೇವೆ. ಯಾವ ಶಿಕ್ಷಕರು ಈ ರೀತಿ ಕಲಿಕೆಯನ್ನು ಗಟ್ಟಿಗೊಳಿಸುತ್ತಾರೆಯೋ ಅವರು ನಮ್ಮ ಚಿತ್ತಭಿತ್ತಿಯಲ್ಲಿ ಸ್ಥಿರವಾಗುತ್ತಾರೆ. ಶಿಕ್ಷಕರೆಂಬ ಪದ ಕೇಳಿದ ಕೂಡಲೇ ನಮ್ಮ ಮನಸ್ಸಿನಲ್ಲಿ ಆ ಶಿಕ್ಷಕರ ಚಿತ್ರ ಮೂಡುತ್ತದೆ. ಇವರನ್ನು ನಾವು ಪ್ರಾತಸ್ಮರಣೀಯರು ಎನ್ನುವುದು. ಇಂತಹ ಪ್ರಾತಸ್ಮರಣೀಯರ ಸಂಖ್ಯೆ ವೃದ್ಧಿಯಾಗಲಿ ಎಂಬುದೇ ನನ್ನ ಹರಕೆ. ಈ ಬಾರಿ ನಾನು ಮೂರು ಸಂದರ್ಭಗಳನ್ನು ನೀಡುತ್ತೇನೆ. ಈ ಸಂದರ್ಭಗಳಲ್ಲಿ ನಿಮ್ಮ ಅನುಭವ ಹೇಳಿ. 

ಘಟನೆ 1- ನೀವು ಶಾಲೆಗೆ ಬರುವಾಗ ಯಾರೋ ನಿಮ್ಮ ಶಾಲೆಯ ಗೇಟಿನೆದುರು ಕಾರು ನಿಲ್ಲಿಸಿ ಹೋಗಿರುತ್ತಾರೆ. ಮಾಸ್ಟ್ರು ಅದನ್ನು ಪಕ್ಕಕ್ಕೆ ತಳ್ಳುವಂತೆ ಹೇಳುತ್ತಾರೆ. ನೀವೆಲ್ಲರೂ ಒಟ್ಟು ಸೇರಿ ದೂಡಲು ಪ್ರಯತ್ನಸುತ್ತೀರಿ. ಬೆವರು ಹರಿಸುತ್ತೀರಿ. ಬೆಳಿಗ್ಗೆ ತಿಂದು ಬಂದ ತಿಂಡಿ ಖಾಲಿಯಾಗುತ್ತದೆ. ಬಿಸಿ ಊಟದ ತಟ್ಟೆಗೆ ಬಿದ್ದ ಅನ್ನ ಸಾರು ತಟ್ಟೆ ತೂತು ಬಿದ್ದ ಹಾಗೆ ಖಾಲಿಯಾಗುತ್ತದೆ. ಊಟದ ನಂತರ ಕುಳಿತು ಕೊಳ್ಳುವಂತಿಲ್ಲ ಕಾರು ದೂಡುವ ಕೆಲಸವಿದೆಯಲ್ಲ. ಮತ್ತೆ ಬೆವರು ಹರಿಯುತ್ತದೆ. ವಿಜ್ಞಾನ ಶಿಕ್ಷಕರು ಬಂದು ನೋಡುತ್ತಾರೆ. ಕಾರು ಅಲ್ಲಿಯೇ ಇದೆ. ಯಾಕೋ ಇಷ್ಟು ಜನರಿದ್ದರೂ ಏನೂ ಕೆಲಸವಾಗಿಲ್ಲ ಎಂದು ಬೇಸರಪಟ್ಟುಕೊಳ್ಳುತ್ತಾರೆ. ಆದರೆ ಬೆವರಿಳಿದ ನಿಮ್ಮ ಬಗ್ಗೆ ಸ್ವಲ್ಪವೂ ಕನಿಕರವಿಲ್ಲ ಅವರಿಗೆ.

ಘಟನೆ 2 - ಆದಿತ್ಯವಾರ ನೀವು ಅಪ್ಪ ಅಮ್ಮನ ಜೊತೆಗೆ ಸಿಟಿ ಸೆಂಟ್ರಲ್ ಮಾಲ್ ಗೆ ಹೋಗುತ್ತೀರಿ. ಪ್ರತಿಯೊಂದು ಅಂಗಡಿ ಹೊಕ್ಕು ಹೊರಬರುತ್ತೀರಿ. ಕೈಕಾಲು ಸೋತು ಅಮ್ಮ ಕೊಡಿಸಿದ ಕುಲ್ಫಿ, ಅಪ್ಪನೊಂದಿಗೆ ತಿಂದ ಬೇಯಿಸಿದ ಮಸಾಲಾ ಜೋಳದ ಕಾಳು, ಚಾಟ್ ಕಾರ್ನರ್ ನ ಪಾವ್ ಬಾಜಿ ಎಲ್ಲ ನೀರಾಗಿರುತ್ತದೆ. ಹಾಗೆಯೇ ಬಾಡಿದ ಮುಖದೊಂದಿಗೆ ಬಾಗಿಲಿಗೆ ಬರುತ್ತೀರಿ. ಅಲ್ಲಿ ಮತ್ತೆ ವಿಜ್ಞಾನ ಮಾಸ್ಟ್ರು ಎದುರಾಗುತ್ತಾರೆ. ಏನೋ 3 ಗಂಟೆಗಳ ಹಿಂದೆ ಇರುವ ಸ್ಥಳದಲ್ಲಿ ಈಗಲೂ ಇದ್ದಿ ಏನೂ ಕೆಲಸ ಮಾಡಿಲ್ಲ ಎನ್ನುತ್ತಾರೆ.

ಘಟನೆ 3 - ನಿಮ್ಮ ಹೆಡ್ ಮಾಸ್ಟ್ರು ಹೂವಿನ ಗಿಡಗಳಿಗೆ ಹಾಕಲು ಹೊಸ ಮಣ್ಣು ತರಿಸಿದ್ದಾರೆ. ಗೇಟಿನ ಬಳಿ ಯಾರೋ ಕಾರು ನಿಲ್ಲಿಸಿದ್ದರಿಂದ ಟೆಂಪೋದವನು ಅಲ್ಲಿಯೇ ಮಣ್ಣನ್ನು ಸುರಿದು ಹೋಗಿದ್ದಾರೆ. ಎಲ್ಲರೂ ಒಟ್ಟಾಗಿ ಆ ಮಣ್ಣನ್ನು ತಂದು ಹೂವಿನ ಗಿಡಗಳಿಗೆ ಹಾಕಿ ಎನ್ನುತ್ತಾರೆ. ಬುಟ್ಟಿಗಳಲ್ಲಿ ತುಂಬಿಸಿ ತುಂಬಿಸಿ ಗಿಡಗಳಿಗೆ ಹಾಕಿ ಗುಡಿಸಿ ಮಣ್ಣಿನ ಸುಳಿವೂ ಸಿಗದಂತೆ ಮಾಡಿ ಬಿಡುತ್ತೀರಿ. ಮುನಿಯೊಬ್ಬ ಸಮುದ್ರವನ್ನೇ ಆಪೋಷನ ಮಾಡಿದಂತೆ. ಅಲ್ಲಿಗೂ ನಿಮ್ಮ ಕ್ರೂರಿ ವಿಜ್ಞಾನ ಮಾಸ್ಟ್ರು ಬರುತ್ತಾರೆ. ಬೆವರೊರಸಿಕೊಳ್ಳುತ್ತಿರುವ ನಿಮ್ಮ ಬಳಿ ಏನೂ ಕೆಲಸ ನಡೆದಿಲ್ಲವಲ್ಲ ಎನ್ನುತ್ತಾರೆ. ನಿಮಗೆಲ್ಲರಿಗೂ ಕೋಪ ಬರುತ್ತದೆ. ಗಟ್ಟಿಯಾಗಿ ಕಿರುಚುತ್ತೀರಿ ಕೆಲಸ ಅಂದರೆ ಏನು ಸರ್? ಮಾಸ್ಟ್ರು ತಣ್ಣಗೆ ಹೇಳುತ್ತಾರೆ ಎಲ್ಲರೂ ಕೈಕಾಲು ತೊಳೆದು ತರಗತಿಗೆ ಬನ್ನಿ.

ನೋಡಿ ಬಲ ಪ್ರಯೋಗದ ಬಿಂದುವು ಬಲ ಪ್ರಯೋಗದ ನೇರದಲ್ಲಿ ಚಲಿಸಿದರೆ ಅಲ್ಲಿ ಕೆಲಸ ನಡೆದಿದೆ ಎನ್ನುತ್ತೇವೆ. ನೀವು F ಬಲವನ್ನು ಪ್ರಯೋಗಿಸಿದಾಗ ಅದು S ದೂರದಷ್ಟು ಚಲಿಸಿದರೆ (ಸ್ಥಾನಪಲ್ಲಟ) ನಡೆದ ಕೆಲಸ W=F*S ನ್ಯೂಟನ್ ಮೀಟರ್ ಗಳು. ಎದುರಿನಿಂದ ಒಂದು ರೋಡ್ ರೋಲರ್ ಬರುತ್ತಿರುತ್ತದೆ. ಅದನ್ನು ನೀವು ಎದುರಿನಿಂದ ತಳ್ಳುತ್ತೀರಿ. ಅದರ ವೇಗ ಕಡಿಮೆಯಾಗುವುದೂ ಇಲ್ಲ ಹೆಚ್ಚಾಗುವುದು ಇಲ್ಲ. ಅದು ನಿಮ್ಮನ್ನು ಅಪ್ಪಚ್ಚಿ ಮಾಡಿ ಮುಂದೆ ಹೋಗುತ್ತದೆ. ಇಲ್ಲಿ ಕೆಲಸ ನಡೆದಿಲ್ಲ. 

ಘಟನೆ1 ರಲ್ಲಿ ನಿಮಗೆ ಆ ಕಾರನ್ನು ಒಂದು ಚೂರೂ ಚಲಿಸಲು ಸಾಧ್ಯವಾಗಿಲ್ಲ ಅಂದರೆ S = 0. ಆದ್ದರಿಂದ ನೀವು ಎಷ್ಟು ಬೆವರಿಳಿಸಿದರೂ ಕೆಲಸ ಸೊನ್ನೆ.  

ಘಟನೆ 2 ರಲ್ಲಿ ಕೂಡಾ ಹಾಗೆಯೇ 3 ಗಂಟೆಗಳ ಹಿಂದೆ ನೀವು ಎಲ್ಲಿದ್ದೀರೋ ಈಗಲೂ ಅಲ್ಲಿಯೇ ಇದ್ದೀರಿ ಎಂದರೆ S ಸೊನ್ನೆ. ಹಾಗಿದ್ದ ಮೇಲೆ ಕೆಲಸವೂ ಸೊನ್ನೆಯೇ. ಅದೇ ನಿಮ್ಮ ಮಾಸ್ಟ್ರು ಅರ್ಧ ಗಂಟೆ ಮೊದಲು ಬಂದಿದ್ದರೆ ಆಗ ಒಹ್ ತುಂಬಾ ಕೆಲಸ ಮಾಡಿದ್ದಿ ಎಂದು ಬೆನ್ನು ತಟ್ಟುತ್ತಿದ್ದರು. 

ಘಟನೆ 3 ಇನ್ನೂ ವಿಚಿತ್ರ. ಬುಟ್ಟಿಯಲ್ಲಿ ಮಣ್ಣು ತುಂಬಿ ಎತ್ತಿದಾಗ ಗುರುತ್ವಾಕರ್ಷಣೆಯು ಅದನ್ನು ಭೂ ಕೇಂದ್ರದ ಕಡೆಗೆ ಎಳೆಯತ್ತಿರುತ್ತದೆ. ಆದರೆ ಅದಕ್ಕೆ ಲಂಬವಾಗಿ ಬುಟ್ಟಿ ನಿಮ್ಮೊಂದಿಗೆ ಚಲಿಸುತ್ತಿರುತ್ತದೆ. ಅಂದರೆ ಬಲಪ್ರಯೋಗದ ನೇರದಲ್ಲಿ ಸ್ಥಾನಪಲ್ಲಟವಾಗುತ್ತಿಲ್ಲ ಅಥವಾ ಸ್ಥಾನಪಲ್ಲಟದ ನೇರದಲ್ಲಿ ಬಲ ಪ್ರಯೋಗವಾಗುತ್ತಿಲ್ಲ. ಇಲ್ಲಿ ಬಲ ಶೂನ್ಯ. ಆಗ ಕೆಲಸವೂ ಶೂನ್ಯ. ವಿಜ್ಞಾನ ಮಾಸ್ಟ್ರಿಗೆ ವಿದ್ಯಮಾನಗಳು ಮುಖ್ಯವೇ ಹೊರತು ನೀವು ಸುರಿಸಿದ ಬೆವರಲ್ಲ.

ನೀವು ಮಂಗಳೂರಿನಿಂದ ಪುತ್ತೂರಿಗೆ ಬಸ್ಸಿನಲ್ಲಿ ಹೋಗುತ್ತೀರಿ. ಆಗ ನಿಮ್ಮ ಮೇಲೆ ಯಾವುದೇ ಕೆಲಸ ನಡೆದಿಲ್ಲ ಎಂದಾಯಿತು. ಹಾಗಾದರೆ ಬಸ್ ಕಂಡಕ್ಟರ್ ನಡೆಯದ ಕೆಲಸಕ್ಕೆ ಟಿಕೇಟು ಕೊಟ್ಟು ಹಣ ತೆಗೆದುಕೊಳ್ಳುವುದು ಎಷ್ಟು ಸರಿ. ಆದರೆ ಆತ ಹಣ ತೆಗೆದುಕೊಂಡದ್ದು ನಡೆದ ಕೆಲಸಕ್ಕೆ ಅಲ್ಲ ಬದಲಾಗಿ ಬಸ್ಸು ಪುತ್ತೂರಿಗೆ ಹೋಗುವ ವರೆಗೆ ಆ ಬಸ್ಸಿನಲ್ಲಿ ಕುಳಿತುಕೊಳ್ಳಲು ಅನುಮತಿ ನೀಡಿದ್ದಕ್ಕೆ. ಹೇಗಿದೆ ತರ್ಕ? ಕೆಲವೊಮ್ಮೆ ವಿಜ್ಞಾನ ವಿಚಿತ್ರವಾಗಿರುತ್ತದೆ.
.................................... ದಿವಾಕರ ಶೆಟ್ಟಿ ಎಚ್
ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 


Ads on article

Advertise in articles 1

advertising articles 2

Advertise under the article