-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 95

ಸ್ಫೂರ್ತಿಯ ಮಾತುಗಳು : ಸಂಚಿಕೆ - 95

ಸ್ಫೂರ್ತಿಯ ಮಾತುಗಳು : ಸಂಚಿಕೆ - 95
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 

            
ನನ್ನ ಲೇಖನವನ್ನು ಮೊತ್ತಮೊದಲ ಬಾರಿಗೆ ಆಂಗ್ಲ ಭಾಷೆಯ ತಲೆಬರಹದಡಿಯಲ್ಲಿ ಓದುತ್ತಿದ್ದೀರಿ. ಅಂತರ್ಜಾಲ ಎಂದರೆ ಎಲ್ಲರಿಗೂ ಅಪ್ಯಾಯಮಾನವಾಗದು. ಇಂಟರ್ ನೆಟ್ ಎಂಬುದು ಕೂಸಿಗೂ ಗೊತ್ತಿರುವ ಸಂಗತಿ. ಭಾರತೀಯರಲ್ಲಿ ಶೇಕಡಾ 65.8 ಕೋಟಿ ಮಂದಿ Internet ಬಳಸುತ್ತಿದ್ದಾರೆಂದು 2022ನೇ ಸಾಲಿನ ವರದಿಯೊಂದು ಹೇಳುತ್ತದೆ. ಚೈನಾ ದೇಶವು ಇಂಟರ್ ನೆಟ್ ಬಳಕೆಯಲ್ಲಿ ಮಂಚೂಣಿಯಲ್ಲಿದೆ. ಎರಡನೇ ಸ್ಥಾನದಲ್ಲಿ ನಾವಿದ್ದೇವೆ.

ಇಂಟರ್ ನೆಟ್ ಪ್ರಪಂಚವನ್ನು ಚಿಕ್ಕದಾಗಿಸಿದೆ. ದೇಶ ದೇಶಗಳನ್ನು ಬಹಳ ಹತ್ತಿರಕ್ಕೆ ತಂದಿದೆ. ಅಸಂಖ್ಯ ವ್ಯವಹಾರಗಳು ಮುಖ ಪರಿಚಯ ಇಲ್ಲದೆಯೂ ಜರಗುತ್ತಿದೆ. ಇಂಟರ್ ನೆಟ್ ಸೌಲಭ್ಯದ ಮೂಲಕ ಹಣದ ಪಾವತಿ ಮತ್ತು ಸ್ವೀಕೃತಿಗಳು ಕ್ಷಣ ಮಾತ್ರದಲ್ಲಿ ನಡೆಯುತ್ತವೆ. ಎಲ್ಲ ಸರಬರಾಜುಗಳು ವ್ಯಕ್ತಿಗತ ಸಂಪರ್ಕ ಇಲ್ಲದೆಯೂ ನಡೆಯುತ್ತಿವೆ. ಬೆಂಗಳೂರಿಗೆ ಮುಂಗಡ ಬಸ್ ಟಿಕೇಟ್ ಪಡೆಯಲು ಹಿಂದಿನ ದಿನಗಳಲ್ಲಿ ಡಿಪೋಗಳಲ್ಲಿಯೋ, ಬುಕ್ಕಿಂಗ್ ಏಜೆಂಟ್ ಮೂಲಕವೋ ಸರದಿಯ ಸಾಲಿನಲ್ಲಿ ನಿಂತು, ಬಿಸಿಲಿನ ಹೊಡೆತ ತಿಂದು, ಸಂಚಾರ ಮತ್ತು ಉದರ ಶಮನಕ್ಕೆ ಖರ್ಚು ಮಾಡುವ ಕೊರಗುಗಳನ್ನು ಅನುಭವಿಸುತ್ತಿದ್ದೆವು. ಇಂದು ಮನೆಯೊಳಗೆ ಕುಳಿತೇ ಬಸ್ ಮಾತ್ರವಲ್ಲ, ಎಲ್ಲವನ್ನೂ ಶ್ರಮ ಮತ್ತು ವೆಚ್ಚ ರಹಿತವಾಗಿ ಪಡೆಯಲು ಇಂಟರ್ ನೆಟ್ ಸಹಕಾರಿಯಾಗಿದೆ.

“ಆನ್ ಲೈನ್” ಇಂದು ಮನೆ ಮಾತು. ಆನ್ ಲೈನ್ ಮೂಲಕ ಉದ್ಯೋಗ ನಮ್ಮ ಕಾಲದ ವಿಶಿಷ್ಟತೆ. ಆನ್ ಲೈನ್ ವಿಚಾರ ಗೋಷ್ಟಿ, ಆನ್ ಲೈನ್ ತರಗತಿ, ಆನ್ ಲೈನ್ ಚಿಕಿತ್ಸೆ, ಆನ್ ಲೈನ್ ಯೋಗ, ಆನ್ ಲೈನ್ ಸ್ಪರ್ಧೆಗಳು, ಆನ್ ಲೈನ್ ಸಂದರ್ಶನಗಳು, ಆನ್ ಲೈನ್ ಪೂಜೆಗಳು..... ಹೀಗೆ ಎಲ್ಲವೂ ಆನ್ ಲೈನ್. ಕಳೆದ ವಾರ ಮಿತ್ರರ ಮನೆಗೆ ಕರೆ ಮಾಡಿದ್ದೆ. ಮಾತನಾಡುತ್ತಾ, ಊಟ ಆಯಿತಾ ಎಂದು ಪ್ರಶ್ನಿಸಿದರೆ ಅವರು “ಆನ್ ಲೈನ್” ಎಂದು ಬಿಟ್ಟರು. ಪುಣ್ಯಕ್ಕೆ ನಿದ್ದೆ ಆಯಿತಾ ಎಂದರೆ “ಆನ್ ಲೈನ್” ಎನ್ನುತ್ತಿರಲಿಲ್ಲವೇನೋ ! ಎಲ್ಲರ ಬದುಕಿನಲ್ಲಿಯೂ ಆನ್ ಲೈನ್ ಹಾಸು ಹೊಕ್ಕಾಗಿ ಹೆಣೆಯಲ್ಪಡುತ್ತಿದೆ.

ನಮ್ಮ ಮನೆಗೆ ಬೇಕಾಗುವ ತರಕಾರಿ ಮತ್ತು ದಿನಸಿಗಳನ್ನು ಮಾರುಕಟ್ಟೆಗೆ ಹೋಗಿ ಆಯ್ಕೆ ಮಾಡಿ, ನಗದು ತೆತ್ತು ತರುವ ಪರಿಪಾಟವಿತ್ತು. ಮನೆಗೆ ವರ್ತಮಾನ ಪತ್ರಿಕೆ ಬಾರದೇ ಉಪಾಹಾರವೂ ಸೇರದ ದಿನಗಳಿದ್ದುವು. ಅಂಚೆಯವನು ಬಂದನೆಂದರೆ ಆ ಮನೆಗೇ ಕಿರೀಟ, ನಮ್ಮ ಉಡುಪುಗಳನ್ನು ದರ್ಜಿಯೇ ಸುಂದರವಾಗಿ ಹೊಲಿದು ಸಿದ್ಧಗೊಳಿಸಿ ಪೂರೈಸುತ್ತಿದ್ದ. ಹೀಗೆ ಯೋಚನೆ ಮಾಡಿದರೆ ಹಿಂದೆ ವ್ಯಕ್ತಿಗಳ ನಡುವೆ ಮುಖಾ ಮುಖಿಯಾಗದೆ, ಮಾತನಾಡಿಸದೆ ನಮ್ಮ ಯಾವುದೇ ಕೆಲಸಗಳು ನಡೆಯುತ್ತಲೇ ಇರಲಿಲ್ಲ. ಇಂದು ಸಂಪರ್ಕ ಸಂಬಂಧಗಳು ವಿರಳವಾಗತೊಡಗಿವೆ. ಹಣ ಮತ್ತು ಆನ್ ಲೈನ್ ಇದೇ ಬದುಕೆಂದು ತೀರ್ಮಾನಿಸಲಾರಂಭಿಸಿದ್ದೇವೆ. 
Internet ನಮ್ಮ Inner net ನ ಮೇಲೆ ಧಾಳಿ ಮಾಡಲಾರಂಭಿಸಿದೆ. ಪರಿಚಯಗಳು, ಸಂಬಂಧಗಳು ಮಾನವೀಯ ಮೌಲ್ಯಗಳು, ಕೊಡು ಕೊಳ್ಳುವ ಸಂಪ್ರದಾಯಗಳು ಮರೆಯಾಗುತ್ತಿವೆ. ಆನ್ ಲೈನ್ ಮೂಲಕ ದೇವರ ಸೇವೆ ಮಾಡಿದರೆ ಆಧ್ಯಾತ್ಮಿಕ ಮನಸ್ಸು ಅರಳದು. ದೈನಂದಿನ ಅಗತ್ಯದ ಸಾಮಗ್ರಿಗಳಿಗೆ ಮಾರುಕಟ್ಟೆಗೆ ಹೋದರೆ ಅಲ್ಲಿ ಹಲವಾರು ಜನರ ಭೇಟಿಯಾಗುತ್ತದೆ. ಸ್ನೇಹ ಪ್ರೀತಿಗಳು ಬಲಗೊಳ್ಳುತ್ತವೆ. ನಾವು ಆನ್ ಲೈನ್ ಅವಲಂಬನೆಗೊಳಗಾದರೆ ಈ ಪ್ರೀತಿ ಮತ್ತು ಸ್ನೇಹಗಳು ಬೆಳೆಯುವುದಾದರೂ ಹೇಗೆ? ಆನ್ ಲೈನ್ ಮನುಷ್ಯನನ್ನು ಏಕಾಂಗಿತನದತ್ತ ಒಯ್ಯುವ ಭೀತಿಯೂ ಇದೆ. ಮಾನವವನ ವಿಕಾಸದಲ್ಲಿ ಹೃದಯದ ಭಾವನೆಗಳು ಬಹಳ ಮುಖ್ಯ ಪಾತ್ರವಹಿಸುತ್ತವೆ. ಹೃದಯದ ಭಾವನೆಗಳನ್ನೇ ನಾನು Inner net ಎಂದು ಈಗಾಗಲೇ ಉಲ್ಲೇಖಿಸಿದ್ದೇನೆ. ಪ್ರಪಂಚವನ್ನು ಹತ್ತಿರ ತರಲು ಮತ್ತು ಕಾರ್ಯಗಳ ವೇಗಕ್ಕೆ ವ್ಯವಹಾರದಲ್ಲಿ Internet ಬೇಕೇ ಬೇಕು. ಆದರೆ ಅದು Inner net ನ ಮೇಲೆ ಧಾಳಿ ಮಾಡದಂತೆ, ಎಲ್ಲರೊಳಗೊಂದಾಗಿ ಬಾಳಲು ಅಡ್ಡಿಯಾಗದಂತೆ ಎಚ್ಚರವೂ ಬೇಕಲ್ಲವೇ?
ನಮಸ್ಕಾರ...
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** Ads on article

Advertise in articles 1

advertising articles 2

Advertise under the article