ಹಕ್ಕಿ ಕಥೆ : ಸಂಚಿಕೆ - 131
Wednesday, December 27, 2023
Edit
ಹಕ್ಕಿ ಕಥೆ : ಸಂಚಿಕೆ - 131
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಈ ವಾರದ ಒಗಟು ಹೀಗಿದೆ
ನೋಡಲು ನಾನು ಮಣ್ಣಿನ ಬಣ್ಣ
ಧ್ವನಿಯು ನಕ್ಕಂತೆ ಕೇಳುವುದಣ್ಣ
ಪುಟ್ಟ ಕಾಲಿನಲಿ ಪುಟಪುಟ ನಡೆವೆ
ಒಣಭೂಮಿಯಲಿ ಸುಲಭದಿ ಸಿಗುವೆ
ಕಾಳು ಕಡ್ಡಿಗಳೆ ನನ್ನ ಆಹಾರ
ಹೇಳಬಲ್ಲಿರಾ ನಾನ್ಯಾವ ಹಕ್ಕಿ ?
ಕಳೆದ ವಾರ ತರಬೇತಿಯಲ್ಲಿ ಭಾಗವಹಿಸಲು ಕಲಬುರಗಿಗೆ ಹೋಗಿದ್ದೆ. ಅಲ್ಲಿನ ತರಬೇತಿ ಕಟ್ಟಡದ ಮೂಲೆಯೊಂದರಲ್ಲಿ ಕಂದು ಬಣ್ಣದ ಪುಟಾಣಿ ಹಕ್ಕಿಯೊಂದು ಪಕ್ಕನೆ ಕಾಣಿಸಿತು. ಅರೆ ಇದು ಇಲ್ಲೇನು ಮಾಡುತ್ತಿದೆ ಎಂದು ನಿಧಾನವಾಗಿ ಗಮನಿಸಿದಾಗ ಹಕ್ಕಿ ಗೂಡು ಮಾಡಿಕೊಂಡಿತ್ತು. ಮೊಟ್ಟೆಗಳಿಗೆ ಕಾವು ಕೊಡುತ್ತ ಕುಳಿತಿತ್ತು. ಸರಿಯಾಗಿ ಗಮನಿಸಿದಾಗ ಇದು ಪಾರಿವಾಳದ ಜಾತಿಗೆ ಸೇರಿದ ಅಕ್ಕಿ ಅನ್ನೋದು ತಿಳಿಯಿತು. ಮರುದಿನ ಬೆಳಿಗ್ಗೆ ಎದ್ದು ವಾಕಿಂಗ್ ಹೋಗೋಣ ಅಂತ ಹೊರಟು ಗೇಟ್ ಇಂದ ಆಚೆ ಬರುತ್ತಿದ್ದಂತೆ ಯಾರೋ ಜೋರಾಗಿ ನಕ್ಕಂತೆ ಶಬ್ದವಾಯಿತು.
ಓ… ಹೊಹೊ ಹೊಹೊ… ಓ… ಹೊಹೊ ಹೊಹೊ… ಎಂದು ಜೋರಾಗಿ ನಮ್ಮನ್ನು ನೋಡಿ ನಕ್ಕಂತೆ ಕೇಳಿಸಿತು. ಯಾರಿರಬಹುದು ಎಂದು ಸುತ್ತಮುತ್ತಲು ಹುಡುಕಿದರೆ ಬೇರೆ ಯಾರೂ ಕಾಣಲಿಲ್ಲ. ನಮ್ಮಲ್ಲಿ ಯಾರೂ ಆ ಶಬ್ದ ಮಾಡಿದ್ದಲ್ಲ ಅನ್ನೋದು ಖಾತ್ರಿ ಆಯ್ತು. ಬೇರೆ ಯಾರಿರಬಹುದು ಎಂದು ಹುಡುಕುತ್ತಿರುವಾಗಲೇ ಮತ್ತೆ ಅದೇ ಶಬ್ದ! ಮೇಲೆ ತಲೆ ಎತ್ತಿ ನೋಡಿದರೆ ವಿದ್ಯುತ್ ತಂತಿ ಮೇಲೆ ಹಿಂದಿನ ದಿನ ನೋಡಿದ ಹಕ್ಕಿ ಕುಳಿತುಕೊಂಡಿತ್ತು. ನಮ್ಮನ್ನು ನೋಡಿ ಮತ್ತೆ ಅದೇ ರೀತಿ ಕೂಗಿತು. ಓಹೋ ಇದು ಈ ಹಕ್ಕಿಯ ಕೂಗು ಅಂತ ನಮಗೂ ಸ್ಪಷ್ಟವಾಗಿ ತಿಳಿಯಿತು. ಸ್ವಲ್ಪ ಹೊತ್ತಿನಲ್ಲಿ ಆ ಹಕ್ಕಿ ಹಾರಿ ಅಲ್ಲೇ ಇದ್ದ ಒಣ ಭೂಮಿಯಲ್ಲಿ ಹೋಗಿ ಕುಳಿತುಕೊಂಡಿತು. ಆ ಮಣ್ಣಿನ ಬಣ್ಣ ಹಕ್ಕಿಯ ಬಣ್ಣ ಎರಡು ಒಂದೇ ರೀತಿ ಇತ್ತು. ಹಕ್ಕಿ ಓಡಾಡದೆ ಸುಮ್ಮನೆ ಕುಳಿತರೆ ಅಲ್ಲೊಂದು ಹಕ್ಕಿ ಇರಬಹುದು ಎಂದು ಹೇಳುವುದೇ ಸಾಧ್ಯವಿಲ್ಲ.
ಹಕ್ಕಿಗಳನ್ನು ಗುರುತಿಸಲು Merlin ಎಂಬ ಹೆಸರಿನ app ಇದೆ. ಅದರಲ್ಲಿ ಹಕ್ಕಿಯ ಕೂಗನ್ನು ರೆಕಾರ್ಡ್ ಮಾಡಿ ಕೇಳಿದರೆ ಹಕ್ಕಿಯನ್ನು ಗುರುತಿಸಿ ಇದರ ಹೆಸರು ಹೇಳಿತು. ಮನುಷ್ಯರು ನಕ್ಕಂತೆ ಕೇಳುವ ಧ್ವನಿಯ ಕಾರಣದಿಂದ ಇದರ ಹೆಸರು Laughing Dove. ಪಾರಿವಾಳಗಳಂತೆ ವರ್ಷದ ಯಾವ ಕಾಲದಲ್ಲಾದರೂ ಮರದ ಮೇಲೆ ಅಥವಾ ಕಟ್ಟಡಗಳಲ್ಲಿ ಕಡ್ಡಿಗಳನ್ನು ಜೋಡಿಸಿ ಗೂಡು ಮಾಡುತ್ತವೆ. ಗಂಡು ಮತ್ತು ಹೆಣ್ಣು ಹಕ್ಕಿಗಳೆರಡೂ ನೋಡಲು ಒಂದೇ ರೀತಿ ಇರುತ್ತವೆ. ನೆಲದ ಮೇಲೆ ಬಿದ್ದಿರುವ ಕಾಳು ಮತ್ತು ಬೀಜಗಳೇ ಇದರ ಮುಖ್ಯ ಆಹಾರ. ಹೊಲಗಳಲ್ಲಿ ರಸ್ತೆ ಬದಿಗಳಲ್ಲಿ ಎಲ್ಲಿ ಧಾನ್ಯಗಳು ಸಿಗಬಹುದೋ ಅಲ್ಲೆಲ್ಲ ತನ್ನ ಪುಟಾಣಿ ಕಾಲುಗಳ ಮೇಲೆ ನಡೆದುಕೊಂಡು ಓಡಾಡುತ್ತವೆ. ಅಪಾಯ ಅನಿಸಿದರೆ ಹಾರಿ ಎತ್ತರದ ಜಾಗದಲ್ಲಿ ಕುಳಿತುಕೊಳ್ಳುತ್ತವೆ. ಹಿಮಾಲಯ ಹಾಗೂ ಪೂರ್ವದ ರಾಜ್ಯಗಳನ್ನು ಹೊರತುಪಡಿಸಿ ಭಾರತದ ಹೆಚ್ಚಿನ ಕಡೆ ಕಾಣಸಿಗುತ್ತದೆ. ನಿಮ್ಮ ಆಸುಪಾಸಿನಲ್ಲೂ ಈ ಹಕ್ಕಿ ಇರಬಹುದು. ನಿಮ್ಮೂರಲ್ಲಿ ಈ ಹಕ್ಕಿಗೆ ಏನಂತಾರೆ?
ಇಂಗ್ಲೀಷ್ ಹೆಸರು: Laughing Dove
ವೈಜ್ಞಾನಿಕ ಹೆಸರು: Stigmatopelia senegalensis
ಚಿತ್ರ : ಅರವಿಂದ ಕುಡ್ಲ
ಮುಂದಿನ ವಾರ ಹೊಸತೊಂದು ಹಕ್ಕಿ ಕಥೆ ಮತ್ತು ಒಗಟಿನೊಂದಿಗೆ ಮತ್ತೆ ಭೇಟಿ ಮಾಡೋಣ.
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************