-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 5

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 5

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 5
ಲೇಖಕರು : ದಿವಾಕರ ಶೆಟ್ಟಿ ಎಚ್
ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
              

     ಪ್ರೀತಿಯ ಮಕ್ಕಳೇ.... ಕಳೆದ ಸಂಚಿಕೆಯಲ್ಲಿ ಜೈವಿಕ ಮತ್ತು ಅಜೈವಿಕ ಪ್ರಪಂಚ ಮತ್ತು ಅವುಗಳ ನಡುವಿನ ಕೊಂಡಿಯಾದ ವೈರಸ್‌ಗಳ ಬಗ್ಗೆ ತಿಳಿದೆವು. ಇದು ಅಜೈವಿಕ ಪ್ರಪಂಚ ಜೈವಿಕವಾಯಿತು ಎಂಬ ಬಗ್ಗೆ ಅರಿವು ಮೂಡಿರಬಹುದು. ಸರಳವಾದ ವೈರಸ್‌ಗಳಿಂದ ವಿಕಾಸದ ಉತ್ತುಂಗದಲ್ಲಿರುವ (culmination) ಮಾನವನ ವರೆಗೆ ಕ್ರಮಿಸಿದ್ದೇವೆ. ಮಾನವ ತನ್ನ ಬುದ್ಧಿಮತ್ತೆ, ವಿಚಾರಶಕ್ತಿ, ಆಯುಧ ಹಿಡಿಯವ ಮತ್ತು ಸಂವಹನ ಸಾಮರ್ಥ್ಯದಿಂದಾಗಿ ಉಳಿದ ಪ್ರಾಣಿಗಳ ಮೇಲೆ ಮತ್ತು ಜೀವ ಜಗತ್ತಿನ ಮೇಲೆ ಪಾರಮ್ಯ ಮೆರೆದಿದ್ದಾನೆ. ಮನುಷ್ಯನ ಈ ಎಲ್ಲಾ ಸಾಮರ್ಥ್ಯ ಆತನಿಗೆ ಸಿದ್ದಿಸಿರುವುದು ಹೇಗೆ ಎಂದು ನೋಡೋಣ. 

      ಪ್ರಾಣಿಗಳು ನಡೆದಾಡುವುದನ್ನು ನೋಡಿದ್ದೀರಲ್ಲವೇ...? ಎರೆಹುಳು ಹಾವುಗಳು ನೆಲದ ಮೇಲೆ ತೆವಳುತ್ತವೆ. (ಇವುಗಳ ಚಲನೆ ಒಂದೇ ರೀತಿ ಕಂಡರೂ ಚಲನೆಯ ರೀತಿ ಬೇರೆ ಬೇರೆ ನೆನಪಿರಲಿ) ಜಿಗಣೆಗಳು ಗೇಣು ಹಾಕಿದ ಹಾಗೆ ಚಲಿಸುತ್ತವೆ ಉಳಿದವು ಚತುಷ್ಪಾದಿಗಳು ಅಥವಾ ಬಹುಪಾದಿಗಳು. ಮನುಷ್ಯನ ಹತ್ತಿರದ ಸಂಬಂಧಿಗಳಾದ ಮಂಗ ಚಿಂಪಾಂಜಿಗಳು ಎರಡು ಕಾಲಿನ ಮೇಲೆ ನಡೆಯಬಲ್ಲವಾದರೂ ನಾಲ್ಕು ಕಾಲುಗಳಲ್ಲೇ ಆರಾಮದಾಯಕವಾಗಿರುತ್ತದೆ. ಆದರೆ ಮಾನವ ಹಾಗಲ್ಲ. ಆತ ದ್ವಿಪಾದಿ (bipedal). ನಡೆಯಲು ಹಿಂದಿನ ಎರಡು ಕಾಲುಗಳನ್ನು ಮಾತ್ರ ಬಳಸುವುದರಿಂದ ಮುಂದಿನ ಎರಡು ಕಾಲುಗಳು ಹೆಚ್ಚುವರಿ ಕೆಲಸಕ್ಕೆ ಎಂದರೆ ಆಯುಧಗಳನ್ನು ಬಳಸಲು ಉಪಯೋಗಿಸತೊಡಗಿದ. ಇನ್ನು ಮಾನವನ ಕೈ (ಮುಂದಿನ ಕಾಲುಗಳು) ಬೆರಳುಗಳನ್ನು ಗಮನಿಸಿ. ಎಲ್ಲಾ ಬೆರಳುಗಳು ಒಂದು ನೇರದಲ್ಲಿದ್ದರೆ ಹೆಬ್ಬೆರಳು ವಿರುದ್ದ ನೇರದಲ್ಲಿದೆ (opposable digit). ಇದೇ ಹೆಬ್ಬೆರಳು ಪೆನ್ನನ್ನು ಆಯುಧಗಳನ್ನು ಹಿಡಿಯುವ ಸಾಮರ್ಥ್ಯ ನೀಡಿರುವುದು. ಹೆಬ್ಬೆರಳನ್ನು ಬಳಸದೇ ಬರೆಯಲು ಸಾಧ್ಯವೇ ನೋಡಿ. ಇಷ್ಟು ಮಾತ್ರವಲ್ಲ ಹೆಬ್ಬೆರಳಿನ ತುದಿಯಿಂದ ಎಲ್ಲಾ ಬೆರಳುಗಳ ಬುಡವನ್ನು ಮುಟ್ಟಬಲ್ಲ ಜೀವಿಯೆಂದರೆ ಮಾನವ ಮಾತ್ರ. 

       ಈ ದ್ವಿಪಾದಿತ್ವ ಮನುಷ್ಯನ ಎತ್ತರವನ್ನು ಹೆಚ್ಚಿಸಿರುವುದರಿಂದ ಆತ ಹೆಚ್ಚು ದೂರ ನೋಡುವ ಸಾಮರ್ಥ್ಯ ನೀಡಿದೆ. ಸಾಮಾನ್ಯವಾಗಿ ಪ್ರಾಣಿಗಳ ಕಣ್ಣುಗಳು ತಲೆಯ ಇಕ್ಕೆಲದಲ್ಲಿವೆ. ಇದು ಏಕ ಕಾಲದಲ್ಲಿ ಹೆಚ್ಚು ವಿಸ್ತಾರವಾದ ಪ್ರದೇಶವನ್ನು ನೋಡಲು ಸಹಾಯ ಮಾಡುತ್ತದೆ. ಓತಿಕ್ಯಾತ (garden lizard) 270° ಗಳಷ್ಟು ನೋಡಬಲ್ಲುದು ಎಂಬುದು ನಿಮಗೆ ತಿಳಿದಿರಲಿ. ಈ ಪ್ರಾಣಿಗಳು ಒಂದು ವಸ್ತುವನ್ನು ಒಂದು ಕಣ್ಣಿನಿಂದ ಮಾತ್ರ ನೋಡಬಲ್ಲವು. ಈ ರೀತಿಯ ನೋಟವನ್ನು ಏಕ ಅಕ್ಷಿ ನೋಟ ( monocular vision) ಎನ್ನುತ್ತೇವೆ. ಕಾಗೆಯನ್ನು ಒಕ್ಕಣ್ಣ ಎಂದು ಕರೆಯುವುದನ್ನು ಕೇಳಿದ್ದೀರಿ ತಾನೇ. ಇದೇ ಏಕ ಅಕ್ಷಿ ನೋಟ. ಈದರಲ್ಲಿ ದೃಷ್ಟಿ ತೀಕ್ಷ್ಣವಾಗಿರುತ್ತದೆ ಆದರೆ ದೂರ ತಿಳಿಯುವುದಿಲ್ಲ. ಅದೇ ಮನುಷ್ಯನ ಕಣ್ಣು ಹುಲಿಯ ಕಣ್ಣುಗಳ ಹಾಗೆ ಮುಖದ ಮುಂಭಾಗದಲ್ಲಿವೆ. ಎರಡೂ ಕಣ್ಣುಗಳು ಒಂದು ವಸ್ತುವನ್ನು ಏಕ ಕಾಲದಲ್ಲಿ ನೋಡಿ ಮೆದುಳಿನಲ್ಲಿ ಒಂದೇ ಪ್ರತಿಬಿಂಬವನ್ನು ಮೂಡಿಸುತ್ತವೆ. ಇದು ದ್ವಿ ಅಕ್ಷಿ ದೃಷ್ಟಿ (binocular vision). ಇದರಲ್ಲಿ ವಸ್ತುವಿನ ದೂರ ನಿಖರವಾಗಿರುತ್ತದೆ. ಅಂದರೆ ಎರಡು ಆಯಾಮಗಳ ಪ್ರತಿಬಿಂಬ (two dimensional). ಇದರಿಂದಾಗಿ ಮನುಷ್ಯ ನಿಖರ ಗುರಿ ಹಿಡಿಯಬಲ್ಲ. ಇದನ್ನು ನಾವು ರಾತ್ರಿ ವಾಹನ ಚಾಲನೆಯ ವೇಳೆ ಬಳಸುತ್ತೇವೆ. ನಮ್ಮ ವಾಹನದ ಬೆಳಕನ್ನು dim dip ಮಾಡಿದಾಗ ಎದುರು ಬದಿಯಿಂದ ಬರುವ ಸವಾರರಿಗೆ ನಮ್ಮ ವಾಹನದ ದೂರ ಮತ್ತು ವೇಗ ಎರಡೂ ತಿಳಿಯುತ್ತದೆ. ಆದ್ದರಿಂದ ಮಕ್ಕಳೇ ನೀವು 18 ತುಂಬಿ ವಾಹನ ಚಲಾಯಿಸಲು ಆರಂಭಿಸಿದ ಮೇಲೆ ತಪ್ಪದೇ ಡಿಪ್ಪರ್ ಬಳಸಲೇಬೇಕು ನೆನಪಿರಲಿ. ಆದರೆ ಮನುಷ್ಯನ ಕಣ್ಣುಗಳ ನೋಟ ಹದ್ದಿನ ಕಣ್ಣಿನಷ್ಟು ತೀಕ್ಷ್ಣವಲ್ಲ.

      ಇನ್ನೊಂದು ಎಂದರೆ ಮಾನವನ ತೀಕ್ಷ್ಣವಾದ ಬುದ್ದಿ ಮತ್ತು ವಿಚಾರಶಕ್ತಿ. ಇದಕ್ಕೆ ಕಾರಣ ಮುಮ್ಮೆದುಳಿನ ತೊಗಟೆಯಲ್ಲಿನ (cortex) ಹೆಚ್ಚಿನ ಸಂಖ್ಯೆಯ ನರಕೋಶಗಳು (neuron) ಎಂದು ವಿಜ್ಞಾನಿಗಳು ಹೇಳುತ್ತಾರೆ. ಮನುಷ್ಯ ತನ್ನ ವಿಚಾರಶಕ್ತಿಯ ಕಾರಣದಿಂದ ಪರಿಸ್ಥಿತಿಯನ್ನು ತನ್ನ ಅವಕಾಶಕ್ಕೆ ಬಳಸುವುದರಲ್ಲಿ ನಿಸ್ಸೀಮನಾಗಿದ್ದಾನೆ. ಪ್ರಾಣಿಗಳು ಪರಿಸರದ ಬದಲಾವಣೆಗೆ ತಮ್ಮ ದೇಹವನ್ನು ಮಾರ್ಪಡಿಸಿಕೊಳ್ಳುತ್ತವೆ. ಕುರಿ, ಹಿಮಕರಡಿ ಮೊದಲಾದವು ಚಳಿಗಾಲದಲ್ಲಿ ತಮ್ಮ ಕೂದಲಿನ ಬೆಳವಣಿಗೆಯ ವೇಗ ಹೆಚ್ಚಿಸಿಕೊಂಡು ಚಳಿಯಿಂದ ರಕ್ಷಿಸಿಕೊಳ್ಳುತ್ತವೆ. ಆದರೆ ನೀವು ಸ್ವೆಟರ್ ಅನ್ನೋ ಚರ್ಮದ ಜಾಕೆಟನ್ನೋ ಬಳಸಿ ಬಿಸಿಲೇರುತ್ತಿದ್ದ ಹಾಗೆ ಕಳಚಿಡುತ್ತೀರಿ. ಇದೂ ಮನವನ ಹಿರಿಮೆಯೇ. ಮಾನವನ ಸಾಂಸ್ಕೃತಿಕ ಯೋಚನೆಗಳು (cultural thinking) ಕೂಡಾ ಆತನ ಅಸ್ಮಿತೆಯೇ. ಇದರಿಂದಾಗಿ ಸಮಾಜದಲ್ಲಿ ಮೌಲ್ಯಗಳು ರೂಪುಗೊಂಡಿವೆ. 

     ಇನ್ನೊಂದು ವೈಶಿಷ್ಟ್ಯ ಎಂದರೆ ಭಾಷೆಯ ಮೂಲಕ ಸಂವಹನ. ಉಳಿದ ಪ್ರಾಣಿಗಳೂ ಸಂವಹನ ನಡೆಸುತ್ತವೆ. ಆದರೆ ಅವುಗಳ ಸಂವಹನ ಸೀಮಿತವಾದದ್ದು. ಮಾನವನ ಮಾತನಾಡುವ ಸಾಮರ್ಥ್ಯ ಆತನ ತುಟಿಗಳ ಚಲನೆಯಿಂದ ಬಂದಿದೆಯಂತೆ. ಇಂತಹ ತುಟಿಗಳ ಚಲನೆ ಹೊಂದಿರುವ ಇನ್ನೊಂದು ಜೀವಿ ಎಂದರೆ ಡಾಲ್ಫಿನ್ ಗಳು.

      ಮಾನವ ಎಷ್ಟೊಂದು ಭಿನ್ನ ಎಂದು ನೋಡಿದಿರಾ? ಇದನ್ನು ಮನುಕುಲದ ಉದ್ಧಾರಕ್ಕೆ ಮಾತ್ರ ಬಳಸುವಂತಾದರೆ ಎಷ್ಟು ಚಂದ ಅಲ್ಲವೇ? ಅದಕ್ಕಾಗಿಯೇ ದಾಸರು ಹಾಡಿದ್ದು.... "ಮಾನವ ಜನ್ಮ ದೊಡ್ಡದು ಅದ ಹಾಳು ಮಾಡಲು ಬೇಡಿ ಹುಚ್ಚಪ್ಪಗಳಿರಾ" ಎಂದು ಹಾಡಿರುವುದು.
.................................... ದಿವಾಕರ ಶೆಟ್ಟಿ ಎಚ್
ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 


Ads on article

Advertise in articles 1

advertising articles 2

Advertise under the article