ಸ್ಫೂರ್ತಿಯ ಮಾತುಗಳು : ಸಂಚಿಕೆ - 92
Monday, December 4, 2023
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 92
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
“ಕುಂಬಾರನಿಗೆ ವರ್ಷ, ದೊಣ್ಣೆಗೆ ನಿಮಿಷ,” ಎಂಬ ಪ್ರಬುದ್ಧ ಮಾತಿದೆ. ಕುಂಬಾರನು ನಿರ್ಮಾಣದ ಪ್ರತೀಕ ವಾದರೆ ದೊಣ್ಣೆ ನಿರ್ನಾಮದ ಪ್ರತೀಕ. ನಿರ್ಮಾಣದಲ್ಲಿ ಮಾನ ಇದೆ. ಆದರೆ ನಿರ್ನಾಮದಲ್ಲಿ ನಾಶದ ಸಂಕೇತ ಇದೆ. ಸೀತೆಯನ್ನು ರಾವಣನ ಸೆರೆಯಿಂದ ಬಿಡುಗಡೆಗೊಳಿಸಲು ರಾಮ ಸೇತು ನಿರ್ಮಿಸಲು ಶ್ರೀರಾಮಚಂದ್ರನಿಗೆ ಪುಟ್ಟ ಅಳಿಲಿನಿಂದ ತೊಡಗಿ ಕಪಿ ಜಂಬೂಕಗಳಾದಿಯಾಗಿ ಅಸಂಖ್ಯ ಜೀವಗಳು ನೆರವಾದುವು. ಅದೇ ರೀತಿ ಎಲ್ಲ ನಿರ್ಮಾಣಗಳಲ್ಲೂ ಅಸಂಖ್ಯ ಜನರ ದೀರ್ಘಾವಧಿ ಪರಿಶ್ರಮ, ತ್ಯಾಗಗಳು, ಅಪಾರ ಪ್ರಾಕೃತಿಕ ಸಂಪನ್ಮೂಲಗಳು ಒಂದುಗೂಡಿರುತ್ತವೆ. ಆದರೆ ನಿರ್ನಾಮಕ್ಕೆ ಒಂದು ವಿಕೃತ ಮನಸ್ಸು ಮತ್ತು ಒಂದು ಬೆಂಕಿಯ ಕಿಡಿ ಯಾ ಕಡ್ಡಿ ಇಷ್ಟೇ ಸಾಕು. ಎಲ್ಲ ಶ್ರಮ ಮತ್ತು ಸಂಪನ್ಮೂಲಗಳು ಕ್ಷಣ ಮಾತ್ರದಲ್ಲಿ ಧ್ವಂಸಗೊಳ್ಳುತ್ತವೆ. ರಾಷ್ಟ್ರ ನಿರ್ಮಾಣದಲ್ಲಿ ಸಹಸ್ರಾರು ವರ್ಷಗಳಿಂದ ಮಾನವರ ಬೆವರು, ಜೀವಿಗಳ ನೆರವು, ಪ್ರಾಕೃತಿಕ ಸಂಪನ್ಮೂಲಗಳ ವಿನಿಯೋಗವಾಗಿದೆ. ಆದರೆ ಇವೆಲ್ಲವೂ ಒಂದು ವಿಕಾರ ಮನಸ್ಸಿಗೆ ಬಲಿಯಾಗುತ್ತದೆಯೆಂಬುದು ಎಷ್ಟೊಂದು ಭಯಾನಕವಲ್ಲವೇ.? ಹಿರೋಶಿಮಾ ನಾಗಸಾಕಿಗಳ ಧ್ವಂಸದ ಹಿಂದೆ ಒಂದು ವಿಕಾರ ಮನಸ್ಸು ಇದ್ದರೆ ಅದರ ಪುನರ್ನಿರ್ಮಾಣದಲ್ಲಿ ಕೊಟ್ಯಂತರ ಪರಿಶ್ರಮಿಗಳ ಜೋಡಣೆಯಿದೆಯೆಂಬುದು ಸತ್ಯವಲ್ಲವೇ?
ಒಂದು ಸೇತುವೆಯೋ, ಕಟ್ಟಡವೋ ನೂರಾರು ಜನರ ಪರಿಶ್ರಮದ ಫಲ. ಹಲವು ವರ್ಷ ಜನರು ಸಾಂಘಿಕವಾಗಿ ಬೆವರಿಳಿಸಿದ ಕಾರಣದಿಂದ ಅವು ನಿರ್ಮಾಣಗೊಳ್ಳುತ್ತವೆ. ಕೋಟ್ಯಾಂತರ ರೂಪಾಯಿ ಹಣ ವ್ಯಯಗೊಂಡಿರುತ್ತದೆ. ಆದರೆ ಅವುಗಳ ನಾಶಕ್ಕೆ ಕೇವಲ ಒಬ್ಬ ವಿಕಲ ಮತಿಯ ಅಲ್ಪ ಸಮಯದ ಪರಿಶ್ರಮ ರಹಿತ ಪ್ರಕ್ರಿಯೆ ಸಾಕಾಗುತ್ತದೆ. ಒಂದು ಪುಟ್ಟ ಕಿಡಿಯೋ, ಪುಟ್ಟ ಸ್ಫೋಟಕವೋ ಬಹಳ ಬೇಗ ಎಲ್ಲವನ್ನೂ ನಿರ್ನಾಮ ಮಾಡಿ ಬಿಡುತ್ತದೆ. ಇದರಿಂದ ಆಗುವ ನಷ್ಟ ಅಪಾರ. ಧ್ವಂಸಗೊಳಿಸಿರುವುದನ್ನು ಮರುಸ್ಥಾಪನೆ ಮಾಡುವುದು ಅಪವ್ಯಯಕ್ಕೆ ಸಮಾನ. ಮರುಸ್ಥಾಪನೆ ಮಾಡುವುದೆಂದರೆ ಹೊಸತೊಂದರ ನಿರ್ಮಾಣ ಕಾರ್ಯದ ಸ್ಥಾಗಿತ್ಯವೂ ಹೌದು.
ಪ್ರತಿಭಟನೆಗಾಗಿ ಮಾಡುವ ಬಂದ್, ಮುಷ್ಕರ, ಹರತಾಳ, ಮೆರವಣಿಗೆಯಲ್ಲಿ ಉಂಟಾಗುವ ಅಶಾಂತತೆ ಇವೆಲ್ಲವೂ ನಿರ್ನಾಮಗಳಿಗೆ ಕಾರಣವಾಗುವುದನ್ನು ನೋಡುತ್ತೇವೆ. ಕಲ್ಲಸೆತ, ಹೊಡದಾಟ, ಬೆಂಕಿ ಹಚ್ಚುವುದು, ಕೊಲೆ, ಸುಲಿಗೆ, ರಸ್ತೆ ಅಗೆಯುವುದು, ಅವಾಚ್ಯ ಪದ ಯಾ ಮಾತುಗಳ ಬಳಕೆ ಇಂತಹ ವಿಧ್ವಂಸಕ ಕೃತ್ಯಗಳು ನಾಶಮೂಲವೇ ಹೊರತು ನಿರ್ಮಾಣಕ್ಕೆ ಕಾರಣ ವಾಗುವುದಿಲ್ಲ.
ಮನುಷ್ಯನು ರಚನಾತ್ಕತೆಗೆ ತನ್ನನ್ನು ಮುಡುಪಾಗಿಡಬೇಕು. ನಮ್ಮ ಹುಟ್ಟು ಈ ಭೂಮಿಯಲ್ಲಿ ನಾಶದ ಕಾರ್ಯಗಳನ್ನು ಮಾಡುವ ಉದ್ದೇಶಕ್ಕಾಗಿ ಆಗಿರುವುದಿಲ್ಲ, ಪ್ರತಿಯೊಂದು ಜೀವಿಗೂ ಬದುಕುವ ಹಕ್ಕನ್ನು ನೀಡುವ, ಪ್ರೀತಿಯನ್ನು ಭರಪೂರ ನೀಡುವ, ಯಾವುದೇ ಭಿನ್ನತೆಯಿರದೆ ಎಲ್ಲರೊಳಗೊಂದಾಗಿ ಬಾಳುವ ನೈಜ ಮಾನವತೆ ಮೆರೆದರೆ ನಮ್ಮ ಜನ್ಮ ಸಾರ್ಥಕ. ಇದು ಮನುಕುಲ ನಿರ್ಮಾಣದ ರಹದಾರಿಯೂ ಹೌದು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
********************************************