ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 38
Saturday, December 9, 2023
Edit
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 38
ಲೇಖಕರು : ಸುರೇಖಾ ಯಾಳವಾರ
ತಾಲೂಕು ಸಮನ್ವಯ ಶೈಕ್ಷಣಿಕ
ಸಂಪನ್ಮೂಲ ಶಿಕ್ಷಕಿ
ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 94480 40225
ಶಾಲೆಯ ಎಲ್ಲಾ ಮಕ್ಕಳ ಬೇಡಿಕೆಗೆ ಮಣಿದು ಮುಖ್ಯ ಶಿಕ್ಷಕಿ ಪ್ರತಿ ಗುರುವಾರ ಬಣ್ಣದ ಉಡುಪು ಧರಿಸಬಹುದು ಎಂದು ಹೇಳುತ್ತಾ ಉಡುಪುಗಳು ಅಸಭ್ಯ ವಾಗಿರಬಾರದು ಎಂದು ತಾಕೀತು ಕೂಡ ಮಾಡಿದ್ದರು. ಒಂದರಿಂದ ಎಂಟನೇ ತರಗತಿಯವರೆಗಿನ ಈ ಶಾಲೆಯಲ್ಲಿ ಆರನೇ ತರಗತಿ ವಿದ್ಯಾರ್ಥಿಗಳು ಮಾತ್ರ ಶಾಲೆಯ ಕೇಂದ್ರ ಬಿಂದುವಾಗಿದ್ದರು. ಪಾಠ ಹಾಗೂ ಪಾಠೇತರ ಚಟುವಟಿಕೆಗಳಲ್ಲಿ ಮುಂದಿದ್ದರು ಹಾಗೂ ಪೋಕರಿ ಮಾಡುವುದರಲ್ಲಿ ಕೂಡ ಅತಿ ಜಾಣರಾಗಿದ್ದರು.
ಶೃಂಗಾರ ಪ್ರಿಯೆ 6ನೇ ತರಗತಿ ತನ್ಮಯ ಗುರುವಾರ ಬರುವುದನ್ನೇ ಕಾಯುತ್ತಿದ್ದಳು. ಬಹುಶಃ ನಸುಕಿನಲ್ಲಿ ಎದ್ದು ಶೃಂಗಾರ ಆರಂಭಿಸುತ್ತಿದ್ದಳು. ಏನೋ ಶಾಲೆಯ ಆವರಣಕ್ಕೆ ಬರುವಾಗಲೇ ಅವಳ ಸುತ್ತಲೂ ಒಂದು ಗ್ಯಾಂಗ್. ತಲೆಯಿಂದ ಪಾದದವರೆಗೆ ಶೃಂಗಾರ. ನಾನು ಹೊಸದಾಗಿ ಹೋದ ಶಾಲೆ ಆದ ಕಾರಣ ಎಲ್ಲಾ ಮಕ್ಕಳನ್ನು ಗಮನಿಸುತ್ತಿದ್ದೆ ಹಾಗೂ ಗಂಭೀರವಾಗಿ ವ್ಯವಹರಿಸುತ್ತಿದ್ದೆ. ಆಕೆಯ ಎಲ್ಲ ಚಟುವಟಿಕೆಗಳು ಕೊಂಚ ಅತಿ ಅನಿಸುತ್ತಿದ್ದು ದಿನಗಳೆದಂತೆ ತನ್ಮಯಳ ದೂರುಗಳು ಹೆಚ್ಚಾದುವು. ಶಿಕ್ಷಕರು ಆಕೆಯ ಬಗೆಗೆ ಗುಸು-ಗುಸು ಮಾತನಾಡುವುದು ಬೇರೆ ಮಕ್ಕಳಿಂದ ಆಕೆಯ ಬಗ್ಗೆ ವಿಷಯ ತಿಳಿದುಕೊಳ್ಳುವುದನ್ನು ನೋಡಿ ನನಗೂ ಕುತೂಹಲ ಅನಿಸಿದರೂ ಯಾರ ಬಳಿಯೂ ಆಕೆಯ ಬಗ್ಗೆ ವಿಚಾರಿಸಲಿಲ್ಲ. ಈ ಗುರುವಾರ ಯಾವ ರೀತಿಯ ವಸ್ತ್ರ ಧರಿಸುತ್ತಾಳೆ ಎನ್ನುವ ಕುತೂಹಲ ಉಳಿದ ಮಕ್ಕಳಂತೆ ನನಗೂ ಇತ್ತು. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆನ್ನುವ ಸುಂದರ ರೂಪ. ವಯಸ್ಸು ಮೀರಿದ ಬೆಳವಣಿಗೆ ಕೂಡ. ಆದರೆ ಈ ದಿನ ತಡವಾಗಿ ತರಗತಿಗೆ ಓಡೋಡಿ ಬಂದು ಬೆವರು ಒರೆಸುತ್ತಿದ್ದಳು.
"ಯಾಕೆ ತಡವಾಯಿತು..?" ಎಂದು ಕೇಳಿದಾಗ "ಶಾಲೆ ಬಸ್ಸು ನಿಲ್ಲಿಸಲಿಲ್ಲ ಟೀಚರ್" ಎಂದಳು. "ಸರಕಾರಿ ಶಾಲೆಗೆ ಯಾವ ಬಸ್ಸು" ಎಂದು ಕೇಳಿದಾಗ "ಆಂಗ್ಲ ಮಾಧ್ಯಮ ಶಾಲಾ ಬಸ್ಸಿನಲ್ಲಿ ಬರುತ್ತಿದ್ದೆ ಈಗ ನಿಲ್ಲಿಸುವುದಿಲ್ಲ" ಎಂದು ಹೇಳಿದಳು. ಶನಿವಾರ ಮಧ್ಯಾಹ್ನ ಕೆಲಸ ಇದೆ ಎಂದು ನಾನು ಬರೆಯುತ್ತಾ ಕುಳಿತಾಗ ಮನೆಗೆ ಹೋಗದ ತನ್ಮಯ ನನ್ನ ಜೊತೆ ಕುಳಿತಳು. "ನೀನು ಮನೆಗೆ ಹೋಗು ಮನೆಯಲ್ಲಿ ಅಮ್ಮ ಬೈದಾರು" ಎಂದೆ. "ಪರವಾಗಿಲ್ಲ ಟೀಚರ್" ಎಂದಳು. ತಲೆಕೆಳಗೆ ಮಾಡಿ ಬರೆಯುತ್ತಾ ಇದ್ದ ನಾನು ಒಮ್ಮೆ ಆಕೆಯ ಮುಖ ನೋಡಿದೆ ನನ್ನನ್ನೇ ನೋಡುತ್ತಾ ಇದ್ದಳು. ನನಗೆ ಮುಜುಗರ ಅನಿಸಿತು. "ಏನೇ ತನ್ಮಯ ಹಾಗೆ ನೋಡ್ತಾ ಇದ್ದೀಯಾ" ಅಂದೆ. ನಕ್ಕಳು ಅಷ್ಟೇ. ಸದಾ ಕಾಲ ಹೊಸದನ್ನು ಬಯಸುವ ಆಕೆಯ ಸಾನಿಧ್ಯ ಮತ್ತು ಸಾಂಗತ್ಯ ಸಂತೋಷ ಕೊಡುವಂತಿತ್ತು. ಸಾಧಿಸುವ ಛಲ ಶಿಸ್ತು ಉತ್ಸಾಹಗಳು ಅತಿ ಅನಿಸುವಷ್ಟು ಇತ್ತು. ಆದರೂ ಎಲ್ಲರೊಂದಿಗೂ ಬಹುಬೇಗ ಆಪ್ತಳಾಗುತ್ತಿದ್ದ ತನ್ಮಯ ಎಲ್ಲರಿಂದಲೂ ಹೆಚ್ಚೇ ಪ್ರೀತಿಯನ್ನು ಅಪೇಕ್ಷಿಸುತ್ತಿದ್ದಳು. ನಾನು ಬರೆಯುತ್ತಾ ಆಕೆಯೊಂದಿಗೆ ಮಾತಿಗಿಳಿದೆ. "ನೀವು ಎಷ್ಟು ಮಕ್ಕಳು..? ಅಪ್ಪ ಅಮ್ಮ ಏನು ಮಾಡುತ್ತಾರೆ..? ಎಂದೆ. "ಅಣ್ಣ ಅಕ್ಕ ಅಪ್ಪ ಇದ್ದಾರೆ ಅಮ್ಮ ಇಲ್ಲ ಅಜ್ಜಿಯ ಮನೇಲಿದ್ದೇವೆ. ಅಕ್ಕನಿಗೆ ಮದುವೆ ಆಗಿದೆ ಟೀಚರ್" ಎಂದಳು. ಅಮ್ಮ ಇಲ್ಲಾಂದ್ರೆ ಆಕೆಯ ಕಡೆ ದೃಷ್ಟಿ ಹಾಯಿಸಿದಾಗ ಮೂಗು ಕೆನ್ನೆ ಕೆಂಪಗಾಗಿ ದುಃಖ ಉಮ್ಮಳಿಸಿ ನಿಶಬ್ದವಾಗಿ ಅಳುತ್ತಿದ್ದಳು. ಬರೆಯುವುದನ್ನು ನಿಲ್ಲಿಸಿ ಆಕೆಯ ಬಳಿ ಹೋದೆ. "ಯಾಕೆ... ಏನಾಯ್ತು?" ಎಂದಿದ್ದೇ ತಡ ನನ್ನನ್ನು ಗಟ್ಟಿಯಾಗಿ ಹಿಡಿದು ಜೋರಾಗಿ ಅಳಲು ಆರಂಭಿಸಿದಳು. ಅವಳ ದುಃಖ ಕೊಂಚ ಕಡಿಮೆ ಆಗಲಿ ಎಂದು ಸುಮ್ಮನೆ ಇದ್ದೆ. ಮತ್ತೆ ಕೇಳಿದೆ, "ಏನಾಯ್ತು ಹೇಳು..?" ಎಂದು. "ಶಾಲೆಯ ಬಸ್ಸಿನವರು ನನ್ನನ್ನು ಕರೆದುಕೊಂಡು ಬರುವುದಿಲ್ಲವಂತೆ" ಯಾಕೆ ಅಂದೆ... ನನ್ನ ಅಮ್ಮ ಸರಿ ಇಲ್ಲ ಅಂತೆ. ಅದಕ್ಕೆ ಬೇಡ ಅಂದ್ರು. ನಾನು ಕೇಳಿದೆ, "ಅಮ್ಮ ಹೇಗೆ ತೀರಿಕೊಂಡರು..?" ಎಂದಾಗ. "ಅಪ್ಪ ವಿದೇಶದಲ್ಲಿದ್ದ ಕಾರಣ ನಮ್ಮ ಕುಟುಂಬಕ್ಕೆ ಸಹಾಯ ಮಾಡುತ್ತಿದ್ದ ಅಂಕಲ್ ಅವರ ಅತಿ ಸಲುಗೆ ಅನುಮಾನಕ್ಕೆ ತಿರುಗಿ ಅಪಘಾತ ಮಾಡಿಸಿ ಅಮ್ಮನನ್ನು ಸಾಯಿಸಿದರು." ಎಂದಳು. "ಅದರಲ್ಲಿ ನಿನ್ನ ತಪ್ಪೇನಿದೆ..?" ಎಂದೆ. "ಗೊತ್ತಿಲ್ಲ ಟೀಚರ್" ಎಂದಳು. ಆ ದಿನ ಆಕೆಯನ್ನು ಸಮಾಧಾನಪಡಿಸಿ ಮನೆಗೆ ಕಳಿಸಿ ನಾನು ಮನೆಗೆ ಬಂದೆ.
ಆಕೆಯ ಮಾತು ವರ್ತನೆ ಶಿಕ್ಷಕರ ಕುಹಕದ ನುಡಿಗಳು ಒಂದೊಂದೇ ಯೋಚಿಸುತ್ತಾ ಹೋದಾಗ ಮನಸ್ಸಿಗೆ ತುಂಬಾ ನೋವಾಯಿತು. ತಂದೆ ತಾಯಿ ನಂತರ ಅವರ ಸ್ಥಾನವನ್ನು ತುಂಬಬೇಕಾದವರು ಶಿಕ್ಷಕರು ಎಂಬ ಭಾವನೆ ನನ್ನದು. ನಮ್ಮ ಮಾತುಗಳನ್ನು ಶಿರಸಾ ಪಾಲಿಸುವ ಹೇಳಿದಂತೆ ಕೇಳುವ ಅತ್ಯಂತ ಮುಗ್ಧರು. ಆದರೆ ತಂದೆ ತಾಯಿ ಮಾಡಿರುವ ತಪ್ಪಿನ ಹಣೆಪಟ್ಟಿಯನ್ನು ಮಕ್ಕಳಿಗೆ ಕಟ್ಟಿ ಹೀಯಾಳಿಸುವ ಅತಿ ಕೆಳಮಟ್ಟದ ಯೋಚನೆಯ ಜನರಿಗೆ ಏನು ಹೇಳಬೇಕು...? ಈ ನಡುವೆ ಆಕೆ 8ನೇ ತರಗತಿಗೆ ಬರುವಾಗ ನನಗೆ ಬೇರೆ ಕಡೆ ವರ್ಗಾವಣೆ ಆಯಿತು. ತನ್ಮಯ ಅತ್ಯಂತ ದುಃಖದಿಂದ ನನ್ನನ್ನು ಬೀಳ್ಕೊಟ್ಟಿದ್ದಳು. ಆಗಾಗ ಫೋನ್ ಮಾಡಿ ಮಾತನಾಡುತ್ತಿದ್ದಳು ನಾನು ಮಾತನಾಡುತ್ತಿದ್ದೆ.
ಒಂದು ದಿನ ಜೋರಾಗಿ ಅಳಲು ಶುರು ಮಾಡಿದಳು. "ಏನಾಯ್ತ..?" ಎಂದು ಕೇಳಿದಾಗ ನನಗೆ ಮದುವೆ ಟೀಚರ್ ಎಂದಳು. ಸಣ್ಣ ತರಗತಿಯಲ್ಲಿದ್ದ ಆಕೆಗೆ ಮದುವೆ ಎಂದಾಗ ದಿಗ್ಭ್ರಾಂತಳಾದೆ. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಹುಡುಗನಿಗೆ ಮದುವೆ ಮಾಡಿ ಕೊಟ್ಟು ಈಗ ಆಕೆಗೆ ಮೂರು ಮಕ್ಕಳು. ಪ್ರತಿ ಸಲ ಫೋನ್ ಬಂದಾಗಲೂ ನನಗೆ ಹತ್ತನೇ ತರಗತಿ ಪಾಸ್ ಮಾಡಬೇಕು ಟೀಚರ್ ಎಂದು ಹೇಳಿದಾಗ ನನಗೂ ಅತ್ಯಂತ ಬೇಸರವಾಗುತ್ತದೆ. ಜೀವನವನ್ನು ಸಂಭ್ರಮಿಸುವ ಈ ಗಳಿಗೆಯಲ್ಲಿ ಅತ್ತೆ ಮನೆಯಲ್ಲಿ ಮೂರು ಮಕ್ಕಳನ್ನು ಕಟ್ಟಿಕೊಂಡು ಉಸಿರಾಡಲು ಸಮಯ ಇಲ್ಲದಂತ ಪರಿಸ್ಥಿತಿಗೆ ಯಾರು ಕಾರಣರು...?
ತಾಲೂಕು ಸಮನ್ವಯ ಶೈಕ್ಷಣಿಕ
ಸಂಪನ್ಮೂಲ ಶಿಕ್ಷಕಿ
ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 94480 40225
*******************************************