-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 27

ನಿಷ್ಪಾಪಿ ಸಸ್ಯಗಳು : ಸಂಚಿಕೆ - 27

ನಿಷ್ಪಾಪಿ ಸಸ್ಯಗಳು : ಸಂಚಿಕೆ - 27
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

        
     ಪ್ರೀತಿಯ ಮಕ್ಕಳೇ, ಹೇಗಿದ್ದೀರಿ...?
ಕೆಲವೆಡೆ ವಾರ್ಷಿಕೋತ್ಸವ ಕೆಲವೆಡೆ ಶೈಕ್ಷಣಿಕ ಪ್ರವಾಸಗಳ ಕಲರವ ಈ ತಿಂಗಳುದ್ದಕ್ಕೂ ಸದ್ದು ಮಾಡುತ್ತಿರುತ್ತದೆ ಅಲ್ಲವೇ...? ನೀವೂ ಖುಷಿ ಖುಷಿಯಾಗಿ ಇವುಗಳಲ್ಲಿ ಪಾಲ್ಗೊಳ್ಳಲು ಬಯಸ್ತೀರಿ ಅಲ್ವಾ..
      ಸರಿ ಮಕ್ಕಳೇ, ಈ ಬಾರಿ ನಿಮ್ಗೆ ನಾನು ನೀವೆಲ್ಲೇ ಓಡಾಟ ನಡೆಸಿದರೂ ಕಣ್ಣಿಗೆ ಬೀಳುವ ಹೆತ್ತುತ್ತಿ ಎಂಬ ನಿಷ್ಪಾಪಿ ಗಿಡದ ಪರಿಚಯ ಮಾಡಿಸ್ತೇನೆ. 
      ಈ ಹೆತ್ತುತ್ತಿ ಗಿಡವನ್ನು ಬೆಣ್ಣೆ ಗರಗ, ಕಿಸಂಗಿ ಗಿಡ, ಚಿಟ್ಟು ಹರಳು ಎಂದೂ ಕರೆಯುತ್ತಾರೆ. ನಮ್ಮ ಆಡು ಭಾಷೆ ತುಳುವಿನಲ್ಲಿ ಕಡೀರ ಬೇರು ಎನ್ನುವರು.
      ಗದ್ದೆಗಳ ಅಂಚು, ರಸ್ತೆ ಬದಿ, ಇಳಿಜಾರು, ಬಯಲು ಪ್ರದೇಶ, ಪಾಳು ಬಿದ್ದ ಜಾಗ, ಮರಳು ಪ್ರದೇಶ, ಮುಳ್ಳು ಪೊದೆಗಳ ನಡುವೆ, ಅರಣ್ಯ ತೆರವುಗೊಳಿಸಿದಲ್ಲೆಲ್ಲ ಕಾಣಿಸಿಕೊಳ್ಳುವ ಹೆತ್ತುತ್ತಿ ಒಂದು ಕಳೆ ಸಸ್ಯವೆಂದು ಪರಿಗಣಿಸಲ್ಪಟ್ಟಿದೆ. ಎರಡು ಮೂರು ಅಡಿ ಬೆಳೆಯಬಹುದಾದ ಈ ಗಿಡ ಎರಡೂವರೆ ಸೆಂ.ಮೀ. ಉದ್ದದ ಗರಗಸದಂತೆ ಅಂಚಿರುವ ಪರ್ಯಾಯ ಎಲೆಗಳನ್ನು ಹೊಂದಿದೆ. ಇವುಗಳು ಹಸಿರು ಹುಲ್ಲು, ಮುಳ್ಳು ಗಿಡಕಂಟಿಗಳ ನಡುವೆ ಇದ್ದರೆ ಪರಿಚಯವೇ ತಿಳಿಯದು. ಆದರೆ ಸದಾ ಕಾಲ ಐದು ದಳಗಳ ವೃತ್ತಾಕಾರದ ಹಳದಿ ವರ್ಣದ ಹೂಗಳು ಕಾಣಸಿಗುತ್ತವೆ. ಈ ಹೂಗಳ ಬಣ್ಣ ನಮ್ಮನ್ನು ಕರೆದು ಮಾತನಾಡಿಸುತ್ತವೆ... ಅಸ್ತಿತ್ವ ಸಾರುತ್ತವೆ. ವಾರ್ಷಿಕ ಕೆಲವೊಮ್ಮೆ ದೀರ್ಘಕಾಲಿಕ ಸಸ್ಯವಾದ ಹೆತ್ತುತ್ತಿ ಯ ಕಾಂಡವು ಗಟ್ಟಿಯಾಗಿದ್ದು ನೆಟ್ಟಗೆ ಬೆಳೆದು ಲಘು ರೋಮಗಳಿಂದಾವೃತವಾಗಿ ಸುತ್ತಲೂ ಹರಡಿಕೊಂಡಿರುತ್ತದೆ.
     ಏಷ್ಯಾ, ಚೀನಾ, ಭಾರತ, ಆಫ್ರಿಕ, ಆಸ್ಟ್ರೇಲಿಯಾ, ಉತ್ತರ ದಕ್ಷಿಣ ಅಮೇರಿಕಾ ಗಳಲ್ಲೆಲ್ಲಾ ಹರಡಿದೆ ಎಂದರೆ ಇದು ಸಾಮಾನ್ಯವಾದುದೇ! Soda Cordifolia ಎಂಬ ಸಸ್ಯ ಶಾಸ್ತ್ರೀಯ ಹೆಸರುಳ್ಳ ಈ ಸಸ್ಯ ಮಾಲ್ವೇಸೀ ಕುಟುಂಬಕ್ಕೆ ಸೇರಿದೆ.
         ನಮ್ಮ ಹಿರಿಯರು ಸೊಂಟ, ಬೆನ್ನು ನೋವಿಗೆಲ್ಲಾ ಹಿತ್ತಲಲ್ಲೇ ಇರುತ್ತಿದ್ದ ಈ ಕಡೀರ ಬೇರಿನ ಗಿಡ ತಂದು ಬೇರುಗಳನ್ನು ತೊಳೆದು ಜಜ್ಜಿ ಜೀರಿಗೆ ಜೊತೆ ಬೇಯಿಸಿ ದನದ ಹಾಲು ಮತ್ತು ಬೆಲ್ಲ ಸೇರಿಸಿ ಕುಡಿಯುವುದು ಸಾಮಾನ್ಯವಾಗಿತ್ತು. ಈ ಸಸ್ಯವು ತ್ರಾಣ ವರ್ಧಕ ಮಾತ್ರವಲ್ಲದೆ ತೂಕವನ್ನೂ ಹೆಚ್ಚಿಸುತ್ತದೆ. ನಿದ್ರಾ ಜನಕ, ಮೂತ್ರವರ್ಧಕ, ವಾತ ವ್ಯಾಧಿ, ಗಲಗಂಡ, ಅಂತವೃದ್ಧಿ, ನೇತ್ರರೋಗ, ಮುಖದ ಪಾರ್ಶ್ವವಾಯು, ಭೇದಿ, ಗೊನೊರಿಯಾ, ಅಸ್ತಮಾ, ಉತ್ತೇಜಕವಾಗಿ, ಸ್ತ್ರೀ ರೋಗ, ಮೂಲವ್ಯಾಧಿ, ನರ ಸಂಬಂಧೀ ಅಸ್ವಸ್ಥತೆ, ರಕ್ತಶುದ್ಧೀಕರಣಗಳಿಗೆ ಉಪಯೋಗಿಸುತ್ತಾರೆ. ಸಸ್ಯದ ಎಲ್ಲ ಭಾಗಗಳೂ ಔಷಧಿಗೆ ಬಳಸಲ್ಪಡುತ್ತದೆ. ಇದರ ಪುಡಿ ಹಾಗೂ ಮಾತ್ರೆಗಳೂ ಮಾರುಕಟ್ಟೆಯಲ್ಲಿವೆ. ಹೆಚ್ಚು ಕ್ಷಾರಗಳನ್ನು ಹೊಂದಿರುವ ಹೆತ್ತುತ್ತಿಯ ಬಳಕೆಯನ್ನು ವೈದ್ಯರ ನಿರ್ದೇಶನದಲ್ಲಿ ಬಳಸುವುದು ಅತ್ಯಗತ್ಯ. ರಾಂಚಿ, ಹಜಾರಿಭಾಗ್, ವಾರಣಾಸಿಯ ಕೆಲವು ಭಾಗಗಳಲ್ಲಿ ಜನಾಂಗೀಯ ಸಮುದಾಯಗಳು ಕಾಯಿಲೆಗಳಿಗೆ ಸಾಂಪ್ರದಾಯಿಕ ವಾಗಿ ಬಳಸುತ್ತಾರೆ. ಟಿಬೇಟಿಯನ್ ಗಳೂ ಉಪಯುಕ್ತವೆಂದು ಪರಿಗಣಿಸಿ ಬಳಸುವರು. ಬಾಲತೈಲ, ಬಾಲ ರಸಾಯನ ಇತ್ಯಾದಿ ಔಷಧಿಗಳಲ್ಲಿ ಸೇರಿರುತ್ತದೆ.
      ಮಕ್ಕಳೇ, ಕಳೆಸಸ್ಯದಂತೆ ಕಾಣಿಸುವ ಈ ಸಸ್ಯ ಯಾವುದೇ ತೊಂದರೆ ನೀಡದೆ ತನ್ನ ಪಾಡಿಗೆ ತಾನಿರುತ್ತದೆ. ಹೂಗಳು ದ್ವಿಲಿಂಗಿಗಳಾಗಿವೆ. ಸ್ವಯಂ ಅಥವಾ ಅಡ್ಡ ಪರಾಗಸ್ಪರ್ಶದಿಂದ ಫಲಿತಗೊಂಡರೆ ಬೀಜಗಳಲ್ಲಿ ಸ್ವಯಂ ಪ್ರಸರಣ, ಗಾಳಿ ಪ್ರಸರಣವೂ ನಡೆಯುತ್ತದೆ.  
      ಇಂತಹ ನಿಷ್ಪಾಪಿ ಸಸ್ಯವನ್ನು ಉಳಿಸಿ ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕಲ್ಲವೇ...? ಇದನ್ನು ಗುರುತಿಸಿ ಹಾಗೂ ನಿಮ್ಮ ಹಿರಿಯರಲ್ಲಿ ಈ ಗಿಡದ ಬಗ್ಗೆ ಮಾಹಿತಿ ಕೇಳಿ ತಿಳಿದುಕೊಳ್ಳುವ ಜೊತೆಗೆ ವಿವಿಧ ಸಸ್ಯಗಳ ಎಲೆಗಳನ್ನು ಅಂಟಿಸಿ ಅಲ್ಬಮ್ ತಯಾರಿಸಲು ಪ್ರಯತ್ನಿಸುವಿರಾ...?
ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.... ನಮಸ್ಕಾರ
.......................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************



Ads on article

Advertise in articles 1

advertising articles 2

Advertise under the article