ಹಕ್ಕಿ ಕಥೆ : ಸಂಚಿಕೆ - 128
Wednesday, December 6, 2023
Edit
ಹಕ್ಕಿ ಕಥೆ : ಸಂಚಿಕೆ - 128
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿಕಥೆಗೆ ಸ್ವಾಗತ. ಕಳೆದ ತಿಂಗಳು ಮೈಸೂರಿಗೆ ಹೋಗಿದ್ದೆ. ಯಾರನ್ನೋ ಭೇಟಿ ಮಾಡಲಿಕ್ಕಾಗಿ ಹೋದವನು ಅವರನ್ನು ಭೇಟಿ ಮಾಡಿ ಬರುವಾಗ ಸಂಜೆಯಾಗಿತ್ತು. ಅದೇ ದಾರಿಯಲ್ಲಿ ಕುಕ್ಕರಹಳ್ಳಿ ಕೆರೆ ಇತ್ತು. ಒಂದು ವಾಕಿಂಗ್ ಆದ ಹಾಗಾಯಿತು ಅಂತ ಕೆರೆ ಏರಿಯ ಮೂಲಕ ನಡೆದುಕೊಂಡು ಹೋಗಲು ನಿರ್ಧಾರ ಮಾಡಿದೆ. ಸಂಜೆಯ ಬಿಸಿಲು ಹಿತವಾಗಿತ್ತು. ಕೆರೆಯ ಒಂದು ಭಾಗದಲ್ಲಿ ನೀರಿನ ಜೊತೆಗೆ ಹುಲ್ಲು ಹಸಿರು ಸಮೃದ್ಧವಾಗಿ ಬೆಳೆದಿತ್ತು. ಎಲ್ಲಿಂದಲೋ ಒಂದು ಹಕ್ಕಿಗಳ ಗುಂಪು ಹಾರಿ ಬಂದು ಅಲ್ಲಿದ್ದ ಹುಲ್ಲಿನ ನಡುವೆ ಇಳಿದುಕೊಂಡವು. ಅವು ಇಳಿದಾಗಲೇ ತಿಳಿದದ್ದು ಅಲ್ಲಿ ನೀರು ಆಳವಾಗಿರಲಿಲ್ಲ ಎಂದು. ಗದ್ದೆಯ ಹಾಗೆ ನೀರು ನಿಂತು ಅದರಲ್ಲಿ ಹುಲ್ಲು ಬೆಳೆದಿರಬೇಕು ಅನಿಸಿತು. ಕೆಲವು ಹಕ್ಕಿಗಳು ಹುಲ್ಲಿನ ನಡುವೆ ಕೆಸರಿನಲ್ಲಿ ಕಾಲೂರಿಕೊಂಡು ಸುತ್ಮುತ್ತಲೂ ಏನನ್ನೋ ಹುಡುಕಾಟ ಮಾಡ ತೊಡಗಿದವು. ಕಂದು ಬಣ್ಣದ ದೇಹ, ಉದ್ದನೆಯ ಕಾಲುಗಳು, ಪಿಕಾಸಿಯಂತೆ ಬಾಗಿದ ಉದ್ದನೆಯ ಕೊಕ್ಕು. ತಲೆಯಿಂದ ಕತ್ತಿನ ವರೆಗೆ ಬಿಳಿ ಬಣ್ಣದ ನರೆತ ಕೂದಲಿನಂತೆ ಕಾಣುವ ಗೆರೆಗಳು. ರೆಕ್ಕೆಗೆ ಮಾತ್ರ ಹೊಳೆಯುವ ಕಂದು ಮಿಶ್ರಿತ ಹಸಿರು ಬಣ್ಣ. ಬೆನ್ನಿನ ಮೇಲೆ ಸ್ವಲ್ಪ ಬೂದು ಬಣ್ಣ. ಕೆಸರಿನ ನಡುವೆ ಬೆಳೆದ ಹುಲ್ಲಿನಲ್ಲಿ ಸಿಗುವ ಕೀಟಗಳು, ನೀರಿನಲ್ಲಿ ಸಿಗುವ ಪುಟ್ಟ ಶಂಕುಹುಳುವಿನಂಥ ಜೀವಿಗಳನ್ನು ಹುಡುಕಿ ತಿನ್ನುತ್ತಿತ್ತು. ಬಯಲುಸೀಮೆಯ ಕೆರೆ, ನದಿ, ಅಣೆಕಟ್ಟೆಯ ಹಿನ್ನೀರು, ಗದ್ದೆಗಳು ಮೊದಲಾದ ಕಡೆ ಇದು ಸಾಮಾನ್ಯವಾಗಿ ಸಿಗುವ ಕೆಂಬರಲು ಜಾತಿಯ ಹಕ್ಕಿಯಂತೆ. ಆದರೆ ಕರಾವಳಿ ಭಾಗದಲ್ಲಿ ಇದು ತೀರಾ ಅಪರೂಪ. ಜೌಗು ಮತ್ತು ಗದ್ದೆಗಳ ನಡುವೆ ಇದ್ದರೆ ತಕ್ಷಣ ಗುರುತಿಸಲು ಸಾಧ್ಯವಾಗುವಂಥ ಬಣ್ಣವಾದರೂ ಸರಿಯಾಗಿ ಬೆಳಕು ಬಿದ್ದಾಗ ಇದರ ದೇಹ ಮಿರಮಿರನೆ ಮಿಂಚುತ್ತದೆ. ಹಾಗಾಗಿಯೇ ಇದಕ್ಕೆ ಮಿಂಚು ಕೆಂಬರಲು ಎಂಬ ಹೆಸರು ಬಂದಿರಬೇಕು.
ಮೇ ತಿಂಗಳಿನಿಂದ ಜುಲೈ ತಿಂಗಳ ನಡುವೆ ಇದರ ಸಂತಾನೋತ್ಪತ್ತಿ ಕಾಲವಂತೆ. ಆಗ ಇದರ ಮೈತುಂಬಾ ದಟ್ಟ ಕಂದುಬಣ್ಣವಾಗಿ ರೆಕ್ಕೆಗಳು ದಟ್ಟ ಹಸಿರು ಬಣ್ಣಕ್ಕೆ ತಿರುಗುತ್ತವಂತೆ. ನೀರನ್ನೇ ಆಶ್ರಯಿಸಿ ಬದುಕುವ ಹಕ್ಕಿಗಳಿಗೆ ಸಂತಾನೋತ್ಪತ್ತಿ ಕಾಲದಲ್ಲಿ ಹೀಗೆ ಗರಿಗಳು ಅಥವಾ ಬಣ್ಣ ಬರುವುದು ಸಾಮಾನ್ಯ ವಿದ್ಯಮಾನ.
ಈ ಮಿಂಚು ಕೆಂಬರಲುಗಳು ಮರಗಳ ಮೇಲೆ ಕಡ್ಡಿಗಳನ್ನು ಜೋಡಿಸಿ ಬುಟ್ಟಿಯಾಕಾರದ ಗೂಡು ಮಾಡಿ ಮೊಟ್ಟೆ ಇಟ್ಟು ಕಾವು ಕೊಟ್ಟು ಮರಿ ಮಾಡುತ್ತವೆ. ಗಂಡು ಮತ್ತು ಹೆಣ್ಣುಗಳೆರಡೂ ಸಮಾನವಾಗಿ ಕೆಲಸ ಹಂಚಿಕೊಳ್ಳುತ್ತವೆ.
ಗೂಡು ಮಾಡುವಾಗ ಬೆಳ್ಳಕ್ಕಿ ಮತ್ತು ಕೊಕ್ಕರೆಗಳ ಜೊತೆ ಗುಂಪಾಗಿ ಒಂದೇ ಮರದ ಮೇಲೆ ಹತ್ತಾರು ಗೂಡುಗಳನ್ನು ಕಟ್ಟಿಕೊಳ್ಳುತ್ತವೆಯಂತೆ. ಇದರಿಂದ ಮರಿಗಳನ್ನು ತಿನ್ನಲು ಬರುವ ಬೇಟೆ ಹಕ್ಕಿಗಳು ಬಂದಾಗ ಒಂದಲ್ಲ ಒಂದು ಹಕ್ಕಿಗೆ ಸೂಚನೆ ಸಿಕ್ಕಿ ಅದು ಉಳಿದವುಗಳನ್ನು ಎಚ್ಚರಿಸುತ್ತದೆ. ಇದನ್ನೇ ಅಲ್ಲವೇ ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದು.
ನಿಮ್ಮ ಆಸುಪಾಸಿನಲ್ಲೂ ಈ ಹಕ್ಕಿ ಇರಬಹುದು. ಹುಡುಕ್ತೀರಲ್ಲ
ಕನ್ನಡದ ಹೆಸರು: ಮಿಂಚು ಕೆಂಬರಲು
ಇಂಗ್ಲಿಷ್ ಹೆಸರು: Glossy Ibis
ವೈಜ್ಞಾನಿಕ ಹೆಸರು: Plegadis falcinellus
ಚಿತ್ರ : ಅರವಿಂದ ಕುಡ್ಲ
ಮುಂದಿನವಾರ ಇನ್ನೊಂದು ಹಕ್ಕಿಯನ್ನು ನೋಡಿದ ಕಥೆಯೊಂದಿಗೆ ಮತ್ತೆ ಭೇಟಿಯಾಗೋಣ...
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************