-->
ಹೃದಯದ ಮಾತು : ಸಂಚಿಕೆ - 20

ಹೃದಯದ ಮಾತು : ಸಂಚಿಕೆ - 20

ಹೃದಯದ ಮಾತು : ಸಂಚಿಕೆ - 20
ಲೇಖಕರು : ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ


        ನಮ್ಮ ಶಾಲಾ ವಾರ್ಷಿಕೋತ್ಸವ. ಪ್ರತಿಯೊಬ್ಬರಿಗೆ ವೇದಿಕೆಗೆ ಅವಕಾಶ. ಮಕ್ಕಳು ತಮಗಿಷ್ಟವಾದ ಕಾರ್ಯಕ್ರಮ ನೀಡಲು ಮುಕ್ತ ಅವಕಾಶ. ತಯಾರಿಗಾಗಿ ಒಂದಷ್ಟು ದಿನಗಳನ್ನು ನೀಡಲಾಗಿತ್ತು. ಮೇಲ್ವಿಚಾರಣೆಗೆ ಶಿಕ್ಷಕಿಯರಿದ್ದರು. ಹಳ್ಳಿಶಾಲೆಯ ಮಕ್ಕಳು. ಅದೇನು ಕಾರ್ಯಕ್ರಮ ನೀಡಿಯಾರು? ಎಂಬ ಪ್ರಶ್ನೆ ಸಹಜವಾಗಿತ್ತು. ಆದರೆ ವಾರ್ಷಿಕೋತ್ಸವ ಕೊನೆಗೊಳ್ಳುತ್ತಿದ್ದಂತೆ ನಮ್ಮ ಮಕ್ಕಳು ಇತಿಹಾಸ ನಿರ್ಮಿಸಿದ್ದರು. ಅದ್ಭುತ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಪ್ರತಿಯೊಬ್ಬರ ಮನ ಗೆದ್ದೇ ಬಿಟ್ಟಿದ್ದರು.

         ಮಕ್ಕಳ ಪ್ರದರ್ಶನ ನನ್ನ ಮನಸ್ಸಿನಲ್ಲಿ ಹುಟ್ಟಿಸಿದ್ದು ನೂರಾರು ಪ್ರಶ್ನೆಗಳನ್ನು. ಅತ್ಯುತ್ತಮ ಹಾಗೂ ವಿಭಿನ್ನ ಪ್ರದರ್ಶನ ನೀಡಿದ್ದ ಮಕ್ಕಳ ಚಿತ್ರಣ ಕಣ್ಣ ಮುಂದೆ ಸುಳಿಯತೊಡಗಿತು. ಬಹುತೇಕ ಮಕ್ಕಳು ಕಲಿಕೆಯಲ್ಲಿ ತೀರಾ ಹಿಂದುಳಿದವರು. ಶಾಲೆಗೆ ಅತೀ ಹೆಚ್ಚು ಗೈರಾದವರು. ಪರೀಕ್ಷೆಗಳಲ್ಲಿ ಸೊನ್ನೆ ಸುತ್ತುವವರು. ಹೋಂ ವರ್ಕ್ ಎಂದಿಗೂ ವರ್ಕೌಟ್ ಆಗದವರು. ನೆಟ್ಟಗೆ ತನ್ನ ಹೆಸರನ್ನೇ ಬರೆಯಲು ಅಥವಾ ಹೇಳಲು ತಡವರಿಸುವವರು.

        ತರಗತಿಯಲ್ಲಿ ಸೆರೆಮನೆಯ ಅನುಭವ. ಹೊರಗಡೆ ರಾಜನ ಧಿಮಾಕು. ಹಾಗಾದರೆ ತಪ್ಪಿದ್ದು ಯಾರು? ಮಕ್ಕಳಲ್ಲಿ ಕಲಿಕೆಯ ಮಟ್ಟ ಕುಸಿದದ್ದು ಎಲ್ಲಿ? ಯಾವ ಹಂತದಲ್ಲಿ? ಈ ಬಗ್ಗೆ ಯಕ್ಷ ಪ್ರಶ್ನೆಗಳು. ಇವೆಲ್ಲ ಉತ್ತರ ಹುಡುಕದ ಪ್ರಶ್ನೆಗಳು. ಸಮಸ್ಯೆಗೆ ಕಾರಣವನ್ನು ಹುಡುಕುವ ಬದಲು ಅದನ್ನು ಮತ್ತೊಬ್ಬರಿಗೆ ವರ್ಗಾಯಿಸುತ್ತಿದ್ದೇವೆ. 'ಪಾಸಿಂಗ್ ದ ಬಾಲ್' ಆಟದಂತೆ. ವೇದಿಕೆಯ ಮೇಲೆ ಸಂಭಾಷಣೆಯಲ್ಲಿ ಚಿಂದಿ ಉಡಾಯಿಸಬಲ್ಲ ಆತ ತರಗತಿಯ ಕೋಣೆಯೊಳಗೆ ಅಕ್ಷರ ಓದಲಾರ. ಧೈರ್ಯವಾಗಿ ಮಾತನಾಡಲಾರ. ಮೈದಾನದಲ್ಲಿ ಕ್ರಿಕೆಟ್ ಆಟಗಾರರ ದಾಖಲೆಗಳನ್ನು ನಿಖರವಾಗಿ ಹೇಳುತ್ತಾ ಅಂಕಿ ಅಂಶಗಳ ತಜ್ಞನಾಗಬಲ್ಲ ಆತ ತರಗತಿಯೊಳಗೆ ಗಣಿತದ ಅಂಕಿಗಳನ್ನು ಕೂಡಿಸಲಾರದೆ ಮರುಗಬಲ್ಲ...!!

     ಪ್ರತಿಯೊಂದು ಮಗುವಿನಲ್ಲೂ ಅಗಾಧ ಶಕ್ತಿ ಇದೆ ಎಂಬುವುದು ಸತ್ಯ. ಅದನ್ನು ಹೊರಕ್ಕೆ ಪುಟಿಯುವಂತೆ ಮಾಡುವುದೇ ಶಿಕ್ಷಣ. ಅದೊಂದು ಸುದೀರ್ಘ ಪ್ರಕ್ರಿಯೆ. ಅದರಲ್ಲಿ ಆರಂಭಿಕ ಹಂತ ಮಹತ್ವಪೂರ್ಣ. ಅಲ್ಲಿ ಎಡವಿದರೆ ದುರಸ್ತಿ ಕಷ್ಟಕರ. ಕೆಲವೊಮ್ಮೆ ಶಾಶ್ವತವಾಗಿ ಸರಿಪಡಿಸಲಾಗದು. ಆ ಎಡವಿಕೆಯೇ ತರಗತಿಯೊಳಗೆ ಮಗುವಿನ ಪತನಕ್ಕೆ ಕಾರಣವಾದದ್ದು. ಅಲ್ಲಿ ಆಗದನ್ನು ಇಲ್ಲಿ ಮಾಡಲಾಗದು. 

      ಒಂದಂತೂ ಸ್ಪಷ್ಟ. ಮಕ್ಕಳೆಲ್ಲಾ ಪ್ರತಿಭಾವಂತರೇ ಆಗಿದ್ದಾರೆ. ಆತ ಎಡವಲು ಹತ್ತು ಹಲವು ಕಾರಣಗಳಿವೆ. ಅದರಲ್ಲಿ ಪರಿಸರದ ಪ್ರಭಾವವಿದೆ. ಶಿಕ್ಷಕರ ಕೊಡುಗೆಯಿದೆ. ಪೋಷಕರ ಪಾತ್ರವಿದೆ. ವ್ಯವಸ್ಥೆಯ ಕಾಣಿಕೆಯಿದೆ. ಮಗುವಿಗಾಗಿ ಇವೆಲ್ಲಾ ಒಟ್ಟಾಗಿ ಬದಲಾಗಬೇಕಿದೆ. ವಿಫಲತೆಯ ಹೊಣೆಯನ್ನು ಪ್ರತಿಯೊಬ್ಬರು ಹೊರಬೇಕಿದೆ. ಅದಲ್ಲದೆ ಇನ್ನೊಬ್ಬರ ಹೆಗಲ ಮೇಲೆ ಹೊರಿಸುವ ಪ್ರಯತ್ನ ಮಗುವಿನ ಪ್ರತಿಭೆಯನ್ನು ಎಂದಿಗೂ ಅರಳಿಸದು...!!
...................... ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************


ನನ್ನ ಲೇಖನಗಳ ಸಂಗ್ರಹ (ಒಟ್ಟು62) ಪುಸ್ತಕದ ರೂಪದಲ್ಲಿ ಲಭ್ಯವಿದೆ. ಆಸಕ್ತಿಯುಳ್ಳ ಓದುಗರು ಸಂಪರ್ಕಿಸಬಹುದು....... ಯಾಕೂಬ್ ಎಸ್ ಕೊಯ್ಯೂರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು, ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************Ads on article

Advertise in articles 1

advertising articles 2

Advertise under the article