-->
ಹೃದಯದ ಮಾತು : ಸಂಚಿಕೆ - 21

ಹೃದಯದ ಮಾತು : ಸಂಚಿಕೆ - 21

ಹೃದಯದ ಮಾತು : ಸಂಚಿಕೆ - 21
ಲೇಖಕರು : ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ


ನಾವು ಸಂಘ ಜೀವಿ. ಅವಲಂಬನೆ ಇಲ್ಲದೆ ಬದುಕು ಅಸಾಧ್ಯ. ದುಡಿಯುವವನು ಒಬ್ಬನಾದರೆ, ದುಡಿಸುವವನು ಇನ್ನೊಬ್ಬ. ಕಲಿಯುವವನು ಒಬ್ಬ, ಕಲಿಸುವವನು ಮತ್ತೊಬ್ಬ. ಹೀಗೆಯೇ ಇಲ್ಲಿ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿ ಇನ್ನೊಬ್ಬರನ್ನು ಅವಲಂಬಿಸಿಯೇ ಬದುಕೋದು. ಆವಶ್ಯಕತೆ ಬಂದಾಗ ಜಾತಿ, ಮತ, ಬಣ್ಣ ಇವೆಲ್ಲವೂ ನಗಣ್ಯ. ನಾವು ಪರಸ್ಪರ ಕಚ್ಚಾಡಿದರೂ, ಲಾಭದ ವಿಷಯದಲ್ಲಿ ವಿಶ್ವಮಾನವರಾಗಬಲ್ಲೆವು.

"ಬಿಗ್ ಬಾಸ್" ಮನೆ ಮನುಷ್ಯನ ಬದುಕಿನ ನಗ್ನ ದರ್ಶನ ಮಾಡುತ್ತದೆ. ಅದು ಒಂದು "ರಿಯಾಲಿಟಿ ಶೋ" ಆಗಿದ್ದರೂ, ಅದನ್ನು ಒಂದಷ್ಟು ವಿಶಾಲತೆಯಿಂದ ವೀಕ್ಷಿಸಿದರೆ, ನಮ್ಮ ಮನೆ, ಕಚೇರಿ, ಕುಟುಂಬ ಎಲ್ಲವೂ ಕಣ್ಣ ಮುಂದೆ ಹಾದುಹೋಗುತ್ತದೆ. "ಬಿಗ್ ಬಾಸ್" ಮನೆಯಲ್ಲಿ ಚೀರಾಟ, ಕಾದಾಟ ನಡೆದಾಗ ನಮ್ಮ ಸಹನೆಯ ಕಟ್ಟೆ ಒಡೆದು ಹೋಗುತ್ತದೆ. ಕೆಲವರು ಕ್ರೂರವಾಗಿದ್ದರೆ ಮತ್ತೆ ಕೆಲವರ ಬಗ್ಗೆ ಕನಿಕರ ಮೂಡುತ್ತದೆ. ಈ ವಾರ ಇಂತಹವ ಮನೆಯಿಂದ ಹೊರಗೆ ಹೋಗಲೇಬೇಕು ಎಂಬ ನಿರೀಕ್ಷೆಯಲ್ಲಿ ವಾರದ ಕೊನೆಯಲ್ಲಿ ಕಾಯುತ್ತಿರುತ್ತೇವೆ.

"ಬಿಗ್ ಬಾಸ್" ಬಹಳ ಚಾಣಾಕ್ಯ. ಈ ವಾರ ಸ್ನೇಹಿತರಾಗಿದ್ದರೆ, ಮುಂದಿನ ವಾರ ಶತ್ರುಗಳಾಗುವಂತೆ ಟ್ವಿಸ್ಟ್ ಕೊಡುತ್ತಿರುತ್ತದೆ. ಒಟ್ಟಾಗಿ ಎಷ್ಟೇ ಹೋರಾಡಿದರೂ, ಅಂತಿಮವಾಗಿ ಒಬ್ಬನೇ ಉಳಿಯುವುದು ಇದರ ಮತ್ತೊಂದು ವಿಶೇಷತೆ. "ಬಿಗ್ ಬಾಸ್" ಮನೆಯೊಳಗಡೆ ಯಾರಿರುತ್ತಾರೆ? ಎಂಬ ಪ್ರಶ್ನೆಗಿಂತ ಇದ್ದವರು ಹೇಗಿರುತ್ತಾರೆ? ಎಂಬುವುದೇ ಮುಖ್ಯ.

ದೇವತೆಗಳಲ್ಲಿರುವ ಉತ್ತಮ ಗುಣ ಹಾಗೂ ರಾಕ್ಷಸರಲ್ಲಿರುವ ಕ್ರೂರತೆ ಪ್ರತಿಯೊಬ್ಬರಲ್ಲಿರುತ್ತದೆ. ಅವನೆಷ್ಟೇ ಸೆಲೆಬ್ರಿಟಿಯಾದರೂ ಆ ಗುಣಗಳು ಊರ್ಜಿತದಲ್ಲಿರುತ್ತದೆ. "ಬಿಗ್ ಬಾಸ್" ಮನೆ ಅವನಲ್ಲಿ ಅಡಗಿರುವ ಸಕಲ ಗುಣಗಳನ್ನು ಹೊರ ಚಿಮ್ಮಿಸುವ ಪ್ರಯತ್ನ ಮಾಡುತ್ತದೆ. ಕೆಲವೊಂದು ಸನ್ನಿವೇಶಗಳನ್ನು ಸೃಜಿಸಿ, ವ್ಯಕ್ತಿಯ ಮುಖವಾಡವನ್ನು ಕಳಚುತ್ತದೆ. ನೋಡುಗರಾದ ನಾವು ಬಹುತೇಕ ತೀರ್ಪುಗಾರಾಗಿದ್ದರೆ, "ಬಿಗ್ ಬಾಸ್" ಒಡೆಯನಂತೆ ವರ್ತಿಸುತ್ತದೆ ಹಾಗೂ ಆತನ ತೀರ್ಮಾನವೇ ಅಂತಿಮವೂ ಆಗಿರುತ್ತದೆ.

ಇನ್ನು ನಮ್ಮ ಮನೆ, ಸುತ್ತಮುತ್ತ "ಬಿಗ್ ಬಾಸ್" ವಾತಾವರಣವೇ ಇರುತ್ತದೆ. ಆದರೆ ಕ್ಯಾಮರಾದಲ್ಲಿ ಸೆರೆಯಾಗಿರುವುದಿಲ್ಲವಷ್ಟೆ. ನಮ್ಮ ಬದುಕಿನ ಪ್ರತಿಯೊಂದು ಕ್ಷಣವೂ ಸೆರೆಯಾಗಿ ವಾರಕ್ಕೊಮ್ಮೆ ಪ್ರದರ್ಶಿತಗೊಳ್ಳುತ್ತಿದ್ದರೆ! ಬಹುಶ: ಆ ವಾಸ್ತವತೆಯನ್ನು ಊಹಿಸಲು ಸಾಧ್ಯವಿಲ್ಲ. ನಮ್ಮದೇ ಮನೆಯೊಳಗಿನ ಮಂದಿಯ ಬಗ್ಗೆನೇ ಪರಸ್ಪರ ಅದೆಷ್ಟು ಗುಸುಗುಸು. ಕಚೇರಿಯಲ್ಲಿ ಒಬ್ಬರ ಬಗ್ಗೆ ಇನ್ನೊಬ್ಬರ ಮಾತುಗಳು! ಅಬ್ಬಾ ಇವೆಲ್ಲಾ ತಿಳಿದರೆ ಪರಿಸ್ಥಿತಿ ಹೇಗಿರಬಹುದು?.

"ಬಿಗ್ ಬಾಸ್" ಮನೆಯೊಳಗಡೆ ಜೋಡಿಗಳು ಸೃಷ್ಟಿಯಾಗುತ್ತದೆ. ನಾವು ಅಸಹ್ಯ ಪಡುತ್ತೇವೆ. ಆದರೆ ನೈಜ ಬದುಕಿನಲ್ಲೂ, ನಮ್ಮ ಸುತ್ತ ಮುತ್ತ ಕ್ಯಾಮರಾ ಸೆರೆಯಾಗದ ಅವೆಷ್ಟೋ ಜೋಡಿಗಳಿವೆ!. ಅಲ್ಲಿ ನಡೆಯುವ ಒಡನಾಟ, ಪರಸ್ಪರ ಪ್ರೇಮದಾಟದ ಬಗ್ಗೆ ವಿರೋಧಿಸುತ್ತಲೇ, ನಮ್ಮ ಸುತ್ತ ಮುತ್ತ ಇರುವ ವಾಸ್ತವಿಕತೆಯನ್ನು ಮರೆಯುತ್ತೇವೆ.

ಒಟ್ಟಾರೆಯಾಗಿ "ಬಿಗ್ ಬಾಸ್" ಒಂದು ಮನೋರಂಜನೆಗಿಂತ ಕೆಲವು ಜನಗಳು ಒಟ್ಟಾಗಿ ಒಂದು ಮನೆಯೊಳಗಡೆ ಸೇರಿಸಿ, ಬದುಕಿನ ವಾಸ್ತವಿಕತೆಯನ್ನು ನಮಗೆ ಕ್ಯಾಮರಾ ಮೂಲಕ ದರ್ಶನ ಮಾಡಿಸುತ್ತದೆ. ನಾವು ಕಾಣುತ್ತಿರುವುದು ಇಲ್ಲವೇ ಮಾಡುತ್ತಿರುವುದು ನಿಜವಾದ ಬದುಕು ಆಗಿರದೆ, ತೆರೆಯ ಹಿಂದೆ ಇನ್ನೊಂದು ಬದುಕು ಇದೆ ಎಂಬ ವಾಸ್ತವಿಕತೆಯ ದರ್ಶನ "ಬಿಗ್ ಬಾಸ್" ನಲ್ಲಿ ಆಗುತ್ತದೆ. ಗೆಲ್ಲೋದು ಯಾರೇ ಆದರೂ, ಆತನ ನೈಜತೆಯ ಪ್ರಕಟವಾಗಿರುತ್ತದೆ. ಕೊನೆಯಲ್ಲಿ ಎಲ್ಲವನ್ನು ಮರೆತಾಗ ಒಬ್ಬಾತ ವಿಜಯಿಯಾಗುತ್ತಾನೆ.

ದೇವರು ನೈಜ "ಬಿಗ್ ಬಾಸ್" ಆಗಿರುತ್ತಾನೆ. ಅವನು ನಮಗಾಗಿ ನಿಯಮಗಳನ್ನು ರೂಪಿಸಿದ್ದಾನೆ. ನಮ್ಮೆಲ್ಲರನ್ನು ಅನನ್ಯ ಗ್ರಹವೊಂದರಲ್ಲಿ ಕೂಡಿಸಿಟ್ಟಿದ್ದಾನೆ. ಮನೆ ವಿಶಾಲವಾಗಿದೆ. ವೀಕೆಂಡ್ ಇಲ್ಲ. ಆದರೆ 'ಎಂಡ್' ಇದ್ದೇ ಇದೆ. ದೇವರ ಕ್ಯಾಮರಾದಲ್ಲಿ ನಾವೆಲ್ಲಾ ಸೆರೆಯಾಗುತ್ತಿದ್ದೇವೆ. ಇಲ್ಲಿ 'ವೋಟಿಂಗ್' ಇಲ್ಲ. ಅಂತಿಮ ತೀರ್ಪುಗಾರ ದೇವನೇ ಆಗಿರುತ್ತಾನೆ. ಅವನಿಷ್ಟದಂತೆ ಮನೆಯಿಂದ ಹೊರಗಟ್ಟುತ್ತಾನೆ. ಅದೇ ರೀತಿ ಹೊಸಬರ ಪ್ರವೇಶವೂ ನಡೆಯುತ್ತದೆ. ಕೊನೆಯಲ್ಲಿ ಸೋಲು, ಗೆಲುವನ್ನು ನಿರ್ಧರಿಸುವವನು ಅವನೇ ಆಗಿರುತ್ತಾನೆ.
........................... ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************





ನನ್ನ ಲೇಖನಗಳ ಸಂಗ್ರಹ (ಒಟ್ಟು62) ಪುಸ್ತಕದ ರೂಪದಲ್ಲಿ ಲಭ್ಯವಿದೆ. ಆಸಕ್ತಿಯುಳ್ಳ ಓದುಗರು ಸಂಪರ್ಕಿಸಬಹುದು....... ಯಾಕೂಬ್ ಎಸ್ ಕೊಯ್ಯೂರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು, ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************

Ads on article

Advertise in articles 1

advertising articles 2

Advertise under the article